Rashid Khan -ರಶೀದ್ ಖಾನ್

ನೀವಿಷ್ಟು ಬೇಗ ಹೋಗಬಾರದಿತ್ತು ಉಸ್ತಾದರೇ.

ಒಮ್ಮೆ ಸಂದರ್ಶನವೊಂದರಲ್ಲಿ ಹಿಂದೂಸ್ತಾನಿ ಸಂಗೀತದ ಭವಿಷ್ಯದ ಬಗ್ಗೆ ಭೀಮಸೇನ ಜೋಷಿಯನ್ನು ಕೇಳಿದಾಗ ಹಿಂದುಸ್ತಾನಿ ಸಂಗೀತದ ಭವಿಷ್ಯ ರಶೀದ್ ಖಾನ್ ಅಂದಿದ್ದರು. ಅಷ್ಟೇ ಅಲ್ಲ ತನ್ನೊಂದಿಗೆ ಜುಗಲ್‌ಬಂದಿಯನ್ನು ಹಾಡಲು ಆಹ್ವಾನಿಸಿದ್ದರು. ರಷೀದ್ ಖಾನ್ ತುಂಬಾ ಸಣ್ಣ ವಯಸ್ಸಿನಲ್ಲೇ ಅಷ್ಟೊಂದು ಭರವಸೆ ಮೂಡಿಸಿದ್ದರು. ಅವರು ಕಲ್ಕತ್ತೆಯಲ್ಲಿ ತಮ್ಮ ಮೊದಲ ಕಚೇರಿ ಮಾಡಿದಾಗ ಅವರಿಗೆ ಕೇವಲ ೧೧ ವರ್ಷಗಳು. ಅಂದು ಅವರು ಹಾಡಿದ್ದು ಪಟದೀಪ್ ರಾಗದ ಬಂದಿಶ್. ಆ ಸಂಗೀತೋತ್ಸವದಲ್ಲಿ ಹಿಂದುಸ್ತಾನಿ ಸಂಗೀತದ ದಿಗ್ಗಜರೆಲ್ಲರೂ ಇದ್ದರು. ಈ ಪ್ರತಿಭಾವಂತ ಹುಡುಗನ ಸಂಗೀತಕ್ಕೆ ಎಲ್ಲರೂ ಫಿದಾ ಆಗಿದ್ದರು.
ಅಮ್ಮ ಶಕ್ರಿ ಬೇಗಂಗೆ ತನಗಿದ್ದ ಇಬ್ಬರು ಹುಡುಗರನ್ನು ದೊಡ್ಡ ಗಾಯಕರನ್ನಾಗಿ ಮಾಡುವ ಆಸೆ. ಆಕೆ ಬೆಳೆದದ್ದೇ ಸಂಗೀತದ ವಾತಾವರಣದಲ್ಲಿ. ದುರದೃಷ್ಟವೆಂದರೆ ರಷೀದ್‌ಖಾನ್‌ಗೆ ನಾಲ್ಕು ವರ್ಷವಿದ್ದಾಗ ಅವರ ಸೋದರ ತೀರಿಹೋದ. ಮಗನ ಸಾವಿನ ದುಃಖ ತಡೆಯಲಾರದೆ ಶಕ್ರಿ ಬೇಗಂ ಕೂಡ ತೀರಿಹೋದರು. ತಬ್ಬಲಿ ಮಗು ರಶೀದ್ ಕ್ರಿಕೆಟ್, ಕಬ್ಬಡಿ ಆಡಿಕೊಂಡು ಒಂಟಿತನ ಮರೆಯುತ್ತಿದ್ದ. ಒಳ್ಳೆಯ ಚಿನ್ನದ ಕಂಠ. ಆದರೆ ರಶೀದ್ ರಿಯಾಜಿಗೆ ಸುತರಾಂ ತಯಾರಿರಲಿಲ್ಲ. ಯಾರ ಬಲವಂತಕ್ಕೂ ಒಪ್ಪುತ್ತಿರಲಿಲ್ಲ. ಅವರ ದೊಡ್ಡ ಸೋದರಮಾವ ಗುಲಾಂ ಮುಸ್ತಫಾ ಖಾನ್ ಇವರನ್ನು ಮುಂಬೈಗೆ ಕರೆದುಕೊಂಡು ಹೋದರು. ಅಲ್ಲಿ ಅವರು ನನ್ನನ್ನು ಶಾಲೆಗೆ ಸೇರಿಸಿದ್ದರು. ನನಗೆ ಶಾಲೆ ಸ್ವಲ್ಪವೂ ಇಷ್ಟ ಇರಲಿಲ್ಲ. ನನಗೆ ಹಾಡುವುದಕ್ಕಿಂತಲೂ ತಬಲಾ ನುಡಿಸುವುದರ ಬಗ್ಗೆ ಹೆಚ್ಚು ಒಲವಿತ್ತು. ನನ್ನನ್ನು ಅವರು ತಬಲಾ ಕಲಿಯಲು