ಕ್ರಿಪ್ಟೊ ಗುಳ್ಳೆ ಮತ್ತೆ ಒಡೆದಿದೆ. ಕ್ರಿಪ್ಟೊ ಸಾಮ್ರಾಜ್ಯದ ದೊಡ್ಡ ಸಾಮ್ರಾಟ ಸ್ಯಾಂ ಬ್ಯಾಂಕ್‌ಮನ್ ಫ್ರೀಡ್ ದಿವಾಳಿಯಾಗಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ೩೦ ವರ್ಷದ ಸ್ಯಾಂ ೩೨ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವಿನಿಮಯ ಕಂಪೆನಿ ಎಫ್‌ಟಿಎಕ್ಸ್ ಕಟ್ಟಿದ್ದ. ಶೂನ್ಯದಿಂದ ಕೆಲವೇ ದಿನಗಳಲ್ಲಿ ೩ ಟ್ರಿಲಿಯನ್ ಮಾರುಕಟ್ಟೆಯಾಗಿ ಬೆಳೆದಿದ್ದ ಕ್ರಿಪ್ಟೊ ಜಗತ್ತಿನ ಎರಡನೆಯ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ. ಬೇರೆ ಕ್ರಿಪ್ಟೋ ಉದ್ದಿಮೆಗಳು ಸಂಕಟದಲ್ಲಿದ್ದಾಗ ನೂರಾರು ಮಿಲಿಯನ್ ಹಣ ಖರ್ಚು ಮಾಡಿದ್ದ. ಈಗ ಮತ್ತೆ ಅದು ಶೂನ್ಯಕ್ಕೆ ಹೋಗಲಿದೆಯೇ ಅನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲಿ ಹಣ ಹೂಡಿದವರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಕೆಲವೇ ದಿನಗಳಲ್ಲಿ ನಡೆದು ಹೋಗಿದೆ.
ಏನಿದು ಎಫ್‌ಟಿಎಕ್ಸ್?
ಅದೊಂದು ಡಿಜಿಟಲ್ ನಗದು ವಿನಿಮಯ ವೇದಿಕೆ. ಅದು ಬಿಟ್‌ಕಾಯಿನ್, ಈಥರ್ ಮೊದಲಾದ ಡಿಜಿಟಲ್ ಸ್ವತ್ತುಗಳನ್ನು ಕೊಳ್ಳುವುದಕ್ಕೆ ಹಾಗೂ ಮಾರುವುದಕ್ಕೆ ಇರುವ ವೇದಿಕೆ. ಕ್ರಿಪ್ಟೊ ಕರೆನ್ಸಿ ತುಂಬಾ ಲಾಭದಾಯಕ ಅಂತ ಜನರಿಗೆ ತೋರತೊಡಗಿತು. ಅದರಲ್ಲಿ ಹೂಡಬೇಕೆಂಬ ತವಕ ಜನರಲ್ಲಿ ಹೆಚ್ಚಾಗತೊಡಗಿತು. ಆದರೆ ಜನರಿಗೆ ಕ್ರಿಪ್ಟೊ ಜಗತ್ತಿನ ತಾಂತ್ರಿಕ ಜಂಜಾಟ ನಿಭಾಯಿಸುವುದು ಬೇಕಿರಲಿಲ್ಲ. ಎಫ್‌ಟಿಎಕ್ಸ್ ರೀತಿಯ ಹಣಕಾಸು ಮಧ್ಯವರ್ತಿಗಳಿಂದಾಗಿ ಕ್ರಿಪ್ಟೊ ವ್ಯವಹಾರ ಸಲೀಸಾಯಿತು. ಬಳಕೆ ಸುಲಭವಾಯಿತು. ಈ ವಿನಿಮಯ ಕಂಪೆನಿಗಳು ಹೆಚ್ಚು ಜನಪ್ರಿಯವಾದವು. ಜನ ಇಂತಹ ವೇದಿಕೆಗಳನ್ನು ಅವಲಂಬಿಸುವುದು ಹೆಚ್ಚಿತು.
