Sheik Chinna Moulana-ಷೇಕ್ ಚಿನ್ನ ಮೌಲಾನಾ ಸಾಹೇಬ್

ಸಂಗೀತ ನನ್ನ ಧರ್ಮ 
ನೂರರ ನೆನಪು.
ಸಂಗ್ರಹ: ಟಿ ಎಸ್ ವೇಣುಗೋಪಾಲ್
“ಸಂಗೀತ ನನ್ನ ಧರ್ಮ, ಪರಿಪೂರ್ಣತೆ ನನ್ನ ಗುರಿ” ಅಂತ ಬದುಕಿನುದ್ದಕ್ಕೂ ಭಾವಿಸಿದ್ದ ಷೇಕ್ ಚಿನ್ನ ಮೌಲಾನ ಸಾಹೇಬರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮ್ಯೂಸಿಕ್ ಅಕಾಡೆಮಿಯಲ್ಲಿ ಅವರ ಮೊಮ್ಮಕ್ಕಳಾದ ಖಾಸಿಂ ಹಾಗೂ ಬಾಬು ಅವರು ನೀಡಿದ ಪ್ರಾತ್ಯಕ್ಷಿಯ ಸಂಗ್ರಹ ರೂಪ ಈ ಲೇಖನ.
ಮೌಲಾನಾ ಅವರ ಹುಟ್ಟೂರು ೪೦-೫೦ ಕುಟುಂಬಗಳು ವಾಸಿಸುತ್ತಿದ್ದ ಆಂಧ್ರಪ್ರದೇಶದ ಒಂದು ಪುಟ್ಟ ಗ್ರಾಮ ಕರವಡಿ. ಆದರೆ ನಾಗಸ್ವರದ ದೃಷ್ಟಿಯಿಂದ ತುಂಬಾ ಮಹತ್ವದ ಸ್ಥಳ. ಅಲ್ಲಿ ಸುಮಾರು ೩೦೦ ವರ್ಷಗಳ ನಾಗಸ್ವರದ ಇತಿಹಾಸ ಇದೆ. ಅಲ್ಲೊಂದು ರಾಮನ ದೇವಸ್ಥಾನವಿತ್ತು. ಮೌಲಾನಾ ಕುಟುಂಬಕ್ಕೆ ಮೂರುವರೆ ಎಕರೆ ಭೂಮಿಯನ್ನು ನೀಡಲಾಗಿತ್ತು. ಹಾಗೆ ತವಿಲ್ ಕಲಾವಿದರಿಗೂ ಮೂರುವರೆ ಎಕರೆ ಭೂಮಿಯನ್ನು ನೀಡಲಾಗಿತ್ತು. ಅದರಿಂದ ಬರುವ ಆದಾಯದಲ್ಲಿ ದೇವಸ್ಥಾನದಲ್ಲಿ ಕೈಂಕರ್ಯ ನಡೆಸಿಕೊಡಬೇಕಾಗಿತ್ತು. ಆ ಕರಾರು ಮುಂದುವರಿಸಲು ಅವರ ಕುಟುಂಬದಲ್ಲಿ ಒಬ್ಬರೋ ಇಬ್ಬರೋ ನಾಗಸ್ವರ ಕಲಿತುಕೊಳ್ಳಬೇಕಾಗಿತ್ತು. ಅದಕ್ಕೆ ಸ್ವಲ್ಪವೂ ಚ್ಯುತಿ ಬರದಂತೆ ಇಂದಿನವರೆಗೆ ಇವರ ಕುಟುಂಬದಲ್ಲಿ ನಾಗಸ್ವರದ ಅಭ್ಯಾಸ ಮುಂದುವರಿದೇ ಇದೆ. ಷೇಕ್ ಚಿನ್ನ ಮೌಲಾನಾ ಸಾಹೇಬರು ಈ ಪರಂಪರೆಯ ಮುಂದುವರಿಕೆ.
