Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ

ಶೈಲಜಾ ಮತ್ತು ವೇಣುಗೋಪಾಲ್

 

೧೯೨೦ರಲ್ಲಿ ಜನವರಿ ೧೪ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು ಕೇಳಿಕೊಂಡೇ ಬೆಳೆದವರು ಶ್ರೀಕಂಠನ್.  ಅವರ ಅಜ್ಜ, ತಂದೆ ಹಾಗೂ ಹಿರಿಯ ಸಹೋದರರೆಲ್ಲರೂ ಸಂಗೀತಕ್ಕಾಗಿ ಶ್ರಮಿಸಿದವರೆ.  ಅವರ ತಾಯಿಯ ತಂದೆ ಬೆಟ್ಟದಪುರ ನಾರಾಯಣಸ್ವಾಮಿಯವರು ವೈಣಿಕರು ಹಾಗೂ ಗಾಯಕರು; ಮೂಗೂರು ಸುಬ್ಬಣ್ಣನವರ ಶಿಷ್ಯರು.  ಶ್ರೀಕಂಠನ್ ಅವರ ತಂದೆ ರುದ್ರಪಟ್ಟಣ ಕೃಷ್ಣಶಾಸ್ತ್ರಿಗಳು ಸಂಗೀತಗಾರರು, ಹರಿಕಥಾವಿದ್ವಾಂಸರು, ನಾಟಕಕಾರರು ಮತ್ತು ಸಂಸ್ಕೃತ ಪಂಡಿತರೂ ಆಗಿದ್ದರು.  ಶ್ರೀಕಂಠನ್ ಅವರ ಹಿರಿಯಣ್ಣ ಆರ್.ಕೆ. ವೆಂಕಟರಾಮಾಶಾಸ್ತ್ರಿಗಳು ಚೌಡಯ್ಯನವರ ಶಿಷ್ಯರು, ಹೆಸರಾಂತ ಪಿಟೀಲು ವಿದ್ವಾಂಸರು.  ಮತ್ತೊಬ್ಬ ಅಣ್ಣ ನಾರಾಯಣಸ್ವಾಮಿಯವರು ಮುಸಿರಿಯವರ ಶಿಷ್ಯರು ಹಾಗೂ ಒಳ್ಳೆಯ ಗಾಯಕರು.  ಮತ್ತೊಬ್ಬ ಸಹೋದರ ಅರ್.ಕೆ. ರಾಮನಾಥನ್ ಆಂಗ್ಲಭಾಷಾ ಉಪನ್ಯಾಸಕರು ಮತ್ತು ಹಾಡುಗಾರರು.
ಈ ಸಂಗೀತ ವಾತಾವರಣವು ಶ್ರೀಕಂಠನ್ ಅವರ ಸಂಗೀತಕ್ಕೆ ಪೂರಕವಾಗಿದ್ದು ಹೌದಾದರೂ ವಿದ್ವಾನ್ ಎಂ.ಎ. ನರಸಿಂಹಾಚಾರ್ ಹೇಳುವಂತೆ “ಶ್ರೀಕಂಠನ್ ಅವರು ಸ್ವಂತ ಪರಿಶ್ರಮದಿಂದ ರೂಪುಗೊಂಡವರು ಮತ್ತು  ನಮ್ಮೆಲ್ಲರ ಅಭಿನಂದನೆ ಮತ್ತು ಮೆಚ್ಚುಗೆ ಅವರಿಗೆ ಸಲ್ಲಬೇಕಾದದ್ದು ಅದೇ ಕಾರಣಕ್ಕೆ.”
ಶ್ರೀಕಂಠನ್ ಅವರು ಏಳನೆ ವಯಸ್ಸಿನಲ್ಲಿ ಆರಂಭದ ಶಿಕ್ಷಣವನ್ನು ತಮ್ಮ ತಂದೆ ಮತ್ತು ಸಹೋದರ ವೆಂಕಟರಾಮಾಶಾಸ್ತ್ರಿಯವರಲ್ಲಿ ಪಡೆದರು.  “ನನ್ನ ಸಹೋದರ ನನಗೆ ಮಹಾನ್ ವಾಗ್ಗೇಯಕಾರರ ಹಲವಾರು ಕೃತಿಗಳನ್ನು ಕಲಿಸಿದರು.  ರಾಗದ ಸಾರ, ಕೃತಿಯ ರಚನೆ ಹಾಗೂ ಅದರ ಪಾಠಾಂತರ ಮನನ ಆಗುವವರಗೆ ನಾನು ಅದನ್ನು ಪದೇ ಪದೇ ಹಾಡುತ್ತಿದ್ದೆ.  ಆದರೆ ಕಛೇರಿ ಕೇಳುವಾಗ ಹೀಗೆ ಮಾಡಲಾಗುತ್ತಿರಲಿಲ್ಲ ಹಾಗಾಗಿ ಸ್ವರಪ್ರಸ್ತಾರವನ್ನು ಬರೆದುಕೊಳ್ಳುತ್ತಿದ್ದೆ.  ಅವರು ಮದ್ರಾಸಿಗೆ ಹೋದಮೇಲೆ ಅಲ್ಲಿಂದ ನನಗೆ ಕೃತಿಗಳನ್ನು ಕಳಿಸಿಕೊಡುತ್ತಿದ್ದರು.  ಅದನ್ನು ಅಭ್ಯಾಸ ಮಾಡುತ್ತಿದ್ದೆ”  ಈ ನಡುವೆ ಮದ್ರಾಸಿನಲ್ಲಿ ನೆಲೆಸಿದ್ದ ವೆಂಕಟರಾಮಾಶಾಸ್ತ್ರಿಗಳಿಂದಾಗಿ ಶ್ರೀಕಂಠನ್ ಅವರಿಗೆ  ಮದ್ರಾಸ್ ಕಾರ್ಪೋರೇಷನ್ ರೇಡಿಯೋದಲ್ಲಿ ಮಾಸ್ಟರ್ ಶ್ರೀಕಂಠನ್ ಎಂದು ಮೊದಲ ಕಾಂಟ್ರಾಕ್ಟ್ ದೊರಕಿತು.  ಆಕಾಶವಾಣಿಯ ಧ್ವನಿಮುದ್ರಣಕ್ಕೆ ಹೋದಾಗ ಕಲಿತ ಕೃತಿಗಳನ್ನು ಅಣ್ಣನಿಗೆ ಹಾಡಿ ತೋರಿಸುತ್ತಿದ್ದರು.
ಅಣ್ಣ ವೆಂಕಟರಾಮಾಶಾಸ್ತ್ರಿಯವರ ಮನೆಗೆ ಹೋದಾಗ ಅರಿಯಾಕುಡಿ, ಮಹಾರಾಜಪುರಂ, ಮುಸಿರಿ, ಶೆಮ್ಮಂಗುಡಿ ಮುಂತಾದ  ಪ್ರಖ್ಯಾತ ವಿದ್ವಾಂಸರ ಜೊತೆಗಿನ ಒಡನಾಟ ದೊರಕಿತು. ಅವರಿಂದ ಅಮೂಲ್ಯ ಕೃತಿಗಳ ಪಾಠಾಂತರದ ಸಂಗ್ರಹ ಸಾಧ್ಯವಾಯಿತು.  ಅವರನ್ನು ಹಾಡುವಂತೆ ಕೇಳಿಕೊಂಡು ಅವರು ಹಾಡಿದಾಗ ಅದರ ಸ್ವರಪ್ರಸ್ತಾರವನ್ನು ಗುರುತು ಹಾಕಿಕೊಳ್ಳುತ್ತಿದ್ದರು.  ಅದನ್ನು ಅಭ್ಯಾಸಮಾಡಿ ಮತ್ತೆ ಅವರನ್ನು ಭೇಟಿಮಾಡಿದಾಗ ಅದನ್ನು ಅವರ ಮುಂದೆ ಹಾಡುತ್ತಿದ್ದರು.  ಹಿರಿಯರ ಹಾಡಿಕೆಯನ್ನು ಹೀಗೆ ನಿರಂತರವಾಗಿ ಕೇಳುತ್ತಿದ್ದುದು ಅವರ ಕೇಳುವಿಕೆಯನ್ನು ಮತ್ತು ಗ್ರಹಿಕೆಯನ್ನು ತುಂಬಾ ಚುರುಕುಗೊಳಿಸಿ ಸೂಕ್ಷ್ಮಗೊಳಿಸಿತು.  ಆತ್ಮವಿಮರ್ಶೆ, ತಮ್ಮ ಸಂಗೀತವನ್ನು ಪರಿಷ್ಕರಿಸಿಕೊಳ್ಳುವ ನಿರಂತರ ಪ್ರಯತ್ನ ಹಾಗೂ ಎಡೆಬಿಡದ ಸ್ವಂತ ಸಾಧನೆ ಇವು ಅವರಿಗೆ ಒಂದು ಸ್ವಂತ ಶೈಲಿಯನ್ನು ರೂಪಿಸಿಕೊಳ್ಳುವುದಕ್ಕೆ ಸಹಕಾರಿಯಾಯಿತು.
