Saraswathi Bai C, ಲೇಡಿ ಭಾಗವತರ್ – ಸಿ ಸರಸ್ವತೀ ಬಾಯಿ

ಶೈಲಜಾ

೧೯ನೇ ಶತಮಾನದ ಕೊನೆಯ ದಶಕ, ೨೦ನೇ ಶತಮಾನದ ಆರಂಭದ ದಶಕಗಳು ಮಹಿಳಾಲೋಕದಲ್ಲಿ ಹಲವು ಬಗೆಯ ತಲ್ಲಣಗಳು ಮತ್ತು ಬದಲಾವಣೆಗಳಿಗೆ ಕಾರಣವಾಯಿತು. ಆಗ ಕೆಲವರು ನೆಲೆಯನ್ನು ಕಳೆದುಕೊಂಡರೆ ಮತ್ತೆ ಕೆಲವರು ಹೊಸ ನೆಲೆಗಳಲ್ಲಿ ತಮ್ಮ ಛಾಪು ಮೂಡಿಸಿದರು. ಸಂಪೂರ್ಣ ಪುರುಷರ ಕ್ಷೇತ್ರವೇ ಆಗಿದ್ದ ಹರಿಕಥಾ ಕಾಲಕ್ಷೇಪ ಹೆಣ್ಣೊಬ್ಬಳು ಅಳಿಸಲಾಗದ ಹೆಜ್ಜೆಗುರುತುಗಳನ್ನು ಮೂಡಿಸಿದ್ದು ಇಂಥದ್ದೊಂದು ಬೆಳವಣಿಗೆ. ಆಕೆಯೇ ಸಿ ಸರಸ್ವತೀಬಾಯಿ. ಈ ಬೆಳವಣಿಗೆಗೆ ಗಂಡಸರು ಸ್ಪಂದಿಸಿದ್ದು ಕೂಡ ತುಂಬಾ ವಿಭಿನ್ನವಾಗಿ, ಸಂಕೀರ್ಣವಾಗಿ ಇತ್ತು.

ಹರಿಕಥಾಕ್ಷೇತ್ರ ಅಕ್ಷರಶಃ ’ಹರಿ’ಯ ಅಖಾಡಾ. ಅಲ್ಲಿ ಈ ’ಹರಿಣಿ’ ಬಂದುದಾದರೂ ಹೇಗೆ? ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಸರಸ್ವತೀಬಾಯಿಯಂತಹ ಒಬ್ಬ ಬ್ರಾಹ್ಮಣ ಹೆಂಗಸು ಎಲ್ಲಾ ಬಗೆಯ ಅವಮಾನ, ಲೇವಡಿ, ಪ್ರತಿರೋಧಗಳನ್ನು ಎದುರಿಸಿ, ಆ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಲೇಡಿ ಭಾಗವತರ್ ಎಂದು ಹೆಸರು ಮಾಡಿದ್ದು ಇಂದು ಇತಿಹಾಸ.

ಸರಸ್ವತಿ ಹುಟ್ಟಿದ್ದು ೧೮೯೨ರ ಫೆಬ್ರುವರಿ ತಿಂಗಳಿನಲ್ಲಿ ಗೋಟಿ ರಾಮರಾವ್ ಮತ್ತು ರಂಗಮ್ಮಾಳ್ ಎಂಬ ಸಂಪ್ರದಾಯಸ್ಥ ಮಾಧ್ವ ದಂಪತಿಗಳ ಮಗಳಾಗಿ. ರಾಮರಾವ್ ರೇಣಿಗುಂಟದಲ್ಲಿ ಸ್ಟೇಷನ್‌ಮಾಸ್ಟರ್ ಆಗಿದ್ದು, ನಿವೃತ್ತಿ ಹತ್ತಿರದಲ್ಲಿದ್ದರು. ಮಹಿಳಾ ಶಿಕ್ಷಣ ಎನ್ನುವುದು ಒಂದು ಜೋಕ್ ಆಗಿದ್ದ ಮತ್ತು ಬ್ರಾಹ್ಮಣ ಹೆಂಗಸು ಹಾಡುವುದು ನಿಷಿದ್ಧವೆನಿಸಿದ್ದ ತಲೆಮಾರು ಅದು. ಆ ಕಾಲದ ಮದ್ರಾಸಿನ ಆಗರ್ಭ ಶ್ರೀಮಂತರಲ್ಲಿ ಮೊದಾವರಪ್ಪು ಡೇರಾ ವೆಂಕಟಸಾಮಿ ನಾಯ್ಡು ಒಬ್ಬರು. ಅವರಿಗೆ ಕಾಲರಾ ಸೋಂಕು ತಗುಲಿದಾಗ, ಯಾರೂ ಅವರ ಬಳಿಸಾರಲು ಸಿದ್ಧರಿಲ್ಲದ ಸಮಯದಲ್ಲಿ ರಂಗಮ್ಮಾಳ್ ಅಪಾಯವನ್ನೂ ಲೆಕ್ಕಿಸದೆ, ಅವರ ಶುಶ್ರೂಷೆ ಮಾಡಿದರು. ಅವರು ಮೊದಲಿನಂತಾದರು. ಇದೆಲ್ಲಾ ನಡೆದದ್ದು ರೇಣಿಗುಂಟದಲ್ಲಿ. ಮದ್ರಾಸಿಗೆ ಮರಳುವಾಗ ವೆಂಕಟಸಾಮಿಯವರು ಕೃತಜ್ಞತೆ ಸೂಚಿಸಿ, ತಮ್ಮಲ್ಲಿಗೆ ಬರುವಂತೆ ಅವರನ್ನು ಆಹ್ವಾನಿಸಿದರು. ನಿವೃತ್ತಿಯ ಬಳಿಕ ರಾಮರಾವ್ ದಂಪತಿಗಳು ಕುಟುಂಬಸಮೇತರಾಗಿ ಅವರಲ್ಲಿಗೆ ಹೋದರು. ಅವರಿಗಾಗಿ ಬೇರೊಂದು ಮನೆ ಕೊಟ್ಟು, ನಿತ್ಯದ ಊಟದ ವ್ಯವಸ್ಥೆಯನ್ನು ನಾಯ್ಡುರವರು ಮಾಡಿದರು.