ಇವರ ಮೊದಲ ಗುರು ತಂದೆ ಷೇಕ್ ಖಾಸಿಂ ಸಾಹೇಬರು. ಅವರ ನಂತರದ ಪಾಠ ಚಿಲಕಲರಿಪೇಟೆ ಗುರುಕುಲದಲ್ಲಿ ಮುಂದುವರಿಯಿತು. ಆಂಧ್ರದಲ್ಲಿ ಗುಂಟೂರು ನಾಗಸ್ವರಕ್ಕೆ ಹೆಸರುವಾಸಿ. ಅಲ್ಲಿ ಆದಂ ಸಾಹೇಬ್ ಅವರ ಬಳಿ ಗುರುಕುಲವಾಸದಲ್ಲಿ ಹಲವು ವರ್ಷ ನಾಗಸ್ವರ ಕಲಿತರು. ಆದಂ ಸಾಹೇಬರ ವಿಶೇಷವೆಂದರೆ ರಾಗಾಲಾಪನೆ. ಲೆಕ್ಕಾಚಾರಕ್ಕೆ ಅವರು ಅಷ್ಟಾಗಿ ಮಹತ್ವ ನೀಡುತ್ತಿರಲಿಲ್ಲ. ಅಂತಹ ಗರಡಿಯಲ್ಲಿ ಪಳಗಿದ ಮೌಲಾನಾ ಸಾಹೇಬರು ವಿಜಯವಾಡದ ಅಕಾಶವಾಣಿಯಲ್ಲಿ ಆಗಲೇ ಗ್ರೇಡೆಡ್ ಕಲಾವಿದರಾಗಿದ್ದರು. ಅವರಿಗೆ ರಾಜರತ್ನಂ ಪಿಳ್ಳೈ ಸಂಗೀತದ ಬಗ್ಗೆ ಅಪಾರವಾದ ವ್ಯಾಮೋಹ. ಅವರ ರೀತಿಯಲ್ಲಿ ನುಡಿಸಬೇಕೆನ್ನುವುದು ಅವರ ಕನಸು. ಹೇಗಾದರೂ ಮಾಡಿ ಅವರ ಬಳಿ ಕಲಿತು ತಮ್ಮ ಸಂಗೀತವನ್ನು ಪರಿಷ್ಕೃತಗೊಳಿಸಿಕೊಳ್ಳಬೇಕೆಂಬ ಆಸೆ. ಅದೇ ಹಂಬಲದಿಂದ ಕುಂಭಕೋಣಂಗೆ ಬರುತ್ತಾರೆ. ಅಲ್ಲೇ ಇದ್ದು, ಅವರ ಸಂಗೀತವನ್ನು ಕೇಳುತ್ತಾ, ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರನ್ನು ಸಂಪರ್ಕಿಸುವುದು ತಮಗೆ ಸಾಧ್ಯವಿಲ್ಲ ಅಂತ ಅನ್ನಿಸಿದಾಗ ಅಲ್ಲಿದ್ದ ಉಳಿದ ಗುರುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದರು.
ನಾಚ್ಚಿಯಾರ್ ದೇವಸ್ಥಾನದಲ್ಲಿ ದೊರೈಕಣ್ಣು ಪಿಳ್ಳೈ ಎನ್ನುವ ನಾಗಸ್ವರ ವಿದ್ವಾಂಸರಿದ್ದರು. ಮೌಲಾನ ಅವರ ಆಸಕ್ತಿಯನ್ನು ಗಮನಿಸಿದ ದೊರೈಕಣ್ಣು ಪಿಳ್ಳೈ ಇವರನ್ನು ತಮ್ಮ ಗುರುಕುಲದಲ್ಲಿ ಇಟ್ಟುಕೊಳ್ಳುತ್ತಾರೆ. ಇವರಿಬ್ಬರಿಗೂ ರಾಜರತ್ನಂ ಪಿಳ್ಳೈ ಮಾನಸಿಕ ಗುರು. ಇವರು ಬಯಸಿದ್ದೆಲ್ಲಾ ದೊರೈಕಣ್ಣು ಪಿಳ್ಳೈ ಅವರಲ್ಲಿತ್ತು. ಇವರು ಎಲ್ಲಿ ಪರಿಷ್ಕರಿಸಿಕೊಳ್ಳಲು ಬಯಸಿದ್ದರೋ ಅದೆಲ್ಲಾ ಅವರಿಂದ ಸಾಧ್ಯವಾಯಿತು. ನಾಗಸ್ವರದಲ್ಲಿ ಮುಖ್ಯವಾದದ್ದು ಬಿರಕಾ, ಬೆರಳಡಿ ಹಾಗೂ ಅಸೈಯ್ಯ ಸಂಗತಿಗಳು. ರಾಜರತ್ನಂಪಿಳ್ಳೈ ಅವರ ಬಿರ್ಕಾ ಕೇಳಿದ ಮೇಲೆ ಅವರಿಗೆ ಯಾರ ಬಿರ್ಕಾಗಳೂ ತೃಪ್ತಿ ಕೊಡುತ್ತಿರಲಿಲ್ಲ. ದೊರೈಕಣ್ಣು ಪಿಳ್ಳೈ ಅವರ ಬಿರ್ಕಾ ಪರಿಪೂರ್ಣವಾಗಿತ್ತಂತೆ. ಕಣ್ಣುಮುಚ್ಚಿ ಕೇಳುತ್ತಿದ್ದರೆ ಅದು ರಾಜರತ್ನಪಿಳ್ಳೈ ಅವರ ಬಿರ್ಕಾನಾ ಅಥವಾ ದೊರೈಕಣ್ಣು ಪಿಳ್ಳೈ ಅವರ ಬಿರ್ಕಾನಾ ಅನ್ನೋದು ತಿಳೀತಾ ಇರಲಿಲ್ಲವಂತೆ. ಅದು ಬೆರಳಡಿ ಹಾಗೂ ಅಸೈಯ್ಯ ಸಂಗತಿಗಳ ವಿಷಯದಲ್ಲೂ ನಿಜವಾಗಿತ್ತು.
