V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ

 

ವಿಜಯೇಂದ್ರ ರಾವ್

 

ವಿಜಯೇಂದ್ರ ಕಸ್ತೂರಿ ರಂಗ ವರದರಾಜ (ವಿ.ಕೆ.ಆರ್.ವಿ.) ರಾವ್ ಸ್ವಾತಂತ್ರ್ಯೋತ್ತರ ಭಾರತೀಯ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ದಿಗ್ಗಜರು. ಅವರು ಸ್ಥಾಪಿಸಿದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (ಡಿಎಸ್‌ಇ) ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ ಗ್ರೋತ್ (ಐಇಜಿ) ಎರಡು ಸಂಸ್ಥೆಗಳು ಭಾರತದಲ್ಲಿ ಆರ್ಥಿಕ ಮತ್ತು ಸಮಾಜಶಾಸ್ತ್ರೀಯ ತರಬೇತಿ ಮತ್ತು ಸಂಶೋಧನೆಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವ ಕೇಂದ್ರಗಳು. ಹಾಗೆಯೇ ಅವರು ಸ್ಥಾಪಿಸಿದ ಇನ್ನೊಂದು ಮಹತ್ವದ ಸಂಸ್ಥೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಇಕನಾಮಿಕ್ ಚೇಂಜ್ (ಐಎಸ್‌ಇಸಿ). ಇದೊಂದು ಪ್ರಮುಖ ಅಂತರಶಿಸ್ತೀಯ ಸಂಶೋಧನಾ ಮತ್ತು ತರಬೇತಿ ಕೇಂದ್ರ. ಇದಲ್ಲದೆ, ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ಐಸಿಎಸ್‌ಎಸ್‌ಆರ್), ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್ ಮತ್ತು ಸಂಬಂಧಿತ ಜನಸಂಖ್ಯಾ ಕೇಂದ್ರಗಳ ಜಾಲ, ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ (ಐಐಎಫ್‌ಟಿ) ಸೇರಿದಂತೆ ಹಲವು ಗಮನಾರ್ಹ ಸಂಸ್ಥೆಗಳು ಕೂಡ ಅವರ ಚಿಂತನೆಯ ಕೂಸುಗಳೆ ಆಗಿವೆ.

 

ರಾವ್ ಪ್ರಮುಖ ಸಂಸ್ಥೆಗಳನ್ನು ನಿರ್ಮಿಸುವುದರ ಜೊತೆಗೆ ಅಭಿವೃದ್ಧಿ ಅರ್ಥಶಾಸ್ತ್ರವನ್ನು ಬೆಳೆಸಿದ ಮೊದಲಿಗರಲ್ಲಿ ಒಬ್ಬರು. ಅವರು ಪ್ರಾರಂಭದಲ್ಲಿ ಅನ್ವಯಿಕ ಮತ್ತು ಸೈದ್ಧಾಂತಿಕ ಆರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಾಡಿದ್ದ ಅಧ್ಯಯನ ಆ ಕ್ಷೇತ್ರದಲ್ಲಿ ಅಪಾರ ಪ್ರಭಾವ ಬೀರಿದೆ. ಮುಂಬೈ ವಿಶ್ವವಿದ್ಯಾಲಯದಲ್ಲಿ (ಹಿಂದೆ ಅದನ್ನು ಬಾಂಬೆ ವಿಶ್ವವಿದ್ಯಾಲಯ ಎಂದು ಕರೆಯುತ್ತಿದ್ದರು) ಅವರು ಎಂಎಗೆ ಪದವಿಗಾಗಿ ’ಭಾರತದಲ್ಲಿ ತೆರಿಗೆ’ ಎಂಬ ವಿಷಯದಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ಅದು ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಈ ವಿಷಯದ ಬಗೆಗಿನ ಮೊದಲ ಅನ್ವಯಿಕ ಅಧ್ಯಯನಗಳಲ್ಲಿ ಒಂದಾಗಿತ್ತು.

ಬಹುಶಃ ಅವರ ಅತ್ಯಂತ ಪ್ರಮುಖ ಕೊಡುಗೆಯೆಂದರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವರು ಮಂಡಿಸಿದ್ದ ಪಿಎಚ್‌ಡಿ ಪ್ರಬಂಧ. ಇದು ಭಾರತದ ರಾಷ್ಟ್ರೀಯ ವರಮಾನವನ್ನು ಕುರಿತ ಅಧ್ಯಯನವಾಗಿತ್ತು. ಅವರು ಪ್ರಬಂಧದಲ್ಲಿ ಅತ್ಯಂತ ಕಡಿಮೆ ದತ್ತಾಂಶವನ್ನು ಬಳಸಿಕೊಂಡು ಜಿಡಿಪಿಯನ್ನು ಅಂದಾಜು ಮಾಡುವ ವಿಧಾನಗಳನ್ನು ರೂಪಿಸಲು ಪ್ರಯತ್ನಿಸಿದ್ದರು. ಆ ನಿಟ್ಟಿನಲ್ಲಿ ಇದು ಮೊದಲ ಪ್ರಯತ್ನವಾಗಿತ್ತು. ಇದರ ಪರಿಣಾಮ ಜಗತ್ತಿನಾದ್ಯಂತ ಆಯಿತು. ಅವರ ಪ್ರಮುಖ ಲೇಖನ “ಅಭಿವೃದ್ಧಿಶೀಲ ದೇಶದಲ್ಲಿ ಹೂಡಿಕೆ, ಆದಾಯ ಮತ್ತು ಗುಣಕ”. ಇದು ಕೀನ್ಸ್‌ನ ಸಾಮಾನ್ಯ ಸಿದ್ದಾಂತವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಷ್ಟರ ಮಟ್ಟಿಗೆ ಪ್ರಸ್ತುತ ಎಂದು ಮೌಲ್ಯಮಾಪನ ಮಾಡುವ ಮೊದಲ ಪ್ರಯತ್ನವಾಗಿತ್ತು. ಅದರಲ್ಲಿ ಅವರು ಅಭಿವೃದ್ಧಿಶೀಲ ದೇಶಗಳಲ್ಲ್ಲಿ ಕೀನ್ಸ್‌ನ ನೀತಿಗಳು ಹಣದುಬ್ಬರಕ್ಕೆ ಕಾರಣವಾಗುತ್ತವೆ ಎಂದು ವಾದಿಸಿದ್ದರು. ಈ ಲೇಖನವನ್ನು ಹಲವಾರು ದಶಕಗಳ ಕಾಲ ವಿಶ್ವದಾದ್ಯಂತ ಅಭಿವೃದ್ಧಿ ಆರ್ಥಶಾಸ್ತ್ರದ ಕೋರ್ಸುಗಳಲ್ಲಿ ಕಡ್ಡಾಯವಾಗಿ ಓದಬೇಕಿತ್ತು. ಅವರು ಭಾರತದಲ್ಲಿ ಆಹಾರ ಪೂರೈಕೆಯ ಪ್ರಮಾಣ ಹಾಗೂ ಅವುಗಳಲ್ಲಿರುವ ಪೌಷ್ಟಿಕಾಂಶದ ಪ್ರಮಾಣವನ್ನು ಲೆಕ್ಕ ಮಾಡಲೂ ಪ್ರಯತ್ನಿಸಿದ್ದರು.

