Rasoolan Bai, ಅವರೆಲ್ಲರೂ ದೇವಿಯರು ಉಳಿದಿರುವ ಬಾಯಿ ನಾನೊಬ್ಬಳೆ.

ಶೈಲಜಾ

 

ಇಂದು ಸಂಪೂರ್ಣ ವಿಸ್ಮೃತಿಗೆ ಸರಿದುಹೋಗಿರುವ ರಸೂಲನ್ ಬಾಯಿಯ ಉಲ್ಲೇಖವಿಲ್ಲದೆ ಠುಮ್ರಿಯ ಇತಿಹಾಸವಾಗಲಿ ಅಥವಾ ಬನಾರಸ್ ಶೈಲಿಯ ಠುಮ್ರಿಯ ಪ್ರಸ್ತಾಪವಾಗಲಿ ಪೂರ್ಣವಾಗುವುದೇ ಇಲ್ಲ.

ಉತ್ತರಪ್ರದೇಶದ ಮಿರ್ಜ಼ಾಪುರದ ಕಚ್ಛ್ವಾ ಬಜ಼ಾರಿನಲ್ಲಿ ೧೯೦೨ರಲ್ಲಿ ರಸೂಲನ್ ಬಾಯಿ ಜನಿಸಿದರು. ಬಡತನದ ಕುಟುಂಬದಲ್ಲಿ ಶ್ರೀಮಂತ ಸಂಗೀತವಿತ್ತು. ತಾಯಿ ಅದಾಲತ್ ಬಾಯಿ ಒಳ್ಳೆಯ ಗಾಯಕಿ. ರಸೂಲನ್‌ಗೆ ಬಾಲ್ಯದಿಂದಲೇ ಅಭಿಜಾತ ರಾಗಗಳ ಮೇಲೆ ಒಳ್ಳೆಯ ಹಿಡಿತವಿತ್ತು. ನೈನಾದೇವಿ ಮಾಡುವ ಸಂದರ್ಶನದಲ್ಲಿ ತನ್ನ ಬಾಲ್ಯ ಮತ್ತು ಸಂಗೀತವನ್ನು ಕುರಿತು ರಸೂಲನ್ ಬಾಯಿ ಹೇಳಿಕೊಳ್ಳುತ್ತಾರೆ. ನನ್ನ ತಾಯಿ, ಅದಾಲತ್ ಬೀಬಿ. ನನ್ನ ಅಜ್ಜಿ, ನನ್ನ ದೊಡ್ಡಕ್ಕ ಬತೂರನ್ ಬೀವಿ ಎಲ್ಲರೂ ತುಂಬಾ ಚೆನ್ನಾಗಿ ಹಾಡುತ್ತಿದ್ದರು. ನನ್ನ ಗುರುಗಳು ಉಸ್ತಾದ್ ಶಮ್ಮೂ ಖಾನ್ ಸಾಹೇಬ್. ಅವರು ಬನಾರಸ್ಸಿನಲ್ಲಿ ಇದ್ದರು. ಅವರು ಶೋರಿ ಮಿಯಾ ಅವರ ಘರಾನೆಗೆ ಸೇರಿದವರು. ಮುಷ್ತಾಕ್ ಅಲಿ ಖಾನ್ ಅವರ ಘರಾನೆಗೆ ಸೇರಿದವರು. ನನಗೆ ಖ್ಯಾಲ್ ಟಪ್ಪಾ ಎರಡರಲ್ಲೂ ತರಬೇತಿ ನೀಡಿದರು. ನನ್ನ ಐದನೆಯ ವಯಸ್ಸಿನಲ್ಲಿ ನನಗೆ ತಾಲೀಮ್ ಪ್ರಾರಂಭಿಸಿದರು. ನನಗೆ ಹಾಡುವುದೆಂದರೆ ಬಲು ಪ್ರೀತಿ. ನಾನು ಸದಾ ಹಾಡುತ್ತಲೇ ಇರುತ್ತಿದ್ದೆ. ನಮ್ಮ ಅಕ್ಕನಿಗೆ ಉಸ್ತಾದರು ಅಭ್ಯಾಸ ಮಾಡಿಸುವ ಹೊತ್ತಿನಲ್ಲಿಯೂ ನಾನು ಅಲ್ಲೇ ಕುಳಿತು ಕೇಳುತ್ತಿದ್ದೆ. ನನಗೆ ಒಳ್ಳೆಯ ನೆನಪಿನ ಶಕ್ತಿ. ಅವಳಿಗೆ ಏನೇನು ಹೇಳಿಕೊಟ್ಟಿದ್ದರೋ ಅದು ನನಗೆ ಅಭ್ಯಾಸ ಮಾಡದೆಯೇ ಬಂದುಬಿಟ್ಟಿತ್ತು. ದಿನಕ್ಕೆ ೧೪ ಗಂಟೆಗಳ ಕಾಲ ಹಗಲೂ ರಾತ್ರಿ ಹಾಡುತ್ತಿದ್ದೆ. ನಂತರದಲ್ಲಿ ಖ್ಯಾತ ಸಾರಂಗಿವಾದಕರಾದ ಆಷಿಕ್ ಖಾನ್ ಮತ್ತು ನಿಜ್ಜತ್ ಖಾನ್ ಅವರಿಂದ ಸಂಗೀತಪಾಠ.