ರಾಜರತ್ನಪಿಳ್ಳೈ ತಮಗೆ ಇಷ್ಟವಾದ ರಘುವರ ಇತ್ಯಾದಿ ಕೀರ್ತನೆಗಳಿಗೆ ಅನುಪಲ್ಲವಿಯಲ್ಲಿ ಒಂದು ಕಡೆ ನಿಂತು ಅಲ್ಲಿ ಬಿರ್ಕಾ ನುಡಿಸುತ್ತಿದ್ದರು. ಅದನ್ನೇ ಮೌಲಾನಾ ಅವರು ವಲ್ಲಿನಾಯಕ, ಇಂತ ಸೌಖ್ಯ ಮನಿನೇ ಮುಂತಾದ ಕೀರ್ತನೆಗಳಲ್ಲಿ ಮಾಡುತ್ತಿದ್ದರು. ವಲ್ಲಿನಾಯಕ ಕೃತಿಯಲ್ಲಿ ತಲ್ಲಿ ತಂಡ್ರಿ ಗುರು ಎನ್ನುವ ಸಾಹಿತ್ಯಭಾಗದಲ್ಲಿ ನ್ಯಾಸ ಮಾಡಿಕೊಂಡು ಬಿರ್ಕಾ ನುಡಿಸುತ್ತಿದ್ದರು. ರಾಜರತ್ನಂ ಪಿಳ್ಳೈ ಅವರ ಸಂಗೀತ ಅಷ್ಟರ ಮಟ್ಟಿಗೆ ಇವರೊಳಗೆ ಸೇರಿತ್ತು.
ಬಿರ್ಕಾಗೆ ಒಂದು ಕಾಲಪ್ರಮಾಣ ಇರುತ್ತದೆ. ತುಂಬಾ ಜನ ವಿದ್ವಾಂಸರು ಸರಳೆವರಸೆಯನ್ನು ಮೂರನೇ ಕಾಲದಲ್ಲಿ ನುಡಿಸುವುದೇ ಬಿರ್ಕಾ ಅಂತ ಹೇಳಿಬಿಟ್ಟಿದ್ದಾರೆ. ಅದು ಹಾಗಲ್ಲ. ಪ್ರತಿಸ್ವರವೂ ಸ್ಪಷ್ಟವಾಗಿ ಕೇಳಬೇಕು. ಅದರ ಸ್ಥಾನದಲ್ಲಿರಬೇಕು. ಪ್ರತಿಯೊಂದು ಸ್ವರವೂ ಶ್ರುತಿಶುದ್ಧವಾಗಿರಬೇಕು. ಅಲ್ಲಿ ಸ್ಲಿಪ್ ಆಗಲೇಬಾರದು ಅಂತ ಅವರು ಹೇಳುತ್ತಿದ್ದರು. ಅವರು ಬಿರ್ಕಾವನ್ನು ಎಲ್ಲಾ ರಾಗಗಳಲ್ಲೂ ಅಭ್ಯಾಸ ಮಾಡಬೇಕೆಂದು ಹೇಳುತ್ತಿದ್ದರು. ಪ್ರತಿಮಧ್ಯಮ ರಾಗ, ಶುದ್ಧಮಧ್ಯಮ ರಾಗ, ಕಾಪಿ ಇತ್ಯಾದಿ ಜನ್ಯರಾಗಗಳು, ಕೇದಾರದಂತಹ ವಕ್ರರಾಗಗಳು, ಇತ್ಯಾದಿ ಎಲ್ಲಾ ರಾಗಗಳಲ್ಲೂ ಬಿರ್ಕಾ ಸಾಧನೆ ಮಾಡಬೇಕು ಅನ್ನುತ್ತಿದ್ದರು.
ಆಲಾಪನೆ ತುಂಬಾ ವಿಸ್ತಾರವಾಗಿರಬೇಕು. ದೊಡ್ಡ ತಳಹದಿಯನ್ನು ರೂಪಿಸಿ, ಅದರ ಮೇಲೆ ಆಲಾಪನೆಯನ್ನು ವಿಸ್ತರಿಸುತ್ತಾ ಹೋಗಬೇಕು ಎನ್ನುತ್ತಿದ್ದರು. ತುಂಬಾ ಕಾರ್ವೆಕೊಟ್ಟು ನುಡಿಸಬೇಕು. ಪ್ರತಿಯೊಂದು ಸಂಗತಿಯೂ ಮುಂದಿನ ಸಂಗತಿಯೊಂದಿಗೆ ಸೇರಿಕೊಂಡು ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಮುಂದಿನ ಸಂಗತಿಯೊಂದಿಗೆ ಅದಕ್ಕೆ ಇರುವ ಸಂಬಂಧದ ಕೊಂಡಿ ಮಿಸ್ ಆಗಬಾರದು ಎಂದು ಒತ್ತಿ ಹೇಳುತ್ತಿದ್ದರು. ಯಾವುದೇ ಸಂಗತಿಯನ್ನಾಗಲಿ, ಗಮಕಗಳಿಲ್ಲದೆ ಮೊಟ್ಟೆ ಮೊಟ್ಟೆಯಾಗಿ ನಿಲ್ಲಿಸಿಬಿಟ್ಟರೆ ಅವರಿಗೆ ತುಂಬಾ ಕೋಪ ಬರುತ್ತಿತ್ತು. ಒಳ್ಳೆಯ ಕಾರ್ವೆ ಕೊಟ್ಟು ನುಡಿಸಬೇಕು. ಆಗಷ್ಟೆ ಸ್ವರ ಶ್ರುತಿಯಲ್ಲಿ ಸೇರುತ್ತಿದೆಯೋ ಇಲ್ಲವೋ ಎನ್ನುವುದು ತಿಳಿಯುತ್ತದೆ. ಸಂಗತಿಗಳನ್ನು ದಂಕೊಟ್ಟು ನಡೆಸಬೇಕು ಅನ್ನುತ್ತಿದ್ದರು.
ಸಾಮಾನ್ಯವಾಗಿ ಶಿವಾಳಿಯನ್ನು ಕೈಗೆ ತೆಗೆದುಕೊಂಡಾಗ ಒಂದು ಸಲ ಊದಿ ನೋಡಿ ನಂತರ ನಾಗಸ್ವರಕ್ಕೆ ಹಾಕುತ್ತಾರೆ. ಆದರೆ ಅವರಿಗೆ ಈ ಸೀವಾಳಿಯನ್ನು ಹಾಕಿದರೆ ಸರಿಹೋಗುತ್ತದೆ ಅಂತ ಮನಸ್ಸಿಗೆ ತೋರಿಬಿಡುತ್ತಿತ್ತು. ಊದಿ ನೋಡುತ್ತಿರಲಿಲ್ಲ. ಸುಮ್ಮನೆ ಒಂದು ಶಿವಾಳಿಯನ್ನು ತೆಗೆದು ವಾದ್ಯದಲ್ಲಿ ಹಾಕಿ, ಷಡ್ಜ ಹಿಡಿದರೆಂದರೆ ಹಾಗೆ ನಾದ ಹರಿದು ಬರುತ್ತಿತ್ತು. ಅವರಿಗೆ ಆ ವಿದ್ವತ್ತು ಸಿದ್ದಿಸಿತ್ತು.
