ಶೈಲಜಾ

ಮಂಜಪರ ದೇವೇಶ ಭಾಗವತರ್ ರಾಮನಾಥನ್ ಪಾಲಕ್ಕಾಡ್ ವಿಕ್ಟೋರಿಯಾ ಕಾಲೇಜಿನಲ್ಲಿ ಓದಿದ್ದು ಭೌತಶಾಸ್ತ್ರದ ಬಿಎಸ್‌ಸಿ ಆದರೆ ಒಲಿದಿದ್ದು ಎಲೆಕ್ಟ್ರೋ ಮ್ಯಾಗನೆಟಿಕ್ ತರಂಗಗಳಿಗೆ ಬದಲಾಗಿ ನಾದ ತರಂಗಗಳಿಗೆ, ಸ್ವರಗಳ ರೆಸೊನೆನ್ಸ್‌ಗೆ. ಎಲ್ಲರಿಗೂ ಎಂಡಿಆರ್ ಎಂದೇ ಪರಿಚಿತರಾಗಿದ್ದ ರಾಮನಾಥನ್ ಕರ್ನಾಟಕ ಸಂಗೀತದ ಒಬ್ಬ ಅನನ್ಯ, ಅನನುಕರಣೀಯ, ವಿಶಿಷ್ಟ ಸಂಗೀತ ಪ್ರತಿಭೆ. ಹೊಕ್ಕುಳ ಆಳದಿಂದ, ಗಜಗಾಂಭೀರ್ಯದಿಂದ, ಮೂಡಿಬರುವ, ಹೆಬ್ಬಾವಿನಷ್ಟು ಭಾರವಾದ ಕೊರಲು ಎಂಡಿ ಅವರ ಹೆಗ್ಗುರುತು. ಇದು ಎಂಡಿ ಅವರ ನೂರನೇ ವರ್ಷ (೨೦/೦೫/೧೯೨೩ – ೨೭/೦೪/೧೯೮೪). ಎಂ ಡಿ ಸಂಗೀತ ಕುಟುಂಬಕ್ಕೆ ಸೇರಿದವರು. ಅವರ ತಂದೆ ದೇವೇಶ ಭಾಗವತರು ಸಂಗೀತ ಕಲಿಸುತ್ತಿದ್ದರು.
ಇಂತಹ ವಿಶಿಷ್ಟ ಕೊರಲಿನ ಹುಡುಗನಿಗೆ ಅಷ್ಟೇ ವಿಶಿಷ್ಟ ಗುರು ಟೈಗರ್ ವರದಾಚಾರ್ಯರು ರುಕ್ಮಿಣೀದೇವಿಯವರ ಕಲಾಕ್ಷೇತ್ರದಲ್ಲಿ ದಕ್ಕಿದ್ದು ಒಂದು ಅಪೂರ್ವ ಸಂಯೋಗ. ಗುರುಶಿಷ್ಯರ ನಡುವೆ ಒಂದು ವಿಶೇಷ ಬಾಂಧವ್ಯ ಬೆಳೆಯಿತು. ಅವರ ಗುರುಭಕ್ತಿ ಕುರಿತು ಸಂಗೀತವಲಯದಲ್ಲಿ ಹಲವು ಕಥೆಗಳಿವೆ. ಎಂ ಡಿ ಅವರ ಕಣ್ಣು ಮೊದಲು ಮೆಳ್ಳಗಣ್ಣಾಗಿ ಇರಲಿಲ್ಲ. ಆದರೆ ತಮ್ಮ ಗುರುವಿಂತೆಯೇ ಆಗಬೇಕೆಂದು ಬಯಸಿ ಅವರು ಕಣ್ಣನ್ನು ಹಾಗೆ ಮಾಡಿಕೊಂಡರು ಎನ್ನುವುದು ತುಂಬಾ ಪ್ರಸಿದ್ಧವಾದ ಕಥೆ. ನೀನೇಕೆ ನನ್ನನ್ನು ಹುಡುಕಿಕೊಂಡು ಬಂದೆ ಎಂದು ಟೈಗರ್ ಎಂಡಿಯವರನ್ನು ಕೇಳಿದರಂತೆ. ಅದಕ್ಕೆ ಎಂಡಿ ಹೇಳಿದರಂತೆ ನಿಮ್ಮೊಡನೆ ಮಾತನಾಡುವಾಗ ಸಿಗುವ ಸುಖ ಬೇರೆಯವರೊಡನೆ ಹಾಡುವಾಗಲೂ ಸಿಗುವುದಿಲ್ಲವಲ್ಲ, ಅದಕ್ಕೆ ನಿಮ್ಮನ್ನು ಹುಡುಕಿ ಬಂದೆ ಎಂದರಂತೆ. ಈ ಮಾತನ್ನು ಅವರು ಟಿ ಎನ್ ಶೇಷಗೋಪಾಲನ್ ಅವರಿಗೆ ಹೇಳುವಾಗಲೇ ಅವರ ಕಣ್ಣಿಂದ ನೀರು ಹರಿಯುತ್ತಿತ್ತು ಎಂದು ಟಿಎನ್‌ಎಸ್ ನೆನಪಿಸಿಕೊಳ್ಳುತ್ತಾರೆ. ಎಂಡಿ ಕೃತಿರಚಿಸುವಾಗ ತಮ್ಮ ಅಂಕಿತವನ್ನು ವರದದಾಸ ಎಂದೇ ಇಟ್ಟುಕೊಂಡಿದ್ದರು. ಅದಕ್ಕೆ ಟೈಗರ್ ಆ ’ವರದ’ ಎನ್ನುವ ಪದದ ಮೇಲೆ ಶ್ಲೇಷೆ ಮಾಡುತ್ತಿದ್ದರಂತೆ. ನೀನು ಕೇರಳದಿಂದ ಇಲ್ಲಿಗೆ ಸಂಗೀತ ವರದಾ ವರದಾ (ತಮಿಳಿನಲ್ಲಿ ಬರಲಾ, ಬರಲಾ) ಎಂದು ಬಂದಿದ್ದೀಯೆ. ನಿನಗೆ ’ವರಾದ’ (ತಮಿಳಿನಲ್ಲಿ ಬರದೇ ಇರುವ ಎನ್ನುವ ಅರ್ಥ ಇದೆ) ಸಂಗೀತ ಏನಿದೆ? ನಿನಗೆ ವರದ ಸಂಗೀತವೇ ಬರುತ್ತದೆ. ಎನ್ನುತ್ತಿದ್ದರಂತೆ. ಇಂದಿಗೂ ಟೈಗರ್ ಅವರ ಅಪ್ಪಟ ಪ್ರತಿನಿಧಿ ಎಂದರೆ ಎಂಡಿಯವರೇ.
ಎಂಡಿ ತನ್ನ ಸಮಕಾಲೀನ ಗಾಯಕರಲ್ಲೆಲ್ಲಾ ಒಡೆದು ನಿಲ್ಲುತ್ತಿದ್ದುದು ಅವರ ವಿಳಂಬ ಪ್ರಸ್ತುತಿಗೆ ಮತ್ತು ಸ್ವರಸ್ವರದಲ್ಲಿಯೂ ತುಂಬಿ ತುಳುಕಿ ಚಿಮ್ಮುತ್ತಿದ್ದ ಭಾವಕ್ಕೆ ಮತ್ತು ಅಂತಹ ವಿಳಂಬವನ್ನು ಧಾರಣೆ ಮಾಡಬಲ್ಲ ಸಶಕ್ತ ಕಂಠಕ್ಕೆ. ಅವರ ಪ್ರಸ್ತುತಿಯಲ್ಲಿದ್ದ ನಾದ-ವಿಶ್ರಾಂತಿಗಳ ಮೇಳೈಸುವಿಕೆ ತೀರಾ ಅಪರೂಪವೆನಿಸುವಂಥದ್ದು. ನಾದದ ನಡುವಿನ ವಿಶ್ರಾಂತಿಯೇ ಬಹುಶಃ ಅವರ ಸಂಗೀತದ ಶ್ರೀಮಂತಿಕೆ ಹೆಚ್ಚಲು ಕಾರಣವಾಗಿತ್ತೆನಿಸುತ್ತದೆ. ರಾಮನಾಥನ್ ಅವರ ಶಹನಾ, ಶ್ರೀ, ಯದುಕುಲ ಕಾಂಭೋಜಿ, ಆನಂದಭೈರವಿ, ರೀತಿಗೌಳ ರಾಗಗಳ ಆಲಾಪನೆಗೆ ಕರ್ನಾಟಕ ಸಂಗೀತಲೋಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಅವರೆಂದೂ ಗಂಟೆಗಟ್ಟಲೆ ಆಲಾಪನೆ ಮಾಡಿದವರಲ್ಲ. ಆದರೆ ಅವರ ಸಂಕ್ಷಿಪ್ತ ಅಲಾಪನೆಯಲ್ಲಿಯೇ ರಾಗರಸವೆಲ್ಲ ಉಕ್ಕಿ ಹರಿದು ಕೇಳುಗರನ್ನು ತೋಯಿಸಿಬಿಡುತ್ತಿತ್ತು. ಅವರ ಕಂಠದಲ್ಲಿ ಮೂಡಿಬರುತ್ತಿದ್ದ ಮಾನಸ ಗುರುಗುಹ, ಎಂದರೋ ಮಹಾನುಭಾವುಲು, ನವರಾಗಮಾಲಿಕಾ ವರ್ಣ ಮುಂತಾದವುಗಳ ಖದರ್ ಬೇರೆಯೇ ಇರುತ್ತಿತ್ತು. ಟಿಎನ್ ಕೃಷ್ಣನ್, ಎಂ ಚಂದ್ರಶೇಖರನ್, ಎಲ್ ಸುಬ್ರಹ್ಮಣ್ಯಂ ಅವರ ವಯೋಲಿನ್ ಮತ್ತು ವೆಲ್ಲೂರು ರಾಮಭದ್ರನ್, ಪಾಲ್ಘಾಟ್ ರಘು ಅವರ ಮೃದಂಗ ಸಹಕಾರದಲ್ಲಿ ಹೊರಹೊಮ್ಮುತ್ತಿದ್ದ ಎಂಡಿಆರ್ ಸಂಗೀತದ ಬಣ್ಣ ರುಚಿಗಳೇ ಬೇರೆ. ಅವರಿಗೆ ಅವರೇ ಸಾಟಿ. ವೇದಿಕೆಯ ಮೇಲೆ ಅವರು ತೀರಾ ಸ್ನೇಹಪರರು, ಹಾಸ್ಯಪ್ರಜ್ಞೆ ಉಳ್ಳವರೂ ಆಗಿದ್ದರು. ಮಧ್ಯೆ ಮಧ್ಯೆ ನಗೆಚಟಾಕಿಗಳನ್ನು ಹಾರಿಸುತ್ತಾ, ತಮಗಿಷ್ಟವಾದ ಭಾಗವನ್ನು ವಿವರಿಸುತ್ತಾ ತೀರಾ ನಿರಾಳವಾಗಿ ಹಾಡುತ್ತಿದ್ದರು.
ಎಂಡಿಆರ್ ವಿದ್ವಾಂಸರ ವಿದ್ವಾಂಸ. ಅವರ ಸಂಗೀತದ ಆಳ ನಮ್ಮ ಗ್ರಹಿಕೆಗೆ ನಿಲುಕದ್ದು. ಆದರೆ ಅದರ ಆಳವನ್ನು ಅರಿಯಲೇಬೇಕು ಎಂದು ಬಂದವರಿಗೆ ಅಲ್ಲಿ ಅನರ್ಘ್ಯವಾದ ಮುತ್ತು ರತ್ನಗಳು ದೊರಕಿವೆ. ಅವರು ವರ್ಣವನ್ನು ಹಾಡಲು ಪ್ರಾರಂಭಿಸಿದರೆ ಅದರ ಆಳಕ್ಕೆ ಇಳಿದು ಮೊದಲು ವಿದ್ವಾಂಸರಿಗಾಗಿ ಹಾಡುತ್ತಿದ್ದರು. ಅವರ ಒಂದು ವರ್ಣವನ್ನು ಕೇಳಿಬಿಟ್ಟರೆ ಸಾಕಿತ್ತು. ಇಡೀ ಕಚೇರಿ ಕೇಳಿದ ಅನುಭವ ಸಿಗುತ್ತಿತ್ತು. ಇಡೀ ಸಂಗೀತಲೋಕವನ್ನು ಮಧ್ಯಮಕಾಲದ ಸಂಗೀತವೇ ಆಳುತ್ತಿದ್ದ ಕಾಲದಲ್ಲಿ, ಆ ಮಧ್ಯಮಕಾಲದಲ್ಲಿಯೂ ಇನ್ನೂ ಒಂದು ಚೂರು ವೇಗವನ್ನು ಹೆಚ್ಚಿಸುತ್ತಿದ್ದ ಕಾಲದಲ್ಲಿ. ಅದೇ ಸಂಗೀತ ಎನ್ನುವ ಭ್ರಮೆಯನ್ನು ಕೇಳುಗರಲ್ಲಿ ಉಂಟುಮಾಡಿದ್ದ ಕಾಲದಲ್ಲಿ, ಶ್ರುತಿ ಸರಿಯಿದೆಯೇ ಎಂದು ನೋಡುವುದಕ್ಕೂ ಸಾಧ್ಯವಿಲ್ಲದಿದ್ದ ಕಾಲಪ್ರಮಾಣದಲ್ಲಿ ಕಲಾವಿದರು ಹಾಡುತ್ತಿದ್ದ ಕಾಲ ಅದಾಗಿತ್ತು. ಸುಮಾರು ೧೦-೧೫ ಕಲಾವಿದರು ಅದಕ್ಕೆ ಕೇಳುಗರನ್ನು ಒಗ್ಗಿಸಿಬಿಟ್ಟದ್ದರು. ಆ ಕಾಲದಲ್ಲಿ ಎಂಡಿಆರ್ ವಿಳಂಬಕಾಲ ಅದರಲ್ಲೂ ಅತಿ ವಿಳಂಬಕಾಲವನ್ನು ಹಾಡಿದರು. ಮೊದಲನೆಯದಾಗಿ ಅವರು ಯಾರಿಗಾಗಿಯೂ ಹಾಡಲಿಲ್ಲ. ತನಗಾಗಿಯೇ ಹಾಡಿಕೊಂಡರು (ಟಿ ಎನ್ ಶೇಷಗೋಪಾಲನ್). ನಮ್ಮ ಸಂಗೀತವನ್ನು ನಾವೇ ಮೊದಲು ಕೇಳಿಕೊಳ್ಳಬೇಕು. ನಮ್ಮೊಳಗಿನ ಪರಮಾತ್ಮ ಕೇಳಿಕೊಳ್ಳಬೇಕು. ಆಮೇಲೆ ಕೇಳುಗರು ಕೇಳಬೇಕು ಎನ್ನುತ್ತಿದ್ದರು. ಅವರು ಒಂದು ಕೇದಾರ ಹಾಡಿ ಭಜನಸೇಯವೇ ಹಾಡಿದರೆ ಹಾಗೆ ಜಿಲಜಿಲನೆ ರಾಗಭಾವ ಹೊಮ್ಮಿಬಿಡುತ್ತಿತ್ತು. ಈ ತನಕ ಎಷ್ಟು ಕೇದಾರ ಕೇಳಿದ್ದೇವೆ! ಎಂದರೋ ಮಹಾನುಭಾವುಲು ಕಚೇರಿಯಲ್ಲಿ ಒಂದುವರೆ ಗಂಟೆ ಹಾಡಿ ಕೇಳುಗರು ಯಾವ ’ರೋ’ನಲ್ಲಿ ಇದ್ದರೂ ತಲೆಯಾಡಿಸುವಂತೆ ಮಾಡಿದ್ದರು. ಅವರ ಸಂಗೀತ ವಿಭಿನ್ನ ಮತ್ತು ವಿಶಿಷ್ಟ ಮಾತ್ರವಲ್ಲ, ಮತ್ತೊಬ್ಬರು ಅನುಕರಿಸಲಾಗದ ಅನನ್ಯವಾದ ಸಂಗೀತ. ಅವರು ತಂಬೂರವನ್ನು ನಿಲ್ಲಿಸಿ ಅನುಮಂದ್ರವನ್ನು ನ್ಯಾಸಮಾಡಿದರೆ ಅದರಲ್ಲಿ ಗಾಂಧಾರವೂ ಕೇಳುತ್ತಿತ್ತು. ಅವರ ಸಂಗೀತವನ್ನು ಇನ್ನೊಬ್ಬರು ಹಾಗೆಲ್ಲಾ ಕಲಿತು ಹಾಡುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಅವರ ಸಂಗೀತವನ್ನು ಅವರೇ ತೆಗೆದುಕೊಂಡು ಹೋಗಿಬಿಟ್ಟರು (ಟಿ ಎನ್ ಶೇಷಗೋಪಾಲನ್). ಕಾರಿನಲ್ಲಿ ೭೦ ಕಿಲೋಮೀಟರ್ ವೇಗದಲ್ಲಿ ಹೋದರೆ ಇದು ಕಂಡಿತು ಅದು ಕಂಡಿತು ಎನ್ನುವುದನ್ನು ಸುಮ್ಮನೆ ಹಾಗೇ ನೋಡಬಹುದು ಅಷ್ಟೆ. ಆದರೆ ಆರಾಮವಾಗಿ, ವಿಶ್ರಾಂತಿಯಿಂದ ಆನೆಯ ಹಾಗೆ ನಡೆಯುತ್ತಾ ಹೋದರೆ ಎಲ್ಲವೂ ಚೆನ್ನಾಗಿ ಸೂಕ್ಷ್ಮವಾಗಿ ಕಾಣುತ್ತದೆ. ಒಂದು ಸೂಜಿಯನ್ನು ಕೂಡ ಆನೆ ನೋಡಬಲ್ಲದು ಎಂದು ವಿಳಂಬಕಾಲದ ಅನುಕೂಲವನ್ನು ಎಂಡಿ ಹೇಳುತ್ತಿದ್ದರು.
ಯಾರಿಗೂ ಸಾಧ್ಯವಾಗದ್ದು ಎಂಡಿಗೆ ಹೇಗೆ ಸಾಧ್ಯವಾಯಿತು ಅಂದರೆ, ಎಲ್ಲರೂ ತಾಯಿ ಹಾಲು ಕುಡಿದು ಬೆಳೆಯುವುದು ಸಹಜ. ಆದರೆ ಎಂಡಿ ಹಾಗೆ ಬೆಳೆದು ನಂತರ ಟೈಗರ್ ಅವರಲ್ಲಿ ಕಲಿಯಲು ಹೋದ ಮೇಲೆ ಅವರ ಮಗನಂತೆಯೇ ಇದ್ದು ಹುಲಿಯ ಹಾಲು ಕುಡಿದರು. ಅದರಿಂದ ಇದು ಸಾಧ್ಯವಾಯಿತು (ಟಿಎನ್‌ಎಸ್). ಅವರ ಶ್ರುತಿಶುದ್ಧತೆ ಅಸಾಧಾರಣ. ಶೇಷಗೋಪಾಲನ್ ಅವರ ಗುರು ಶಂಕರ ಶಿವನ್ ಹೇಳುತ್ತಿದ್ದರಂತೆ, ಶ್ರುತಿಗೆಂದು ನಿಮ್ಮ ದೇಹದೊಳಗೇ ತಂಬೂರಿ ಇದೆ. ಹಾಗಾಗಿ ನಿಮಗೆ ಬೇರೆ ತಂಬೂರಿ ಯಾಕೆ ಬೇಕು? ಲಯ ನಿಮ್ಮ ಸಂಗೀತದೊಳಗೇ ಇದೆ, ನಿಮಗೆ ಇನ್ನೊಂದು ಲಯವಾದ್ಯ ಏಕೆ ಬೇಕು?