ರಾವ್ ಅವರ ಪ್ರಭಾವ ಭಾರತದಾಚೆಗೂ ಗಣನೀಯವಾಗಿ ಆಗಿದೆ. ಆರ್ಥಿಕ ಅಭಿವೃದ್ಧಿಯನ್ನು ಕುರಿತ ಸಂಯುಕ್ತ ರಾಷ್ಟ್ರಗಳ ಉಪ-ಆಯೋಗದ ಅಧ್ಯಕ್ಷರಾಗಿದ್ದರು (೧೯೪೭-೧೯೫೦). ಆ ಸಮಯದಲ್ಲಿ ಅವರು ಅಂತರರಾಷ್ಟ್ರೀಯ ಅಭಿವೃದ್ದಿ ಸಂಘಟನೆಗೆ (ಐಡಿಎ) ಅವಶ್ಯಕ ಬೌದ್ಧಿಕ ಬುನಾದಿಯನ್ನು ಹಾಕಿಕೊಟ್ಟರು. ಅವರು ರಚಿಸಿದ ಆಯೋಗದ ವರದಿಯು ಯುಎನ್‌ಇಡಿಎ (ಆರ್ಥಿಕ ಅಭಿವೃದ್ದಿಗಾಗಿ ಸಂಯುಕ್ತ ರಾಷ್ಟ್ರಗಳ ಆಡಳಿತ) ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿತು. ಅವುಗಳು (೧) ಹಿಂದುಳಿದ ದೇಶಗಳಿಗೆ ಆರ್ಥಿಕ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸುವುದಕ್ಕೆ ಅವಶ್ಯಕವಾದ ತಾಂತ್ರಿಕ ನೆರವನ್ನು ಒದಗಿಸುವುದು; (೨) ಹಿಂದುಳಿದ ದೇಶಗಳು ಈಗಾಗಲೇ ಹಮ್ಮಿಕೊಂಡಿರುವ ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ಸಹಾಯವನ್ನು ಸಂಘಟಿಸುವುದು (೩) ಹಿಂದುಳಿದ ದೇಶಗಳಿಗೆ ಅಗತ್ಯ ವಸ್ತುಗಳನ್ನು, ಉಪಕರಣಗಳನ್ನು, ಸಿಬ್ಬಂದಿಯನ್ನು ಪಡೆಯಲು ಸಹಾಯ ಮಾಡುವುದು; (೪) ಆರ್ಥಿಕ ಅಭಿವೃದ್ಧಿಗೆ ಅವಶ್ಯಕವಾದ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವುದು ಅಥವಾ ಹಣಕಾಸನ್ನು ಪಡೆಯುವುದಕ್ಕೆ ನೆರವಾಗುವುದು . . . .” ಈ ಎಲ್ಲಾ ಕ್ರಮಗಳನ್ನು ಯುಎನ್‌ಇಡಿಎ ತೆಗೆದುಕೊಳ್ಳುವುದು ಅವಶ್ಯಕ ಎಂದು ವರದಿ ವಿವರಿಸಿತ್ತು. ಹಾಗೆಯೇ ಐಡಿಎ ಅನುಸರಿಸಬೇಕಾದ ಇತರ ತತ್ವಗಳನ್ನು ಅವರು ರೂಪಿಸಿದರು. ವಿಶ್ವ ಬ್ಯಾಂಕ್ ಮುಖ್ಯವಾಗಿ ಯುದ್ಧೋತ್ತರ ಪುನರ್‌ನಿರ್ಮಾಣದ ಕೆಲಸದಲ್ಲೇ ತೊಡಗಿಕೊಂಡಿತ್ತು. ಇವರ ವರದಿಯಿಂದಾಗಿ ಅದು ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಸಂಸ್ಥೆಯಾಗಿ ರೂಪಾಂತರಗೊಳ್ಳುವಂತೆ ಆಯಿತು. ಇದು ರಾವ್ ಅವರ ಮಹತ್ತರ ಸಾಧನೆ. ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ.

 