ಖಯಾಲ್ ಗಾಯನದಲ್ಲಿ ಚೆನ್ನಾಗಿ ಪರಿಣತಿ ಪಡೆದ ಮೇಲೆಯೂ ರಸೂಲನ್ ಬಾಯಿ ಠುಮ್ರಿ ಮತ್ತು ಟಪ್ಪಾಗಳನ್ನು ತಮ್ಮ ಆಯ್ಕೆಯ ಕ್ಷೇತ್ರವನ್ನಾಗಿ ಮಾಡಿಕೊಂಡರು. ನನಗೆ ಠುಮ್ರಿ ಮತ್ತು ಟಪ್ಪಾ ತುಂಬಾ ಇಷ್ಟವಾಗುತ್ತಿತ್ತು. ನನಗೆ ಬೋಲ್ ಬನಾವ್‌ನಲ್ಲಿ ತುಂಬಾ ಆಸಕ್ತಿಯಿತ್ತು ಮತ್ತು ಮಾಡುವುದಕ್ಕೂ ಆಗುತ್ತಿತ್ತು. ಠುಮ್ರಿಯಲ್ಲಿ ಧ್ರುಪದ್ ಅಂಗ್, ಖ್ಯಾಲ್ ಅಂಗ್ ಮತ್ತು ಟಪ್ಪಾ ಅಂಗ್ ಮೂರೂ ಇವೆ. ಠುಮ್ರಿಯನ್ನು ಬೆಳಸಲು ಖ್ಯಾಲ್ ಅಂಗ್ ಬೇಕೇ ಬೇಕು ಅದಿಲ್ಲದಿದ್ದರೆ ವಿಸ್ತರಿಸುವುದಕ್ಕೇ ಸಾಧ್ಯವಿಲ್ಲ. ಠುಮ್ರಿಯಲ್ಲಿ ಖ್ಯಾಲಿನ ಸಪಾಟ್ ತಾನ್ ಇದೆ, ಟಪ್ಪಾದ ಮುರ್ಕಿ ಇದೆ. ಠುಮ್ರಿ ಹಾಡುವವರಿಗೆ ಕಂಠ ಮಧುರವಾಗಿರಬೇಕು, ರಾಗವನ್ನು ವಿಸ್ತರಿಸಲು ತಿಳಿದಿರಬೇಕು ಮತ್ತು ಲಯದ ಮೇಲೆ ಒಳ್ಳೆಯ ನಿಯಂತ್ರಣ ಇರಬೇಕು. ಟಪ್ಪಾ ಹಾಡುವಾಗ ಎಲ್ಲಿಯೂ ನಿಲ್ಲಿಸಲು ಸಾಧ್ಯವಿಲ್ಲ. ಮುರ್ಕಿ, ಕನಕ್ ಮುಂತಾದ ಗಮಕಗಳೆಲ್ಲವೂ ಅದರಲ್ಲಿ ಬರುತ್ತದೆ. ಟಪ್ಪಾ ಹಾಡುವವರ ಗಂಟಲಿನಲ್ಲಿ ಯಾವುದೇ ಧಾನ್ಯ ಹಾಕಿದರೂ ಅದು ಶುದ್ಧಹೊಂದಿ ಆಚೆಗೆ ಬರುತ್ತದೆ. ಖಯಾಲ್ ಬಂದರೆ ಟಪ್ಪಾ ಹಾಡುವುದಕ್ಕಾಗುವುದಿಲ್ಲ. ಆದರೆ ಟಪ್ಪಾ ಬಂದರೆ ಉಳಿದ ಎಲ್ಲವನ್ನೂ ಹಾಡಬಹುದು ಏಕೆಂದರೆ ಅದು ಕಂಠವನ್ನು ಅಷ್ಟೊಂದು ಪರಿಷ್ಕರಣಗೊಳಿಸುತ್ತದೆ. ನನ್ನ ಠ್ರುಮ್ರಿ ಗಾಯನದ ಮೇಲೆ ತುಂಬಾ ಪ್ರಭಾವ ಬೀರಿದವರು ಯಾರು. ಮೊಯಿದ್ದೀನ್. ಅವರು ಬಡೀ ಮೋತಿ ಬಾಯಿಯ ಗುರು. ನಂತರ ಕಲ್ಕತ್ತೆಯಲ್ಲಿ ಗಿರಿಜಾ ಬಾಬು (ಗಿರಿಜಾಶಂಕರ್ ಚಕ್ರವರ್ತಿ). ಅವರು ಅದ್ಭುತವಾಗಿ ಠುಮ್ರಿ ಹಾಡುತ್ತಿದ್ದರು. ಸ್ವರಗಳ ಮೇಲೆ ಅವರಿಗೆ ಅಸಾಧಾರಣವಾದ ನಿಯಂತ್ರಣವಿತ್ತು. ಅವರು ತುಂಬಾ ಸೊಗಸಾಗಿ ಬೋಲ್ ಮಾಡುತ್ತಿದ್ದರು.