ನಾಯ್ಡು ಅವರದು ಸಂಗೀತಪ್ರೇಮಿ ಕುಟುಂಬ. ಧನಮ್ಮಾಳ್ ಪದಂಗಳನ್ನು ಕಲಿತ ಪದಂ ಬಾಲದಾಸ್ ಇವರ ಮನೆಯಲ್ಲೇ ಇದ್ದರು. ಹೀರಾಬಾಯಿ ಬರೋಡೇಕರ್ ಮತ್ತು ಅಬ್ದುಲ್ ಕರೀಂ ಖಾನ್ ಇವರಲ್ಲಿಗೆ ಬಂದು ಹೋಗುತ್ತಿದ್ದರು. ಗ್ರಾಮಾಫೋನ್ ತಟ್ಟೆಗಳು ಸದಾ ಹಾಡುತ್ತಿದ್ದ ಮನೆ ಅದು. ಹೀಗೆ ಸಂಗೀತಕ್ಕೆ ತೆರೆದುಕೊಂಡ ಸರಸ್ವತಿಗೆ, ಆ ಮನೆಯ ಮೊಮ್ಮಗಳು ನರಸಮ್ಮನಿಗೆ ಸಂಗೀತ ಕಲಿಸಲು ಬಂದ ಖ್ಯಾತ ಕಲಾವಿದ ಉಸ್ತಾದ್ ಯಾಕೂಬ್ ಅಲಿಖಾನ್ ಅವರಿಗಿಂದ ಸಂಗೀತಪಾಠವೂ ಆಯಿತು. ಶ್ರುತಿಶುದ್ಧವಾಗಿ ಹಾಡುವುದರೊಂದಿಗೆ ಸಿತಾರ್, ಹಾರ್ಮೋನಿಯಂ ಕಲಿಕೆಯೂ ಆಯಿತು. ಸುಲಲಿತವಾಗಿ ತೆಲುಗು ಓದಿ ಬರೆಯುವುದೂ ಅಭ್ಯಾಸವಾಯಿತು. ಒಂಬತ್ತು ವರ್ಷಕ್ಕೆ ತಂದೆಯ ಗೆಳೆಯ ಚಕ್ರಪಾಣಿಯವರ ಮಗ ರಾಘವೇಂದ್ರ ರಾವ್ ಜೊತೆ ಸರಸ್ವತಿಗೆ ಮದುವೆಯಾಯಿತು. ಆದರೆ ಇನ್ನೂ ಮೈನೆರೆಯದ ಹುಡುಗಿ ತೌರಿನಲ್ಲಿಯೇ ಉಳಿದಳು.

ಹೇಳಿಕೊಳ್ಳುವಂತಹ ಎತ್ತರವಿಲ್ಲದ, ಮಟ್ಟಸ ನಿಲುವಿನ, ಸಾಧಾರಣ ಬಣ್ಣದ, ದಟ್ಟವಾದ ಗುಂಗುರು ಕೂದಲಿದ್ದು, ಗುಂಡು ಗುಂಡಗಿದ್ದ ಸರಸ್ವತೀಬಾಯಿಯನ್ನು ಸುಂದರಿಯರ ಗುಂಪಿಗೆ ಸೇರಿಸಲಾಗುತ್ತಿರಲಿಲ್ಲ. ಆದರೆ ಘನತೆ ತುಂಬಿದ ಆಕರ್ಷಕತೆ ಅವರ ನಿಲುವಿನಲ್ಲಿತ್ತು. ಕೊನೆಯವರೆಗೂ ಕಚ್ಚೆಹಾಕಿ ಉಜ್ವಲ ವರ್ಣಗಳ ರೇಷ್ಮೆಸೀರೆಗಳನ್ನು ಉಡುತ್ತಿದ್ದರು. ಮೈತುಂಬಾ ಒಡವೆ ತೊಟ್ಟು, ಮಲ್ಲಿಗೆಯ ಮಾಲೆ ಮುಡಿಯುತ್ತಿದ್ದರು. ಆದರೆ ಅವರ ಕಂಠ ತುಂಬಾ ಮಧುರವಾಗಿ, ಶಕ್ತಿಯುತವಾಗಿ, ಪುರುಷಕಂಠದಂತಿತ್ತು. ಸರಸ್ವತೀಬಾಯಿಯ ಮನೆಮಾತು ಕನ್ನಡ. ಅವರು ತಮಿಳು ಮಾತನಾಡುವಾಗ ಅದು ಒಮ್ಮೆಮ್ಮೆ ಕಾಣಿಸಿಕೊಳ್ಳುತ್ತಿತ್ತು.

ಒಮ್ಮೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಸರಸ್ವತಿ ಹಾಡಿದರು. ಅದನ್ನು ಕೇಳಿದ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಸಂಸ್ಕೃತ ವಿದ್ವಾಂಸರಾದ ಕೃಷ್ಣಾಚಾರ್ಯರು ತುಂಬಾ ಪ್ರಭಾವಿತರಾದರು. ಅವಳ ಅದ್ಭುತ ಪ್ರತಿಭೆಯನ್ನು ಗುರುತಿಸಿ, ಆಕೆಗೆ ಸಂಸ್ಕೃತ ಕಲಿಸಲಾರಂಭಿಸಿದರು. ಜೊತೆಗೆ ಸಣ್ಣ ಸಣ್ಣ ಹಾಡುಗಳನ್ನು ಭಾವಪೂರ್ಣವಾಗಿ ತಾಳದೊಂದಿಗೆ ಹಾಡಲೂ ಕಲಿಸಿದರು. ಅವರು, ಆಕೆಯನ್ನು ಹರಿಕಥಾ ವಿದ್ವಾಂಸಳನ್ನಾಗಿ ಮಾಡುವ ಪಣತೊಟ್ಟಂತಿತ್ತು. ಮಹಾನ್ ವಿದ್ವಾಂಸರನ್ನೆಲ್ಲ ಮನೆಗೆ ಕರೆತರುತ್ತಿದ್ದರು. ಮಲೈಕೋಟೆ ಗೋವಿಂದಸ್ವಾಮಿ ಪಿಳ್ಳೈ ಅವರಂತೂ ಒಮ್ಮೆ ತಮ್ಮ ಸಂತಸ ತಡೆಯಲಾರದೆ ಮೈಸೂರು ಮಹಾರಾಜ ೧೦ನೇ ಚಾಮರಾಜ ಒಡೆಯರ್ ತಮಗೆ ಹೊದಿಸಿದ ಬೆಲೆಬಾಳುವ ಶಾಲನ್ನೇ ಸರಸ್ವತಿಗೆ ಹೊದಿಸಿದರು. ಅದೇ ತಾನು ಪಡೆದ ಮೊದಲ ಬಹುಮಾನ ಎಂದು ಸರಸ್ವತಿ ಸದಾ ನೆನೆಪಿಸಿಕೊಳ್ಳುತ್ತಿದ್ದರು.

ಸರಸ್ವತಿಯ ಪ್ರತಿಭೆ ಹೊರಹೊಮ್ಮುವ ಸಂದರ್ಭ ತೀರಾ ಅಯಾಚಿತವಾಗಿ ಬಂದಿತು. ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿದ್ದ ಸಿ ಶಂಕರನ್ ನಾಯರ್ ಅವರ ಹೆಂಡತಿ ಮಹಿಳೆಯರ ಮನರಂಜನಾ ಕ್ಲಬ್ ಒಂದನ್ನು ಮಾಡಿಕೊಂಡಿದ್ದರು. ಆ ಕ್ಲಬ್ಬಿಗೆ ನಾಯ್ಡು ಅವರ ಮಗ ಬುಚ್ಚಿಬಾಬು ಅವರ ಪತ್ನಿಯೂ ಹೋಗುತ್ತಿದ್ದರು. ಕೆಲವೊಮ್ಮೆ ಸರಸ್ವತಿಯನ್ನೂ ಕರೆದೊಯ್ಯುತ್ತಿದ್ದರು. ಅಲ್ಲಿ ಸರಸ್ವತಿ ಒಂದೆರಡು ಬಾರಿ ಹಾಡಿದ್ದರು. ಅದನ್ನು ಮೆಚ್ಚಿಕೊಂಡ ಅವರು ಸರಸ್ವತಿಯನ್ನು ಪದೇ ಪದೇ ಹಾಡಿಸುತ್ತಿದ್ದರು. ಒಮ್ಮೆ ಗುರುಗಳು, ಒಂದು ಬದಲಾವಣೆ ಇರಲಿ ಎಂದು ಹರಿಕಥೆ ಮಾಡಲು ಹೇಳಿದರು. ’ಮಹಿಳೆಯ ಕರ್ತವ್ಯಗಳು,’ ’ಪತಿಭಕ್ತಿ,’ ’ಪ್ರಾಚೀನ ಮಹಿಳಾ ವಿದ್ವಾಂಸರು’ ಮುಂತಾದ ವಿಷಯಗಳನ್ನು ಕುರಿತು ಹರಿಕಥೆ ಮಾಡಲು ತರಬೇತಿ ನೀಡಿದರು. ಅಲ್ಲಿ ಸಿಕ್ಕ ಪ್ರೋತ್ಸಾಹದಿಂದ ಪುಳಕಿತರಾದ ಕೃಷ್ಣಾಚಾರ್ಯರು ಗರುಡ ಗರ್ವಭಂಗ ಎಂಬ ಪೂರ್ಣಪ್ರಮಾಣದ ಹರಿಕಥೆ ಮಾಡಲು ಸರಸ್ವತಿಗೆ ತರಬೇತಿ ನೀಡಿದರು. ೧೯೦೮ರಲ್ಲಿ ಒಂದು ಸಂಜೆ ಸರಸ್ವತಿ ಇದನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ನಂತರ ಮಾತನಾಡಿದ ನ್ಯಾಯಾಧೀಶ ಶಂಕರನ್ ಆಕೆಯ ಪ್ರತಿಭೆಯನ್ನು ತುಂಬಾ ಹೊಗಳಿ, ಏನೇ ವಿರೋಧ ಬಂದರೂ ಇದರಿಂದ ವಿಮುಖವಾಗಬೇಡ ಎಂಬ ಕಿವಿಮಾತನ್ನೂ ಹೇಳಿದರು.

ಬ್ರಾಹ್ಮಣ ಹೆಣ್ಣೊಬ್ಬಳು ಹೀಗೆ ಸಾರ್ವಜನಿಕ ಬದುಕಿಗೆ ತೆರೆದುಕೊಳ್ಳಬೇಕೆ ಎನ್ನುವುದು ಕುಟುಂಬದೊಳಗೂ ಗಂಭೀರವಾಗಿ ಚರ್ಚಿತವಾಯಿತು. ಆದರೆ ಆಕೆಯನ್ನು ಬೆಂಬಲಿಸಬೇಕೆಂಬುದು ಕುಟುಂಬದ ನಿಲುವಾಯಿತು. ಆಕೆಯ ಪತಿ ನೇಪಥ್ಯದಲ್ಲಿಯೇ ಇದ್ದು ಆಕೆಗೆ ಎಲ್ಲಾ ಬಗೆಯ ಒತ್ತಾಸೆಯನ್ನೂ ನೀಡುತ್ತಾ ಹೋದರು. ವಿಪರ್ಯಾಸವೆಂದರೆ, ಈ ಹದಿಹರೆಯದ ಹುಡುಗಿಗೆ ತೀವ್ರ ವಿರೋಧ ಬಂದದ್ದು ಈ ಕ್ಷೇತ್ರದಲ್ಲಿ ಚೆನ್ನಾಗಿ ನೆಲೆಯೂರಿದ್ದ ಪುರುಷ ಭಾಗವತರಿಂದ. ವಿರೋಧದ ಮೊದಲ ಹೆಜ್ಜೆಯಾಗಿ ಸರಸ್ವತಿಯ ಚಾರಿತ್ರ್ಯದ ಮೇಲೆ ಕೆಸರೆರಚಿದರು. ಕಷ್ಟಗಳು ಬಂದಾಗ ಒಟ್ಟೊಟ್ಟಿಗೆ ಬರುತ್ತದೆ. ಇದೇ ಹೊತ್ತಿನಲ್ಲಿ ಇವರ ಆಪ್ತ ಗೆಳತಿ ನರಸಮ್ಮ ಪತಿಯನ್ನು ಕಳೆದುಕೊಂಡರು. ಮಗಳ ವೈಧವ್ಯದ ದುಃಖ ತಾಳಲಾರದೆ ಆಕೆಯ ತಾಯಿ ಬಂಗಾರು ಅಮ್ಮ ನಿಧನರಾದರು. ನೆಲೆ ನೀಡಿದ್ದ ಬುಚ್ಚಿಬಾಬು ಅವರೂ ಮರಣಹೊಂದಿದರು. ಆದರೂ ಸರಸ್ವತಿ ಧೈರ್ಯ ತಂದುಕೊಂಡು ತಮ್ಮ ವೃತ್ತಿಯನ್ನು ಮುಂದುವರಿಸಲು ನಿರ್ಧರಿಸಿದರು.