ರಾವ್ ೧೯೦೮ ರಲ್ಲಿ ತಮಿಳುನಾಡಿನ ಕಾಂಚೀಪುರದಲ್ಲಿ ಕನ್ನಡ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಕುಟುಂಬ ಶ್ರೀರಂಗಂನಲ್ಲಿ ಹಲವಾರು ತಲೆಮಾರುಗಳಿಂದ ನೆಲೆಸಿತ್ತು. ಅವರ ತಂದೆ ಕಸ್ತೂರಿ ರಂಗಾಚಾರ್ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಒಂದು ಸಣ್ಣ ಸರ್ಕಾರಿ ಕೆಲಸವನ್ನು ಮಾಡುತಿದ್ದರು. ಬದುಕು ಅನಿಶ್ಚಿತವಾಗಿತ್ತು. ಅಮೇಲೆ ಅವರು ಬಾಂಬೆಗೆ (ಈಗ ಮುಂಬೈ) ಸ್ಥಳಾಂತರಗೊಂಡರು. ಬಾಂಬೆಯ ವಾಣಿಜ್ಯ ಲೋಕದ ಕೆಲವು ಪ್ರಮುಖ ವ್ಯಕ್ತಿಗಳಿಗೆ ಜ್ಯೋತಿಷಿಯಾಗಿ ಸಲಹೆ ನೀಡುತ್ತಿದ್ದರು. ಅದರಿಂದ ಬರುತ್ತಿದ್ದ ಆದಾಯವೂ ತುಂಬಾ ಅನಿಶ್ಚಿತವಾಗಿತ್ತು. ಜೊತೆಗೆ ಕಸ್ತೂರಿ ರಂಗಾಚಾರ್ ಅವರಿಗೆ ಕುದುರೆ ಜೂಜಿನ ಹುಚ್ಚು ಬೇರೆ ಇತ್ತು. ಎರಡೂ ಸೇರಿಕೊಂಡು ಬದುಕು ಇನ್ನೂ ಅನಿಶ್ಚಿತವಾಯಿತು. ಹಾಗಾಗಿ ರಾವ್, ಅವರ ತಾಯಿ ಭಾರತಿ ಮತ್ತು ಐದು ಜನ ಒಡಹುಟ್ಟಿದವರು ನಿರಂತರವಾಗಿ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದರು. ರಾವ್ ಅತ್ಯಂತ ಚುರುಕಾದ ಮಗು. ಅವನು ಮುಂದೆ ತಮ್ಮ ಬಡತನಕ್ಕೆ ಮುಕ್ತಿ ಕಾಣಿಸುತ್ತಾನೆ ಎಂಬ ನಂಬಿಕೆಯಿಂದ ಇರುವ ದುಡ್ಡನ್ನೆಲ್ಲಾ ಅವನ ಮೇಲೆ ಹೂಡಲು ಅವರ ತಂದೆ ನಿರ್ಧರಿಸಿದ್ದರು.

 

ರಾವ್ ಸ್ನಾತಕೋತ್ತರ ಶಿಕ್ಷಣಕ್ಕೆ ಬಾಂಬೆಯ ವಿಲ್ಸನ್ ಕಾಲೇಜ್ ಸೇರಿದರು. ಅಲ್ಲಿ ಅವರು ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಆರಿಸಿಕೊಂಡರು. ಯೂಸುಫ್ ಮೆಹೆರಾಲಿಯವರ ಪ್ರಭಾವಕ್ಕೆ ಒಳಗಾದರು. ಮೆಹೆರಾಲಿ ಒಬ್ಬ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತರಾಗಿದ್ದರು. ರಾವ್ ಅವರಲ್ಲಿ ಬಲವಾದ ಸಾಮಾಜಿಕ ಕಾಳಜಿ ಮೂಡುವುದಕ್ಕೆ ಅವರು ಕಾರಣ. ಗಾಂಧೀಜಿಯವರಿಂದ ಮತ್ತು ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ರಾವ್ ಖಾದಿಯನ್ನು ಧರಿಸಲು ಪ್ರಾರಂಭಿಸಿದರು. ಅವರ ಮಾತಿನಲ್ಲೇ ಹೇಳುವುದಾದರೆ ಅವರು “ಜೀವನಪರ‍್ಯಂತ ಖಾದಿವಾದಿ”ಯಾದರು. ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಸಿ.ಎನ್. ವಕೀಲ್ ಅವರ ಮಾರ್ಗದರ್ಶನದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. ಅದಕ್ಕಾಗಿ ಮಂಡಿಸಿದ್ದ ಪ್ರಬಂಧ ೧೯೩೧ ರಲ್ಲಿ “ಭಾರತದಲ್ಲಿ ಆದಾಯದ ತೆರಿಗೆ” ಎಂಬ ಹೆಸರಿನಲ್ಲಿ ಪ್ರಕಟವಾಯಿತು. ರಾವ್ ಅವರಿಗೆ ಮುಕ್ತ ಮಾರುಕಟ್ಟೆಯ ಬಗ್ಗೆ ಒಲವಿರಲಿಲ್ಲ. ಅವರ ಒಲವು ಯೋಜಿತ ಆರ್ಥಿಕ ಅಭಿವೃದ್ಧಿಯ ಕಡೆಗಿತ್ತು. ಇದು ನಂತರದಲ್ಲಿ ವಕೀಲ್‌ರೊಂದಿಗಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಅವರು ಮುಂಬೈ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪದವೀಧರರಾದರು.

ಆರ್ಥಶಾಸ್ತ್ರದಲ್ಲಿ ಇನ್ನೂ ಆಳವಾದ ತರಬೇತಿಯ ಅಗತ್ಯವಿದೆ ಎಂದು ಅವರಿಗೆ ತೋರಿತು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್‌ಎಸ್‌ಇ) ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರು. ಟಾಟಾ ಟ್ರಸ್ಟ್ ಮತ್ತು ಇತರ ಮೂಲಗಳಿಂದ ಸಾಲ ಮತ್ತು ಧನಸಹಾಯಗಳಿಂದ ಬೇಕಾದ ಹಣವನ್ನು ಒಟ್ಟುಮಾಡಿಕೊಂಡರು. ೧೯೩೨ರಲ್ಲಿ ಕೇಂಬ್ರಿಡ್ಜ್‌ನ ಗೊನ್ವಿಲ್ಲೆ ಮತ್ತು ಕೈಯಸ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಸೇರಲು ನಿರ್ಧರಿಸಿದರು. ಕೇಂಬ್ರಿಡ್ಜ್ ಆಗ ಬೌದ್ಧಿಕವಾಗಿ ಉತ್ತುಂಗದಲ್ಲಿತ್ತು. ಕೇನ್ಸ್ ತಮ್ಮ ಜನರಲ್ ಥಿಯರಿಯನ್ನು ಬರೆಯುತ್ತಿದ್ದರು. ಎ.ಸಿ. ಪಿಗೂ, ಪಿಯೆರೊ ಸ್ರಾಫಾ, ಜೋನ್ ರಾಬಿನ್ಸನ್, ಮತ್ತು ರಿಚರ್ಡ್ ಕಾನ್ ಇವರ ಜೊತೆ ಸೇರಿಕೊಂಡು ಕೇನ್ಸ್ ೨೦ನೇ ಶತಮಾನದ ಆರ್ಥಶಾಸ್ತ್ರದ ಬುನಾದಿಯನ್ನು ರೂಪಿಸುತ್ತಿದ್ದರು.

