ಪಂಡಿತ್ ಶಿವಕುಮಾರ್ ಶರ್ಮ
ದೀಪಕ್ ರಾಜ
ಸ್ವಾತಂತ್ರ್ಯೋತ್ತರ ಭಾರತದ ಶಾಸ್ತ್ರೀಯ ಸಂಗೀತದ ತೆರೆಯ ಮೇಲೆ ಪ್ರಖರವಾದ ಉಲ್ಕೆಯಂತೆ ಕಾಣಿಸಿಕೊಂಡದ್ದು ಸಂತೂರ್. ಹೇಳಹೆಸರಿಲ್ಲದಂತೆ, ಜನಮಾನಸದಿಂದ ನೇಪಥ್ಯಕ್ಕೆ ಸರಿದುಹೋಗಿದ್ದ ಈ ವಾದ್ಯ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಜನಪ್ರಿಯತೆಯ ತುತ್ತತುದಿಗೇರಿತು. ಈಗ ಬಳಕೆಯಿರುವ ವಾದ್ಯಗಳಲ್ಲಿ ಕಡ್ಡಿಯಿಂದ ನುಡಿಸುವ ವಾದ್ಯವೆಂದರೆ ಬಹುಶಃ ಇದೊಂದೇ ಎನಿಸುತ್ತದೆ. ಜಲತರಂಗ್, ಕಾಷ್ಟತರಂಗ್, ತಬಲಾತರಂಗ್ ಮುಂತಾದಂತಹ vertical impact ವಾದ್ಯಗಳಿಗೆ ಹೋಲಿಸಿದರೆ ಸಂತೂರಿನಲ್ಲಿ ನಾದಮಾಧುರ್ಯದ ಸಾಧ್ಯತೆಗಳು ತುಂಬಾ ಹೆಚ್ಚು. ಚರಿತ್ರೆಯಲ್ಲಿ ಎಲ್ಲೋ ಕಳೆದುಹೋಗಿದ್ದ ಈ ವಾದ್ಯವು ಮತ್ತೆ ಜೀವತಳೆದು ಯಶಸ್ವಿಯಾಗಲು ಪಂಡಿತ್ ಶಿವಕುಮಾರ್ ಶರ್ಮಾ ಅವರಂತಹ ಒಬ್ಬ ಅಪರೂಪದ ಕಲಾವಿದ ಬರಬೇಕಾಯಿತು.
ಅಪರೂಪದ ಜೋಡಿ – ಶರ್ಮ ಮತ್ತು ಜ಼ಾಕಿರ್ ಹುಸೇನ್
ಹಿಂದುಸ್ತಾನಿ ಸಂಗೀತಲೋಕಕ್ಕೆ ಕಾಲಿಟ್ಟ ಮರುಗಳಿಗೆಯೇ ಸಂತೂರ್ ೧೯೬೦ರಲ್ಲಿ ಬಹುತೇಕ ಭಾರತೀಯ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದ ಕಾಶ್ಮೀರದ ಪ್ರಾತಿನಿಧಿಕ ವಾದ್ಯವೆನಿಸಿಕೊಂಡಿತು. ಸಂತೂರಿಗೆ ಶಾಸ್ತ್ರೀಯ ಸಂಗೀತದ ಸ್ಥಾನಮಾನವನ್ನು ಗಳಿಸಿಕೊಡಲು ಶರ್ಮಾ ಅವರು ಹಲವು ವರುಷಗಳು ಕಷ್ಟಪಡಬೇಕಾಯಿತು. ಆತಂಕವಾದದಿಂದಾಗಿ ೧೯೮೦ರ ವೇಳಗೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣ ಹೆಚ್ಚುಕಡಿಮೆ ನಿಂತುಹೋಯಿತು. ಆದರೆ ಆ ವೇಳೆಗೆ ಶರ್ಮ ಮತ್ತು ಸಂತೂರ್ ಶಾಸ್ತ್ರೀಯ ಸಂಗೀತಲೋಕದಲ್ಲಿ ಗಟ್ಟಿಯಾದ ನೆಲೆಯೂರಿ ಆಗಿತ್ತು. ವಾಸ್ತವವಾಗಿ ಇದೊಂದು ಅಸಾಧಾರಣವಾದ ಸಾಧನೆ. ಏಕೆಂದರೆ ಸಂತೂರ್‌ಗಿಂತಲೂ ಹೆಚ್ಚು ಪ್ರೌಢವಾಗಿದ್ದ, ಪರಿಷ್ಕೃತಗೊಂಡಿದ್ದ ವಾದ್ಯಗಳನ್ನು ಉಸ್ತಾದ್ ವಿಲಾಯತ್‌ಖಾನ್, ಉಸ್ತಾದ್ ಅಲಿ ಅಕ್ಬರ್‌ಖಾನ್ ಹಾಗೂ ಪಂಡಿತ್ ರವಿಶಂಕರ್ ಅವರಂತಹ ದೈತ್ಯರು ನುಡಿಸುತ್ತಿದ್ದ ಕಾಲ ಅದಾಗಿತ್ತು. ಶರ್ಮ ಅವರ ಯಶಸ್ಸು ಅನೇಕ ಸಂಗೀತಗಾರರನ್ನು ಸಂತೂರ್ ವಾದ್ಯದತ್ತ ಸೆಳೆದಿದೆ. ಅವರಲ್ಲಿ ಪ್ರತಿಯೊಬ್ಬರೂ ಈ ವಾದ್ಯಕ್ಕಿರುವ ಅಪಾರ ಸಾಧ್ಯತೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ಈ ವಾದ್ಯವು ಇನ್ನೂ ವಿಕಾಸಗೊಳ್ಳುತ್ತಲೇ ಇದೆ. ಆದರೆ ಶಿವಕುಮಾರ ಶರ್ಮರ ಸಂತೂರ್ ಆಧಿಪತ್ಯಕ್ಕೆ ಸವಾಲೆಸೆಯಲು ಈವರೆಗೆ ಯಾರಿಗೂ ಆಗಿಲ್ಲ.
ಸಂತೂರ್
ಸಂತೂರ್‌ನಂತಹ ವಾದ್ಯಗಳು ಮಧ್ಯ ಪ್ರಾಚ್ಯ, ಮಧ್ಯ ಏಷಿಯಾ ಮತ್ತು ಮಧ್ಯ ಯುರೋಪಿನಲ್ಲಿಯೂ ಕಂಡುಬರುತ್ತವೆ. ಇತ್ತೀಚಿನವರೆಗೆ ಕಾಶ್ಮೀರ ಕಣಿವೆಯನ್ನು ಬಿಟ್ಟಿರೆ ಉಳಿದಂತೆ ಭಾರತದ ಹೆಚ್ಚಿನವರಿಗೆ ಸಂತೂರಿನ ಪರಿಚಯವೇ ಇರಲಿಲ್ಲ. ಸಾಮಾನ್ಯವಾಗಿ ಸೂಫಿಗೀತೆಗಳಾದ ಸೂಫಿಯಾನ ಮೌಸಿಕೀಯ ಗಾಯನಕ್ಕೆ ಪಕ್ಕವಾದ್ಯವಾಗಿ ಸಂತೂರನ್ನು ಬಳಸುತ್ತಿದ್ದರು. ಈ ಸೂಫಿಗೀತೆಗಳಿಗೆ ಅವುಗಳದ್ದೇ ಆದ ರಾಗ ಮತ್ತು ತಾಳಗಳಿದ್ದವು.