ಸಂಗೀತದ ಜೊತೆಯಲ್ಲೇ ಅವರ ಶಾಲಾ ವಿದ್ಯಾಭ್ಯಾಸವೂ ಸಾಗಿತು.  ಸದ್ವಿದ್ಯಾ ಪಾಠಶಾಲೆ, ಬನುಮಯ್ಯ ಪ್ರೌಢಶಾಲೆಗಳಲ್ಲಿ ಕಲಿತವರು, ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದರು.  ಈ ಶಿಕ್ಷಣವು ಇಂಗ್ಲೀಷ್ ಮತ್ತು ಕನ್ನಡಭಾಷೆಗಳಲ್ಲಿ ಅವರಿಗೆ ಒಳ್ಳೆಯ ಪ್ರೌಢಿಮೆಯನ್ನು ಗಳಿಸಿಕೊಟ್ಟು ಮುಂದೆ ಅವರು ಒಬ್ಬ ಒಳ್ಳೆಯ ಶಾಸ್ತ್ರಜ್ಞರಾಗಲು ಸಹಾಯಕವಾಯಿತು. ಶಿಕ್ಷಣ ಮುಗಿಸಿದ ಶ್ರೀಕಂಠನ್ ಅವರು ಬೇರೆ ಕೆಲಸವನ್ನು ಹುಡುಕುವ ಗೋಜಿಗೆ ಹೋಗದೆ ಸಂಗೀತವನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಲು ನಿರ್ಧರಿಸಿದರು.  ಬಿವಿಕೆ ಶಾಸ್ತ್ರಿಯವರು ತಿಳಿಸುವಂತೆ “ಕರ್ನಾಟಕದಲ್ಲಿ ಆ ಕಾಲಕ್ಕೆ ಇದ್ದ ಪರಿಸ್ಥಿತಿಯನ್ನು ಗಮನಿಸಿದರೆ ಶ್ರೀಕಂಠನ್ ಅವರ ನಿಲುವು ತುಂಬಾ ಧೈರ್ಯದ ನಿರ್ಧಾರವಾಗಿತ್ತು.  ಕಛೇರಿಗಳಿಂದ ಬರುವ ಆದಾಯ ತೀರಾ ಕಡಿಮೆ ಇರುತ್ತಿತ್ತು.  ಹಾಗಾಗಿ ಸಂಗೀತವನ್ನೇ ವೃತ್ತಿಯನ್ನಾಗಿ ಆರಿಸಿಕೊಂಡವರಿಗೆ ಅಧ್ಯಾಪನ ಒಂದು ಪರ್ಯಾಯವಾಗಿತ್ತು.”  ಶ್ರೀಕಂಠನ್ ಅವರು ಮಾಡಿದ್ದು ಕೂಡ ಅದೇ.  ಸರಳವಾದ ಬದುಕಿನ ಕ್ರಮದಿಂದಾಗಿ ತಮಗೆ ಬರುತ್ತಿದ್ದ ಆದಾಯದಿಂದಲೇ ಬದುಕನ್ನು ತೂಗಿಸುವುದು ಸುಲಭವಾಯ್ತು.  ಅದೃಷ್ಟವಶಾತ್ ಆ ಸಮಯದಲ್ಲಿ ಶ್ರೀಕಂಠನ್ ಅವರಿಗೆ ಮೈಸೂರ್ ಬ್ರಾಡ್‌ಕಾಸ್ಟಿಂಗ್ ಸ್ಟೇಷನ್‌ನಲ್ಲಿ ಸಂಗೀತ ಕಲಿಸುವ ಗುರುಗಳಾಗಿ ಕೆಲಸ ದೊರಕಿತು.  ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟು ಅದು ಆಕಾಶವಾಣಿಯಾದ ನಂತರ ಸುಮಾರು ೪೦ರ ದಶಕದಲ್ಲಿ ಶ್ರೀಕಂಠನ್ ಅವರು ವರ್ಗವಾಗಿ ಬೆಂಗಳೂರಿಗೆ ಬಂದು ನೆಲಸಿದರು.
ಶ್ರೀಕಂಠನ್ ಅವರು ಆಕಾಶವಾಣಿಗೆ ಸೇರಿದ್ದು ಅವರ ಸಂಗೀತ ಮತ್ತು ವ್ಯಕ್ತಿತ್ವವನ್ನು ರೂಪಿಸುವ ದೃಷ್ಟಿಯಿಂದ ಒಂದು ಮಹತ್ತರವಾದ ಘಟ್ಟ.    ಆಕಾಶವಾಣಿಯಲ್ಲಿ ನಿರಂತರವಾಗಿ ಕಿವಿಯ ಮೇಲೆ ಬೀಳುತ್ತಿದ್ದ ಹಿರಿಯರ ಘನವಾದ ಸಂಗೀತ ಮತ್ತು ಅವರ ಜೊತೆಗಿನ ನಿಕಟವಾದ ಒಡನಾಟ ಇವುಗಳಿಂದಾಗಿ ಅವರ ಸಂಗೀತ ಪರಿಷ್ಕೃತಗೊಂಡು ಮೆರುಗನ್ನು ಗಳಿಸಿ, ವಿಸ್ತಾರ ಹಾಗೂ ಗಾಂಭೀರ್ಯವನ್ನು ಪಡೆದುಕೊಂಡಿತು.
ಹಲವಾರು ಬಗೆಯ ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕಾದ ಸಂದರ್ಭಗಳು ಅಲ್ಲಿ ಒದಗಿಬಂದವು.  ಸಂಗೀತದ ವಿವಿಧ ಪ್ರಕಾರಗಳಲ್ಲಿ ಪ್ರಯೋಗ ಮಾಡುವ ಅಪರೂಪದ ಅವಕಾಶ ಅವರಿಗೆ ದೊರಕಿತು.  ಅನೇಕ ಪರಿಚಿತ ಹಾಗೂ ಅಪರಿಚಿತ ಕೃತಿ, ರಾಗ, ತಾಳಗಳನ್ನು ಕುರಿತು ರೂಪಕಗಳನ್ನು ಮಾಡಿದರು.  ಶಿವಶರಣರ ವಚನಗಳಿಗೆ, ಹರಿದಾಸರ ಪದಗಳಿಗೆ, ನಾರಾಯಣತೀರ್ಥರ ’ಕೃಷ್ಣಲೀಲಾ ತರಂಗಿಣಿ’ಯ ರುಕ್ಮಿಣೀ ಕಲ್ಯಾಣಕ್ಕೆ ಸಂಬಂಧಿಸಿದ ತರಂಗಗಳಿಗೆ, ಜೊತೆಗೆ ಬೇಂದ್ರೆ, ಡಿವಿಜಿ, ಮಾಸ್ತಿ, ಪುತಿನ, ಮುಂತಾದ ಸಮಕಾಲೀನ ಕವಿಗಳ ಕವಿತೆಗಳಿಗೆ ರಾಗ ಸಂಯೋಜಿಸುವ ಅವಕಾಶ ಅವರಿಗೆ ದೊರಕಿತು.  ಇದು ಅವರ ಅಧ್ಯಯನಶೀಲತೆ ಮತ್ತು ಅನುಭವವನ್ನು ಮತ್ತಷ್ಟು ವಿಸ್ತರಿಸಿತು.  “ಈ ಪ್ರಯೋಗಶೀಲತೆಯಿಂದಾಗಿ ಸಂಗೀತದ ಲಕ್ಷಣದಲ್ಲಿ ಅವರು ತುಂಬಾ ಗಟ್ಟಿಗರಾದರು.  ಹಾಗಾಗಿಯೇ ಅವರ ಪ್ರಾತ್ಯಕ್ಷಿಕೆಗಳು ವಿದ್ವತ್‌ಪೂರ್ಣವಾಗಿ ಹಾಗೂ ಮಾರ್ಗದರ್ಶಕವಾಗಿ ಇರುತ್ತಿದ್ದವು” (ಬಿವಿಕೆ ಶಾಸ್ತ್ರಿ).
ಹೀಗೆ ದೊರಕಿದ ಸಂದರ್ಭದಿಂದಾಗಿ ಸಂಗೀತದ ವಿವಿಧ ಪ್ರಕಾರಗಳು ಮತ್ತು ರಾಗಸಂಯೋಜನೆಯನ್ನು ಕುರಿತು ತುಂಬಾ ತಾತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಚಿಂತನೆ ಮಾಡಲು ಅವರು ಪ್ರಾರಂಭಿsಸಿದರು.  ಭಾವಗೀತೆ ಹಾಗೂ ಹರಿದಾಸರ ಪದಗಳಿಗೆ ರಾಗ ಸಂಯೋಜನೆ ಹೇಗಿರಬೇಕು ಎನ್ನುವುದನ್ನು ಕುರಿತು ಒಂದು ಸ್ಪಷ್ಟವಾದ ಕಲ್ಪನೆಯನ್ನು ರೂಪಿಸಿಕೊಂಡರು. ” ಭಾವಗೀತೆಗೆ ಸ್ವರಸಂಯೋಜನೆ ಮಾಡಬೇಕಾದಾಗ, ಶಾಸ್ತ್ರೀಯ ಸಂಗೀತದ ಧಾಟಿಯಲ್ಲಿ ಸ್ವರಸಂಯೋಜನೆ ಇರಬಾರದು ಮತ್ತು ಸ್ವರ ಸಂಯೋಜನೆಯನ್ನು ಮಾಡುವಾಗ ಶಾಸ್ತ್ರೀಯತೆಯನ್ನು ಬಿಡಬಾರದು.  ಭಾವಗೀತೆ ಮತ್ತು ನವ್ಯ ಕವಿತೆಗಳನ್ನು ಹಾಡುವಾಗ ಗೀತೆಗಳ ಸಾಹಿತ್ಯದ ಮೇಲೆ ಹೆಚ್ಚು ಪ್ರಾಮುಖ್ಯವನ್ನು ಕೊಟ್ಟು ಸಂಗೀತ ಅದಕ್ಕೊಂದು ಕವಚವಾಗಿ ಆ ಭಾವವನ್ನು ಹೊಮ್ಮಿಸುವ ಹಾಗೆ ಸಂಗೀತ ಸಂಯೋಜನೆ ಮಾಡಬೇಕಾದುದು ಅಗತ್ಯ.  ಇದು ಶಾಸ್ತ್ರೀಯ ಸಂಗೀತ ಕಲಿತವರಿಗೆ ಸ್ವಲ್ಪ ಕಷ್ಟಸಾಧ್ಯವೇ.  ಆದರೆ ನಾನದನ್ನು ರೂಢಿಸಿಕೊಂಡಿದ್ದೆ.  ಭಾವಗೀತೆಗಳನ್ನು ಕೇಳಿ ಕೇಳಿ ಯಾವ ರೀತಿ ಸ್ವರಸಂಯೋಜನೆ ಮಾಡಿದರೆ ಚೆನ್ನಾಗಿರುತ್ತದೆ ಅನ್ನೋದನ್ನ ಕಲ್ಪನೆ ಮಾಡಿಕೊಂಡು ಸ್ವರ ಸಂಯೋಜನೆ ಮಾಡುತ್ತಿದ್ದೆ.  ಒಂದು ಸಲ ಮೈಸೂರು ಆಕಾಶವಾಣಿಯಲ್ಲಿ ಕುವೆಂಪುರವರ ಒಂದು ಗೀತೆಗೆ ನಾವು ನಾಲ್ಕೈದು ಜನ ಸ್ವರ ಸಂಯೋಜನೆಯನ್ನು ಮಾಡಿ ಹಾಡಿ, ಅನಂತರ ಕೊನೆಯ ದಿವಸ ಅವರ ಅಭಿಪ್ರಾಯ ಏನು ಅಂತ ಕೇಳುವ ಕಾರ್ಯಕ್ರಮವಿತ್ತು. ನಾನು ಉದಯರವಿಚಂದ್ರಿಕೆಯಲ್ಲಿ ಅವರ ಗೀತೆಯನ್ನು ಹಾಡಿ ಪ್ರಸಾರ ಮಾಡಿದ್ದೆ.  ನಂತರ ಕುವೆಂಪು ಅವರು ಬಂದು ಹಾಡಿದ ನಾಲ್ಕೈದು ಜನರನ್ನೂ ಕೂಡಿಸಿಕೊಂಡು ನೀವು ಈ ರಾಗದಲ್ಲಿ ಸ್ವರಸಂಯೋಜನೆ ಮಾಡಿದ್ದೀರಲ್ಲಾ ನಿಮ್ಮ ಅಭಿಪ್ರಾಯ ಏನು? ಈ ರಾಗಕ್ಕೂ ಆ ಗೀತಕ್ಕೂ ಹೇಗೆ ಸಂಬಂಧ ಕಲ್ಪಿಸಿದ್ದೀರಿ ಎಂದು  ಒಬ್ಬೊಬ್ಬರನ್ನೇ ಕೇಳಿಕೊಂಡು ಬಂದರು.  ಅದು ಉದಯರವಿಯ ಸೊಗಸಿನ ಬಗ್ಗೆ ಇದ್ದ ಒಂದು ಕವನ.  ಈ ಗೀತೆಯ ಅಭಿಪ್ರಾಯ ಹೀಗಿದೆ ಅದಕ್ಕೆ ಉದಯರವಿಚಂದ್ರಿಕೆಯನ್ನು ಹಾಕಿಕೊಂಡರೆ ಆ ಗೀತೆಯ ಸೊಗಸು ಚೆನ್ನಾಗಿ ಮೂಡಿಬರುತ್ತದೆ ಎಂದು ಹೇಳಿದೆ.  “ನೀವು ಮಾಡಿದ್ದು ಸರಿ” ಅಂತ ಅಂದ್ರು ಕುವೆಂಪುರವರು.  ಹಾಗೆ ಭಾವಗೀತೆಗಳಿಗೆ ರಾಗಸಂಯೋಜನೆ ಮಾಡುವಾಗ ಗೀತೆಯ ಭಾವದ ಮೇಲೆ, ಸಾಹಿತ್ಯದ ಮೇಲೆ ಗಮನವಿಟ್ಟು ಸಂಗೀತ ಅದಕ್ಕೆ ಮಧುರವಾದ ಮಾಧ್ಯಮವಾಗಿ ಆ ಗೀತೆ ಹೊಮ್ಮಬೇಕು ಎನ್ನುವುದೇ ಭಾವಗೀತೆಗಳ ಗಾಯನದ ಮುಖ್ಯ ಉದ್ದೇಶ.  ಅದಕ್ಕೆ ಶಾಸ್ತ್ರೀಯ ಸಂಗೀತದಷ್ಟು ಹೆಚ್ಚಿನ ಸಂಗೀತವನ್ನು ಕೊಡುವುದಕ್ಕೆ ಹೋಗಬಾರದು.  ಹಾಗೆಯೇ ಶಾಸ್ತ್ರೀಯ ಸಂಗೀತದಂತೆ ಹಾಡಬೇಕಾದ ಗೀತೆಗಳಿಗೆ ಭಾವಗೀತೆಯ ಕವಚವನ್ನು ಕೊಡುವುದಕ್ಕೆ ಹೋಗಬಾರದು.  ಆಗ ಅದರ ಭಾವ ಕೆಟ್ಟುಹೋಗುತ್ತದೆ.  ಎಲ್ಲಿ ಸಂಗೀತ ಪ್ರಧಾನವೋ ಅಲ್ಲಿ ಸಂಗೀತ ಪ್ರಧಾನವಾಗಿಯೇ ಇರಬೇಕು.  ಎಲ್ಲಿ ಸಾಹಿತ್ಯದ ಅರ್ಥ ಪ್ರಧಾನವಾಗಿರುತ್ತದೋ ಅಲ್ಲಿ ಸಂಗೀತ ಗೌಣವಾಗಿ ಇದ್ದರೆ ಚೆನ್ನಾಗಿರುತ್ತದೆ.  ಘನರಾಗಗಳಿಗಿಂತ ರಕ್ತಿರಾಗಗಳೇ ಭಾವಗೀತೆಗಳಿಗೆ ಚೆನ್ನಾಗಿ ಹೊಂದುತ್ತದೆ.  ಘನರಾಗಗಳನ್ನೂ ಹಾಕಬಹುದು ಆದರೆ ಅವುಗಳನ್ನು ಗುದ್ದಿಗುದ್ದಿ ಹಣ್ಣುಮಾಡಿ ಒಗ್ಗಿಸಬೇಕಾಗುತ್ತದೆ” (ಸಂದರ್ಶನ)
ರಾಗಸಂಯೋಜನೆಗೆ ಸಂಬಂಧಿಸಿದಂತೆ ಶ್ರೀಕಂಠನ್ ಅವರ ವಿವೇಚನೆ ಮತ್ತು ಔಚಿತ್ಯಪ್ರಜ್ಞೆ ಅನುಕರಣೀಯ.  “ದೇವರನಾಮದ ಸಾಹಿತ್ಯದ ಛಂದಸ್ಸನ್ನು ಗಮನಿಸದೆ ತಾಳವನ್ನು ವ್ಯತ್ಯಾಸ ಮಾಡಿ ಹೇಗ್ಹೇಗೋ ಹಾಡಿಬಿಡಬಾರದು, ಅವುಗಳಿಗೆ ಕಂಠಪರಂಪರೆಯಲ್ಲಿ ಬಂದ ಮಟ್ಟುಗಳನ್ನು ಉಳಿಸಿಕೊಂಡು ರಾಗ ಸಂಯೋಜನೆ ಮಾಡುವುದು ಔಚಿತ್ಯಪೂರ್ಣವಾಗಿರುತ್ತದೆ.  ದೇವರನಾಮಗಳಿಗೆ ಸಂಗೀತ ಭಾರವಾಗಬಾರದು.  ಒಬ್ಬ ರಾಗ ಸಂಯೋಜಕನಿಗೆ ಕೃತಿಕಾರನ ಉದ್ದೇಶ ಸ್ಪಷ್ಟವಾಗಿ ತಿಳಿದಿರಬೇಕು.  ಆಗ ಮಾತ್ರ ಸರಿಯಾಗಿ ರಾಗ ಸಂಯೋಜಿಸಲು ಸಾಧ್ಯ.  ಉದಾಹರಣೆಗೆ ಸಂಗೀತವನ್ನು ತ್ಯಾಗರಾಜಾದಿಗಳಷ್ಟು ಪುರಂದರದಾಸರು ಬಳಸಿಕೊಳ್ಳಲಿಲ್ಲ.  ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿದರು, ಏಕೆಂದರೆ ಅವರ ರಚನೆಯ ಉದ್ದೇಶವೇ ಬೇರೆ ಇತ್ತು.  ಪುರಂದರದಾಸರು ಮತ್ತು ಇತರ ಹರಿದಾಸರು ಮಾಡಿದ್ದೇನೆಂದರೆ ನೀತಿ, ಧರ್ಮ, ವೇದಾಂತ ಹಾಗೂ ಜನಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಮತ್ತು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಬಹಳ ಸುಂದರವಾಗಿ, ಮಧುರವಾದ ಸಂಗೀತದ ಮೂಲಕ ಸುಲಭವಾಗಿ ಪ್ರಸಾರಮಾಡಿದರು.  ಈಗ ವಚನಗಳನ್ನು ನಾವು ಹಾಡ್ತಾ ಇದ್ದೀವಿ ಆದರೆ ಅದನ್ನು ಅವರು ರಚಿಸಿದ್ದು ಉಪದೇಶಕ್ಕಾಗಿ.  ಹಾಗಾಗಿ ಒಬ್ಬ ರಸಿಕನಾಗಬೇಕಾದರೆ, ನಾದ ಮಾಧ್ಯಮ ಮತ್ತು ಅಕ್ಷರ ಮಾಧ್ಯಮ ಎರಡನ್ನೂ ಸರಿಯಾಗಿ ತೂಗಿಸಬೇಕು.  ನಾದ ಮಾಧ್ಯಮ ಅಕ್ಷರ ಮಾಧ್ಯಮಕ್ಕೆ ಪೂರಕವಾಗಿ, ಪೋಷಕವಾಗಿ ಇರಬೇಕು.  ಆಗ ಮಾತ್ರ ರಸಿಕತೆ ಸಾಧ್ಯ.” ಒಬ್ಬ ಗುರುವಾಗಿ ಕರ್ನಾಟಕ ಸಂಗೀತಕ್ಕೆ ಶ್ರೀಕಂಠನ್ ಅವರ ಕೊಡುಗೆ ಅಪಾರ.  ಕಛೇರಿ ಕಲಾವಿದರನ್ನು ತುಂಬಾ ದೊಡ್ಡ ಪ್ರಮಾಣದಲ್ಲಿ ತರಬೇತಿ ಮಾಡಿರುವ ಗುರು ಬಹುಶಃ ಶ್ರೀಕಂಠನ್ ಅವರೇ ಎನ್ನಿಸುತ್ತದೆ.  ಕಲಿಸುವುದಕ್ಕೆ ಸಂಬಂಧಿಸಿದಂತೆ ತುಂಬಾ ಸ್ಪಷ್ಟವಾದ ಕಲ್ಪನೆ ಮತ್ತು ವಿಧಾನವನ್ನು ಹೊಂದಿರುವ ಕಲಾವಿದರು ಶ್ರೀಕಂಠನ್.  ಅವರ ಕಲಿಸುವಿಕೆಯ ಬಗ್ಗೆ ಅವರ ಶಿಷ್ಯೆ ಟಿ.ಎಸ್. ಸತ್ಯವತಿ ತುಂಬಾ ಅರ್ಥಪೂರ್ಣವಾಗಿ ಹೇಳುತ್ತಾರೆ.  “ಕವಿ ಕಾಳಿದಾಸ ಹೇಳುವಂತೆ ಕೆಲವರು ಉತ್ಕೃಷ್ಟವಾದ ಕಲಾರೂಪವನ್ನು ಪ್ರದರ್ಶಿಸಬಲ್ಲರು, ಮತ್ತೆ ಕೆಲವರು ಇತರರಿಗೆ ಹೇಳಿಕೊಡಲು ಮಾತ್ರ ಸಮರ್ಥರು.  ಯಾರಲ್ಲಿ ಈ ಎರಡೂ ಗುಣಗಳೂ ಸಂಗಮಿಸಿವೆಯೋ ಅವರೇ ಶಿಕ್ಷಕರ ಮುಂಚೂಣಿಯಲ್ಲಿ ಇರತಕ್ಕವರು.  “ತಿಳಿದು ಪೇಳಲಿ ಬೇಕು” ಎನ್ನುವ ಮಾತು ಆರ್‌ಕೆಎಸ್ ಅಂಥವರಿಂದಲೇ ಹುಟ್ಟಿರಬೇಕು.”
ಶಿಕ್ಷಕರಾಗಿ ಅವರು ತುಂಬಾ ಕಟ್ಟುನಿಟ್ಟಿನವರು.  ಸಮಯಪಾಲನೆ ಹಾಗೂ ಅಭ್ಯಾಸ ಇವೆರಡರ ಬಗ್ಗೆಯೂ ಅವರು ಯಾವ ರಾಜಿಗೂ ಸಿದ್ಧವಿಲ್ಲದವರು.  ಅವರಿಗೆ “ರಾಗ ಕೃತಿಗಳ ಪಾಠಾಂತರ ಶುದ್ಧವಾಗಿರಬೇಕು.  ನಿರೂಪಣೆಯಲ್ಲಿ ಎಲ್ಲೂ ದುರ್ಬಲತೆ ಇಣುಕಬಾರದು, ಅತ್ಮವಿಶ್ವಾಸ ತುಂಬಿರಬೇಕು.  ಉಚ್ಚಾರಣೆ ಸ್ಪಷ್ಟಾತಿ ಸ್ಪಷ್ಟವಾಗಿರಬೇಕು, ಅಕ್ಷರಗಳನ್ನು ಅಗಿಯಬಾರದು; ಕಾಲಪ್ರಮಾಣದಲ್ಲಿ ಏರುಪೇರಾಗುವಂತಿಲ್ಲ, ಸಮತೆ ಸಾಧಿಸಬೇಕು; ಭಾವ ಶೈಥಿಲ್ಯ ಎಲ್ಲೂ ಕೂಡದು, ತನ್ನನ್ನೇ ಅರ್ಪಿಸಿಕೊಂಡಿರಬೇಕು.  ಇದು ಅವರ ಪಾಠದಲ್ಲಿನ ಪಂಚಾಕ್ಷರಿ ಮಂತ್ರ.” (ಟಿ.ಎಸ್.ಸತ್ಯವತಿ)  ಗುರುವಾಗಿ ಅವರು ಆಕಾಶವಾಣಿಯಲ್ಲಿಯೂ ತುಂಬಾ ಜನಪ್ರಿಯರು. ಆಕಾಶವಾಣಿಯಲ್ಲಿ ಅವರು ನಡೆಸಿಕೊಡುತ್ತಿದ್ದ ’ಗಾನವಿಹಾರ – ಸಂಗೀತಪಾಠ’ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು.
ಶ್ರೀಕಂಠನ್ ಅವರಿಗೆ ವೈಯಕ್ತಿಕವಾಗಿ ಒಬ್ಬೊಬ್ಬರಿಗೇ ಸಂಗೀತ ಕಲಿಸುವುದರಲ್ಲಿ ಹೆಚ್ಚು ನಂಬಿಕೆ ಮತ್ತು ಅವರು ಹಾಗೆಯೇ ಪಾಠ ಹೇಳುತ್ತಾರೆ.  ಶ್ರೀಕಂಠನ್ ಅವರ ಬಳಿ ಅತ್ಯಪೂರ್ವವಾದ ಕೃತಿಸಂಗ್ರಹವಿದೆ.  ಶ್ರೀಕಂಠನ್ ಅವರು ತಾವು ಪರಿಷ್ಕರಿಸಿರುವ ಹಳೆಯ, ಅಪರೂಪದ ಕೃತಿಗಳನ್ನು ಯೋಗ್ಯ ವಿದ್ಯಾರ್ಥಿಗಳಿಗೆ ಹಾಗೂ ಯುವಕಲಾವಿದರಿಗೆ ಕಲಿಸಿದ್ದಾರೆ.  ೧೯೭೩ರಲ್ಲೇ ಬೆಂಗಳೂರು ಕಾರ್ಪೊರೇಷನ್ ಶ್ರೀಕಂಠನ್ ಅವರಿಗೆ ’ಅತ್ಯುತ್ಕೃಷ್ಟ ಗುರು’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಶ್ರೀಕಂಠನ್ ಅವರು ಸ್ವಂತ ಪರಿಶ್ರಮದಿಂದ  ತಮ್ಮದೇ ಆದ ಸ್ವತಂತ್ರ ಶೈಲಿಯನ್ನು ರೂಪಿಸಿಕೊಂಡಿದ್ದರೂ ಕೂಡ ಅದು ಈಗಾಗಲೇ ಇದ್ದ ಒಂದು ಘನ ಪರಂಪರೆಯ ಚೌಕಟ್ಟಿನೊಳಗೇ ಇತ್ತು.  “ಸಂಪ್ರದಾಯದ ಚೌಕಟ್ಟನ್ನು ತೊರೆಯದೆ ಸೃಷ್ಟ್ಯಾತ್ಮಕವಾಗಿರುವುದೇ ನಿಜವಾದ ಸಂಗೀತ” ಎನ್ನುವುದು ಅವರ ಅಭಿಪ್ರಾಯವಾಗಿತ್ತು.  ಆಕಾಶವಾಣಿಯಲ್ಲಿ ಹರಿದಾಸರ ಪದಗಳಿಗೆ ಸಂಗೀತ ಸಂಯೋಜಿಸುವಾಗಲೂ ಅವರ ಈ ಮನಸ್ಥಿತಿ ಸ್ಪಷ್ಟವಾಗಿ ವ್ಯಕ್ತವಾಗಿದೆ.  ಅವರು ದಾಸರ ಪದಗಳ ಸಾಂಪ್ರದಾಯಿಕ ರಾಗ ಮತ್ತು ತಾಳವನ್ನು ಹಾಗೆಯೇ ಉಳಿಸಿಕೊಂಡು ಇಂದಿನ ಸನ್ನಿವೇಶಕ್ಕೆ ಹೊಂದುವಂತಹ ಮತ್ತು ಹೆಚ್ಚು ಕಲಾತ್ಮಕವಾಗುವಂತಹ ಉಡುಗೆ ತೊಡುಗೆಯಿಂದ ಅವನ್ನು ಸಿಂಗರಿಸಿದರು.  ಹಾಗಾಗಿಯೇ “ಕರ್ನಾಟಕದ ದಾಸಕೂಟದ ಸಂಗೀತ ಸಂಪ್ರದಾಯವನ್ನು ಕಾಪಾಡುವಲ್ಲಿ ಶ್ರೀಕಂಠನ್ ಅವರ ಕೊಡುಗೆ ದೊಡ್ಡದು.” ಎಂದು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರು ಹೇಳುತ್ತಿದ್ದರು.
ಈ ಸಂಗೀತ ಪರಂಪರೆಯಲ್ಲಿ ಅವರು ಯಾವುದಕ್ಕೆ ಆನಿಕೊಂಡಿದ್ದಾರೆ ಎನ್ನುವುದು ಅವರಿಗೆ ತುಂಬಾ ಸ್ಪಷ್ಟವಿದೆ.  “ಕಲಾವಿದನ ಮೊದಲನೆಯ ಗಮನ  ಅರಿಯಾಕುಡಿಯವರು ಹೇಳುವಂತೆ ರಸಿಕರತ್ತ ಇರಬೇಕು.    ನಾನು ಶೆಮ್ಮಂಗುಡಿ ಮತ್ತು ಮಹಾರಾಜಪುರಂ ಅವರ ಕಛೇರಿಯ ಪಂಥವನ್ನು ಅನುಸರಿಸುತ್ತೇನೆ.  ಸಾಹಿತ್ಯ ಮತ್ತು ಲಯಶುದ್ಧಿ; ಕೃತಿಯ ಸ್ಪಷ್ಟವಾದ ಪ್ರಸ್ತುತಿ ಮತ್ತು ಕಾಲಪ್ರಮಾಣ ತುಂಬಾ ಮುಖ್ಯ.  ರಾಗವಿನ್ಯಾಸ, ಕೃತಿಪ್ರಸ್ತುತಿ ಮತ್ತು ಸ್ವರಪ್ರಸ್ತಾರ ಇವುಗಳ ನಡುವೆ ಒಂದು ಹಿತವಾದ ಸಂಬಂಧವಿರಬೇಕು. ದೀಕ್ಷಿತರು ತಮ್ಮ ’ಭಜರೇ ರೇ ಚಿತ್ತ’ ಕೃತಿಯಲ್ಲಿ ಹೇಳುವಂತೆ ಭಾವ, ರಾಗ ಮತ್ತು ತಾಳ ಇವುಗಳ ಔಚಿತ್ಯಪೂರ್ಣ ಮಿಶ್ರಣವಿರಬೇಕು.  ನಮ್ಮ ಬುದ್ಧಿಯು ಹಿರಿಯರು ತೋರಿಸಿಕೊಟ್ಟ ಎಲ್ಲೆಯೊಳಗೆ ಇರಬೇಕು.   ಸಂಗೀತದಲ್ಲಿ ನಿಜವಾದ ಸವಾಲಿರುವುದು ರಕ್ತಿರಾಗಗಳಲ್ಲಿ ರಾಗ ತಾನ ಪಲ್ಲವಿಯನ್ನು ಹಾಡುವುದೇ ಹೊರತು ವಿವಾದಿ ರಾಗಗಳಲ್ಲಲ್ಲ.  ಹಿಂದಿನವರಿಗೆ ಈ ರಾಗಗಳಲ್ಲಿ ಹಾಡುವ ಜ್ಞಾನವಿಲ್ಲ ಎನ್ನುವುದು ಸುಳ್ಳು ಅವರಿಗೆ ಅದು ತಮ್ಮ ಪರಂಪರೆ ಅಲ್ಲ ಎನ್ನುವ ಅರಿವಿತ್ತು.”  ಅಂತೆಯೇ ನಮ್ಮಲ್ಲೇ ಹಾಡಲು ತುಂಬಾ ಸರಕಿರುವಾಗ ಮತ್ತು ವಿಭಿನ್ನ ಶೈಲಿಗಳಿರುವಾಗ, ಹಿಂದುಸ್ತಾನಿ ಅಥವಾ ಇತರ ಶೈಲಿಗಳ ಹಿಂದೆ ಹೋಗಬೇಕಾ, ಎನ್ನುವುದೂ ಅವರನ್ನು ಕಾಡಿರುವ ಪ್ರಶ್ನೆ. (ಸಂದರ್ಶನ-ವಿದ್ವಾನ್ ರವಿಕಿರಣ್).