ಸೇರಿಸಿದ್ದರು. ಕೊನೆಗೆ ಅವರನ್ನು ಅವರ ಮಾಮಾ-ತಾತಾ ರಾಂಪುರ ಘರಾನೆಯ ನಿಸ್ಸಾರ್ ಹುಸೇನ್ ಖಾನರ ಸುಪರ್ದಿಗೆ ಒಪ್ಪಿಸಲಾಯಿತು. ಅವರು ಸುಮಾರು ಎರಡು ವರ್ಷ ಭೈರವ್ ರಾಗದ ಮಂದ್ರ ಸಪ್ತಕ ’ಸನಿದಪಮಗರಿಸ’ ನನಗೆ ಅಭ್ಯಾಸ ಮಾಡಿಸಿದರು. ನನಗೆ ಬೋರ್ ಆಗುತ್ತಿತ್ತು. ಎಷ್ಟೋ ಸಲ ನಾನು ಎಡರೆರಡು ತಿಂಗಳು ಅವರಿಗೆ ಕಾಣಿಸಿಕೊಳ್ಳದೆ ಓಡಾಡುತ್ತಿದ್ದೆ. ಅವರದ್ದು ಕಠಿಣವಾದ ರಿಯಾಜ್ ಪದ್ಧತಿ. ಹೊಡೆತ, ಹಸಿವು ಇವೆಲ್ಲಾ ಮಾಮೂಲಿಯಾಗಿತ್ತು. ಇದರ ಜೊತೆಗೆ ಪ್ರೀತಿಯೂ ಇದ್ದುದರಿಂದ ಇವೆಲ್ಲವನ್ನು ಸಹಿಸಿಕೊಂಡಿದ್ದೆ. ಎಷ್ಟೋ ಸಲ ತಡೆದುಕೊಳ್ಳಲಾಗದೆ ಸಂಕಟ ಪಟ್ಟಿದ್ದೂ ಇದೆ. ನಂತರ ಅವರೇ ನನ್ನನ್ನು ಕಲ್ಕತ್ತಾದಲ್ಲಿ ಐಟಿಸಿ ನಡೆಸುತ್ತಿದ್ದ ಸಂಗೀತ ಸಂಸ್ಥೆಗೆ ಸೇರಿಸಲು ಕರೆತಂದರು. ಅಂದಿನ ಸಂದರ್ಶನದಲ್ಲಿ ಹಲವು ದಿಗ್ಗಜರು ಇದ್ದರು. ನಾನು ಆಗ ಹೆಚ್ಚಾಗಿ ದ್ರುತ್ ಮಾತ್ರ ಹಾಡುತ್ತಿದ್ದೆ. ಅವರೆಲ್ಲರೂ ಒಮ್ಮತದಿಂದ ನನ್ನನ್ನು ಪಾಸು ಮಾಡಿದರು. ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ನನಗೆ ಸಂಗೀತದಲ್ಲಿ ನಿಜವಾದ ರುಚಿ ಬಂದಿದ್ದು ಅಲ್ಲಿಯೇ. ಐಟಿಸಿಯ ಸಂಗೀತದ ಗ್ರಂಥಾಲಯದಲ್ಲಿ ಕೇಳಿದ್ದ ಅಮೀರ್ ಖಾನ್ ಸಂಗೀತ ಅವರಿಗೆ ಹುಚ್ಚು ಹತ್ತಿಸಿತ್ತು. ಅವರ ಹಾಗೆ ಅತಿ ವಿಲಂಬಿತ್ ಸಂಗೀತ ರೂಢಿಸಿಕೊಂಡಿದ್ದರು. ನಂತರದಲ್ಲಿ ಅವರ ಸಂಗೀತಕ್ಕೆ ಒಂದಿಷ್ಟು ವೇಗ ಸೇರಿಕೊಂಡಿದ್ದರೂ ವಿಲಂಬಿತ್ ಸಂಗೀತಕ್ಕೆ ಇವರು ಹೆಸರಾಗಿದ್ದರು. ಸಂಗೀತ ಜಗತ್ತು ಇವರ ಪ್ರತಿಭೆಯನ್ನು ಸಣ್ಣವಯಸ್ಸಿನಲ್ಲೇ ಗುರುತಿಸಿತ್ತು. ದೊಡ್ಡ ಸಂಗೀತಗಾರರಾದರು. ಶಿಕ್ಷಣ ಸಾಧ್ಯವಾಗಿರಲಿಲ್ಲ. ವಿದ್ಯಾವಂತ ಹುಡುಗಿಯನ್ನು ಮದುವೆಯಾಗುವ ಇದ್ದ ಹಂಬಲಕ್ಕೆ ಪೂರಕವಾಗಿ ಜೋಯಿತಾ ಬಸು ಸಿಕ್ಕರು.