ಕ್ರಿಸ್ತಪೂರ್ವದಲ್ಲಿ ಮೆಸೆಪೊಟೇಮಿಯಾದಲ್ಲಿ ಪರಿಚಿತವಿದ್ದ ಪಸಾಂತಿರ್ ಎಂಬ ವಾದ್ಯಕ್ಕೂ ಸಂತೂರ್‌ಗೂ ಸಂಬಂಧ ಕಲ್ಪಿಸುತ್ತಾರೆ. ಹೀಗಾಗಿ ಪರ್ಷಿಯನ್ನರು ಮತ್ತು ಭಾರತೀಯರಿಬ್ಬರೂ ಸಂತೂರ್ ತಮ್ಮ ದೇಶದಲ್ಲೇ ಹುಟ್ಟಿದ ವಾದ್ಯ ಎಂದು ಹೇಳಿಕೊಳ್ಳುತ್ತಾರೆ. ಸಂಸ್ಕೃತದಲ್ಲಿ ಸಂತೂರಿನ ಮೂಲ ಹೆಸರು ಶತತಂತ್ರೀ (ಶತ=ನೂರು, ತಂತ್ರೀ= ತಂತಿಗಳು) ಎಂದು. ಇನ್ನು ಪರ್ಷಿಯಾದಲ್ಲಿ ಈಗ ಜನಪ್ರಿಯವಾಗಿರುವ ಹೆಸರು ಸಂತೂರ್ (ಸದ್ ಅಥವಾ ಸನ್=ನೂರು, ತೂರ್=ತಂತಿಗಳು). ಭಾರತೀಯರು ತಮ್ಮದು ಅಂತ ಹೇಳಿಕೊಳ್ಳುತ್ತಿರುವುದು ಹೆಚ್ಚು ಸಮಂಜಸ ಎನಿಸುತ್ತದೆ. ಏಕೆಂದರೆ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಶತತಂತ್ರೀ ವೀಣಾ ಎಂದು ಸಂತೂರನ್ನು ವಿವರಿಸಿರುವುದು ಎಲ್ಲ ರೀತಿಯಲ್ಲೂ ಹೆಚ್ಚು ಸಮಂಜಸವೆನಿಸುತ್ತದೆ. ಆದರೆ ಶತತಂತ್ರೀ ವೀಣೆಯಿಂದ ಸಂತೂರ್ ಉಗಮವಾಗಿದೆ ಅನ್ನುವುದನ್ನು ಸಮರ್ಥಿಸುವುದಕ್ಕೆ ಸೂಕ್ತವಾದ ದಾಖಲೆಗಳು ಲಭ್ಯವಿಲ್ಲ. ಹಾಗಾಗಿ ವಿದ್ವಾಂಸರು ಈ ವಾದವನ್ನು ಒಪ್ಪುವುದಿಲ್ಲ.
ಜಮ್ಮು ಪ್ರಾಂತ್ಯದ ಪ್ರತಿಷ್ಠಿತ ಸಂಗೀತ ಕುಟುಂಬದಲ್ಲಿ ಪಂಡಿತ್ ಶಿವಕುಮಾರ್ ಶರ್ಮ ೧೯೩೮ರಲ್ಲಿ ಜನಿಸಿದರು. ಅವರ ತಂದೆ ಉಮಾಶಂಕರ್ ಪಂಜಾಬ್ ಘರಾನೆಯ ತಬಲಾವಾದಕರಾಗಿದ್ದರು. ಜೊತೆಗೆ ಅವರು ಗುರು ಬಡೇ ರಾಮದಾಸ್‌ಜೀ ಅವರಲ್ಲಿ ಬನಾರಸ್ ಘರಾನೆಯ ಗಾಯನಯಲ್ಲೂ ತಾಲೀಮು ಪಡೆದಿದ್ದರು. ಸಹಜವಾಗಿಯೇ ಶಿವಕುಮಾರರಿಗೆ ಗಾಯನ ಮತ್ತು ತಬಲಾವಾದನಗಳಲ್ಲಿ ತರಬೇತಿ ದೊರಕಿತು. ತಮ್ಮ ಹದಿಹರೆಯದಲ್ಲಿಯೇ ಅವರು ರಾಷ್ಟ್ರೀಯ ಖ್ಯಾತಿಯ ತಬಲಾವಾದಕರಾಗಿದ್ದರು. ಅವರ ತಂದೆಯ ಪ್ರೋತ್ಸಾಹದಿಂದ ಸಂತೂರ್‌ವಾದನವನ್ನು ಪ್ರಾರಂಭಿಸಿದರು.