ಶ್ರೀಕಂಠನ್ ಅವರು ತುಂಬಾ ಸ್ಪಷ್ಟವಾದ ಅಭಿಪ್ರಾಯ ಮತ್ತು ಒಳನೋಟಗಳಿರುವ ಸಂಗೀತಗಾರರು.  ಸಂಗೀತಕ್ಕೆ ಸಂಬಂಧಿಸಿದ ಟೇಪ್‌ರೆಕಾರ್ಡರ್, ವಿಡಿಯೋ, ಸಿಡಿ ಮುಂತಾದ ಯಾವುದೇ ಉಪಕರಣಗಳೂ ಗುರುವಿಗೆ ಪರ್ಯಾಯವಲ್ಲ.  ಸಂಗೀತದ ಕಲಿಕೆ ಸೂಕ್ತವಾದ ಗುರುವಿಲ್ಲದೆ ಸಾಧ್ಯವಿಲ್ಲ ಎಂದು ಅವರು ತ್ಯಾಗರಾಜರ ’ಗುರುಲೇಕ ಇಟುವಂಟಿ’ ಕೃತಿಯನ್ನು ಉದ್ಧರಿಸುತ್ತಾರೆ (ಸಂದರ್ಶನ-ವಿದ್ವಾನ್ ರವಿಕಿರಣ್).
ಯುವಪೀಳಿಗೆಗೆ ಮಾದರಿಯಾಗಬಲ್ಲಂಥ ಹಲವಾರು ಅಂಶಗಳು ಶ್ರೀಕಂಠನ್ ಅವರ ಸಂಗೀತ ಮತ್ತು ವ್ಯಕ್ತಿತ್ವದಲ್ಲಿದೆ.  “ಶ್ರೀಕಂಠನ್ ಅವರದ್ದು ತುಂಬಾ ಸ್ಫುಟವಾದ ಉಚ್ಚಾರ.  ಸಾಹಿತ್ಯಕ್ಕೆ ಎಲ್ಲೂ ಚ್ಯುತಿ ಬರುತ್ತಿರಲಿಲ್ಲ.  ಇದರ ಜೊತೆಗೆ ಶ್ರೀಕಂಠನ್ ಅವರಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಅವರ ಅಗಾಧವಾದ ನೆನಪಿನ ಶಕ್ತಿ.  ಅವರು ಎಂದೂ ಸ್ಕ್ರಿಪ್ಟ್ ನೋಡಿ ಹಾಡಿದ್ದೇ ಇಲ್ಲ.  ಅವರು ’ಫುಲ್ ಥ್ರೋಟೆಡ್’ ಆಗಿ ತುಂಬು ಕಂಠದಲ್ಲಿ ಹಾಡುತ್ತಿದ್ದರು.  ಈ ಬಾರಿಯ ಅಕಾಡೆಮಿ ಸಂಗೀತ ಕಛೇರಿಗಳಲ್ಲಿ ತುಂಬಾ ಜನ ಯುವಕಲಾವಿದರು ತಾರಸ್ಥಾಯಿಯಲ್ಲಿ ಹಾಡುವಾಗ ಕ್ಷೀಣ ಕಂಠದಲ್ಲಿ (ಕ್ರೂನ್)ಹಾಡುತ್ತಿದ್ದರೆ, ನೇದನೂರಿ ಮತ್ತು ಶ್ರೀಕಂಠನ್ ಅಂತಹ ಹಿರಿಯರು ತಾರಸ್ಥಾಯಿಯಲ್ಲೂ ಕಂಠಬಿಟ್ಟು ಮುಕ್ತವಾಗಿ ಹಾಡುತ್ತಿದ್ದರು ಎಂದು ’ಶ್ರುತಿ’ ಪತ್ರಿಕೆ ವರದಿಮಾಡಿದೆ.” (ಎನ್‌ಎಸ್‌ಕೆ)
ಅವರು ಶ್ರೋತೃಗಳನ್ನು ಮೆಚ್ಚಿಸುವುದನ್ನೇ ಉದ್ದೇಶವಾಗಿಟ್ಟುಕೊಂಡು ಹಾಡುವುದಿಲ್ಲ. ಹಾಗಂತ ಬೇಕಾಬಿಟ್ಟಿಯಾಗಿಯೂ ಹಾಡುವವರಲ್ಲ.  ಶ್ರೋತೃಗಳನ್ನು ನೋಡಿಕೊಂಡು ಹಾಡುತ್ತಾರೆ.  ಆದರೆ ಎಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ.  ಅಪಾರವಾದ ಅನುಭವ ಮತ್ತು ಜ್ಞಾನ ಇದ್ದರೂ ಕೂಡ ಅವರು ಯಾವುದೇ ಪ್ರಾತ್ಯಕ್ಷಿಕೆಯನ್ನಾಗಲೀ ಪೂರ್ವಸಿದ್ಧತೆ ಇಲ್ಲದೆ ಮಾಡುವುದಿಲ್ಲ. ಎಲ್ಲವನ್ನೂ ತುಂಬಾ ಚೆನ್ನಾಗಿ ಬರೆದು ಸಿದ್ಧಪಡಿಸಿಕೊಂಡು ಬಂದು ಪ್ರಸ್ತುತಪಡಿಸುತ್ತಾರೆ.  ಅವರು ಎಲ್ಲೂ ಒಂದು ಹೆಚ್ಚಿನ ಮಾತು ಆಡುವುದಿಲ್ಲ.  ಮೈಕ್ ಸಿಕ್ಕಿದೆ ಎನ್ನುವ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡುವುದು ಅವರ ಜಾಯಮಾನದಲ್ಲೇ ಇಲ್ಲ.” (ಎನ್‌ಎಸ್‌ಕೆ.)    ಎಲ್ಲವನ್ನೂ ಸಲೀಸಾಗಿ ತೆಗೆದುಕೊಂಡು ಯಾವ ಸಿದ್ಧತೆಯೂ ಇಲ್ಲದೆ ಕಛೇರಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಮಾಡುವ ನಮ್ಮ ಯುವಪೀಳಿಗೆ ಇವರ ಈ ಶಿಸ್ತನ್ನು ಕಲಿಯಲೇಬೇಕಾದ ತುರ್ತಿದೆ.
ಸಂಗೀತ ಮಾತ್ರ ಶುದ್ಧವಾಗಿದ್ದರೆ ಸಾಲದು ಕಲಾವಿದನ ವೈಯಕ್ತಿಕ ಚಾರಿತ್ರ್ಯ ಹಾಗೂ ಬದುಕು ಎರಡೂ ಶುದ್ಧವಾಗಿರಬೇಕು.  ಸಂಗೀತಗಾರನ ವೈಯಕ್ತಿಕ ಚಾರಿತ್ರ್ಯವೂ ಸಂಗೀತದ ಗುಣಮಟ್ಟವನ್ನು ನಿರ್ಧರಿಸುತ್ತದೆ ಎಂದು ಅವರು ಭಾವಿಸುತ್ತಾರೆ.  ಮನುಷ್ಯ ಮತ್ತು ಸಂಗೀತ ಎರಡೂ ಬೇರೆ ಬೇರೆ ಎಂದು ಅವರು ಭಾವಿಸಿಲ್ಲ.  ಈ ಗಟ್ಟಿಯಾದ ನಂಬಿಕೆ ಅವರ ಜೀವನ ಮತ್ತು ಸಂಗೀತ ಎರಡರಲ್ಲೂ ಎದ್ದು ಕಾಣುತ್ತದೆ.  ಇದರ ಜೊತೆಗೆ ಅವರ ಮಾತುಗಳಲ್ಲಿ ಒಂದು ವಿಷಾದದ ಎಳೆಯೂ ಇದೆ ನಮ್ಮ ಯುವಪೀಳಿಗೆಯನ್ನು ಕುರಿತು.  “ಇಂದು ದೊಡ್ಡವನಾಗಬೇಕು, ಬೆಳೀಬೇಕು ಎನ್ನುವ ಮನಸ್ಸೇ ನಮ್ಮ ಯುವಪೀಳಿಗೆಯಲ್ಲಿ ಇಲ್ಲ.  ಅಷ್ಟೇ ಅಲ್ಲ ತುಂಬಾ ದೊಡ್ಡದು ಒಂದಿದೆ ಎನ್ನುವ ದೃಷ್ಟಿಯೇ ಅವರಲ್ಲಿ ಇಲ್ಲ.” ಎಂದು ನೊಂದುಕೊಳ್ಳುತ್ತಾರೆ.
ಇಂತಹ ಶುದ್ಧ, ಪ್ರಾಮಾಣಿಕ, ಮೌಲ್ಯಯುತ ವ್ಯಕ್ತಿತ್ವವುಳ್ಳ ಶ್ರೀಕಂಠನ್ ಅವರ ಸಂಗೀತ ಹೀಗೆಯೇ ಮುಂದುವರಿಯಲಿ ಮತ್ತೆ ಪರಂಪರೆಯನ್ನು ಉಳಿಸಬಲ್ಲ ಅವರಂಥ ಸಂಗೀತಗಾರರ ಸಂತತಿ ಸಾವಿರವಾಗಲಿ ಎನ್ನುವುದು ಎಲ್ಲಾ ಕಲಾಭಿಮಾನಿಗಳ ಕೋರಿಕೆ.