ಬ್ಯಾಂಕ್‌ಮನ್ ೨೦೧೯ರಲ್ಲಿ ಎಫ್‌ಟಿಎಕ್ಸ್ ಅನ್ನು ಪ್ರಾರಂಭಿಸಿದ. ಅವನದು ತೀರಾ ಆಕ್ರಮಣಕಾರಿ ಮಾರುಕಟ್ಟೆ ತಂತ್ರ. ಜೊತೆಗೆ ವ್ಯಾಪಾರಿ ಶುಲ್ಕವೂ ತುಂಬಾ ಕಡಿಮೆ ಮಾಡಿದ್ದ. ಹಾಗಾಗಿ ಬಲುಬೇಗ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡುಬಿಟ್ಟ. ಪ್ರತಿಸ್ಪರ್ಧಿಗಳಾದ ಕ್ರಾಕೆನ್. ಕಾಯಿನ್‌ಬೇಸ್ ಹಾಗೂ ಜೆಮಿನಿ ಅವರ ಸಮಕ್ಕೆ, ಮತ್ತೆ ಕೆಲವೊಮ್ಮೆ ಅವರನ್ನು ಮೀರಿಸಿ ಬೆಳೆದ. ತಂತ್ರಜ್ಞಾನದ ಜ್ಞಾನವಿಲ್ಲದವರು ಕೂಡ ಇದರಲ್ಲಿ ಹಣ ಹೂಡಿ ಹೇರಳವಾಗಿ ಹಣ ಮಾಡಬಹುದೆನ್ನುವ ಎಫ್‌ಟಿಎಕ್ಸ್ ಅಮಿಷಕ್ಕೆ ಸಾವಿರಾರು ಜನ ಬಲಿಯಾದರು. ಕೂಡಿಟ್ಟ ಹಣವನ್ನು ಬ್ಯಾಂಕ್‌ಮನ್ನಿಗೆ ಒಪ್ಪಿಸಿಬಿಟ್ಟರು. ದೊಡ್ಡ ದೊಡ್ಡ ವೆಂಚರ್ ಕ್ಯಾಪಿಟಲ್ ಗುಂಪುಗಳೂ ಇದರಲ್ಲಿ ಹಣತೊಡಗಿಸಿದವು. ಅವು ಸುಮಾರು ಎರಡು ಬಿಲಿಯನ್ ಹಣವನ್ನು ಈ ಕಂಪೆನಿಯಲ್ಲಿ ಹೂಡಿದ್ದವು ಎನ್ನಲಾಗಿದೆ.
ಸ್ಯಾಂ ಬ್ಯಾಂಕ್‌ಮನ್ ಕೇವಲ ಎಫ್‌ಟಿಎಕ್ಸ್ ಕಂಪೆನಿಗೆ ಮಾತ್ರವಲ್ಲ ಇಡೀ ಕ್ರಿಪ್ಟೊಗೆ ಪ್ರತಿನಿಧಿಯಾಗುವಷ್ಟು ಬೆಳೆದ. ದೊಡ್ಡ ಸೆಲೆಬ್ರೆಟಿಗಳೂ ಸ್ಪೋರ್ಟ್ಸ್ ಕಂಪನಿಗಳು ಇದಕ್ಕೆ ಸ್ಪಾನ್ಸರ್ ಮಾಡತೊಡಗಿದವು. ಬ್ಯಾಂಕ್‌ಮನ್ ಫ್ರೈಡ್ ಅಮೇರಿಕೆಯ ಚುನಾವಣೆಗೆ ಅಭ್ಯರ್ಥಿಗಳನ್ನು ಸ್ಪಾನ್ಸರ್ ಮಾಡತೊಡಗಿದ. ಡೆಮಾಕ್ರೇಟ್ಸ್ ಪಕ್ಷವನ್ನು ಬೆಂಬಲಿಸಲು ೪೦ ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಹಾಗೆಯೇ ಅವನ ಸಹೋದ್ಯೋಗಿ ರ್ಯಾನ್ ಸಲಮೆ ರಿಪಬ್ಲಿಕನ್ಸ್ ಪಕ್ಷಕ್ಕೆ ೨೩ ಮಿಲಿಯನ್ ಡಾಲರ್ ಕೊಟ್ಟಿದ್ದ. ಯಾವ ಪಕ್ಷ ಅನ್ನುವುದು ಮುಖ್ಯವಲ್ಲ. ರಾಜಕೀಯ ಪ್ರಭಾವವನ್ನು ಕೊಳ್ಳುವ ಪ್ರಯತ್ನ ನಡೆಯುತ್ತಿತ್ತು.