ನಿಸ್ಸಾರ್ ಹುಸೇನ್ ಖಾನರ ಸಂಗೀತದ ಪ್ರಭಾವ ಇವರ ಮೇಲೆ ತುಂಬಾ ಗಾಢವಾಗಿತ್ತು. ಸ್ವತಃ ಹುಸೇನ್ ಖಾನ್ ಹತ್ತು ಹಲವು ಕಡೆಗಳ ಸಂಗೀತದ ಅತ್ಯತ್ತಮ ಅಂಶವನ್ನು ತಮ್ಮ ಸಂಗೀತದೊಳಕ್ಕೆ ಮೇಳೈಸಿಕೊಳ್ಳಲು ಪ್ರಯತ್ನಿಸಿದ್ದರು. ಶಿಷ್ಯರಿಗೂ ಅದನ್ನು ಹೇಳುತ್ತಿದ್ದರಂತೆ, ಎಲ್ಲೆಲ್ಲಿ ಒಳ್ಳೆಯದು ಏನೇನು ಕಾಣುತ್ತದೆಯೋ ಅದನ್ನು ನಿಮ್ಮದನ್ನಾಗಿಸಿಕೊಳ್ಳಿ ಎಂದು. ನಿಸ್ಸಾರ್ ಹುಸೇನ್ ಖಾನ್ ಅವರ ಗಾಯನದಲ್ಲಿ ವಿಶೇಷವಾಗಿದ್ದ ಛೂಟಕೆ ತಾನ್ ನನ್ನ ಸಂಗೀತದಲ್ಲಿಯೂ ಇದೆ. ಗುರುಗಳು ತಾನಕ್ಕಾಗಿ ನನಗೆ ಆರಂಭದಿಂದಲೂ ಸ್ವರಗಳ ಪಲ್ಟಾ ಮಾಡಿಸುತ್ತಿದ್ದರು. ತಾನ್ ಹಾಡುವಾಗ ಪ್ರತಿ ಸ್ವರವೂ ಪ್ರತ್ಯೇಕ ಮುತ್ತಿನಂತೆ ಕೇಳಿಸಬೇಕು ಎಂದು ಗುರುಗಳು ಹೀಗೆ ಅಭ್ಯಾಸ ಮಾಡಿಸುತ್ತಿದ್ದರು. ನನಗೆ ಅದರ ಮಹತ್ವ ನಂತರದಲ್ಲಿ ಅರ್ಥವಾಯಿತು. ನನಗೆ ತಾನ್‌ಕರಿಯಲ್ಲಿ ಅಷ್ಟು ಪರಿಣತಿ ಸಾಧಿಸಲು ಸಹಕಾರಿಯಾಗಿದ್ದು ಅಂದು ಅವರು ಮಾಡಿಸಿದ್ದ ಸ್ವರಗಳ ಪಲ್ಟಾ, ಎಂದು ರಶೀದ್ ಖಾನ್ ಸಂದರ್ಶನವೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ. ನಿಸ್ಸಾರ್ ಹುಸೇನ್ ಖಾನರು ತರಾನಾ ಗಾಯನಕ್ಕೆ ಒಂದು ಹೊಸ ಸ್ವರೂಪವನ್ನೇ ಕೊಟ್ಟು ಅದರ ಭಿನ್ನ ಸಾಧ್ಯತೆಗಳನ್ನು ತೆರೆದಿಟ್ಟರು. ತಮ್ಮ ಘರಾನೆಯ ಆ ಬಗೆಯ ತರಾನಾ ಗಾಯನವನ್ನು ರಶೀದ್ ಖಾನ್ ಉಳಿಸಿಕೊಂಡಿದ್ದರು. ತರಾನಾ, ಖ್ಯಾಲ್, ಲಘುಸಂಗೀತ ಹೀಗೆ ಪ್ರತಿಯೊಂದು ರಚನಾ ಪ್ರಕಾರ ಹಾಡುವುದರಲ್ಲಿಯೂ ಇವರ ಘರಾನೆಯ ಒಂದು ವಿಶೇಷ ಛಾಪು ಇರುತ್ತಿತ್ತು. ಇವರ ಘರಾನೆ ವೈವಿಧ್ಯತೆಗೆ ಹೆಸರು ಮಾಡಿರುವ ಘರಾನೆ. ಈ ಘರಾನೆಯ ಗಾಯಕರು ಎಲ್ಲಾ ಬಗೆಯ ರಚನೆಗಳನ್ನೂ ಹಾಡುತ್ತಿದ್ದರು. ರಶೀದ್‌ಖಾನ್ ಅವರಲ್ಲಿ ಕಾಣುತ್ತಿದ್ದ ವೈವಿಧ್ಯತೆಗೆ ಈ ಘರಾನೆಯ ಸ್ವಭಾವವೇ ಕಾರಣವಾಗಿತ್ತೆನಿಸುತ್ತದೆ. ರಶೀದ್ ಖಾನರು ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ಈಗ ಆಧುನಿಕ ಕಾಲ ಬಂದಿದೆ, ಲೋಕ, ಜನ ಏನನ್ನು ಬಯಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು ಆ ಕಡೆ ಸಾಗಬೇಕು ಆದರೆ ನಾವು ಹೇಗೆ ಸಾಗಬೇಕು ಮತ್ತು ಎಂತಹ ಸಂಗೀತವನ್ನು ಜನರಿಗೆ ಕೇಳಿಸಬೇಕೆಂದರೆ, ಜನ ಇಂತಹ ಸಂಗೀತವೇ ಬೇಕೆಂದು ಬಯಸುವಂತಾಗಬೇಕು.
ತಮ್ಮ ಪ್ರತಿ ಕಾರ್ಯಕ್ರಮದ ನಂತರವೂ ಇನ್ನೂ ಚೆನ್ನಾಗಿ ಹಾಡಬೇಕಿತ್ತು ಅನ್ನುವ ಅತೃಪ್ತಿಯಿಂದ ಸದಾ ಬೆಳೆಯುತ್ತಲೇ ಇದ್ದ ರಷೀದ್ ಖಾನ್ ಹಿಂದೂಸ್ತಾನಿ ಸಂಗೀತದ ಪರಿಧಿಯನ್ನು ವಿಸ್ತರಿಸುವ ಸಾಮರ್ಥ್ಯವಿದ್ದ ಅಪ್ರತಿಮ ಕಲಾವಿದ. ಇವರ ಕೈಯಲ್ಲಿ ಖಯಾಲ್ ರಚನೆಯ ಬಂದಿಶ್‌ಗಳೂ ಬದಲಾಗಿಬಿಡುತ್ತಿದ್ದವು. ಯಾವುದೇ ಬಂಧನಕ್ಕೂ ಒಳಪಡುವ ಜಾಯಮಾನ ಇವರದ್ದಲ್ಲ. ಸಂಗೀತದ ವಿಷಯದಲ್ಲಿ ತುಂಬಾ ರಿಜಿಡ್ ಆಗಿರಬಾರದು. ಅದಕ್ಕೆ ಎಲ್ಲಾ ಅಯಾಮಗಳನ್ನು, ಎಲ್ಲಾ ಮೂಡುಗಳನ್ನು ತರಬೇಕು ಅಂತಿದ್ದರು. ಅವರು ಹಲವು ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದರು. ಶುದ್ಧ ಹಿಂದುಸ್ತಾನಿ ಸಂಗೀತವನ್ನು ಲಘು ಸಂಗೀತದ ಪ್ರಕಾರವಾಗಿದ್ದ ಸೂಫೀ ಸಂಗೀತದೊಂದಿಗೆ ಮೇಳೈಸಲು ಪ್ರಯತ್ನಿಸುತ್ತಿದ್ದರು. ನೈನಾ ಪಿಯಾ ಸೆ ಎನ್ನುವ ಹೆಸರಿನಲ್ಲಿ ಅಮೀರ್ ಖುಸ್ರೋನ ಗೀತೆಗಳ ಧ್ವನಿಮುದ್ರಣವನ್ನು ಹೊರತಂದಿದ್ದರು. ಪಾಶ್ಚಾತ್ಯ ಸಂಗೀತದ ವಾದಕ ಮತ್ತು ಭಾರತೀಯ ಜಾಜ಼್ ಸಂಗೀತದ ಆದ್ಯ ಪ್ರವರ್ತಕ ಎನಿಸಿಕೊಂಡಿದ್ದ ಲೂಯಿ ಬ್ಯಾಂಕ್‌ನ ಜೊತೆಗೆ ಪಯೋಗಾತ್ಮಕ ಕಚೇರಿಯನ್ನು ನುಡಿಸಿದ್ದರು. ಸಿತಾರ್‌ವಾದಕ ಶಾಹಿದ್ ಪರ್ವೇಜ್ ಮತ್ತು ಇತರರ ಜೊತೆ ಜುಗಲ್‌ಬಂದಿ ಪ್ರಸ್ತುತಪಡಿಸಿದ್ದರು. ಜನಸಾಮಾನ್ಯರು