ರಸೂಲನ್ ಬಾಯಿ ಕಂಠ ತುಂಬಾ ಭಾವಪೂರ್ಣವಾಗಿತ್ತು. ಅವರ ಕಂಠದಲ್ಲಿ ಪ್ರಣಯಿನಿಯೊಬ್ಬಳ ಏಕಮುಖ ಪ್ರೀತಿಯ ವೇದನೆ ಅತ್ಯಂತ ಸೊಗಸಾಗಿ ಹೊರಹೊಮ್ಮುತ್ತಿತ್ತು. ಅವರ ಮೊದಲ ಕಾರ್ಯಕ್ರಮ ಧನಂಜಯ್‌ಘಡ್‌ನ ಆಸ್ಥಾನದಲ್ಲಿ ನಡೆಯಿತು. ಅದಾದ ನಂತರ ಹಲವು ಸ್ಥಳೀಯ ದೊರೆಗಳು ಅವರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಲಾರಂಭಿಸಿದರು. ಸುಮಾರು ಐದು ದಶಕಗಳ ಕಾಲ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲ ಅವರು ತಮ್ಮ ಪಾರಮ್ಯವನ್ನು ಮೆರೆದರು. ಅಂದಿನ ಖ್ಯಾತ ನಾಮರಾದ ತಬಲಾವಾದಕ ಅಹಮದ್ ಜಾನ್ ತಿರಕ್ವಾ, ಸಾರಂಗಿವಾದಕ ಗುಲಾಂ ಸಾಬ್ ಅಂಬಾಲೆವಾಲೆ, ಹಾರ್ಮೋನಿಯಂವಾದಕ ಸೋನಿ ಬಾಬು, ಲಕ್ನೋದ ಖಲೀಫಾ ವಾಜಿದ್ ಹುಸೇನ್ ಸಾಬ್ ಇವೆರಲ್ಲೂ ಇವರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದರು.