ಬಾನುಲಿಯ ಬಾನಾಡಿ
“ಆಕಾಶವಾಣಿಯಿಂದ ತುಂಬಾ ಜ್ಞಾನವನ್ನು ಪಡೆದವನು ನಾನು” ಎನ್ನುವ ಶ್ರೀಕಂಠನ್ ಅವರನ್ನು ಸಂಗೀತಗಾರರನ್ನಾಗಿ ರೂಪಿಸುವಲ್ಲಿ ಆಕಾಶವಾಣಿಯ ಪಾತ್ರ ಸಾಕಷ್ಟು ದೊಡ್ಡದು. ಅಲ್ಲಿ ಕಳೆದ ೩೦ ವರುಷಗಳು ಅವರ ಬದುಕಿನಲ್ಲಿ ಒಂದು ಮಹತ್ವಪೂರ್ಣ ಕಾಲ. ಆಕಾಶವಾಣಿಯಲ್ಲಿ ಅವರಿಗೆ ಅತ್ಯುತ್ತಮವಾದ ಒಂದು ಸಂಗೀತದ ವಾತಾವರಣವಿತ್ತು.  ಶ್ರೀಕಂಠನ್ ಅವರಿಗೆ ಸಹೋದ್ಯೋಗಿಗಳಾಗಿ ಹಿರಿಯರಾದ ಸೆಲ್ವಪಿಳ್ಳೈ ಅಯ್ಯಂಗಾರ್, ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರಿದ್ದರು.  ಶ್ರೀಕಂಠನ್ ಮತ್ತು ದೊರೆಸ್ವಾಮಿ ಅಯ್ಯಂಗಾರ್ಯರಿಬ್ಬರೂ ಪರಸ್ಪರ ಏಕವಚನದಲ್ಲಿ ಮಾತನಾಡುವಷ್ಟು ಗೆಳೆಯರು.  ತಮ್ಮ ಆಕಾಶವಾಣಿಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಅವರು ಭಾವುಕರಾಗಿ ಹೇಳುತ್ತಾರೆ, “ನನ್ನ ಮತ್ತು ಸೆಲ್ವಪಿಳ್ಳೈ ಅಯ್ಯಂಗಾರ್ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿತ್ತು.  ಎಂತಹ ಕಠಿಣವಾದ ರಚನೆಯನ್ನಾದರೂ ನಾವಿಬ್ಬರೂ ಮುಗಿಸಿಬಿಡುತ್ತಿದ್ದೆವು.  ಅದಕ್ಕೆ ಎಸ್.ಕೃಷ್ಣಮೂರ್ತಿಗಳು ಹೇಳುತ್ತಿದ್ದರು ’ನೀವಿಬ್ಬರೂ ಅಸಾಧ್ಯರಪ್ಪ” ಅಂತ. “ರದ್ರಪಟ್ಟಣದ ಶ್ರೀಕಂಠನ್ ಮತ್ತು ಮೇಲುಕೋಟೆಯ ಸೆಲ್ವಪಿಳ್ಳೈ ಅಯ್ಯಂಗಾರ್ ಅವರ  ಜೋಡಿಯನ್ನು ಆಕಾಶವಾಣಿಯ ಮತ್ತೊಬ್ಬ ಕಲಾವಿದರಾದ ವರಾಹಸ್ವಾಮಿಯವರು ’ರುದ್ರಕೋಟೆ ಬ್ರದರ‍್ಸ್’ ಎಂದೇ ಕರೆಯುತ್ತಿದ್ದರು” ಎಂದು ಆಕಾಶವಾಣಿಯ ನಿರ್ದೇಶಕರಾಗಿದ್ದ ಎನ್‌ಎಸ್‌ಕೃಷ್ಣಮೂರ್ತಿಯವರು ನೆನಪಿಸಿಕೊಂಡರು.  “ಎಂಥೆಂಥ ಕವಿಗಳು, ನಾಟಕಕಾರರು, ಭಾಷಣಕಾರರು ಆಕಾಶವಾಣಿಗೆ ಬರುತ್ತಿದ್ದರು.  ಅವರನ್ನು ನೋಡುವುದು, ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ಅಪರೂಪದ ಅನುಭವ.  ಇದಲ್ಲದೆ ತಮಿಳುದೇಶದಿಂದ ಮತ್ತು ಉತ್ತರ ದೇಶದಿಂದ ಎಂಥೆಂಥ ಸಂಗೀತ ವಿದ್ವಾಂಸರು ಬರುತ್ತಿದ್ದರು.   ಅವರನ್ನು ನೋಡೋದು ಅವರ ಸಂಗೀತ ಕೇಳೋದು ಎಂಥ ಅನುಭವ.  ಅದನ್ನು ಉಪಯೋಗ ಮಾಡೋದರಲ್ಲಿದೆ, ಇಲ್ಲದೆ ಹೋದರೆ ಸಾಮಾನ್ಯ.  ನಾನವೆಲ್ಲವನ್ನೂ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಂಡಿದ್ದೇನೆ.  ನನ್ನ ಮನಸ್ಸು ಯಾವಾಗಲೂ ತೆರೆದಿದೆ.  ತುಂಬಾ ದೊಡ್ಡವರ ಜೊತೆ ಇದ್ದು ಹಾಡೋದು, ಕೆಲಸ ಮಾಡೋದು ನನಗೆ ತುಂಬಾ ಚೈತನ್ಯದಾಯಕವಾಗಿತ್ತು.  ಅಲ್ಲಿ ಅವರ ಜೊತೆ ಇದ್ದ ಹಾಗೂ ಆಗುತ್ತೆ.  ನನ್ನ ಅಜ್ಞಾನವೂ ಹೋಗುತ್ತೆ. ಹಾಗೆ ಉಪಯೋಗ ಮಾಡಿಕೊಳ್ಳುತ್ತಾ ಇದ್ದೆ ನಾನು.”
ಆಕಾಶವಾಣಿಗೆ ಧ್ವನಿಮುದ್ರಣಕ್ಕಾಗಿ ಬರುತ್ತಿದ್ದ ಕರ್ನಾಟಕ ಮತ್ತು ತಮಿಳುನಾಡಿನ ಹಿರಿಯ ಸಂಗೀತಗಾರರ ಒಡನಾಟ ಮತ್ತು ಅವರು ಮೆಲುಕುಹಾಕುತ್ತಿದ್ದ ಹಳೆಯ ನೆನಪುಗಳು ಮತ್ತು ಹಂಚಿಕೊಳ್ಳುತ್ತಿದ್ದ ಸ್ವಾರಸ್ಯಕರ ಸನ್ನಿವೇಶಗಳು ಮತ್ತು ಸಂಗೀತಕ್ಕೆ ಸಂಬಂಧಿಸಿದ ಚರ್ಚೆಗಳು ಇವುಗಳಿಂದಾಗಿ ಒಂದು ಅರ್ಥಪೂರ್ಣವಾದ ಸಂಗೀತದ ವಾತಾವರಣ ಆಕಾಶವಾಣಿಯಲ್ಲಿ ಸೃಷ್ಟಿಯಾಗಿತ್ತು.  “ಉಪಯೋಗ ಮಾಡಿಕೊಳ್ಳುವವರಿಗೆ ಅಲ್ಲಿ ಬೇಕಾದಷ್ಟಿದೆ.  ಇಲ್ಲದೇ ಹೋದವರಿಗೆ ಬರೀ ಸಂಬಳ ಅಷ್ಟೆ.”  ಹಾಗಾಗಿಯೇ “ಆಕಾಶವಾಣಿಯಿಂದ ತುಂಬಾ ಜ್ಞಾನವನ್ನು ಪಡೆದವನು ನಾನು” ಎನ್ನುತ್ತಾರೆ ಶ್ರೀಕಂಠನ್.
ಆಕಾಶವಾಣಿಯಲ್ಲಿದ್ದಾಗ ಶ್ರೀಕಂಠನ್ ಹಲವು ಬಗೆಯಲ್ಲಿ ಸಂಗೀತಕ್ಕೆ ಸೇವೆ ಸಲ್ಲಿಸಿದರು-  ಸಂಯೋಜಕರಾಗಿ, ನಿರ್ಮಾಪಕರಾಗಿ ಹಾಗೂ ಶಿಕ್ಷಕರಾಗಿ.