ಕಲಾಪೋಷಕರಾದ ಷಣ್ಮುಗಂ ಚೆಟ್ಟಿ ಇವರ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲಾ ಪ್ರಮುಖರನ್ನೂ ಆಹ್ವಾನಿಸಿದರು. ಕಾರ್ಯಕ್ರಮ ತುಂಬಾ ಯಶಸ್ವಿಯಾಯಿತು. ಇದು ಭಾಗವತರ ವಿರೋಧವನ್ನು ಮತ್ತಷ್ಟು ತೀವ್ರಗೊಳಿಸಿತು. ಯಾವ ಸಭೆ ಸರಸ್ವತೀಬಾಯಿಯ ಕಾರ್ಯಕ್ರಮವನ್ನು ಆಯೋಜಿಸುತ್ತದೆಯೋ ಆ ಸಭೆಯನ್ನು ಉಳಿದ ಭಾಗವತರೆಲ್ಲರೂ ಬಹಿಷ್ಕರಿಸಬೇಕೆಂಬ ಗೊತ್ತುವಳಿಯನ್ನು ಮಂಡಿಸಿದರು. ಇದರಿಂದ ಗಾಬರಿಬಿದ್ದ ಸಭೆಗಳು ಸರಸ್ವತೀಬಾಯಿಗೆ ಕಾರ್ಯಕ್ರಮ ನೀಡಬಾರದೆಂಬ ನಿರ್ಧಾರಕ್ಕೆ ಬಂದವು. ಇಷ್ಟು ಸಾಲದೆಂದು ಸಹವಾದಕರು ಸಿಗುವುದು ಕೂಡ ಕಷ್ಟವಾಯಿತು. ಇವರ ಜೊತೆ ನುಡಿಸಿದ ಪಕ್ಕವಾದ್ಯವರನ್ನು ಬಹಿಷ್ಕರಿಸಿದರು. ಹೆಂಗಸಿನ ಜೊತೆ ನುಡಿಸಿದ ತಪ್ಪಿಗೆ ಪಕ್ಕವಾದ್ಯದವರು ’ಶುದ್ಧೀಕರಣ’ಗೊಳ್ಳಬೇಕಾಯಿತು. ಅವರವರ ನಡುವೆ ಏನೇ ಭಿನ್ನಾಭಿಪ್ರಾಯಗಳಿರಲಿ, ನನ್ನನ್ನು ವಿರೋಧಿಸುವುದರಲ್ಲಿ ಮಾತ್ರ ಎಲ್ಲಾ ಪುರುಷ ಸಂಗೀತಗಾರರೂ ಒಂದಾಗಿದ್ದರು. ಅವರು ನನಗೆ ಕೊಟ್ಟ ಹಿಂಸೆ ಮತ್ತು ಮಾಡಿದ ಅವಮಾನಗಳನ್ನು ಪಟ್ಟಿಮಾಡುತ್ತಾ ಹೋದರೆ ಓದುವವರಿಗೇ ಹಿಂಸೆಯಾಗುತ್ತದೆ ಎಂದು ಸರಸ್ವತೀಬಾಯಿ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಅವರ ಗುರುಗಳನ್ನು ಕೆಲಸದಿಂದ ತೆಗೆಯಬೇಕೆಂದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಪತ್ರಗಳು ಹೋದವು.
ಆದರೆ ಗುರು ಮತ್ತು ಶಿಷ್ಯೆ ಕಂಗೆಡಲಿಲ್ಲ. ಹಿಂದು ಥಿಯಲಾಜಿಕಲ್ ಶಾಲೆಯಲ್ಲಿ ಇವರ ಕಾರ್ಯಕ್ರಮ ಪಾರ್ಥಸಾರಥಿಸ್ವಾಮಿ ಸಭೆಯವರು ಏರ್ಪಡಿಸಿದರು. ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು. ಸಾಮಾನ್ಯವಾಗಿ ನೀಡುತ್ತಿದ್ದ ಸಂಭಾವನೆ ೫೦ರೂಗಳು. ಆದರೆ ಅಂದು ಸರಸ್ವತಿಗೆ ನೀಡಿದ ಸಂಭಾವನೆ ೪೫೦ ರೂಗಳು! ಅಲ್ಲಿಂದ ಜನರ ಹಿಂಜರಿಕೆಯೂ ಕಡಿಮೆಯಾಗಿ ಅವರಿಗೆ ಕಾರ್ಯಕ್ರಮಗಳು ಸಿಗಲಾರಂಭಿಸಿದವು. ತಮ್ಮ ವಿರೋಧ ಅರ್ಥಹೀನ ಎಂದು ಭಾಗವತರೂ ಮನಗಂಡರು. ಸರಸ್ವತೀಬಾಯಿ ಮಾತ್ರ ತೀರಾ ಮುತುವರ್ಜಿಯಿಂದ ತಮ್ಮ ಕಲೆಯನ್ನು ಅಭ್ಯಾಸಮಾಡುತ್ತಲೇ ಹೋದರು. ಆಕೆ ತಮ್ಮ ಕಾಲದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಥಾಕಾಲಕ್ಷೇಪ ಕಲಾವಿದೆಯಾದರು. ಪಕ್ಕವಾದ್ಯದವರೂ ಇವರಿಗೆ ಸಹಕರಿಸಲಾರಂಭಿಸಿದರು.