ಕಾಶ್ಮೀರ ಆಕಾಶವಾಣಿಯಲ್ಲಿ ಪ್ರಧಾನ ನಿರ್ಮಾಪಕರಾಗಿದ್ದ ಪಂಡಿತ್ ಉಮಾದತ್ತರಿಗೆ ಅಲ್ಲಿ ಸಂತೂರ್ ಕೇಳಿದಾಗ ತನ್ನ ಮಗ ಈ ಸಂತೂರ್ ನುಡಿಸಬಲ್ಲ, ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಬಲ್ಲ ಎಂದೆನಿಸಿತ್ತು. ಆ ಹಂತದಲ್ಲಿ ಸಂತೂರ್ ಒಂದು ವಾದ್ಯವಾಗಿ ಸ್ವಲ್ಪವೂ ಪರಿಷ್ಕೃತಗೊಂಡಿರಲಿಲ್ಲ. ಅದು ಕೇವಲ ಧ್ವನಿಯನ್ನು ಹೊರಡಿಸಬಲ್ಲ ಒಂದು ಯಂತ್ರದಂತಿತ್ತು. ರಾಗಪ್ರಧಾನ ಸಂಗೀತವನ್ನು ನುಡಿಸುವುದಕ್ಕೆ ಅನುಕೂಲಕರವಾಗಿರಲಿಲ್ಲ. ಜೊತೆಗೆ ಆಧುನಿಕ ಎಲೆಕ್ಟ್ರಾನಿಕ್ ಧ್ವನಿವರ್ಧಕದ ಮೂಲಕ ಸಂಗೀತ ಅಭಿವ್ಯಕ್ತಿಸುವುದಕ್ಕೆ ಅದು ಸೂಕ್ತವಾಗಿರಲಿಲ್ಲ. ಆದರೆ ಶಿವಕುಮಾರ್ ಈ ಒರಟಾಗಿದ್ದ ವಾದ್ಯವನ್ನು ತಮ್ಮ ಸಂಗೀತಕ್ಕೆ ಸೂಕ್ತವಾಗುವಂತೆ ಮಾರ್ಪಡಿಸಿಕೊಂಡು ಕಲಾಸಂಗೀತದ ವೇದಿಕೆಗಳಲ್ಲಿ ಸಂತೂರ್ ನುಡಿಸಲಾರಂಭಿಸಿದರು. ತಮ್ಮ ವಾದ್ಯದ ಹೊಸತನ ಮತ್ತು ಮೋಹಕ ನಾದದಿಂದ ಆರಂಭದಲ್ಲಿ ಅವರು ಸಿನಿಮಾ ಉದ್ಯಮವನ್ನು ಮೋಡಿ ಮಾಡಿದ್ದರು. ಹಾಗಿದ್ದಾಗಲೂ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಈ ವಾದ್ಯದ ಸಾಮರ್ಥ್ಯದ ಬಗ್ಗೆ ತುಂಬಾ ಅನುಮಾನಗಳಿದ್ದವು. ಏಕೆಂದರೆ ಅದರಲ್ಲಿ ರಾಗಸಂಗೀತವನ್ನು ನುಡಿಸುವುದಕ್ಕೆ ಸಾಧ್ಯವಿರಲಿಲ್ಲ. ಶಿವಕುಮಾರ್ ಶರ್ಮ ಈ ವಾದ್ಯವನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಅಭಿಜಾತ ಸಂಗೀತದ ಅರಿವುಳ್ಳ ಕೇಳುಗರ ನಿರೀಕ್ಷೆಗೆ ಅನುಗುಣವಾಗಿ ಹೊಸವಾದನ ತಂತ್ರಗಳನ್ನು ರೂಪಿಸಿದರು. ಅದನ್ನು ಶ್ರುತಿಮಾಡುವ ಕ್ರಮವನ್ನು ಬದಲಿಸಿದರು. ಅದನ್ನು ನುಡಿಸಲು ಕೂರುವ ಭಂಗಿಯನ್ನು ಮತ್ತು ಅದನ್ನು ನಿರ್ವಹಿಸುವ ಕ್ರಮವನ್ನೂ ಬದಲಿಸಿದರು. ಸಾಂಪ್ರದಾಯಿಕವಾಗಿ ಇದ್ದ ನಾಲ್ಕು ತಂತಿಗಳ ಸಮೂಹವನ್ನು ಬದಲಿಸಿ ಅದನ್ನು ಮೂರು ತಂತಿಗಳ ಮತ್ತು ಎರಡು ತಂತಿಗಳ ಗುಂಪಾಗಿ ಮಾಡಿಕೊಂಡರು. ಜೊತೆಗೆ ಅವರು ಹೊಸದಾಗಿ ಒಂದು ಚಿಕಾರಿ ತಂತಿಗಳ ಸಮೂಹವನ್ನೂ ರೂಪಿಸಿದರು. ಈ ಬದಲಾವಣೆಗಳ ಮೂಲಕ ಅವರು ತಾವು ಬಯಸುವ ಪರಿಷ್ಕೃತ ಸಂಗೀತವನ್ನು ಸಂತೂರ್‌ನಲ್ಲಿ ಮೂಡಿಸಿದರು. ಇದಾದ ಮೇಲೆ ಅವರು ನಾದ ಹೆಚ್ಚು ಹೊತ್ತು, ಉತ್ತಮವಾಗಿ ಉಳಿಯುವಂತೆ ಮಾಡಲು, ಮತ್ತು ನುಡಿಸುವಾಗ ನಾದದ ಹರಿವು ನಿರಂತರವಾಗಿರುವಂತೆ ಮಾಡಲು ಮತ್ತು ನಾದಗುಣವನ್ನು ಹಾಗೂ ಸರೋದ್ ಮತ್ತು ಸಿತಾರ್‌ಗಳ ವಿಭಿನ್ನ ಚಲನ್‌ಗಳ ವಾಲ್ಯೂಮ್ ಹೆಚ್ಚಿಸಲು ಅದನ್ನು ಮೀಟುವ ಕಲೆಯನ್ನು ಪ್ರಮಾಣಬದ್ಧಗೊಳಿಸಿದರು.
ಶಿವಕುಮಾರ್ ಶರ್ಮ ಅವರು ಬಾನ್ಸುರೀವಾದಕ ಹರಿಪ್ರಸಾದ್ ಚೌರಾಸಿಯಾ ಹಾಗೂ ಹವಾಯಿಯನ್ ಗಿಟಾರ್‌ವಾದಕ ಬ್ರಿಜ್‌ಭೂಷಣ್ ಕಬ್ರಾ ಇವರ ಸಹಯೋಗದಲ್ಲಿ ಇಪ್ಪತ್ತನೇ ಶತಮಾನದ ಕೆಲವು ಅವಿಸ್ಮರಣೀಯವಾದ ಸಂಗೀತದ ಆಲ್ಬಂಗಳನ್ನು ಮುದ್ರಿಸಿದ್ದಾರೆ. ೧೯೬೮ರಲ್ಲಿ ಈ ಮೂವರೂ ಸೇರಿ ಮಾಣಿಕ್‌ರಾವ್ ಪೋಪಟ್ ಅವರ ತಬಲಾ ಸಹಕಾರದಲ್ಲಿ “Call of The Valley” ಎಂಬ ಆಲ್ಬಂ ಹೊರತಂದರು. ಅದು ಅಷ್ಟೊಂದು ವರ್ಷಗಳ ಕಾಲ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಏಕೈಕ ಶಾಸ್ತ್ರೀಯ ಸಂಗೀತದ ಧ್ವನಿಮುದ್ರಿಕೆ. ತಬಲಾ ಮಾಂತ್ರಿಕ ಜ಼ಾಕಿರ್ ಹುಸೇನ್ ಜೊತೆಗಿನ ಆತ್ಮೀಯ ಪ್ರಯೋಗಗಳ ಮೂಲಕ, ಸಂಗೀತಗಾರರು ಮತ್ತು ಅವರ ತಬಲಾ ಸಾಥಿಗಳ ನಡುವೆ ಸೌಹಾರ್ದತೆಯ ಹೊಸ ಮಾನದಂಡವನ್ನೇ ಇವರು ನಿರ್ಮಿಸಿದರು. ಡರ್, ಸಿಲ್‌ಸಿಲಾ, ಲಮ್ಹೆ ಮುಂತಾದ ಸಿನಿಮಾಗಳಿಗೆ ಅವರು ನೀಡಿರುವ ಸಂಗೀತ ತುಂಬಾ ಹೆಸರು ಮಾಡಿತು.
ಶಿವಕುಮಾರ್ ಶರ್ಮರಿಗೆ ಸಾಕಷ್ಟು ಪುರಸ್ಕಾರಗಳೂ ಸಂದಿವೆ. ಪದ್ಮಶ್ರೀ, ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ಜಮ್ಮು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಉಸ್ತಾದ್ ಹಫೀಜ಼್ ಅಲಿಖಾನ್ ಪ್ರಶಸ್ತಿ, ಮಹಾರಾಷ್ಟ್ರ ಸರ್ಕಾರದ ಗೌರವ ಪುರಸ್ಕಾರ ಹೀಗೆ ಅವರ ಮುಡಿಗೇರಿರುವ ಪ್ರಶಸ್ತಿಗಳ ಗರಿಗಳು ಹಲವಾರು. ಅವರಿಗೆ ಅಮೆರಿಕೆಯ ಬಾಲ್ಟಿಮೋರ್ ನಗರದ ಗೌರವ ನಾಗರಿಕ ಸದಸ್ಯತ್ವನ್ನೂ ನೀಡಲಾಗಿದೆ.
ಶರ್ಮ ಅವರ ಸಂಗೀತ
ಶರ್ಮ ಅವರಿಗೆ ರಾಗದ ಮೇಲಿರುವ ಅಸಾಧಾರಣ ಹಿಡಿತ ಅವರ ಸಂಗೀತದ ಘನತೆಯನ್ನು ಹೆಚ್ಚಿಸಿದೆ. ಅವರು ತಮ್ಮ ವಾದ್ಯದ ಘನತೆಯನ್ನು ಹೆಚ್ಚಿಸುವುದಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ. ತುಂಬಾ ಸಾಮಾನ್ಯ ಬಳಕೆಯ ಪರಿಚಿತ ರಾಗಗಳೇ ಇರಲಿ, ಅಥವಾ ಅಪರೂಪದ ಕ್ಲಿಷ್ಟ ರಾಗಗಳೇ ಇರಲಿ, ಅವರು ಎಂದೂ ರಾಗದ ವ್ಯಾಕರಣಕ್ಕೆ, ಸಂಪ್ರದಾಯಕ್ಕೆ ಚ್ಯುತಿ ಉಂಟುಮಾಡಿಲ್ಲ.