ನಾದಸ್ವರವನ್ನು ನುಡಿಸುವಾಗ ಸಾಮಾನ್ಯವಾಗಿ ಎಡಗೈ ಮೇಲೆ ಬರುತ್ತದೆ. ಅದು ಸಾರಂಗದೇವನ ಶಾಸ್ತ್ರವೂ ಅದನ್ನು ಹೇಳುತ್ತದಂತೆ. ಆದರೆ ಇವರು ನುಡಿಸುವಾಗ ಎಡಗೈ ಕೆಳಗೆ ಬರುತ್ತಿತ್ತು. ಬಲಗೈಯನ್ನು ಮೇಲೆ ಹಿಡಿದು ನುಡಿಸುತ್ತಿದ್ದರು. ಅದಕ್ಕೆ ಒಂದು ಕಾರಣ ಅಂದರೆ ಖಾಸಿಂ ಹೇಳುವಂತೆ ಅವರ ಇಡೀ ಬಾನಿಯಲ್ಲೇ ಬಲಗೈ ಹೆಚ್ಚು ಬಲ ಅನ್ನುವ ಒಂದು ಭಾವನೆ ಇದೆ. ಅವರು ಕಛೇರಿಯಲ್ಲಿ ಕುಳಿತುಕೊಳ್ಳುವಾಗಲೂ ಬಲಗಾಲು ಮುಂದೆ ಇರುತ್ತಿತ್ತು. ಹಾಗೆ ಕುಳಿತು ನುಡಿಸಿದರೆ ಸಂಪೂರ್ಣ ಎನರ್ಜಿ ಬರುತ್ತದೆ ಅಂತ ಅವರ ಪರಂಪರೆಯ ನಂಬಿಕೆಯಾಗಿತ್ತಂತೆ.
ಇನ್ನು ಅವರ ಕೃತಿಯ ನುಡಿಸಾಣಿಕೆ ಸಾಹಿತ್ಯಕ್ಕೆ ತುಂಬಾ ತಾಳೆಯಾಗುತ್ತಿತ್ತು. ಅದನ್ನು ಕೇಳಿ ಸಾಹಿತ್ಯ ಬರೆದುಕೊಳ್ಳಬಹುದಿತ್ತು. ಅವರಿಗೆ ದೀಕ್ಷಿತರ ಕೃತಿಗಳು ತುಂಬಾ ಇಷ್ಟ. ಅವುಗಳನ್ನು ತುಂಬಾ ನುಡಿಸುತ್ತಿದ್ದರು. ಇವರ ಭಾಷೆ ತೆಲುಗು. ಹಾಗಾಗಿ ತ್ಯಾಗರಾಜರ ಕೃತಿಗಳನ್ನು ಸಾಹಿತ್ಯಕ್ಕೆ ತಕ್ಕಂತೆ ಹಾಡುವುದು ಅವರಿಗೆ ಕಷ್ಟವಾಗಿರಲಿಲ್ಲ. ಆದರೆ ದೀಕ್ಷಿತರ ಕೃತಿಗಳು ಸಂಸ್ಕೃತದಲ್ಲಿ ಇದ್ದುದರಿಂದ ಅವರಿಗೆ ತುಂಬಾ ಕಷ್ಟವಾಯಿತು. ಆಂಧ್ರದಲ್ಲಿ ಒಬ್ಬ ದೊಡ್ಡ ವಿದ್ವಾಂಸರ ಬಳಿ ಹೋಗಿ ದೀಕ್ಷಿತರ ಕೀರ್ತನೆಗಳನ್ನು ಪಾಠ ಮಾಡಿ ಎಂದು ಕೇಳಿದ್ದಕ್ಕೆ ಅವರು ನಾಗಸ್ವರ ನುಡಿಸುವ ನಿಮಗೆ ದೀಕ್ಷಿತರ ಕೃತಿಗಳೆಲ್ಲಾ ಯಾಕೆ ಬೇಕು? ಸಣ್ಣ ಸಣ್ಣ ಕೀರ್ತನೆಗಳನ್ನು ನುಡಿಸಿಕೊಳ್ಳಿ ಅನ್ನುತ್ತಾರೆ. ಆಗ ತಿರುನೇಲ್ವೇಲಿಯ ವೇದಾಂತ ಭಾಗವತರ್ ಬಳಿ ಹೋಗಿ ಅವರನ್ನು ಆಂಧ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿ ಏಲೂರಿನಲ್ಲಿ ಒಬ್ಬ ದೊಡ್ಡ ಜಮೀನ್ದಾರರ ತೋಟದಲ್ಲಿ ದೀಕ್ಷಿತರನ್ನು ಕುರಿತ ಕಾರ್ಯಾಗಾರವನ್ನು ಏರ್ಪಡಿಸಿ, ದೀಕ್ಷಿತರ ಕೀರ್ತನೆಗಳನ್ನು ಕಲಿಯುತ್ತಾರೆ.