ಎಂಡಿಆರ್‌ಗೆ ಪಕ್ಕವಾದ್ಯ ಯಾವುದಿದೆ ಎನ್ನುವುದು ಎಂದೂ ಮುಖ್ಯವಾಗಲೇ ಇಲ್ಲ. ಅತ್ಯಂತ ಶ್ರೇಷ್ಠ ಪಕ್ಕವಾದ್ಯವಿರಲಿ ಅಥವಾ ಅತ್ಯಂತ ಸುಮಾರಾದ ಪಕ್ಕವಾದ್ಯವಿರಲಿ, ಎಂಡಿ ಆ ಕುರಿತು ಎಂದೂ ತಲೆ ಕೆಡಿಸಿಕೊಂಡವರಲ್ಲ. ಅವರನ್ನು ಮೆಚ್ಚಿಸಲು ಎಂದೂ ಹಾಡುತ್ತಿರಲಿಲ್ಲ. ಅವರು ಶುದ್ಧ ನಾದೋಪಾಸಕರಾಗಿದ್ದರು. ಪಕ್ಕವಾದ್ಯದವರೇ ಅವರ ಸಂಗೀತಕ್ಕೆ ಸೇರಿಕೊಳ್ಳಬೇಕಿತ್ತು. ಅವರು ತಮ್ಮದೇ ಸಂಗೀತ ಪ್ರಪಂಚದೊಳಗೆ ವಿಹರಿಸುತ್ತಾ ನಮ್ಮನ್ನೂ ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರು ಶುದ್ಧಬಂಗಾಳ ರಾಗದ ರಾಮಭಕ್ತಿ ಸಾಮ್ರಾಜ್ಯ ಹಾಡುತ್ತಿದ್ದರೆ, ನಮಗೆ ಆ ಕೃತಿ ಮಧ್ಯಮ ಕಾಲವೋ, ವಿಳಂಬಕಾಲವೋ ಎನ್ನುವ ಜಿಜ್ಞಾಸೆಯೇ ಬರುತ್ತಿರಲಿಲ್ಲ. ಬದಲಾಗಿ ಅವರು ಶುದ್ಧಬಂಗಾಳ ರಾಗ ಎನ್ನುವ ದೊಡ್ಡ ಬಂಗಲೆಯಲ್ಲಿ ಕುಳಿತು ಅವರು ಭಕ್ತಿಯ ಆಂತರ್ಯವನ್ನು ಶೋಧಿಸುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿತ್ತು.
ವ್ಯಕ್ತಿಯಾಗಿ ಅವರು ತುಂಬಾ ಶುದ್ಧ ಮನಸ್ಸಿನ, ಪರೋಪಕಾರ ಸ್ವಭಾವದ ಜೊತೆಗೆ ಸ್ವತಂತ್ರವಾಗಿ ಯೋಚಿಸಬಲ್ಲ ವ್ಯಕ್ತಿಯಾಗಿದ್ದರು. ಯಾರಿಗೇ ಆದರೂ ನಿಷ್ಕಲ್ಮಷವಾದ ಮನಸ್ಸಿನಿಂದ ಸಹಾಯ ಮಾಡುತ್ತಿದ್ದರು. ಅವರಿಗೆ ಅಸೂಯೆ ಎನ್ನುವುದು ಸ್ವಲ್ಪವೂ ಇರಲಿಲ್ಲ. ಹಾಗೆಯೇ ತಮಗೆ ಸರಿ ಎನ್ನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಹೇಳುತ್ತಿದ್ದರು. ಅಂತಹ ಒಂದು ಘಟನೆಯನ್ನು ಟಿ ಎನ್ ಶೇಷಗೋಪಾಲನ್ ಹೇಳುತ್ತಾರೆ. ಸುಮಾರು ೭೦ರ ದಶಕ. ನಾನು ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ್ದೆ. ಅರ್ಜಿ ಹಾಕಿ ಎರಡು ವರ್ಷಗಳಾಗಿತ್ತು. ಆದರೆ ಸಂದರ್ಶನಕ್ಕೆ ಆಗ ಕರೆ ಬಂದಿತ್ತು. ಆಯ್ಕೆ ಸಮಿತಿಯಲ್ಲಿ ಎಂಡಿಆರ್, ಕೆ ಎಸ್ ನಾರಾಯಣಸ್ವಾಮಿ ಸೇರಿದಂತೆ ಇನ್ನೂ ಹಲವರು ಇದ್ದರು. ನನ್ನನ್ನು ಹಲವು ಪ್ರಶ್ನೆ ಕೇಳಿದರು. ಹಾಡಲು