ಶ್ರೀಕಂಠನ್ ಅವರು ಒಬ್ಬ ಪೂರ್ಣಪ್ರಮಾಣದ ರಾಗಸಂಯೋಜಕರಾಗಿ ರೂಪುಗೊಂಡದ್ದು ಆಕಾಶವಾಣಿಯಲ್ಲೇ.  ತಮ್ಮ ಆ ಅನುಭವವನ್ನು ’ಶ್ರುತಿ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಳ್ಳುತ್ತಾರೆ. “ಹರಿದಾಸರ ಕೀರ್ತನೆಗಳು ಹಾಗೂ ಶರಣರ ವಚನಗಳು ಇವುಗಳಿಗೆ ರಾಗಸಂಯೋಜನೆ ಮಾಡಿದ್ದೇ ಅಲ್ಲದೆ, ಸುಮಾರು ೧೫ ಮಂದಿ ಕನ್ನಡ ಸಾಹಿತಿಗಳ ಕವನಗಳಿಗೆ ರಾಗಸಂಯೋಜಿಸಿದೆ.  ಮಾಸ್ತಿಯವರ ಬಿನ್ನಹ, ಡಿವಿಜಿಯವರ ಅಂತಃಪುರ ಗೀತೆಗಳು ಮತ್ತು ಮಂಕುತಿಮ್ಮನ ಕಗ್ಗ, ಎಸ್.ವಿ.ಪರಮೇಶ್ವರಭಟ್ಟರ ಕವನಗಳು, ಪುತಿನ ಅವರ ದೀಪಲಕ್ಷ್ಮಿ, ಕುವೆಂಪು, ಬೇಂದ್ರೆ ಮುಂತಾದ ಸಮಕಾಲೀನ ಕವಿಗಳ ರಚನೆಗೆ ರಾಗ ಸಂಯೋಜನೆ ಮತ್ತು ಕೈವಾರ ನಾರಾಯಣಪ್ಪನವರ ರಚನೆಗೆ ರಾಗ ಸಂಯೋಜಿಸಿ ಹಾಡಿದೆ.  ಇದಲ್ಲದೆ ಸೆಲ್ವಪಿಳ್ಳೈ ಅಯ್ಯಂಗಾರ್ ಅವರ ಮಾರ್ಗದರ್ಶನ ಹಾಗೂ ವ್ಯಾಖ್ಯಾನದೊಂದಿಗೆ ಮಹಾವೈದ್ಯನಾಥ ಅಯ್ಯರ್ ಅವರ ಮೇಳರಾಗ ಮಾಲಿಕೆಯನ್ನು ಹಾಡಿದ್ದು ಒಂದು ಹಿರಿಯ ಸಾಧನೆ.” ’ಆ ವಿಷಯ ತಿಳಿದ ಎಂ.ಎಸ್. ಸುಬ್ಬುಲಕ್ಷ್ಮಿಯವರು ಆಶ್ಚರ್ಯಪಟ್ಟು ಇಂಥದ್ದನ್ನೆಲ್ಲಾ ಬೆಂಗಳೂರು ಆಕಾಶವಾಣಿಯಲ್ಲಿ ಮಾಡುತ್ತಾರೆಯೇ ಎಂದು ಸಂತೋಷ ವ್ಯಕ್ತಪಡಿಸಿದ್ದರು.’ (ಎನ್‌ಎಸ್ ಕೃಷ್ಣಮೂರ್ತಿ)  ಬೆಂಗಳೂರು ಮತ್ತು ಮಂಗಳೂರು ಆಕಾಶವಾಣಿಗಳಿಗಾಗಿ ಶ್ರೀಕಂಠನ್ ಅವರು ತಯಾರಿಸಿದ ’ಶ್ರೀಕೃಷ್ಣ ವೈಭವಂ’ ಎಂಬುದು ಒಂದು ವಿಶೇಷ ಪ್ರಯೋಗ.  ಅದರಲ್ಲಿನ ಕೃತಿಗಳು, ವರ್ಣಗಳು, ಶ್ಲೋಕಗಳು ಮತ್ತು ಭಜನ್‌ಗಳು ಹಿಂದೂಸ್ತಾನಿ ಶೈಲಿಯಲ್ಲಿದ್ದವು.  ನಾರಾಯಣ ತೀರ್ಥರ ಕೃಷ್ಣಲೀಲಾ ತರಂಗಿಣಿಯ ’ರುಕ್ಮಿಣೀ ಕಲ್ಯಾಣ’ದ ಶೆಮ್ಮಂಗುಡಿಯವರು ರಾಗ ಸಂಯೋಜಿಸಿದ ಭಾಗಗಳು ಮತ್ತು ಅವುಗಳ ಜೊತೆಗೆ ಸ್ವತಃ ತಾವೇ ರಾಗ ಸಂಯೋಜಿಸಿರುವ ಭಾಗಗಳನ್ನು ಹಾಡಿದ್ದು ಮತ್ತು ಕಲಿಸಿದ್ದು ಶ್ರೀಕಂಠನ್ ಅವರ ಪಾಲಿಗೆ ತುಂಬಾ ಸ್ಮರಣೀಯ ಅನುಭವವೆನಿಸಿತ್ತು. (ಶ್ರುತಿ)  ಸ್ವಾತಿ ತಿರುನಾಳ್ ಅವರ ’ಭಕ್ತ ಕುಚೇಲ’ ನಾಟಕವನ್ನು ಮತ್ತು ಪುತಿನ ಅವರ ಹರಿಣಾಭಿಸರಣವನ್ನು ನಿರ್ಮಿಸಿದ್ದು ಆರ್‌ಕೆಎಸ್ ಅವರು. ಅದರಲ್ಲಿ ರಾಮನ ಪಾತ್ರವನ್ನು ಶ್ರೀಕಂಠನ್ ಅವರೂ ಮತ್ತು ಸೀತೆಯ ಪಾತ್ರವನ್ನು ಎಸ್ ಕೆ ವಸುಮತಿಯವರು ಮಾಡಿದ್ದರು ಎನ್ನುವುದೊಂದು ವಿಶೇಷ.  ಇವುಗಳಲ್ಲದೆ ವೀಣೆ ಶೇಷಣ್ಣ ಹಾಗೂ ವಾಸುದೇವಾಚಾರ್ಯರನ್ನು ಕುರಿತ ಮತ್ತು ದೊಡ್ಡವರು ಹಾಡಿದ ಪಲ್ಲವಿಗಳು ಮುಂತಾದ ಕಾರ್ಯಕ್ರಮಗಳನ್ನು ನಿರ್ಮಾಣಮಾಡಿದರು.
ಗೀತಾರಾಧನಕ್ಕೆಂದು ಶ್ಲೋಕಗಳು, ಮಹಾಕಾವ್ಯಗಳಿಂದ ಆಯ್ದ ಕವಿತೆಗಳು ಮುಂತಾದವನ್ನು ರಾಗ ಸಂಯೋಜಿಸಿ ಜನಪ್ರಿಯಗೊಳಿಸಿದವರೇ ಶ್ರೀಕಂಠನ್ ಅವರು.  ಆಕಾಶವಾಣಿಯ ಗೀತಾರಾಧನ ಕಾರ್ಯಕ್ರಮ ಒಂದು ಖಚಿತವಾದ ರೂಪ ಪಡೆದದ್ದು ಶ್ರೀಕಂಠನ್ ಅವರ ಕಾಲದಲ್ಲಿ ಎಂದು ಎನ್.ಎಸ್. ಕೃಷ್ಟಮೂರ್ತಿಯವರು ನೆನಪಿಸಿಕೊಳ್ಳುತ್ತಾರೆ.
“ಎಸ್.ಕೃಷ್ಣಮೂರ್ತಿಗಳು, ದೊರೆಸ್ವಾಮಿ ಅಯ್ಯಂಗಾರ್ಯರು  ಇವರು ತಯಾರಿಸುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲೂ ಲೀಡಿಂಗ್ ರೋಲ್ ಶ್ರೀಕಂಠನ್ ಅವರದ್ದು.  ಆಕಾಶವಾಣಿಯಲ್ಲಿ ಯಾವುದೇ ಸ್ಪೆಷಲ್ ಫೀಚರ್ ಮಾಡಿದರೂ ಅದರಲ್ಲಿ ’ಆರ್.ಕೆ. ಶ್ರೀಕಂಠನ್ ಈಸ್ ಎ ಮಸ್ಟ್.’  ಪುತಿನ ಅವರ ಎಲ್ಲಾ ಗೀತರೂಪಕಗಳಲ್ಲಿಯೂ ಶ್ರೀಕಂಠನ್ ಅವರು ಹಾಡಿದ್ದಾರೆ.
“ಆಕಾಶವಾಣಿಯಲ್ಲಿ ಸುಮಾರು ೨೫ರಿಂದ ೩೦ ಗಮನಾರ್ಹವಾದ ಸಂಗೀತ ರೂಪಕಗಳನ್ನು ಶ್ರೀಕಂಠನ್ ಅವರು ತಯಾರಿಸಿದರು.  ಅದರಲ್ಲಿ ವಿಶೇಷವಾದುದು “ರವೀಂದ್ರನಾಥ್ ಟ್ಯಾಗೋರರ ಮೇಲೆ ಕರ್ನಾಟಕ ಸಂಗೀತದ ಪ್ರಭಾವವನ್ನು ಕುರಿತ ಫೀಚರ್.  ಅದರ ಸ್ಕ್ರಿಪ್ಟ್‌ಅನ್ನು ಬಿವಿಕೆ ಶಾಸ್ತ್ರಿಯವರು ತಯಾರಿಸಿದ್ದರು.  ಬೆಂಗಾಲಿ ಅಸೋಸಿಯೇಷನ್ನಿನವರು ರವೀಂದ್ರರ ಕೃತಿಯನ್ನು ಪ್ರಸ್ತುತಿ ಪಡಿಸಿದರು.  ರವೀಂದ್ರರ ಕೃತಿಗಳಿಗೆ ಹೆಚ್ಚು ಕಡಿಮೆ ಸಂವಾದಿಯಾಗಿದ್ದ ಲಾವಣ್ಯರಾಮ, ಮೀನಾಕ್ಷಿಮೇ ಮುದಂ ದೇಹಿ ಕೃತಿಗಳನ್ನು ಶ್ರೀಕಂಠನ್ ಅವರು ಹಾಡಿದರು.  ಇವು ಮತ್ತು ಟ್ಯಾಗೋರರ ಕೃತಿಗಳು ತದ್ರೂಪವಾಗಿದ್ದವು ಎಂದು ಹೇಳುವುದಕ್ಕಾಗದಿದ್ದರೂ, ಆ ಮಟ್ಟನ್ನು ಅವರು  ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತಿತ್ತು. ಈ ತೌಲನಿಕ ಫೀಚರ್‌ಗೆ ಆಕಾಶವಾಣಿಯ ಬಹುಮಾನ ಕೂಡ ದೊರಕಿತು.” (ಎನ್‌ಎಸ್‌ಕೆ)
ಸುಮಾರು ೫೦ರ ದಶಕದ ಕೊನೆಯ ಭಾಗ.  ಆಕಾಶವಾಣಿಯಲ್ಲಿ ’ಗಾನವಿಹಾರ-ಸಂಗೀತಪಾಠ’ ಎನ್ನುವ ಕಾರ್ಯಕ್ರಮ ನಿಗದಿತವಾಗಿ ಪ್ರಸಾರವಾಗುತ್ತಿತ್ತು.  ಪಾಠ ಹೇಳಿಕೊಡುತ್ತಿದ್ದವರು ಶ್ರೀಕಂಠನ್ ಅವರು.  ಶಿಷ್ಯರಾಗಿ ಆಕಾಶವಾಣಿಯ ಕಲಾವಿದರೇ ಯಾರಾದರೂ ಇರುತ್ತಿದ್ದರು.  ಆದರೆ ಉಳಿದಂತೆ ಕಲಿಯುತ್ತಿದ್ದವರು ಕಣ್ಣಿಗೆ ಕಾಣದ ನೂರಾರು ಶಿಷ್ಯರು.  ಅಂತಹ ನೂರಾರು ಏಕಲವ್ಯರಲ್ಲಿ ಆಕಾಶವಾಣಿಯ ನಿಲಯದ ನಿರ್ದೇಶಕರಾಗಿ ನಿವೃತ್ತರಾದ ಎನ್.ಎಸ್. ಕೃಷ್ಣಮೂರ್ತಿಯವರೂ ಒಬ್ಬರು.  ಆಕಾಶವಾಣಿಯಂಥ ಮಾಧ್ಯಮವನ್ನು ಶೈಕ್ಷಣಿಕವಾಗಿ ಶ್ರೀಕಂಠನ್ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಷ್ಟೇ ಅಲ್ಲದೆ ಒಬ್ಬ ಗುರುವಾಗಿ ತಮ್ಮ ವಿಶೇಷ ಸಾಮರ್ಥ್ಯವನ್ನೂ ಸಾಬೀತುಪಡಿಸಿದರು. ಗಾನವಿಹಾರವನ್ನು ಕೇಳಿ ಕಲಿಯುತ್ತಿದ್ದ ಏಕಲವ್ಯನಾಗಿ ಎನ್‌ಎಸ್‌ಕೆ ಅವರ ಅನುಭವ ಮನಮುಟ್ಟುವಂತಿದೆ.