ಬನಾರಸ್ ಶೈಲಿಯ ಮತ್ತೊಬ್ಬ ಖ್ಯಾತ ಪ್ರತಿನಿಧಿಯಾದ ಸಿದ್ಧೇಶ್ವರಿದೇವಿಯೊಂದಿಗೆ ರಸೂಲನ್ ಬಾಯಿ ಹಾಡಿರುವ ಅಪರೂಪದ ಜುಗಲ್‌ಬಂದಿ ಲಭ್ಯವಿದೆ. ಮಾಂಜ್ ಖಮಾಚ್ ರಾಗದ, ೧೪ ಮಾತ್ರೆಗಳ ದೀಪ್‌ಚಾಂದಿ ತಾಳದಲ್ಲಿರುವ ಬೋಲ್ ಬನಾವ್ ಠುಮ್ರಿಯನ್ನು ಅವರು ಹಾಡಿದ್ದಾರೆ. ಈ ಜುಗಲ್‌ಬಂದಿಯಲ್ಲಿ ಅತ್ಯಂತ ಮನಮುಟ್ಟುವ ಅಂಶವೆಂದರೆ ಅವರಿಬ್ಬರೂ ಮುಕ್ತವಾಗಿ ಮನಬಿಚ್ಚಿ ಹಾಡಿದ್ದಾರೆ ಮತ್ತು ಅವರಲ್ಲಿ ಸ್ಪರ್ಧೆಯ ಮನೋಭಾವ ಸ್ವಲ್ಪವೂ ಕಾಣುವುದಿಲ್ಲ. ಒಬ್ಬರು ಹಾಡುವಾಗ ಇನ್ನೊಬ್ಬರು ಸ್ವಲ್ಪವೂ ಅಡ್ಡಿಮಾಡದೆ, ಸಂತೋಷವಾಗಿ ಅದನ್ನು ಆಸ್ವಾದಿಸುವುದು. ಅಷ್ಟೇ ಅಲ್ಲದೆ ಒಬ್ಬರು ವಿಸ್ತರಿಸುತ್ತಿರುವ ರಾಗದ ಭಡತ್‌ಗೆ ಪೂರಕವಾಗುವಂತೆ ಇನ್ನೊಬ್ಬರು ಹಾಡುವುದು.

ಭಾರತದಲ್ಲಿ ೧೯೪೦ರ ದಶಕದಲ್ಲಿ ಪ್ರಾರಂಭವಾದ ಶುದ್ದೀಕರಣದ ಪ್ರಕ್ರಿಯೆ ರಸೂಲನ್ ಬಾಯಿ ಅವರಂತಹ ತವಾಯಿಫ್‌ಗಳ ಬದುಕನ್ನು ಬುಡಮೇಲು ಮಾಡಿತು. ೧೯೪೮ರಲ್ಲಿ ರಸೂಲನ್ ಮುಜ್ರಾ ಮಾಡುವುದನ್ನು ನಿಲ್ಲಿಸಿದರು. ತಮ್ಮ ೪೬ನೆಯ ವಯಸ್ಸಿನಲ್ಲಿ ಬನಾರಸ್ಸಿನ ರೇಷ್ಮೆ ವ್ಯಾಪಾರಿ ಸುಲೈಮಾನ್ ಎನ್ನುವರನ್ನು ವಿವಾಹವಾದರು. ಅವರಿಗೆ ವಜೀರ್ ಎಂಬ ಮಗ ಹುಟ್ಟಿದ. ಆಗ ಆಕಾಶವಾಣಿಯು ಮದುವೆಯ ಸರ್ಟಿಫಿಕೇಟ್ ಇಲ್ಲದವರಿಗೆ ಆಕಾಶವಾಣಿಯಲ್ಲಿ ಠುಮ್ರಿಯನ್ನು ಹಾಡಲು ಅವಕಾಶ ನೀಡುತ್ತಿರಲಿಲ್ಲ. ಹಲವು ತವಾಯಿಫ್‌ಗಳು ಅದನ್ನು ವಿರೋಧಿಸಿದರು. ಆದರೆ ತನ್ನ ಬದುಕಿನ ಸಂಕಷ್ಟಗಳಿಂದಾಗಿ ರಸೂಲನ್ ಬಾಯಿ ಆ ಸರ್ಟಿಫಿಕೇಟ್ ನೀಡಿ ಆಕಾಶವಾಣಿಯಲ್ಲಿ ಹಾಡಲಾರಂಭಿಸಿದರು. ಹಾಗಾಗಿ ಶುದ್ಧ ಬನಾರಸ್ ಶೈಲಿಯ ಬೋಲ್ ಬನಾವ್ ಕಿ ಠುಮ್ರಿಯ ಕೆಲವು ಧ್ವನಿಮುದ್ರಣಗಳಾದರೂ ನಮಗೆ ಲಭ್ಯವಿದೆ.