 

ಕೇನ್ಸ್‌ನ ಪ್ರಸಿದ್ಧ ಪೊಲಿಟಿಕಲ್ ಎಕಾನಮಿ ಕ್ಲಬ್‌ಗೆ ರಾವ್ ಅವರನ್ನು ಆಹ್ವಾನಿಸಲಾಯಿತು. ಸಾಮಾನ್ಯವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅದರಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿರಲಿಲ್ಲ. ವಾರಕ್ಕೊಮ್ಮೆ ಅಲ್ಲಿ ಪ್ರಸ್ತುತ ನಡೆಯುತ್ತಿದ್ದ ಅಧ್ಯಯನಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಅದರಲ್ಲಿ ಕೇನ್ಸ್‌ನ ಜನರಲ್ ಥಿಯರಿಯ ಆರಂಭಿಕ ಕರಡನ್ನು ಕುರಿತೂ ಚರ್ಚೆಯಾಗಿತ್ತು. ಅಲ್ಲಿ ತುಂಬಾ ನಿಷ್ಠೂರವಾದ ಚರ್ಚೆ ನಡೆಯುತ್ತಿತ್ತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಅರ್ಥಶಾಸ್ತ್ರದ ವಿದ್ಯಾರ್ಥಿಗೆ ನೀಡುವ ಆಡಮ್ ಸ್ಮಿತ್ ಪ್ರಶಸ್ತಿಯನ್ನು ರಾವ್ ಗೆದ್ದುಕೊಂಡಿದ್ದರು. ಇದು ಅವರಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿತ್ತು. ಅವರ ಸಹಪಾಠಿಗಳಾಗಿದ್ದ ಅಲೆಕ್ಸಾಂಡರ್ ಕೇರ‍್ನ್‌ಕ್ರಾಸ್ ಮತ್ತು ಹಾನ್ಸ್ ಸಿಂಗರ್ ಕೊನೆಯವರೆಗೂ ಅವರ ಆತ್ಮೀಯ ಗೆಳೆಯರಾಗಿದ್ದರು. ರಾವ್ ತಮ್ಮ ಸಹಪಾಠಿಗಳೊಂದಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಪ್ರತಿವಾರ ಹೋಗಿಬರುತ್ತಿದ್ದರು. ಅಲ್ಲಿ ಅವರಿಗೆ ಜಾನ್ ಮತ್ತು ಉರ್ಸುಲಾ ಹಿಕ್ಸ್, ಅಬ್ಬಾ ಲೆರ್ನರ್, ಮತ್ತು ಪಾಲ್ ಸ್ವೀಜಿಯವರ ಪರಿಚಯವಾಯಿತು. “೨೦-೩೦” ಯುವಅರ್ಥಶಾಸ್ತ್ರಜ್ಞರೊಂದಿಗೆ ಸೇರಿಕೊಂಡು ಇವರು “ರಿವ್ಯೂ ಆಫ್ ಎಕನಾಮಿಕ್ ಸ್ಟಡೀಸ್ನ್ನು ಸ್ಥಾಪಿಸಿದರು. ಬಹುತೇಕ ಯುವ ಬರಹಗಾರರಿಗೆ ಪ್ರಖ್ಯಾತ ಜರ್ನಲ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಯುವ ಬರಹಗಾರರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ಇದೊಂದು ವೇದಿಕೆಯಾಗಿತ್ತು. ಆ ಮೂಲಕ ಯುವ ಲೇಖಕರನ್ನು ಪ್ರೋತ್ಸಾಹಿಸುವ ಉದ್ದೇಶ ಇದಕ್ಕಿತ್ತು.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಲಿಯೋನೆಲ್ ರಾಬಿನ್ಸ್ ಜೊತೆಯಲ್ಲಿ ರಾವ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ರಾಬಿನ್ಸ್ ಅರ್ಥಶಾಸ್ತ್ರಕ್ಕೆ ನೀಡಿದ್ದ ವ್ಯಾಖ್ಯೆಯನ್ನು ಕುರಿತಂತೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ರಾಬಿನ್ಸ್ ವ್ಯಾಖ್ಯೆ ತೀರಾ ಪ್ರಭಾವ ಬೀರಿತ್ತು. ರಾಬಿನ್ಸ್ ಪ್ರಕಾರ ಅರ್ಥಶಾಸ್ತ್ರ ಅನ್ನುವುದು “ಮಾನವನ ವರ್ತನೆಯನ್ನು ಬಳಕೆ ಹಾಗೂ ಸಂಪನ್ಮೂಲಗಳ ನಡುವಿನ ಸಂಬಂಧವಾಗಿ ಅಧ್ಯಯನ ಮಾಡುವ ವಿಜ್ಞಾನ. ಸಂಪನ್ಮೂಲಗಳು ಮಿತವಾಗಿರುತ್ತವೆ. ಹಾಗೂ ಹಲವು ಪರ್ಯಾಯ ಉದ್ದೇಶಕ್ಕೆ ಅವನ್ನು ಬಳಸಬಹುದಾಗಿರುತ್ತದೆ”. ಪರ್ಯಾಯವಾಗಿ ರಾವ್ ನೀಡಿದ್ದ ವ್ಯಾಖ್ಯೆ ಹೆಚ್ಚು ದೀರ್ಘವಾಗಿತ್ತು. ಆದರೆ ಹೆಚ್ಚು ಸಮಗ್ರವಾಗಿತ್ತು.