“ಶ್ರೀಕಂಠನ್ ಬೆಂಗಳೂರು ಆಕಾಶವಾಣಿಗೆ ಬಂದದ್ದು ೧೯೫೬ರಲ್ಲಿ.  ಶ್ರೀಕಂಠನ್ ಅವರು ಆಕಾಶವಾಣಿ ಮೂಲಕ ಹೇಳಿಕೊಡುತ್ತಿದ್ದ ರೀತಿ ತುಂಬ ಅಪರೂಪದ್ದು.  ಅವರು ಹೇಳಿಕೊಡುತ್ತಿದ್ದುದು ತುಂಬಾ ಖಚಿತವಾಗಿ ಇರುತ್ತಿತ್ತು.  ಹಾಗೆ ಹೇಳಿಕೊಡುವುದು ಅತ್ಯಂತ ಕಷ್ಟ. ರೇಡಿಯೋ ಮೂಲಕ ಮನದಟ್ಟು ಮಾಡಿಕೊಡುವ ಕ್ರಮ ತುಂಬಾ ಕಷ್ಟದ್ದು.  ಎದುರಿಗಿದ್ದರೆ ತಪ್ಪು ತಿದ್ದಿ ಬಿಡಬಹುದು.  ಆಕಾಶವಾಣಿಯಲ್ಲಿಯೂ ಒಬ್ಬ ವಿದ್ಯಾರ್ಥಿ ಇರುತ್ತಿದ್ದ.  ಅವನಿಗೆ ಅಲ್ಲೇ ತಿದ್ದಿ, ಬೈದು ಸರಿಪಡಿಸಿ ಹೇಳಿಕೊಡುವಾಗ  ಅವರು ನಮ್ಮನ್ನೇ ಉದ್ದೇಶಿಸಿ ಹೇಳಿಕೊಡ್ತಾ ಇದ್ದಾರೆ ಅಂತ ಅನ್ನಿಸೋ ಹಾಗೆ ಮಾಡುತ್ತಿದ್ದರು.  ಶ್ರುತಿ ಸೇರ‍್ತು, ಸೇರ‍್ತಾ ಇಲ್ಲ, ಗಾಂಧಾರ ಹೀಗಲ್ಲ ಹಾಗೆ ಹಿಡೀಬೇಕು ಅಂತ ಹೇಳಿಕೊಡ್ತಾ ಇದ್ರು. ಹಾಗೆ ನಾನು ಕಲಿತಿದ್ದರಲ್ಲಿ ನನಗೆ ತುಂಬಾ ನೆನಪಿರೋದು ಅಂದರೆ ಮುಖಾರಿ ರಾಗದ ’ಎಂತ ನಿನ್ನೇ’ ಕೃತಿ.  ಮತ್ತೊಂದು ದೀಕ್ಷಿತರ ಚತುರ್ದಶ ರಾಗಮಾಲಿಕೆ.  ಅದರ ಮುಂದಿನ ಚರಣ ಕಲಿಯಲು ವಾರದ ಆ ದಿನ ಬರುವುದನ್ನೇ ನಾವು ಕಾಯುತ್ತಿದ್ದೆವು.  ಅದನ್ನೂ ತುಂಬಾ ಚೆನ್ನಾಗಿ ಹೇಳಿಕೊಟ್ಟರು.  ನಂತರ  ಎಂಎಲ್‌ವಿಯವರ ಚತುರ್ದಶ ರಾಗಮಾಲಿಕೆಯ ಡಿಸ್ಕ್  ಬಂದಿತು.  ಅಷ್ಟು ಹೊತ್ತಿಗೆ ಅದು ನಮಗೆ ಬಾಯಿಗೆ ಬಂದು ಹೋಗಿತ್ತು.  ಜೊತೆಗೆ ಅವರ ಬಗ್ಗೆ ಎಷ್ಟು ಸಲಿಗೆ ಬಂದು ಹೋಗಿತ್ತೆಂದರೆ ಒಂದು ಸಲ ಯಾವುದೋ ಒಂದು ಡೌಟ್ ಬಂದಿದೆ ಅಂತ ನಾನು ರೇಡಿಯೋ ಸ್ಟೇಷನ್ನಿಗೇ ಹೋಗಿಬಿಟ್ಟೆ.  ಶ್ರೀಕಂಠನ್ ಅವರು ಅಲ್ಲೇ ಕುಳಿತಿದ್ದರು.  ಸಾರ್ ನನಗೆ ಹೀಗೆ ಅನುಮಾನ ಬಂದಿದೆ ಎಂದಿದ್ದಕ್ಕೆ, ಎಲ್ಲಿ ಅನುಮಾನ ಬಂದಿದೆ, ಸರಿಯಾಗಿ ಅಭ್ಯಾಸ ಮಾಡಿದ್ದೀಯೇನೋ ಎಂದು ಕೇಳಿದರು.  ನಾನು ಅನುಮಾನವನ್ನು ಹೇಳಿದ್ದಕ್ಕೆ, ಹೆಚ್.ಕೆ .ನಾರಾಯಣ್ ಅವರನ್ನು ಕರೆದು ’ನಾರಾಯಣ ಇವರಿಗೊಂದು ಸ್ಕ್ರಿಪ್ಟ್ ಕೊಟ್ಟುಬಿಡಪ್ಪಾ ತುಂಬಾ ಉತ್ಸಾಹದಿಂದ ಕಲಿಯುತ್ತಿದ್ದಾರೆ’ ಅಂತ ಅಂದರು.  ಆದರೆ ಎಲ್ಲಿ ಅನುಮಾನವಿದೆ ಅಂತ ಅಲ್ಲೇ ಸೂಕ್ಷ್ಮವಾಗಿ ಪರೀಕ್ಷೆಮಾಡಿ ವಿದ್ಯಾರ್ಥಿಯನ್ನು ಅವರಾಗಲೇ ಅಳೆದಾಗಿತ್ತು.  ಅಂದು ಅವರ ಬಗ್ಗೆ ಅಪಾರವಾದ ಗೌರವ ಬಂದುಬಿಟ್ಟಿತು.  ಪಾಠ ಹೇಳಿಸಿಕೊಂಡರೆ ಅಂತಹ ಗುರುಗಳಿಂದ ಹೇಳಿಸಿಕೊಳ್ಳಬೇಕು ಅಂತ ಅನ್ನಿಸಿಬಿಟ್ಟಿತು.”
ಆಕಾಶವಾಣಿಯಲ್ಲಿ ದೊರಕಿದ ಪ್ರತಿಯೊಂದು ಅವಕಾಶದಲ್ಲೂ ಕಲಿತು, ಕಲಿಸಿ, ಬೆಳೆದವರು ಶ್ರೀಕಂಠನ್. ಗಾನವಿಹಾರ ನಡೆಸುವಾಗ ಶಿಷ್ಯರು ಹಿರಿಯ ವಿದ್ವಾಂಸರು ಹಾಡಿದ ಯಾವುದೋ ಕೃತಿಯನ್ನು ಕೇಳುತ್ತಿದ್ದರು.  “ಕೃತಿ ನನಗೆ ಗೊತ್ತಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಆಕಾಶವಾಣಿ ಲೈಬ್ರರಿಗೆ ಹೋಗಿ ಅದನ್ನು ಹುಡುಕಿ, ಕೇಳಿ, ಅದಕ್ಕೆ ಸ್ವರಪಡಿಸಿ ಸಿದ್ಧಮಾಡಿಕೊಂಡು ಹೇಳಿಕೊಡುತ್ತಿದ್ದೆ.  ಅಲ್ಲಿ ಎರಡು ಉಪಯೋಗ, ನಾನೂ ಕಲಿತ ಹಾಗೆ ಆಯ್ತು, ಬೇರೆಯವರಿಗೆ ಕಲಿಸಿದ ಹಾಗೂ ಆಯ್ತು.”
ತಾವು ಆಕಾಶವಾಣಿಯಿಂದ ಪಡೆದಷ್ಟನ್ನೂ ಕೆರೆಯ ನೀರನು ಕೆರೆಗೆ ಚಲ್ಲಿದಂತೆ ಅವರು ಆಕಾಶವಾಣಿಗೆ ವಾಪಸ್ಸು ಕೊಟ್ಟಿದ್ದಾರೆ ಕೂಡ.  ಆದರೆ ಆಕಾಶವಾಣಿಗೆ ಶ್ರೀಕಂಠನ್ ಅವರು ಏನು ಮಾಡಿದರು ಎನ್ನುವುದರ ಬಗ್ಗೆ ಎಲ್ಲೂ ಯಾವ ಉಲ್ಲೇಖವೂ ಇಲ್ಲ.  ಅದೇ ದುರಂತ.  ಕೈತುಂಬ ಸಂಬಳವೂ ಇಲ್ಲದೆ, ಅಷ್ಟೇ ಏಕೆ ಪಿಂಚಣಿಯೂ ಇಲ್ಲದಿದ್ದರೂ ಕೂಡ ತಾವು ಮಾಡುವ ಕೆಲಸವನ್ನು ದೇವರಪೂಜೆಯಷ್ಟೇ ಶ್ರದ್ಧೆಯಿಂದ ಮಾಡಿದ ಶ್ರೀಕಂಠನ್ ಅವರ ಕೆಲಸದಿಂದ ಆಕಾಶವಾಣಿಯಲ್ಲಿ ಕರ್ನಾಟಕ ಸಂಗೀತ ಬೆಳೆಯಿತು ಎನ್ನುವುದು ಎಲ್ಲರೂ ಗುರುತಿಸಲೇಬೇಕಾದ ಸಂಗತಿ.