ಸಂಗೀತದ ವಿಷಯಕ್ಕೆ ಮೂರ್ಖರು, ಏನೂ ಅರಿಯದವರು ಎನ್ನುವುದು ಪಂಡಿತರ ಭಾವನೆ. ಆದರೆ ಅದು ಸುಳ್ಳು. ಜನಸಾಮಾನ್ಯರಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಸೊಗಸಾದ ರಸಪ್ರಜ್ಞೆ ಇತ್ತು ಎನ್ನುವುದು ರಶೀದ್‌ಖಾನರ ಅಭಿಪ್ರಾಯವಾಗಿತ್ತು. ಸಂಗೀತಗಾರರಿಗೆ ಜನರ ಫೀಡ್‌ಬ್ಯಾಕ್ ತುಂಬಾ ಮುಖ್ಯ ಎಂದು ರಶೀದ್‌ಖಾನ್ ಭಾವಿಸಿದ್ದರು.
ಉಸ್ತಾದ್ ಅಲಿ ಅಕ್ಬರ್ ಖಾನ್, ಪಂಡಿತ್ ರವಿಶಂಕರ್, ಪಂಡಿತ್ ನಿಖಿಲ್ ಚಕ್ರವರ್ತಿ, ಉಸ್ತಾದ್ ವಿಲಾಯತ್ ಖಾನ್ ಇವರೆಲ್ಲ ತಮ್ಮನ್ನು ತುಂಬಾ ಪ್ರೋತ್ಸಾಹಿಸಿ ಬೆಳೆಸಿದರು ಎಂದು ರಶೀದ್ ಖಾನ್ ನೆನೆಸಿಕೊಳ್ಳುತ್ತಿದ್ದರು.
ಇಬ್ಬರು ಮಕ್ಕಳು ಸಂಗೀತವನ್ನು ಮುಂದುವರಿಸಿದ್ದಾರೆ. ಸುಹ ಸುಫಿ ಸಂಗೀತವನ್ನು ಹಾಗೂ ಅರ್ಮಾನ್ ಹಿಂದುಸ್ತಾನಿ ಸಂಗೀತದಲ್ಲಿ ಗಂಭೀರವಾಗಿ ಮುಂದುವರಿಯುತ್ತಿದ್ದಾರೆ.
ಕ್ರಿಕೆಟ್, ಅಡುಗೆ, ಸಿನಿಮಾ ಸಂಗೀತ, ಠುಮ್ರಿ ಹೀಗೆ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದ ರಷೀದ್ ಖಾನ್ ಇನ್ನೂ ತುಂಬಾ ಹಾಡಬೇಕಿತ್ತು. ತುಂಬಾ ಸಣ್ಣ ವಯಸ್ಸಿನಲ್ಲಿ ಹೋಗಿಬಿಟ್ಟರು. ಐವತ್ತೈದು ಸಾಯುವ ವಯಸ್ಸೇ ಅಲ್ಲ. ಕಲಾ ಜೀವನ ನಿಧಾನವಾಗಿ ಅರಳಬೇಕಾದ ಸಮಯ. ಕೀರ್ತಿ, ದುಡ್ಡು ಯಾವುದಕ್ಕೂ ಅಲ್ಲದೆ ತಮ್ಮಷ್ಟಕ್ಕೆ ಹಾಡಿಕೊಳ್ಳಬಹುದಾದ ಪರಿಪಕ್ವ ಕಾಲಘಟ್ಟದಲ್ಲಿದ್ದರು. ಹಲವು ಬಗೆಯ ಸಂಗೀತದಲ್ಲಿ ತೊಡಗಿಕೊಂಡಿದ್ದರೂ ಶಾಸ್ತ್ರೀಯ ಸಂಗೀತಗಾರನಾಗಿ ತನ್ನ ಹೊಣೆಯನ್ನು ಅರಿತಿದ್ದ ಅಪರೂಪದ ಸಂಗೀತಗಾರ.
ಒಬ್ಬ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ. ರೆಕಾರ್ಡುಗಳನ್ನಷ್ಟೆ ಕೇಳಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿಯಲ್ಲಿದ್ದೇವೆ.