“ಆರ್ಥಿಕ ಚಟುವಟಿಕೆಗಳಲ್ಲಿ ಗುರಿ ಹಾಗೂ ವಿಧಾನ ಎರಡೂ ಸೇರಿರುತ್ತವೆ. ಆರ್ಥಿಕ ಮೌಲ್ಯವಿರುವ ಹಾಗೂ ವಿನಿಮಯ ಮಾಡಬಹುದಾದ ಸರಕುಗಳು ಮತ್ತು ಸೇವೆಗಳನ್ನು ಪಡೆದುಕೊಳ್ಳುವುದು ಇದರ ಉದ್ದೇಶ. ಆದರೆ ಆ ಪ್ರಕ್ರಿಯೆಯಲ್ಲಿ (ಎ) ಆರ್ಥಿಕ ಸರಕುಗಳು ಸಮುದಾಯದ ಮೂಲಭೂತ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು (ಬಿ) ಕನಿಷ್ಠ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಹಾಗೂ ಉತ್ಪಾದನಾ ಕ್ರಿಯೆಗಳಲ್ಲಿ ಸಂಪನ್ಮೂಲಗಳು ಪೋಲಾಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಮತ್ತು (ಸಿ) ಪ್ರತಿಯೊಂದು ಮಾನವ ಚಟುವಟಿಕೆಯ ಗುರಿ ಮಾನವ ವ್ಯಕ್ತಿತ್ವದ ಅಭಿವೃದ್ಧಿಯನ್ನು ಪೋಷಿಸಿ ಬೆಳಸುವುದಾಗಬೇಕೇ ಹೊರತು ಅದಕ್ಕೆ ಅಡ್ಡಿ ಪಡಿಸುವುದಲ್ಲ.” ಅರ್ಥಶಾಸ್ತ್ರವನ್ನು ಅದರ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಅಧ್ಯಯನ ಮಾಡಬೇಕೇ ಹೊರತು ಪ್ರತ್ಯೇಕವಾಗಿ ಅಧ್ಯಯನ ಮಾಡಬಾರದು ಎಂದು ರಾವ್ ದೃಢವಾಗಿ ನಂಬಿದ್ದರು. ಅವರು ಈ ಕ್ರಮವನ್ನು ಡಿಎಸ್‌ಇ, ಐಇಜಿ, ಮತ್ತು ಐಎಸ್‌ಇಸಿಯಲ್ಲಿ ಜಾರಿಗೆ ತಂದಿದ್ದರು. ಅಲ್ಲಿ ಅರ್ಥಶಾಸ್ತ್ರಜ್ಞರ ಜೊತೆಗೆ ಸಮಾಜಶಾಸ್ತ್ರಜ್ಞರು, ಜನಸಂಖ್ಯಾಶಾಸ್ತ್ರಜ್ಞರು, ಮತ್ತು ರಾಜಕೀಯ ವಿಜ್ಞಾನಿಗಳನ್ನು ನೇಮಿಸಿಕೊಂಡಿದ್ದರು.

ಅವರು ತಮ್ಮ ಪಿಎಚ್‌ಡಿಗೆ ಕಾಲಿನ್ ಕ್ಲಾರ್ಕ್ ಅವರನ್ನು ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಂಡರು. ಮತ್ತು ಅಧ್ಯಯನಕ್ಕೆ ಭಾರತೀಯ ರಾಷ್ಟ್ರೀಯ ವರಮಾನವನ್ನು ಅಂದಾಜು ಮಾಡುವ ಕ್ರಮವನ್ನು ವಿಷಯವನ್ನಾಗಿ ಆರಿಸಿಕೊಂಡರು. ಕಾಲಿನ್ ಕ್ಲಾರ್ಕ್ ಅವರು ರಿಚರ್ಡ್ ಸ್ಟೋನ್ ಅವರಿಗೂ ಮಾರ್ಗದರ್ಶಕರಾಗಿದ್ದರು. ಸ್ಟೋನ್ ಕೂಡ ರಾಷ್ಟ್ರೀಯ ವರಮಾನಕ್ಕೆ ಸಂಬಂಧಿಸಿದಂತಯೇ ಅಧ್ಯಯನ ಮಾಡಿದ್ದು. ಅವರು ರಾವ್ ಅಧ್ಯಯನ ಮಾಡಿದ ಹಲವು ವರ್ಷಗಳ ನಂತರ ಮಾಡಿದ್ದು. ಸ್ಟೋನ್ ಅವರ ಮಾಡಿದ್ದ ಅಧ್ಯಯನಕ್ಕೆ ೧೯೮೪ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಸಿಕ್ಕಿತ್ತು.

ಆ ಸಮಯದಲ್ಲಿ ನಡೆಯುತ್ತಿದ್ದ ಬೌದ್ಧಿಕ ಚರ್ಚೆಗಳಲ್ಲಿ ರಾವ್ ಸಂಪೂರ್ಣವಾಗಿ ಮುಳುಗಿಹೋಗಿದ್ದರು. ರಾವ್ ಅವರನ್ನು ನಂತರ ಕೇಂಬ್ರಿಡ್ಜ್‌ನ ಗಾಯಿಸ್ ಮತ್ತು ಕಾನ್‌ವಿಲ್ ಕಾಲೇಜಿನ ಫೆಲೋ ಆಗಿ ಅಧ್ಯಾಪಕ ವೃತ್ತಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಯಿತು. ಒಂದು ಕಡೆ ಶೈಕ್ಷಣಿಕವಾಗಿ ಅರ್ಥಶಾಸ್ತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಕಾಡುತ್ತಿದ್ದರೆ, ಇನ್ನೊಂದೆಡೆ ತಾಯ್ನಾಡಿಗೆ ಮರಳಿ ಅಲ್ಲಿಯ ಅಭಿವೃದ್ಧಿಗೆ ನೆರವಾಗಬೇಕೆನ್ನುವ ತೀವ್ರ ಸೆಳೆತ ಅವರನ್ನು ಎಳೆಯುತ್ತಿತ್ತು. ಅವರು ಭಾರತಕ್ಕೆ ಮರಳಬೇಕೆಂದು ಕೇನ್ಸ್ ಬಲವಾಗಿಯೇ ಒತ್ತಾಯಿಸುತ್ತಿದ್ದರು. ಇಂಗ್ಸೆಂಡಿನಲ್ಲಿ ಉಳಿಯಬೇಕೆನ್ನುವ ರಾವ್ ಬಯಕೆಯಿಂದ ಅವರು ಸಿಟ್ಟಾಗಿದ್ದಂತೆ ತೋರುತ್ತದೆ. ಹಾಗೆ ಮಾಡುವುದು “ಜಗತ್ತಿನ ಅತಿದೊಡ್ಡ ತಪ್ಪಾಗುತ್ತದೆ” ಎಂದು ಹೇಳಿದ್ದರು (ಲೆಫ್ಟಿನೆಂಟ್ ಕರ್ನಲ್ ಎಂವಿ ಬ್ರೆಟ್‌ಗೆ ಕೇನ್ಸ್‌ರ ಪತ್ರ, ಜೂನ್ ೨೧, ೧೯೩೪). ಇಂಗ್ಲೆಂಡಿನಲ್ಲಿ ಉಳಿಯುವುದಕ್ಕಿಂತ ರಾವ್ ಭಾರತಕ್ಕೆ ಮರಳಿ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗವಹಿಸುವುದು ಒಳ್ಳೆಯದು ಎಂದು ಕೇನ್ಸ್ ಭಾವಿಸಿದರು. ರಾವ್ ೧೯೩೪ರಲ್ಲಿ ಅಹಮದಾಬಾದ್‌ನ ಎಸ್‌ಎಲ್‌ಡಿ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಭಾರತಕ್ಕೆ ಮರಳಿದರು. ಕೇನ್ಸ್ ಈ ಹುದ್ದೆಗಾಗಿ ರಾವ್ ಅವರಿಗೆ ಬರೆದುಕೊಟ್ಟಿದ್ದ ಶಿಫಾರಸು ಪತ್ರದಲ್ಲಿ “ಶ್ರೀ ರಾವ್‌ರ ಯೋಗ್ಯತೆ ಹಾಗೂ ಅರ್ಥಶಾಸ್ತ್ರದ ಹಲವು ಶಾಖೆಗಳಲ್ಲಿ ಅವರಿಗಿರುವ ಸಾಮರ್ಥ್ಯದ ಬಗ್ಗೆ ನನಗೆ ಅತ್ಯುತ್ತಮ ಅಭಿಪ್ರಾಯವಿದೆ” ಎಂದು ಬರೆದಿದ್ದರು (ಡಾ. ರಾವ್‌ಗಾಗಿ ಕೇನ್ಸ್‌ರ ಶಿಫಾರಸು, ಸೆಪ್ಟೆಂಬರ್ ೨೬, ೧೯೩೪).