ಅವರಿಗೆ ತಮಗೆ ಏನಾದರು ಬರುವುದಿಲ್ಲ ಎಂದು ಹೇಳಲು ಸಂಕೋಚವಿರಲಿಲ್ಲ. ಅಷ್ಟೇ ಅಲ್ಲ ಅದನ್ನು ಯಾರದೇ ಬಳಿ ಹೋಗಿ ಕಲಿಯಲೂ ಹಿಂಜರಿಕೆಯಿರಲಿಲ್ಲ. ಅವರಿಗೆ ಚಿಟ್ಟೆಸ್ವರ ತುಂಬಾ ಇಷ್ಟ. ಶ್ರೀವರಲಕ್ಷ್ಮಿ ಕೃತಿಗೆ ಕಾರೈಕುಡಿ ಸಹೋದರರು ಚಿಟ್ಟೆಸ್ವರ ನುಡಿಸಿದ್ದಾರೆ ಎಂದು ತಿಳಿದಾಗ, ಸೀದಾ ಅವರ ಬಳಿಗೇ ಹೋಗಿ ಅದನ್ನು ಕಲಿತರು. ಒಮ್ಮೆ ಜಿಎನ್‌ಬಿ ತಮ್ಮ ಕಚೇರಿಯಲ್ಲಿ ಗೌಳಿಪಂತು ರಾಗವನ್ನು ಹಾಡುವಾಗ ಅದರಲ್ಲಿ ಶುದ್ಧಮಧ್ಯಮ ಬಳಕೆ ಮಾಡಿ ಹಾಡಿದರು. ಮೌಲಾನಾ ಅವರನ್ನು ಕಂಡು, ಆ ಬಗ್ಗೆ ಕೇಳುತ್ತಾರೆ. ಆಗ ಮೌಲಾನಾ ನೀನು ಹೇಳೋದು ಸರಿ. ಆದರೆ ಶುದ್ಧಮಧ್ಯಮ ಬಳಸಿದರೆ ಸಲೀಸಾಗಿ ಹಾಡಬಹುದು. ಚೆನ್ನಾಗಿರುತ್ತದೆ. ಹಿಂದೆ ನಾವು ಹಾಗೆ ಹಾಡುತ್ತಿದ್ದೆವು. ನೀನು ಹಾಗೇ ಹಾಡು ಎಂದು ಅವರು ಮೌಲಾನಾಗೆ ಹೇಳುತ್ತಾರೆ. ಅವರಿಗೆ ಕೊನೆಯವರೆಗೆ ತಿಳಿದುಕೊಳ್ಳಬೇಕು, ಕಲಿತುಕೊಳ್ಳಬೇಕು ಅನ್ನುವ ಬಯಕೆ ಇತ್ತು. ಒಮ್ಮೆ ತಂಜಾವೂರಿನ ಕಛೇರಿಯಲ್ಲಿ ನೀಲಾಂಬರಿ ರಾಗದ ಅಂಬಾ ನೀಲಾಯತಾಕ್ಷಿ ಕೃತಿ ನುಡಿಸುತ್ತಾರೆ. ಸಂಘಟಕರು ತುಂಬಾ ಮೆಚ್ಚಿಕೊಂಡು ನಿಮಗೆ ಪೊನ್ನಯ್ಯ ಪಿಳ್ಳೈ ಅವರ ಅಂಬ ನೀಲಾಂಬರಿ ಕೃತಿ ಬರುತ್ತದಾ ಅಂತ ಕೇಳುತ್ತಾರೆ. ಇವರು ಇಲ್ಲ ಬರೊಲ್ಲ ಅಂತ ಹೇಳುತ್ತಾರೆ. ಆದರೆ ಇವರಿಗೆ ರಾತ್ರಿಯೆಲ್ಲ ನಿದ್ರೆಯಿಲ್ಲ. ಅವರು ಕೇಳಿದ ಕೃತಿ ತನಗೆ ಬರುದಿಲ್ಲವಲ್ಲ ಅನ್ನುವ ಬೇಸರ. ಬೆಳಗ್ಗೆ ಮೊಮ್ಮಗ ಖಾಸಿಂನನ್ನು ಎಬ್ಬಿಸಿ ಶ್ರೀರಂಗದಲ್ಲಿ ಒಳ್ಳೆಯ ಪಾಠಾಂತರ ಇರುವವರು ತುಂಬಾ ಜನ ಇದ್ದಾರೆ, ಅಂಬ ನಿಲಾಂಬರಿ ಯಾರಿಗೆ ಬರುತ್ತದೆ ಅಂತ ತಿಳಿದು, ಕಲಿತುಕೊಂಡು ಬಾ ಅಂತ ಕಳಿಸುತ್ತಾರೆ. ಕೆ ರಾಜಗೋಪಲ್ ಅನ್ನುವರಿಗೆ ಬರುತ್ತದೆ ಎಂದು ತಿಳಿದು, ಅವರನ್ನು ಕೇಳಿದಾಗ, ನಾನು ಅದನ್ನು ಹಾಡಿ ತುಂಬಾ ದಿನಗಳಾಗಿವೆ. ಆದರೆ ನನ್ನ ಬಳಿ ಅದರ ಸ್ಕ್ರಿಪ್ಟ್ ಇದೆ. ಅದು ತುಂಬಾ ದೊಡ್ಡ ಕೃತಿಯಲ್ಲ. ಸುಲಭವಾಗಿ ಕಲಿಯಬಹುದು ಎಂದು ಅವರಿಗೆ ಹೇಳಿಕೊಟ್ಟರಂತೆ. ಅದನ್ನು ನಾಗಸ್ವರಕ್ಕೆ ಒಗ್ಗಿಸಿಕೊಂಡ ಮೇಲೆಯೇ ಷೇಕ್ ಅವರಿಗೆ ರಾತ್ರಿ ನಿದ್ದೆ ಬಂದದ್ದು.
ಅವರಿಗೆ ೬೦ ವರ್ಷವಾಗಿದ್ದಾಗ ಎಷ್ಟೋ ಸಂಗತಿಗಳು ಮರೆತು ಹೋಗಿರುತ್ತಿತ್ತು. ಒಂದು ಪುಸ್ತಕ ತೆಗೆದುಕೊಂಡು ಸಂಗತಿಗಳನ್ನು ಹತ್ತು ಇಪ್ಪತ್ತು ಸಲ ಬರೆಯುತ್ತಿದ್ದರು. ಹಾಗೆ ಸಂಗತಿಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತಿದ್ದರು.
ಸಂಗೀತಕ್ಕೆ ಅವರ ಕೆಲವು ಗಮನಾರ್ಹ ಕೊಡುಗೆಗಳಿವೆ. ಮೊದಲನೆಯದಾಗಿ ಅವರು ನಾಗಸ್ವರಕ್ಕೆ ಶ್ರುತಿಸಹಾಯಕ್ಕಾಗಿ ಬಳಸುತ್ತಿದ್ದ ಒತ್ತುವಿಗೆ ಬದಲಾಗಿ ಶ್ರುತಿಪೆಟ್ಟಿಗೆಯನ್ನು ಬಳಸಿದರು. ಇದಕ್ಕೆ ಕೆಲವು ಕಾರಣಗಳಿದ್ದವು. ಓತ್ತು ನುಡಿಸುವವನು ತುಂಬಾ ಶಿಸ್ತಿನಿಂದ ಇರಬೇಕು. ಅದನ್ನು ನಿರಂತರವಾಗಿ ನುಡಿಸುತ್ತಿರಬೇಕು. ಮಧ್ಯದಲ್ಲಿ ಉಸಿರು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ರಾಜರತ್ನಂ ಪಿಳ್ಳೈ ತಂಬೂರವನ್ನು ಬಳಸಲು ಪ್ರಾರಂಭಿಸಿದರು. ಮೌಲಾನಾ ಅವರಿಗೂ ಒತ್ತು ಸಮಸ್ಯೆಯುಂಟು ಮಾಡುತ್ತಿತ್ತು. ಹೆಚ್ಚಿನ ಕಚೇರಿಗಳಲ್ಲಿ ಅವರ ತಂದೆಯೇ ಒತ್ತು ನುಡಿಸುತ್ತಿದ್ದರು. ಶ್ರುತಿಪೆಟ್ಟಿಗೆ ಆಗಷ್ಟೇ ಮಾರುಕಟ್ಟೆಗೆ ಬಂದಿತ್ತು. ಅದು ಚಿಕ್ಕದಾಗಿದ್ದು ಗಾಯನಕ್ಕೆ ಸರಿಯಾಗಿತ್ತು. ಅದನ್ನೇ ದೊಡ್ಡದು ಮಾಡಿ ನಾಗಸ್ವರಕ್ಕೆ ಬಳಸಬಹುದಾ ಅಂತ ಮೌಲಾನಾ ಯೋಚಿಸಿದರು. ಮದ್ರಾಸಿನ ಕಣ್ಣನ್ ಹಾರ್ಮೋನಿಕ್ ವರ್ಕ್ಸ್ ಅನ್ನುವ ಅಂಗಡಿಯಲ್ಲಿ ಅದಕ್ಕೆ ಎರಡು ದೊಡ್ಡ ಬೆಲ್ಲೊ ಹಾಕಿಸಿ ಒಂದು ದೊಡ್ಡ ಆಕೃತಿಯ ಶ್ರುತಿಪಟ್ಟಿಗೆಯನ್ನು ಮಾಡಿಸಿಕೊಂಡರು. ಅದರಲ್ಲಿ ಒಂದು ಆಧಾರ ಷಡ್ಜ, ಎರಡು ಮಂದ್ರ ಪಂಚಮ, ಒಂದು ಪಂಚಮ ಇರುವಂತೆ ರೀಡ್‌ಗಳನ್ನು ಬಳಸಿ ವಿನ್ಯಾಸ ಮಾಡುವಂತೆ ಕಣ್ಣನಿಗೆ ತಿಳಿಸುತ್ತಾರೆ. ಇದರ ನಾದ ಸೊಗಸಾಗಿ ಇದ್ದುದರಿಂದ ಅವರು ಒತ್ತು ಬಳಸುವುದನ್ನೇ ಬಿಡುತ್ತಾರೆ. ಅನಂತರ ಎಲ್ಲರೂ ಈ ಮೌಲಾನಾ ಶ್ರುತಿಪೆಟ್ಟಿಗೆಯನ್ನು ಕಣ್ಣನ್ ಅವರಿಂದ ಮಾಡಿಸಿಕೊಳ್ಳಲು ಪ್ರಾರಂಭಿಸಿ, ಕ್ರಮೇಣ ಒತ್ತುವಿನ ಕೇವಲ ನೆನಪಾಗಿ ಉಳಿಯಿತು.
ಇನ್ನು ಎರಡನೆಯದಾಗಿ ಅವರು ಹಲವು ರಾಗಗಳನ್ನು ಮೊತ್ತ ಮೊದಲ ಬಾರಿಗೆ ನಾಗಸ್ವರದಲ್ಲಿ ಪರಿಚಯಿಸಿದರು. ಸಾಳಗ ಭೈರವಿ ರಾಗದಲ್ಲಿ ಅವರು ಪದವಿ ನೀ ಸದ್ಭಕ್ತಿ ಕೃತಿಯನ್ನು ನಾಗಸ್ವರದಲ್ಲಿ ನುಡಿಸಿದಾಗ ಎಲ್ಲರಿಗೂ ಆಶ್ಚರ್ಯ. ಹಲವರು ಅದನ್ನು ನುಡಿಸತೊಡಗಿದರು. ಕಾಪಿ, ಕೇದಾರಗೌಳ, ಶುಭಪಂತುವರಾಳಿ, ಮಣಿರಂಗು, ಹೇಮವತಿ, ಸರಸ್ವತಿ ಹೀಗೆ ಆ ಕಾಲದ ನಾಗಸ್ವರವಾದಕರಲ್ಲಿ ಅಷ್ಟಾಗಿ ಪರಿಚಿತವಲ್ಲದ ರಾಗಗಳನ್ನು ತುಂಬಾ ನುಡಿಸುತ್ತಿದ್ದರು. ಅವರ ಶುಭಪಂತುವರಾಳಿಯನ್ನು ಕೇಳಿದರೆ ಕೆಲವೊಮ್ಮೆ ಶಹನಾಯಿಯಂತೆ ಕೇಳಿಸುತ್ತದೆ. ಅವರಿಗೆ ಬಿಸ್ಮಿಲ್ಲಾಖಾನ್ ಪ್ರಭಾವ ಇತ್ತು.
ಹಾಗೆಯೇ ಅವರು ಜಾವಳಿ ನುಡಿಸುವಿಕೆಯನ್ನು ವಿಶೇಷವಾಗಿ ರೂಢಿಗೆ ತಂದವರೂ ಮೌಲಾನಾ ಅವರೆ. ಹೀಗೆ ಹಲವು ಕಾರಣಕ್ಕೆ ಷೇಕ್ ಮೌಲನಾ ತುಂಬಾ ಮುಖ್ಯರಾಗುತ್ತಾರೆ.