೧೯೫೦ರ ದಶಕದಲ್ಲಿ ಸಿತಾರ್ ಮತ್ತು ಸರೋದ್ ವಾದನದಲ್ಲಿ ಬಳಸುತ್ತಿದ್ದ ಶೈಲಿಯನ್ನು ಆಧರಿಸಿ ಶರ್ಮ ಅವರು ತಮ್ಮ ಸಂಗೀತ ಶೈಲಿಯನ್ನು ರೂಪಿಸಿಕೊಂಡರು. ಆ ಕಾಲದ ಪರಿಪಾಠದಂತೆ ಅವರು ಕೂಡ ಹೆಚ್ಚಾಗಿ ತೀನ್ ತಾಲ್‌ನಲ್ಲಿ ನಿಬದ್ಧವಾದ ಬಂದಿಶ್‌ಗಳನ್ನೇ ಹೆಚ್ಚು ಅವಲಂಬಿಸಿದರು. ನಂತರದ ದಿನಗಳಲ್ಲಿ ಅವರು ಹೆಚ್ಚೆಚ್ಚು ಝಪ್‌ತಾಲ್ ಮತ್ತು ರೂಪಕ್‌ತಾಲ್‌ನ ಬಂದಿಶ್‌ಗಳನ್ನು ಬಳಸಲಾರಂಭಿಸಿದರು. ಅವರನ್ನು ಸಂದರ್ಶಿಸುತ್ತಿದ್ದಾಗ ಪರಿಣಾಮಕಾರಿಯಾಗಬೇಕು ಎನ್ನುವ ತವಕದಲ್ಲಿ ಲಯದತ್ತ ವಾಲುವ ಪ್ರವೃತ್ತಿ ಸಂತುರ್ ವಾದ್ಯದಲ್ಲೇ ಇದೆ. ಆದರೆ ನಾನು ರಾಗ ಲಯಗಳ ಒಂದು ಹದವಾದ ಸಮತೋಲವನ್ನು ಸಿದ್ಧಿಸಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ಸದಾ ಪ್ರಯತ್ನಿಸುತ್ತಿದ್ದೇನೆ. ಯಾವುದೂ ಮೇಲುಗೈ ಸಾಧಿಸಬಾರದು ಎನ್ನುವುದು ನನ್ನ ಉದ್ದೇಶ ಎಂದು ಹೇಳಿದರು.
ಇನ್ನು ರಾಗವಿಸ್ತಾರದಲ್ಲಿ ಶರ್ಮ ಅವರು ಸಿತಾರಿಗಿಂತ ಹೆಚ್ಚಾಗಿ ಸರೋದ್‌ವಾದನದ ಆಧುನಿಕ ನುಡಿಸಾಣಿಕೆಯನ್ನು ಹೆಚ್ಚು ಬಳಸಿಕೊಳ್ಳುತ್ತಾರೆ. ಇದು ತೀರಾ ನಿರೀಕ್ಷಿತ. ಏಕೆಂದರೆ ಸರೋದ್ ಕೂಡ ರಾಗಪ್ರಸ್ತುತಿಗೆ ಹಲವು ತಂತಿಗಳನ್ನು ಬಳಸಿಕೊಳ್ಳುವ ವಾದ್ಯ. ಇನ್ನು ಸರೋದ್‌ನ ಮೀಟುಗಳಲ್ಲಿ ತಾಳವಾದ್ಯಗಳಂತೆ ತಾಡನದ ಕ್ರಮವಿದೆ. ಇದು ಸಿತಾರಿನಲ್ಲಿ ಇಲ್ಲ. ಈ ಅಂಶಗಳನ್ನು ಚೆನ್ನಾಗಿ ದುಡಿಸಿಕೊಳ್ಳುವುದಕ್ಕಾಗಿ ಉಸ್ತಾದ್ ಅಲಿ ಅಕ್ಬರ್‌ಖಾನ್ ಅವರು ಸಾಂಪ್ರದಾಯಿಕ ಚಲನ್‌ಗಳಿಂದ (phrasing) ಸರೋದ್‌ಅನ್ನು ಮುಕ್ತಗೊಳಿಸಿ, ಜಟಿಲ ಹಾಗೂ ವೈವಿಧ್ಯಮಯ ವಿನ್ಯಾಸಗಳನ್ನು ಸರೋದ್‌ನಲ್ಲಿ ನುಡಿಸಿದರು. ಈ ರೀತಿಯ ವಿನ್ಯಾಸದಲ್ಲಿ ಸ್ವರಗಳನ್ನು ಜೋಡಿಯಾಗಿ ಅಥವಾ ಪ್ರತ್ಯೇಕವಾಗಿ ಎದುರುಬದುರು ಇಡುವ ಕೂತೂಹಲಕಾರಿಯಾದ ಕ್ರಮವನ್ನು ನೋಡಬಹುದು. ಇದು ಸಾಮಾನ್ಯವಾಗಿ ಯಾದೃಚ್ಛಿಕವಾಗಿರುತ್ತದೆ. ಹೀಗೆ ನುಡಿಸುವ ಸ್ವರ ಅಥವಾ ಸ್ವರಗಳೆಲ್ಲವೂ ಆ ರಾಗದ ಸ್ವರಗಳೇ ಆಗಿರುತ್ತವೆ. ಆದರೆ ಅವುಗಳ ಅನುಕ್ರಮ ಹಾಗೂ ಅವುಗಳ ನಡುವಿನ ಅಂತರ ಆ ರಾಗಗಳ ಸ್ವರೂಪಕ್ಕೆ ಅನುಗುಣವಾಗಿಯೇ ಇರಬೇಕೆಂದಿಲ್ಲ. ಒಂದರ್ಥದಲ್ಲಿ ಅದು ರಾಗವನ್ನು ಅವಲಂಬಿಸಿರುವುದಿಲ್ಲ.