೧೯೪೨ರಲ್ಲಿ, ದೆಹಲಿ ವಿಶ್ವವಿದ್ಯಾಲಯದಿಂದ ಅಲ್ಲಿನ ಅರ್ಥಶಾಸ್ತ್ರದ ಪ್ರಾಧ್ಯಾಪಕರ ಹುದ್ದೆಗೆ ರಾವ್ ಅವರೊಗೆ ಆಹ್ವಾನ ಬಂದಿತು. ರಾವ್ ಅವರನ್ನು ಆಗಿನ ಉಪಕುಲಪತಿಗಳಾಗಿದ್ದ ಸರ್ ಮಾರಿಸ್ ಗ್ವೈಯರ್ ಆಹ್ವಾನಿಸಿದ್ದರು. ನಂತರದಲ್ಲಿ ಬಂಗಾಳದ ಕ್ಷಾಮದ ಸಂದರ್ಭದಲ್ಲಿ ಅವರು ಭಾರತ ಸರ್ಕಾರದ ಆಹಾರ ಸಂಖ್ಯಾಶಾಸ್ತ್ರ ಇಲಾಖೆಯ ನಿರ್ದೇಶಕರ ಹುದ್ದೆಯನ್ನು ಒಪ್ಪಿಕೊಂಡರು. ಮತ್ತೆ ೧೯೪೬ರಲ್ಲಿ ದೆಹಲಿ ವಿಶ್ವವಿದ್ಯಾಲಯಕ್ಕೆ ಮರಳಿಬಂದರು.

೧೯೪೭ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಒಂದು ಅರ್ಥಶಾಸ್ತ್ರದ ಶಾಲೆಯನ್ನು ಸ್ಥಾಪಿಸುವ ಯೋಚನೆ ಹಾಕಿಕೊಂಡರು. ಇದು ಭಾರತೀಯ ಆರ್ಥಿಕ ಸೇವೆ (ಐಇಎಸ್)ಗೆ ಸೇರಬಹುದಾದ ಅರ್ಥಶಾಸ್ತ್ರಜ್ಞರ ತಂಡವನ್ನು ತರಬೇತುಗೊಳಿಸುತ್ತದೆ ಎಂದು ಅವರು ನಂಬಿದ್ದರು. ಐಇಎಸ್ ಕೂಡ ಇವರ ಚಿಂತನೆಯ ಕೂಸು. ಅವರು ಬಿ.ಎನ್. ಗಂಗೂಲಿ ಮತ್ತು ಪಿ.ಎನ್. ಧರ್ ಅವರನ್ನು ಅಧ್ಯಾಪಕರನ್ನಾಗಿ ಸೇರಿಸಿಕೊಂಡರು. ಅತ್ಯಂತ ಕಡಿಮೆ ಬಜೆಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ೧೯೫೨ರಲ್ಲಿ ಔಪಚಾರಿಕವಾಗಿ ಪ್ರಾರಂಭವಾಯಿತು. ಸಂಸ್ಥೆಯನ್ನು ವಿಸ್ತರಿಸುವುದಕ್ಕೆ ಬಿರ್ಲಾ ಗುಂಪಿನಿಂದ (೬ ಲಕ್ಷ ರೂಪಾಯಿ) ಮತ್ತು ಟಾಟಾ ಗುಂಪಿನಿಂದ (೧ ಲಕ್ಷ ರೂಪಾಯಿ) ಧನಸಹಾಯ ಸಿಕ್ಕಿತು. ಅದರಿಂದ ಕಟ್ಟಡ, ಗ್ರಂಥಾಲಯ ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಅಧ್ಯಾಪಕರಾಗಿ ಅತ್ಯಂತ ಪ್ರತಿಭಾನ್ವಿರಾದ ಕೆ.ಎನ್. ರಾಜ್ ಮತ್ತು ಕೆ.ಆರ್. ನಾರಾಯಣನ್ (ಮುಂದೆ ಭಾರತದ ರಾಷ್ಟ್ರಪತಿಗಳಾದ) ಸೇವೆ ಸಲ್ಲಿಸುತ್ತಿದ್ದರು. ರಾವ್ ಅವರಿಗೆ ದೆಹಲಿ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಲು ಆಹ್ವಾನ ಬಂತು. ಆಗ ಅವರು ಅರ್ಥಶಾಸ್ತ್ರದ ವಿಭಾಗದ ಅಧ್ಯಕ್ಷ ಸ್ಥಾನವನ್ನು ಅಮರ್ತ್ಯ ಸೇನ್ ಅವರಿಗೆ ಬಿಟ್ಟುಕೊಡಲು ನಿರ್ಧರಿಸಿದರು. ಇದು ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್ ಸೇರುವುದಕ್ಕೆ ಸೇನ್ ಅವರಿಗೆ ಒಂದು ಪ್ರೇರಣೆಯಾಯಿತು. ಶೀಘ್ರದಲ್ಲೇ ಸೇನ್, ಮನಮೋಹನ್ ಸಿಂಗ್, ಜಗದೀಶ್ ಭಗವತಿ, ಸುಖಮೋಯ್ ಚಕ್ರವರ್ತಿ, ಧರ್ಮ ಕುಮಾರ್ ಮತ್ತು ಪ್ರಣಬ್ ಬರ್ಧನ್ ಮೊದಲಾದ ಆ ಕಾಲದ ಭಾರತೀಯ ಅರ್ಥಶಾಸ್ತ್ರಜ್ಞರು ದೆಹಲಿ ಸ್ಕೂಲನ್ನು ಸೇರಿಕೊಂಡರು. ಅದು ದೇಶದಲ್ಲಿ ಅರ್ಥಶಾಸ್ತ್ರ ತರಬೇತಿ ಮತ್ತು ಸಂಶೋಧನೆಯ ಪ್ರಮುಖ ಸಂಸ್ಥೆಯಾಯಿತು. ರಾವ್ ಅವರು ದೆಹಲಿ ಸ್ಕೂಲಿನಲ್ಲಿ ಎಂ.ಎನ್. ಶ್ರೀನಿವಾಸ್ ಅವರೊಂದಿಗೆ ಸಮಾಜಶಾಸ್ತ್ರ ವಿಭಾಗ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗಗಳನ್ನೂ ಸ್ಥಾಪಿಸಿದರು. ಮೂರು ವರ್ಷಗಳ ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ರಾಜೀನಾಮೆ ನೀಡಿದರು. ತಾವೇ ೧೯೫೨ರಲ್ಲಿ ಸ್ಥಾಪಿಸಿದ್ದ ಆರ್ಥಿಕ ಬೆಳವಣಿಗೆಯ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವ ಕಡೆ ಗಮನ ಹರಿಸಿದರು. ಬ್ರೂಕಿಂಗ್ಸ್ ಸಂಸ್ಥೆಯನ್ನು ಮಾದರಿಯಾಗಿ ಇಟ್ಟುಕೊಂಡು ಒಂದು ಆರ್ಥಿಕ ಚಿಂತನಾ ಮಂಡಳಿಯಾಗಿ ಅದನ್ನು ರೂಪಿಸಲಾಗಿತ್ತು.