ಭಾರತದ ವಿಭಜನೆಯ ನಂತರ ಸುಲೈಮಾನ್ ವಜೀರನನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ಹೋದರು. ಅವಳು ಚೆನ್ನಾಗಿ ದುಡಿಯುತ್ತಿದ್ದ ಕಾಲದಲ್ಲಿ ಅವಳನ್ನು ಬಳಸಿಕೊಂಡ ಪತಿ ಅವಳಿಗಾಗಿ ಸ್ವಲ್ಪವೂ ಮಿಡಿಯದೆ ಅವಳನ್ನು ಅವಳ ಕರ್ಮಕ್ಕೆ ಬಿಟ್ಟು ಹೊರಟುಹೋದ. ಆದರೆ ರಸೂಲನ್ ಭಾರತದಲ್ಲಿಯೇ ಉಳಿದು ಅಹಮದಾಬಾದಿನಲ್ಲಿ ನೆಲೆಸಿದರು. ಆಗ ಕೈಯ್ಯಲ್ಲ ಬಿಡಿಗಾಸಿಲ್ಲದ ರಸೂಲನ್ ಖಾಯಿಲೆಯಿಂದ ನರಳುತ್ತಿದ್ದಳು. ವಿಷಯ ತಿಳಿದ ಖ್ಯಾತ ಗಾಯಕಿ, ಕಲಾಪೋಷಕಿ ಮತ್ತು ರಸೂಲನ್‌ಬಾಯಿಯ ಶಿಷ್ಯೆ ನೈನಾದೇವಿ ರಸೂಲನ್‌ಬಾಯಿಯನ್ನು ದೆಹಲಿಗೆ ಕರೆತಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಸ್‌ನಲ್ಲಿ ಅವರಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಿ ಅವರನ್ನು ನೋಡಿಕೊಂಡರು. ತೀರಾ ಹೆಚ್ಚಾಗಿದ್ದ ರಕ್ತದೊತ್ತಡದಿಂದ ಅವರ ಕಂಠದ ವ್ಯಾಪ್ತಿ ಒಂದು ಅಷ್ಟಕದಷ್ಟು ಕಡಿಮೆಯಾಗಿಹೋಗಿತ್ತು. ನೈನಾದೇವಿಯ ಆರೈಕೆಯಲ್ಲಿ ಚೇತರಿಸಿಕೊಂಡ ರಸೂಲನ್ ಅವರಿಗೆ ಅವರ ಹಳೆಯ ಕಂಠ ಮತ್ತೆ ಮರಳಿತ್ತು. ಆಗ ನೈನಾದೇವಿಯೇ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಅವರ ಧ್ವನಿಮುದ್ರಣಕ್ಕೆ ವ್ಯವಸ್ಥೆ ಮಾಡಿದರು. ೧೯೫೭ರಲ್ಲಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ನೀಡಲಾಯಿತು.