ಅವರ ದಿಟ್ಟತನದ ಬದುಕಿಗೆ ಸಿಕ್ಕ ಪ್ರತಿಫಲ ಸಾಕಷ್ಟು ಹಿರಿದಾಗಿಯೇ ಇತ್ತು. ಭಾರತದ ಮೂಲೆ ಮೂಲೆಗೆ ಪಯಣಿಸಿದರು. ಪಂಡಿತ ಪಾಮರರೆಲ್ಲರೂ ಅವರ ಕಾಲಕ್ಷೇಪವನ್ನು ಮೆಚ್ಚಿಕೊಂಡರು. ಬಡಪೆಟ್ಟಿಗೆ ಯಾರನ್ನೂ ಹೊಗಳದಿದ್ದ, ತುಂಬಾ ಕಟುವಾಗಿ ವಿಮರ್ಶಿಸುತ್ತಿದ್ದ ವೀಣಾ ಧನಮ್ಮಾಳ್ ಅವರೂ ಸರಸ್ವತೀಬಾಯಿಯನ್ನು ಮೆಚ್ಚಿಕೊಂಡಿದ್ದರು. ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಸಿ ರಾಜಗೋಪಾಲಾಚಾರಿ, ಎಂಎಸ್, ಪಟ್ಟಮ್ಮಾಳ್ ಅವರಿಗೆಲ್ಲ ಇವರ ಹರಿಕಥೆ ಎಂದರೆ ಬಲು ಮೆಚ್ಚು. ೧೯೧೬ರಲ್ಲಿ ಬಾಂಬೆಯ ಗಂಧರ್ವ ಮಹಾವಿದ್ಯಾಲಯದಲ್ಲಿ ಪಂ. ವಿಷ್ಣು ದಿಗಂಬರ ಪಲೂಸ್ಕರರ ಮುಂದೆ ಕಾರ್ಯಕ್ರಮ ನೀಡಿದಾಗ, ಪಲೂಸ್ಕರರು ಇವರಿಗೆ ಗಾಯನಪಟು ಎಂಬ ಬಿರುದನ್ನು ನೀಡಿದರು. ಬಾಂಬೆಯ ಕಿರ್ಲೋಸ್ಕರ್ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಾಲಗಂಗಾಧರ ತಿಲಕರು ಅವರಿಗೆ ಕೀರ್ತನಪಟು ಎಂಬ ಬಿರುದು ನೀಡಿದರು. ಸಂವಹನಕ್ಕೆ ಭಾಷೆ ಅಡ್ಡಿಯಾಗಲಿಲ್ಲ. ಸರಸ್ವತೀಬಾಯಿಯವರ ಪ್ರವಚನ ತಮಿಳಿನಲ್ಲಿದ್ದರೂ ಅವರು ಹಾಡುಗಳು ಸಂಸ್ಕೃತದಲ್ಲಿ ಇರುತ್ತಿದ್ದವು. ತಮಿಳು ಬಾರದವರಿಗೂ ಅವರ ಮಾತುಗಳು ಅರ್ಥವಾಗುತ್ತಿದ್ದವು. ಅವರ ಶಾರೀರ ಮಧುರವಾಗಿತ್ತು. ಹಾಡುಗಾರಿಕೆ ಸೊಗಸಾಗಿತ್ತು, ಎಂದು ತಿಲಕರು ಬರೆದರು. ಬರ್ಮಾ, ಸಿಲೋನ್ ಮುಂತಾದ ಕಡೆಗಳಲ್ಲಿಯೂ ಅವರು ಕಾರ್ಯಕ್ರಮ ನೀಡಿದರು.

ಸ್ವಾತಂತ್ರ್ಯ ಚಳುವಳಿ ಮತ್ತು ಗಾಂಧಿಯವರ ವ್ಯಕ್ತಿತ್ವ ಇವರನ್ನು ಗಾಢವಾಗಿ ಪ್ರಭಾವಿತಸಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಬಿಡಿಸಬೇಕೆಂಬ ವಿಷಯ ಇವರ ಕಾಲಕ್ಷೇಪದ ಭಾಗವಾಗಿತ್ತು. ಇಂತಹ ಪ್ರಸಂಗವೊಂದನ್ನು ಎಂ ಎಸ್ ಸುಬ್ಬುಲಕ್ಷ್ಮಿಯವರು ದಾಖಲಿಸುತ್ತಾರೆ. ಸರಸ್ವತೀಬಾಯಿಯವರ ಹರಿಕಥೆ ಕೇಳಲು ಅಮ್ಮ ನಮ್ಮನ್ನು ಕರೆದೊಯ್ಯುತ್ತಿದ್ದರು. ಸಮುದ್ರತೀರದಲ್ಲಿ ರಾಮನ ಸೈನ್ಯ ಬೀಡುಬಿಟ್ಟಿದ್ದಾಗ, ವಿಭೀಷಣ ರಾಮನಿಗೆ ಶರಣಾಗಲು ಲಂಕೆಯಿಂದ ಬರುವ ದೃಶ್ಯವನ್ನು ವಿವರಿಸುತ್ತಲೇ, ಸರಸ್ವತೀಬಾಯಿಯವರು ಕಮಾಚ್ ರಾಗ ಆದಿತಾಳದಲ್ಲಿ ಇಂಗ್ಲಿಷ್ ಹಾಡನ್ನು ಹಾಡತೊಡಗಿದರು:
ದಿಸ್ ಈಸ್ ದ ಅಕೇಷನ್
ಫಾರ್ ಅವರ್ ಲಿಬರೇಷನ್,
ದಿಸ್ ಕಾಂಗ್ರೆಸ್ ರೆಸಲ್ಯೂಷನ್
ಗಾಂಧೀಜೀಸ್ ಇನ್ಸ್‌ಪಿರೇಷನ್.