ಹೇಳಿದರು. ಸಮಿತಿಯಲ್ಲಿದ್ದ ಹೆಚ್ಚಿನವರು ಈತ ಇಷ್ಟು ಸೊಗಸಾಗಿ ಹಾಡುತ್ತಾರೆ, ಬಹುಶಃ ಈಗಾಗಲೇ ಕಚೇರಿ ಮಾಡುತ್ತಿರಬಹುದು. ಇವರಿಗೆ ಕಲಿಯಲು ಇನ್ನೇನಿದೆ? ಇವರಿಗೇಕೆ ವಿದ್ಯಾರ್ಥಿ ವೇತನ ಕೊಡಬೇಕು ಎಂದು ಎಂಡಿಯವರ ಮುಂದೆ ತಮ್ಮ ಅಭಿಪ್ರಾಯ ಹೇಳಿದರು. ಆಗ ಎಂಡಿಯೂ ಇವರ ಮಾತನ್ನು ಒಪ್ಪಿಬಿಡುತ್ತಾರೇನೋ ಎಂಬ ತಳಮಳದಲ್ಲಿ ನಾನಿದ್ದೆ. ಅವರು ಕೆಲವು ನಿಮಿಷ ಸುಮ್ಮನಿದ್ದರು. ಆಮೇಲೆ, ಚೆನ್ನಾಗಿ ಹಾಡ್ತಾನೆ, ಏನಂತೆ? ಚೆನ್ನಾಗಿ ಹಾಡುವುದೇ ತಪ್ಪೇ? ಕಂಠ ಚೆನ್ನಾಗಿರೋದು ಅವನ ತಪ್ಪೇ? ಚೆನ್ನಾಗಿ ಹಾಡುವವರು ಕಲಿಯುವುದಕ್ಕೆ ಏನು ಇರುವುದಿಲ್ಲವೇ? ಚೆನ್ನಾಗಿ ಹಾಡುವವರಿಗೆ ಮತ್ತು ಇಷ್ಟು ವರ್ಷ ಸಂಗೀತದ ಕಲಿಕೆಗಾಗಿ ಬದುಕನ್ನು, ತಮ್ಮ ಯೌವ್ವನದ ದಿನಗಳನ್ನು ಸವೆಸಿರುವವರಿಗಲ್ಲದೆ ವಿದ್ಯಾರ್ಥಿವೇತನವನ್ನು ಇನ್ಯಾರಿಗೆ ಕೊಡಬೇಕು ಸ್ವಾಮಿ? ಎಂದು ಮುಲಾಜಿಲ್ಲದೆ ತಮ್ಮ ಅಭಿಪ್ರಾಯವನ್ನು ಹೇಳಿದರು ಮತ್ತು ನನಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿದರು.
ಎಂಡಿಆರ್ ಸುಮಾರು ಮುನ್ನೂರು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಕೀರ್ತನೆಗಳು, ವರ್ಣಗಳು ಹಾಗೂ ತಿಲ್ಲಾನಗಳಿವೆ. ಅವು ತಮಿಳು, ಸಂಸ್ಕೃತ, ಮತ್ತು ತೆಲುಗು ಭಾಷೆಗಳಲ್ಲಿವೆ. ಅಠಾಣ ರಾಗದ ಹರಿಯುಂ ಹರನುಂ, ಬಾಗೇಶ್ರೀ ರಾಗದ ಸಾಗರ ಶಯನ ವಿಭೋ, ಮುಂತಾದವು ಕಚೇರಿ ವೇದಿಕೆಯಲ್ಲಿಯೂ ತುಂಬಾ ಹೆಸರು ಮಾಡಿರುವ ರಚನೆಗಳು.
ಎಂಡಿಆರ್ ಭಾರತ ಸರ್ಕಾರದ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ೧೯೮೩-೮೪ರಲ್ಲಿ ಅವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪುರಸ್ಕಾರ ದೊರಕಬೇಕಿತ್ತು ಆದರೆ ಅಕಾಡೆಮಿಯ ಆಂತರಿಕ ರಾಜಕೀಯದಿಂದ ದೊರಕಲಿಲ್ಲ ಎನ್ನುವುದು ಹೆಚ್ಚಿನವರ ಅಭಿಪ್ರಾಯ.
ಎಂ ಡಿ ರಾಮನಾಥನ್ ಎಂದರೆ, ತನಗಾಗಿಯೇ ಹಾಡಿದವರು, ಸಂಗೀತಕ್ಕಾಗಿ ಹಾಡಿದವರು.