ಶ್ರುತಿಯೊಂದಿಗೆ ಪರಿಪೂರ್ಣ ತಾದಾತ್ಮ್ಯ ಸಾಧಿಸುವ ಉದ್ದೇಶದಿಂದ ಒಂದು ಕಿವಿಯನ್ನು ತನ್ನ ಕೈನಿಂದ ಮುಚ್ಚಿಕೊಂಡು ಹಾಡುವ ಪರಿಪಾಠವನ್ನು ಪ್ರಾರಂಭಿಸಿದ ಮೊದಲ ಗಾಯಕಿ ರಸೂಲ್ ಬಾಯಿ ಎಂದು ಹೇಳುತ್ತಾರೆ. ಒಮ್ಮೆ ಅದಕ್ಕಾಗಿ ಅವರನ್ನು ಕೇಸರ್‌ಬಾಯಿ ಕೇರ‍್ಕರ್ ಅವರು ಕೆಟ್ಟದಾಗಿ ಲೇವಡಿ ಮಾಡಿದ ಘಟನೆಯೂ ಇದೆ. ಈಗ ಹಾಗೆ ಒಂದು ಕೈನಿಂದ ಕಿವಿಮುಚ್ಚಿಕೊಂಡು ಹಾಡುವುದು ಹೆಚ್ಚಿನ ಕಲಾವಿದರಲ್ಲಿ ಕಂಡುಬರುತ್ತದೆ.

೧೯೬೯ರಲ್ಲಿ ಗುಜರಾತಿನಲ್ಲಿ ಪ್ರಾರಂಭವಾದ ಭೀಕರ ಹಿಂದು ಮುಸ್ಲಿಂ ಗಲಭೆಯಲ್ಲಿ ಕಿಡಿಗೇಡಿಗಳು ರಸೂಲನ್ ಬಾಯಿಯವರ ಮನೆಗೆ ಬೆಂಕಿ ಇಟ್ಟರು. ರಸೂಲನ್ ಬಾಯಿ ಮತ್ತು ಅವರ ಠುಮ್ರಿ ಗಾಯನದ ಖ್ಯಾತಿ ಎಷ್ಟಿತ್ತೆಂದರೆ ಖ್ಯಾತ ಕವಿ ಆಘಾ ಶಹೀದ್ ಅಲಿ ತಮ್ಮ ’ಠುಮ್ರಿ ಫಾರ್ ರಸೂಲನ್ ಬಾಯಿ’ ಎಂಬ ಕವಿತೆಯಲ್ಲಿ ಇಂತಹ ಕಲಾವಿದೆಯ ಮೇಲಾದ ಕ್ರೌರ್ಯಕ್ಕೆ ತುಂಬಾ ಮರುಗುತ್ತಾರೆ. ಅಕ್ಷರಶಃ ನಿರ್ಗತಿಕಳಾದ ರಸೂಲನ್ ಉತ್ತರಪ್ರದೇಶಕ್ಕೆ ಮರಳಿ ಬಂದು ಅಲಹಾಬಾದಿನಲ್ಲಿ ನೆಲಸಿದರು. ಅಲ್ಲಿ ಆಕಾಶವಾಣಿಯ ಸಮೀಪದಲ್ಲಿ ಒಂದು ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು, ಬಡತನದ ಬೇಗೆಯಲ್ಲಿ ಬೆಂದು ೧೯೭೪ರ ಡಿಸೆಂಬರ್ ೧೫ರಂದು ತೀರಿಹೋದರು.

ಆಕಾಶವಾಣಿಯಲ್ಲಿ ಎಲ್ಲಾ ಖ್ಯಾತ ಸಂಗೀತಗಾರರ ಛಾಯಾಚಿತ್ರಗಳ ಸಾಲಿನಲ್ಲಿ ರಸೂಲನ್ ಬೇಗಂ ಅವರ ಚಿತ್ರವೂ ಇದೆ. ಅದನ್ನು ನೋಡಿದಾಗ ರಸೂಲನ್ ಹೇಳುತ್ತಿದ್ದರು ಅವರೆಲ್ಲರೂ ದೇವಿಯರು ಉಳಿದಿರುವ ಬಾಯಿ ನಾನೊಬ್ಬಳೆ.