ಎಂಎಸ್ ಇವರಿಂದ ಗಾಢವಾಗಿ ಪ್ರಭಾವಿತರಾಗಿದ್ದರಂತೆ. ಎಂಎಸ್ ಸೀರೆಯನ್ನು ಇವರಂತೆಯೇ ಉಡುತ್ತಿದ್ದರಂತೆ. ಸವಾಸದನಂ ಚಿತ್ರದ ಇವರ ಹಾಡುಗಳಲ್ಲಿ ಸರಸ್ವತೀಬಾಯಿಯ ಛಾಪನ್ನು ಎಲ್ಲರೂ ಗುರುತಿಸುತ್ತಾರೆ. ಎಂಎಸ್ ಅವರು ಸಾಮಾನ್ಯವಾಗಿ ಕಚೇರಿಯನ್ನು ಆರಂಭಿಸುತ್ತಿದ್ದ ದಕ್ಷಿಣಾಮೂರ್ತಿ ಕುರಿತ ಶ್ಲೋಕದ ರಾಗವನ್ನು ಸರಸ್ವತೀಬಾಯಿಯವರು ರಾಮನನ್ನು ಕುರಿತು ಹಾಡುತ್ತಿದ್ದ ಶ್ಲೋಕದಿಂದಲೇ ತೆಗೆದುಕೊಂಡಿದ್ದರು ಎಂದು ಎಂಎಸ್ ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಸರಸ್ವತೀಬಾಯಿಯವರ ಸಾಂಗೀತಿಕ ಪ್ರತಿಭೆ ಉನ್ನತಮಟ್ಟದ್ದಾಗಿತ್ತು. ಏಕೆಂದರೆ ಅಂದು ಕಥಾಕಾಲಕ್ಷೇಪ ಮಾಡುತ್ತಿದ್ದ ದಿಗ್ಗಜರೆಲ್ಲರೂ ಸಂಗೀತ ಕ್ಷೇತ್ರದ ಘಟಾನುಘಟಿಗಳೇ. ಕಥಾಕಾಲಕ್ಷೇಪದ ಅತ್ಯುನ್ನತ ಮಾದರಿ ಎನಿಸಿಕೊಂಡಿದ್ದ ತ್ಯಾಗರಾಜರ ಪರಂಪರೆಯ ಕೃಷ್ಣ ಭಾಗವತರು, ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರು, ಮಾಂಗುಡಿ ಚಿದಂಬರ ಭಾಗವತರು, ಸೂಲಮಂಗಲಂ ವೈದ್ಯನಾಥ ಭಾಗವತರು. ಅದು ಕಥಾಕಾಲಕ್ಷೇಪದ ಸುವರ್ಣಯುಗವಾಗಿತ್ತು. ಅಲ್ಲಿ ಒಬ್ಬ ಮಹಿಳೆ ತನ್ನ ಅಸ್ತಿತ್ವವನ್ನು ಸ್ಥಾಪಿಸುವುದು ಸುಲಭದ ಮಾತಾಗಿರಲಿಲ್ಲ. ಪರ‍್ಸನ್ಯಾಲಿಟೀಸ್ ಇನ್ ಪ್ರೆಸೆಂಟ್ ಡೇ ಮ್ಯೂಸಿಕ್ ಎಂಬ ಪುಸ್ತಕದಲ್ಲಿ ಈ ಕೃಷ್ಣ ಅಯ್ಯರ್ ಸರಸ್ವತಿಯವರ ಕಂಠ, ಕಲೆ, ಸಂಗೀತ, ಗಮಕಗಳು ಇವುಗಳ ಬಗ್ಗೆ ತುಂಬಾ ಗೌರವಪೂರ್ವಕ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಅವರ ಸಂಗೀತದ ಉತ್ಕೃಷ್ಟತೆಯನ್ನು ಗುರುತಿಸಿ, ಪುದುಕ್ಕೋಟೆ ದಕ್ಷಿಣಾಮೂರ್ತಿ ಪಿಳ್ಳೈ ಅವರಿಗೆ ಹಲವು ಬಾರಿ ಪಕ್ಕವಾದ್ಯ ನುಡಿಸಿದ್ದರು. ಸರಸ್ವತಿಯವರಿಗೆ ಪ್ರವಚನ ಸಾಮರ್ಥ್ಯ ಮತ್ತು ಸಂಸ್ಕೃತ ಜ್ಞಾನದ ಜೊತೆಗೆ ತ್ರಿಸ್ಥಾಯಿಯಲ್ಲಿ ಸಲೀಸಾಗಿ ಸಂಚರಿಸುವ ಶಕ್ತಿಶಾಲಿಯಾದ ಕಂಠವಿತ್ತು. ಕೃತಿಯ ಸಂಗತಿಗಳು ಅವರ ಶಾರೀರದಲ್ಲಿ ಸುಲಲಿತವಾಗಿ ಹರಿದು ಬರುತ್ತಿದ್ದವು. ಅವರ ಶ್ರೀಮಂತ ಕೃತಿಭಂಡಾರದಲ್ಲಿ ತ್ರಿಮೂರ್ತಿಗಳ ಕೃತಿಗಳೇ ಅಲ್ಲದೆ, ಗೋಪಾಲಕೃಷ್ಣ ಭಾರತಿಯಾರ್, ಊತ್ತುಕ್ಕಾಡು ವೆಂಕಟಸುಬ್ಬ ಅಯ್ಯರ್, ಮುಂತಾದವರ ಕೃತಿಗಳೂ ಇದ್ದವು. ಮುತ್ತಯ್ಯ ಭಾಗವತರ ಸಹಜಗುಣ ರಾಮ ಕೃತಿಯನ್ನು ತುಂಬಾ ಸೊಗಸಾಗಿ ಹಾಡುತ್ತಿದ್ದರು. ಅವರ ರಾಮದಾಸರ್ ಮತ್ತು ನಂದನಾರ್ ಬದುಕು ಕುರಿತ ಕಾಲಕ್ಷೇಪ ಅತ್ಯುತ್ಕೃಷ್ಟವಾಗಿದ್ದವು, ಎಂದು ಸಂಗೀತ ವಿಮರ್ಶಕ ಕೆ ಎಸ್ ಮಹಾದೇವನ್ ನೆನಪಿಸಿಕೊಳ್ಳುತ್ತಾರೆ. ಸರಸ್ವತಿಯವರು ಅದ್ಭುತವಾಗಿ ಕಥೆ ಹೇಳುತ್ತಿದ್ದರು. ಭಾಷೆಗಳಲ್ಲಿ ಅವರಿಗಿದ್ದ ಪಾಂಡಿತ್ಯ, ಹಿಡಿತ ಅಸಾಧಾರಣವಾದುದು. ಆರಂಭದ ನಿರುಪಮಾನವನ್ನು ಅವರು ಹಾಡುತ್ತಿದ್ದ ರೀತಿ ತುಂಬಾ ಸುಂದರವಾಗಿ, ಅತ್ಯಾಕರ್ಷಕವಾಗಿ ಇರುತ್ತಿತ್ತು. ನಂದನಾರ್ ಚರಿತದಲ್ಲಂತೂ ಅವರು ಬೇರೆ ಬೇರೆ ಪಾತ್ರಗಳನ್ನು ತಮ್ಮ ಕಂಠದ ಮೂಲಕವೇ ಚಿತ್ರಿಸಿ ನಮ್ಮ ಕಣ್ಮುಂದೆ ತರುತ್ತಿದ್ದರು. ವೇದಿಯಾರರ ದರ್ಪ, ನಂದನಾರರ ವಿನಯ, ದೈನ್ಯ ಇವೆಲ್ಲವೂ ಅವರ ದನಿಯ ಏರಿಳಿತಗಳಲ್ಲಿ ಮೂಡುತ್ತಿದ್ದವು. ಆಯಾ ಪಾತ್ರಕ್ಕೆ ಹೊಂದುವಂತೆ ದನಿಯನ್ನು ಹದವರಿತು ಹೊಂದಿಸುತ್ತಿದ್ದರು. ಅವರ ಕಥೆ ಹೇಳುವಿಕೆಯಲ್ಲಿ ತುಂಬಾ ಪಕ್ವತೆಯಿತ್ತು. ವಾಸ್ತವವಾಗಿ ಕಚೇರಿ ಮಾಡುವುದಕ್ಕಿಂತ ಹರಿಕಥೆ ಮಾಡುವುದು ಹೆಚ್ಚು ಕಷ್ಟ. ಏಕೆಂದರೆ ಮಾತನಾಡಿದ ಕೂಡಲೆ, ಸರಿಯಾದ ಶ್ರುತಿಗೆ ಹಾಡುವುದು ತುಂಬಾ ಕಠಿಣ. ಹಲವು ಪುರುಷ ಭಾಗವತರು ಚೆನ್ನಾಗಿ ಹಾಡುವ ಗಾಯಕರನ್ನು ಜೊತೆಗಿಟ್ಟುಕೊಂಡು ನಿರಾಯಾಸವಾಗಿ ಹರಿಕಥೆ ಮಾಡುತ್ತಿದ್ದರು. ಆದರೆ ಸರಸ್ವತೀಬಾಯಿಯವರು ಸಂಪೂರ್ಣವಾಗಿ ತಮ್ಮ ಪ್ರತಿಭೆಯನ್ನೇ ನೆಚ್ಚಿಕೊಂಡಿದ್ದವರು. ಏಕೆಂದರೆ ಸಾರ್ವಜನಿಕವಾಗಿ ಬಂದು ಹಾಡುವ ಹೆಣ್ಣು ಮಕ್ಕಳು ಸಿಗುತ್ತಿರಲಿಲ್ಲ. ಅವರ ಹರಿಕಥೆಯ ವಿಶೇಷತೆಯೆಂದರೆ, ಅದನ್ನು ಕೇಳಿದವರು ಕೇವಲ ಕಥೆಯನ್ನು ಮಾತ್ರವಲ್ಲದೆ, ಅದರ ಹಾಡುಗಳನ್ನು ಮತ್ತು ನೀತಿಯನ್ನೂ ನೆನಪಿಟ್ಟುಕೊಳ್ಳುತ್ತಿದ್ದರು, ಎಂದು ಖ್ಯಾತ ಗಾಯಕ, ಕಲಾವಿದ ಎಸ್ ರಾಜಂ ಹೇಳುತ್ತಿದ್ದರು.