ಅವರು ೧೯೬೩ ರಲ್ಲಿ ಯೋಜನಾ ಆಯೋಗವನ್ನು ಸೇರಿಕೊಂಡರು. ಕಾಂಗ್ರೆಸ್ ಪಕ್ಷವೂ ಬುದ್ಧಿಜೀವಿಗಳನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಯೋಚಿಸುತ್ತಿತ್ತು. ರಾವ್ ಅವರನ್ನು ಪಕ್ಷಕ್ಕೆ ಸೇರಲು ಆಹ್ವಾನಿಸಲಾಯಿತು. ಕರ್ನಾಟಕದ ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ ಅವರು ರಾವ್ ಅವರನ್ನು ಬಳ್ಳಾರಿ ಕ್ಷೇತ್ರದಿಂದ ಸಂಸದರಾಗಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದರು. ರಾವ್ ಚುನಾವಣೆಯಲ್ಲಿ ಗೆದ್ದರು. ಕೇಂದ್ರ ಸಾರಿಗೆ ಮತ್ತು ನೌಕಾಪಡೆಯ ಮಂತ್ರಿಯಾದರು. ಮೊದಲ ಮೂರು ವರ್ಷಗಳಲ್ಲಿ, ಅವರು ದೇಶದಲ್ಲಿ ಸಾರ್ವಜನಿಕ ಮೂಲಸೌಕರ್ಯಗಳನ್ನು ಅಭಿವೃದ್ಧ್ನಿಪಡಿಸುವುದಕ್ಕೆ ಗಮನಕೊಟ್ಟರು. ಮಂಗಳೂರು ಮತ್ತು ಥೂತುಕುಡಿ (ಈಗಿನ ತೂತುಕೊಡಿ) ಬಂದರುಗಳ ನಿರ್ಮಾಣದ ಕೆಲಸ ಪ್ರಾರಂಭಿಸಿದರು. ೧೯೬೯ರಲ್ಲಿ ಅವರನ್ನು ಶಿಕ್ಷಣ ಮಂತ್ರಿಯಾಗಿ ವರ್ಗಾಯಿಸಲಾಯಿತು. ಅಲ್ಲಿ ಅವರು ಗ್ರಾಮೀಣ ಪ್ರಾಥಮಿಕ ಶಿಕ್ಷಣ ಮತ್ತು ವಯಸ್ಕರ ಸಾಕ್ಷರತೆಗೆ ಗಮನ ಕೊಟ್ಟರು. ಮತ್ತೆ ೧೯೭೧ರಲ್ಲಿ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಗೆದ್ದರು. ಆದರೂ ಅವರಿಗೆ ಮಂತ್ರಿಮಂಡಳದಲ್ಲಿ ಅವಕಾಶ ಸಿಗಲಿಲ್ಲ. ಬಹುಶಃ ಅವರ ಪ್ರಶ್ನಿಸುವ ಶೈಲಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹೊಂದಿಕೆಯಾಗಲಿಲ್ಲ ಅನಿಸುತ್ತದೆ. ಅವರಿಗೆ ೧೯೭೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು.