ಈ ವಿನ್ಯಾಸಗಳು ಸಂತೂರಿಗೆ ಹೇಳಿ ಮಾಡಿಸಿದಂತಿದ್ದವು. ಏಕೆಂದರೆ ಸಂತೂರಿನಲ್ಲಿ ಪ್ರತಿಯೊಂದು ಸ್ವರಕ್ಕೂ ಅದರದ್ದೇ ಆದ ತಂತಿಗಳ ಗುಚ್ಛವಿರುತ್ತದೆ. ಇದರಿಂದ ಈ ವಾದ್ಯಕ್ಕೆ ಮೊದಲೇ ಇರುವ ತಬ್ಬಿಬ್ಬುಗೊಳಿಸುವ ಗುಣ ಮತ್ತಷ್ಟು ಹೆಚ್ಚಾಗುತ್ತದೆ. ಖಾನ್ ಸಾಹೇಬರು ವಾದ್ಯಸಂಗೀತಕ್ಕೆ ಗಾಯನ ಶೈಲಿಯನ್ನೇ ಆಧರಿಸುವ ಸಾಂಪ್ರದಾಯಿಕ ಪರಿಪಾಠವನ್ನು ಕೊನೆಗೊಳಿಸಿದರು. ಜಟಿಲ ಹಾಗೂ ವೈವಿಧ್ಯಮಯ ವಿನ್ಯಾಸಗಳನ್ನು ಸಂತೂರಿಗೆ ಅಳವಡಿಸುವದರ ಮೂಲಕ ಶಿವಕುಮಾರ್ ಶರ್ಮ ಅವರು ಉಸ್ತಾದ್ ಅಲಿ ಅಕ್ಬರ್‌ಖಾನ್ ಅವರು ಪ್ರಾರಂಭಿಸಿದ ಈ ಪ್ರಕ್ರಿಯೆಯನ್ನು ಮತ್ತಷ್ಟು ತ್ವರೆಗೊಳಿಸಿದರು. ಒಂದು ವಿಶಾಲವಾದ ಚಾರಿತ್ರಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಗಮನಿಸಿದರೆ ಇದು ಹಿಂದುಸ್ತಾನಿ ಸಂಗೀತಕ್ಕೆ ಶಿವಕುಮಾರ್ ಶರ್ಮ ಅವರ ಹಾಗೂ ಸಂತೂರಿನ ಬಹು ದೊಡ್ಡ ಕೊಡುಗೆ ಎನ್ನಬಹುದು.
ಈಗ ಪಂಡಿತ್ ಶಿವಕುಮಾರ್ ಶರ್ಮಾ ನಮ್ಮ ನಡುವಿಲ್ಲ. ಅವರನ್ನು ಕುರಿತು ರಾಗಮಾಲಾ ಪ್ರಕಾಶನದ ನಾದಬಿಂಬ ಎಂಬ ಕೃತಿಯಲ್ಲಿ ನಾವು ಅನುವಾದಿಸಿ ಪ್ರಕಟಿಸಿದ್ದ ದೀಪಕ್ ರಾಜ ಅವರ ಲೇಖನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.