೧೯೫೦ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಅವರಿಗೆ ಸರ್ಟಿಫಿಕೇಟ್ ಆಫ್ ಮೆರಿಟ್ ಬಹುಮಾನ ನೀಡಿ ಗೌರವಿಸಿತು. ಇದನ್ನು ಪಡೆದ ಮೊತ್ತ ಮಹಿಳೆ ಸರಸ್ವತೀಬಾಯಿಯವರು. ಅವರ ನಂತರ ಟಿ ಜಯಮ್ಮಾಳ್ ಮತ್ತು ಮಧುರೈ ಷಣ್ಮುಗವಡಿವು ಅವರಿಗೆ ನೀಡಲಾಯಿತು. ಇವರು ಮ್ಯೂಸಿಕ್ ಅಕಾಡೆಮಿಯ ತುಂಬಾ ಪ್ರಮುಖ ವ್ಯಕ್ತಿಯಾಗಿದ್ದರು. ಹಲವು ಬಾರಿ ಅಕಾಡೆಮಿಯ ಸಮ್ಮೇಳನದಲ್ಲಿ ಪ್ರಾರ್ಥನೆ ಹಾಡಿದ್ದರು, ಪ್ರಬಂಧ ಮಂಡಿಸಿದ್ದರು, ಸ್ಪರ್ಧೆಗಳಿಗೆ ತೀರ್ಪುಗಾರರಾಗಿದ್ದರು ಮತ್ತು ಹಲವು ರೀತಿಯಲ್ಲಿ ಅಕಾಡಮಿಯನ್ನು ಬೆಂಬಲಿಸಿದ್ದರು. ತಮ್ಮ ಕ್ಷೇತ್ರದಲ್ಲಿ ಉತ್ಕೃಷ್ಟತೆ ಇರುವ ಪರಿಣತರು. ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಬೇಕು ಎಂಬುದು ಎಕ್ಸ್‌ಪರ್ಟ್ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತವಾಗಿತ್ತು. ಆದರೆ ಅದು ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮತ್ತು ಟಿ ವಿ ಸುಬ್ಬರಾವ್ ಅವರಿಗೆ ಅಷ್ಟಾಗಿ ಸಮ್ಮತವಿರಲಿಲ್ಲ. ಅವರು ಟಿ ಟಿ ಕೃಷ್ಣಮಾಚಾರಿಯವರೊಂದಿಗೆ ಇದನ್ನು ಚರ್ಚಿಸಿದರು. ನಂತರ ಇವರ ಸಂಗೀತವನ್ನು ವಿಶ್ಲೇಷಿಸಿ ಅದರಲ್ಲಿನ ದುರ್ಬಲ ಅಂಶವನ್ನು ಗುರುತಿಸಬೇಕೆಂಬ ನಿರ್ಧಾರಕ್ಕೆ ಅಕಾಡೆಮಿ ಬಂದಿತು. ಇನ್ಯಾರಾದರೂ ಆಗಿದ್ದರೆ ವಿರೋಧಿಸುತ್ತಿದ್ದರು. ಆದರೆ ಮುಗ್ಧ ಸರಸ್ವತೀಬಾಯಿ ಒಪ್ಪಿದರು. ಕೊನೆಗೆ ಸ್ವರಪ್ರಸ್ತಾರದಲ್ಲಿ ಪರಿಣತಿ ಸಾಲದೆಂದು ಅವರಿಗೆ ಕಲಾನಿಧಿ ನೀಡಲಿಲ್ಲ. ಆದರೆ ಅದಕ್ಕಿಂತಲೂ ನೋವಿನ ಸಂಗತಿಯೆಂದರೆ ೧೯೬೮ರಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯವರಿಗೆ ಸಂಗೀತ ಕಲಾನಿಧಿ ನೀಡಬೇಕೆಂದು ನಿರ್ಧರಿಸಿದಾಗ ಅವರ ಹೆಸರನ್ನು ಪ್ರಶಸ್ತಿಗೆ ಸೂಚಿಸಿದ್ದು ಸರಸ್ವತೀಬಾಯಿಯವರು. ಇವೆರಡು ಘಟನೆಗಳನ್ನು ವಿ. ಶ್ರೀರಾಂ ಫೋರ್ ಸ್ಕೋರ್ ಅಂಡ್ ಮೋರ್ ಗ್ರಂಥದಲ್ಲಿ ದಾಖಲಿಸುತ್ತಾರೆ (೨೧೪,೨೧೬). ೧೯೬೪ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಅವರಿಗೆ ಫೆಲೋಶಿಪ್ ನೀಡಿತು. ಬಾಯಿಯವರ ಹಲವಾರು ಗ್ರಾಮಾಫೋನ್ ತಟ್ಟೆಗಳು ಹೊರಬಂದಿವೆ. ಅವರು ಮದ್ರಾಸ್ ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ನೀಡುತ್ತಿದ್ದರು.