೧೯೭೨ರಲ್ಲಿ, ಅವರು ಬೆಂಗಳೂರಿಗೆ ಬಂದರು. ಐಸೆಕ್-ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯನ್ನು ಪ್ರಾರಂಭಿಸಿದರು. ಅದೊಂದು ಬಹುಶಿಸ್ತಿನ ಸಾಮಾಜಿಕ ವಿಜ್ಞಾನ ಸಂಸ್ಥೆಯಾಗಿತ್ತು. ಅವರ ನಾಯಕತ್ವದಲ್ಲಿ, ಸಂಸ್ಥೆಯು ರಾಮಕೃಷ್ಣ ಹೆಗಡೆ ಸರ್ಕಾರದ ಮಂಡಲ ಪಂಚಾಯತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಪಾತ್ರ ವಹಿಸಿತು. ಇದು ಸಂವಿಧಾನದ ೭೩ನೇ ತಿದ್ದುಪಡಿಗೆ ಆಧಾರವಾಯಿತು. ರಾವ್ ಈ ಅವಧಿಯಲ್ಲಿ ಹಲವು ವಿಷಯಗಳ ಬಗ್ಗೆ ಬಹಳಷ್ಟು ಬರೆದರು. ಭಾರತೀಯ ಸಮಾಜವಾದ, ಭಾರತದ ರಾಷ್ಟ್ರೀಯ ಆದಾಯದ ಪ್ರವೃತ್ತಿಗಳ ಮರುಪರಿಶೀಲನೆ ಮತ್ತು ಭಾರತದ ಭಾಷಾ ಏಕೀಕರಣ ಇತ್ಯಾದಿ ಹಲವು ವಿಷಯಗಳ ಬಗ್ಗೆ ಬರೆದರು. ಭಾಷೆಯ ಏಕೀಕರಣಕ್ಕಾಗಿ ಅವರು ಹಿಂದಿ ವ್ಯಾಕರಣವನ್ನು ಸರಳೀಕರಿಸಬೇಕು, ಇತರ ಭಾರತೀಯ ಭಾಷೆಗಳಿಂದ ನುಡಿಗಟ್ಟುಗಳನ್ನು ಮತ್ತು ವಿಚಾರಗಳನ್ನು ತೆಗೆದುಕೊಳ್ಳಬೇಕು. ಮತ್ತು ದೇಶದ ಎಲ್ಲಾ ಕಡೆಗಳಲ್ಲಿ ಪ್ರಮುಖ ಭಾರತೀಯ ಭಾಷೆಗಳ ಮೂಲ ಪಾಠಗಳನ್ನು ಕಲಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು ಇತ್ಯಾದಿ ಹಲವು ಶಿಫಾರಸ್ಸುಗಳನ್ನು ಮಾಡಿದ್ದರು.

ವಿ.ಕೆ.ಆರ್.ವಿ. ರಾವ್ ಅವರು ಹಿಂದು ಧರ್ಮದಲ್ಲಿ ಶ್ರದ್ಧೆ ಇಟ್ಟುಕೊಂಡಿದ್ದರು. ಸ್ವಾಮಿ ವಿವೇಕಾನಂದರ ಸಿದ್ದಾಂತಗಳಿಂದ ಗಾಢವಾಗಿ ಪ್ರಭಾವಿತರಾಗಿದ್ದರು. ರಾವ್ ಇದನ್ನು “ವೇದಾಂತಿಕ ಸಮಾಜವಾದ” ಎಂದು ಕರೆದರು. ಇದು ಪ್ರಜಾಸತ್ತಾತ್ಮಕ ಸಮಾಜವಾದ ಮತ್ತು ಗಾಂಧೀವಾದೀ ಸಮಾಜವಾದವನ್ನು ಹೆಚ್ಚಾಗಿ ಹೋಲುತ್ತದೆ ಎಂದು ವಾದಿಸುತ್ತಿದ್ದರು. ರಾವ್ ಅವರು ಎರಡು ಬಾರಿ ವಿವಾಹವಾದರು. ಅವರ ಮೊದಲ ಪತ್ನಿ ಪ್ರಮೀಳಾ. ಈ ದಾಂಪತ್ಯದಿಂದ ಅವರಿಗೆ ಮೂರು ಮಕ್ಕಳಿದ್ದರು. ಮೊದಲ ಮಗ ಮಾಧವ ರಾವ್ ಅರ್ಥಶಾಸ್ತ್ರಜ್ಞರು. ಸುಧಾರಾವ್ ಶಿಕ್ಷಣದ ಸಮಾಜಶಾಸ್ತ್ರಜ್ಞೆ. ಮೂರನೆಯವರು ಮೀರಾ ರಾಮಕೃಷ್ಣನ್. ಮೀರಾ ಅವರ ಮಗಳು ಉಮಾ ಮತ್ತು ಮಗ ಮುಕುಂದ ಇಬ್ಬರೂ ಜೀವವಿಜ್ಞಾನಿಗಳು. ಪ್ರಮಿಳಾ ರಾವ್ ೧೯೫೫ ರಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ನಿಂದ ನಿಧನರಾದರು. ನಂತರ ಅವರು ಮಿರಾಂಡಾ ಹೌಸ್ನ ಉಪಪ್ರಾಂಶುಪಾಲೆಯಾಗಿದ್ದ ಕಮಲಾ ಅಚಾಯ ಅವರನ್ನು ವಿವಾಹವಾದರು. ಇವರು ಆಕ್ಸ್‌ಫರ್ಡಿನಲ್ಲಿ ಜೆ.ಆರ್.ಆರ್. ಟೋಲ್ಕೀನ್ ಅವರ ಮಾರ್ಗದರ್ಶನದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಅವರ ಸೋದರಳಿಯ ಎಸ್.ಎಲ್. ರಾವ್ (ನನ್ನ ತಂದೆ) ಅವರ ಖಿhe Pಚಿಡಿಣiಚಿಟ ಒemoiಡಿs oಜಿ ಗಿ ಏ ಖ ಗಿ ಖಚಿo ಕೃತಿಯನ್ನು ಸಂಪಾದಿಸಿ ಪ್ರಕಟಿಸಿದರು. ಅವರ ಜೀವನವನ್ನು ಕುರಿತಂತೆ ಇನ್ನೂ ಹೆಚ್ಚು ವಿವರವಾದ, ಪೂರ್ಣಪ್ರಮಾಣದ ಜೀವನ ಚರಿತ್ರೆ ಬರಬೇಕಿದೆ.

[ಅಜಿಂ ಪ್ರೇಂಜಿ ಫೌಂಡೇಷನ್ ವೆಬ್‌ಸೈಟಿನಲ್ಲಿ ಪ್ರಕಟವಾಗಿರುವ ಲೇಖನವನ್ನು ಇಲ್ಲಿ ಅನುವಾದಿಸಿ ನೀಡಲಾಗಿದೆ]