ಸರಸ್ವತೀಬಾಯಿ ವೃದ್ಧಾಪ್ಯದತ್ತ ಸಾಗುತ್ತಿದ್ದ ಕಾಲದಲ್ಲೇ ಕಲಾಪ್ರಪಂಚದಲ್ಲಿ ಮತ್ತಷ್ಟು ಬದಲಾವಣೆಗಳಾದವು. ಸಿನಿಮಾದ ದೃಶ್ಯಮಾಧ್ಯಮ ಹರಿಕಥೆ ಚಿತ್ರಿಸುತ್ತಿದ್ದ ಕಲ್ಪನೆಯ ಲೋಕವನ್ನು ಮೂರ್ತಗೊಳಿಸಿತು. ಜನ ಕಲ್ಪಿಸಿಕೊಳ್ಳುವ ಮಾನಸಕ್ರಿಯೆ ರಜಾಕೊಟ್ಟು, ಹೆಚ್ಚೆಚ್ಚು ಸಿನಿಮಾ ನೋಡಲಾರಂಭಿಸಿದರು. ಸಭೆಗಳಲ್ಲಿ ಶಾಸ್ತ್ರೀಯ ಸಂಗೀತ ಕಚೇರಿಗಳು ಹರಿಕಥೆಯ ಸ್ಥಾನವನ್ನು ಆಕ್ರಮಿಸಿಕೊಂಡವು. ಕೌಟುಂಬಿಕ ಬದುಕು ಮತ್ತು ವೃತ್ತಿಬದುಕು ಎರಡರಲ್ಲೂ ಸರಸ್ವತೀಬಾಯಿಯೂ ದಣಿದಿದ್ದರು. ೧೯೭೪ರ ಜನವರಿ ಹದಿಮೂರರಂದು ಸರಸ್ವತೀಬಾಯಿ ಮನದಲ್ಲಿ ಲೀನವಾದರು. ಇಂದು ೨೧ನೇ ಶತಮಾನದಲ್ಲಿ ವಿಶಾಖಾ ಹರಿಯಂತಹ ಕಲಾವಿದೆ ಚಿಟಕಿಯನ್ನು ಹಿಡಿದು ಹರಿಕಥೆ ಆರಂಭಿಸಿದರೆ ತಿರಸ್ಕಾರಕ್ಕೆ ಬದಲು ಚಪ್ಪಾಳೆ ಬೀಳುವುದರ ಹಿಂದೆ ಸರಸ್ವತೀಬಾಯಿಯವರ ಹೋರಾಟವಿದೆ.