ಬ್ಯಾಂಕ್‌ಮನ್ ಎಫ್‌ಟಿಎಕ್ಸ್ ಪ್ರಾರಂಭಿಸಿದ ಮೇಲೆ ಕ್ರಿಪ್ಟೊ ಬೆಳೆಯಲು ಪ್ರಾರಂಭಿಸಿತು. ೧೦,೦೦೦ ಡಾಲರಿಗೆ ಮಾರಾಟವಾಗುತ್ತಿದ್ದ ಬಿಟ್‌ಕಾಯನ್ ಮೌಲ್ಯ ೨೦೨೧ರಲ್ಲಿ ೬೪,೦೦೦ ತಲುಪಿತು. ಅಂದರೆ ಕ್ರಿಪ್ಟೋ ಮಾರುಕಟ್ಟೆಯ ಸ್ಥಿತಿ ಚೆನ್ನಾಗಿತ್ತು ಅಂತಲೇ ಅರ್ಥ. ಕ್ರಿಪ್ಟೊಗೆ ಸಂಬಂಧಿಸಿದ ಎಲ್ಲಾ ಉದ್ದಿಮೆಗಳಲ್ಲೂ ವೆಂಚರ್ ಬಂಡವಾಳದ ಹೂಡಿಕೆ ಹೆಚ್ಚಿತು. ಆದರೆ ಕ್ರಿಪ್ಟೊ ಮಾರುಕಟ್ಟೆಯ ಸುಗ್ಗಿ ತುಂಬಾ ದಿನ ಉಳಿಯಲಿಲ್ಲ.
೨೦೨೧ರ ಕೊನೆಯ ವೇಳೆಗೆ ಬಿಟ್‌ಕಾಯಿನ್ ಬೆಲೆ ಕುಸಿಯತೊಡಗಿತು. ಈಗ ಅದರ ಬೆಲೆ ೧೬,೦೦೦ ಡಾಲರಿಗೆ ಇಳಿದಿದೆ. ಉಳಿದ ಕ್ರಿಪ್ಟೊಗಳು ಅದೇ ಸ್ಥಿತಿಯಲ್ಲಿವೆ. ಹೇಗೆ ಬೆಳೆಯಿತೋ ಹಾಗೆ ಕುಸಿಯತೊಡಗಿದವು. ದೊಡ್ಡ ದೊಡ್ಡ ಕಂಪೆನಿಗಳು ಮುಚ್ಚತೊಡಗಿದವು. ಎಫ್‌ಟಿಎಕ್ಸ್ ಮಾತ್ರ ಇದ್ಯಾವುದರಿಂದ ಭಾದಿತವಾಗದಂತೆ ಸಾಗಿತ್ತು. ಸಂಕಟದಲ್ಲಿದ್ದ ಕೆಲವು ಕಂಪೆನಿಗಳನ್ನು ಕೊಳ್ಳುವ ಸಾಹಸವನ್ನೂ ಮಾಡಿತು.
ಆದರೆ ಎಫ್‌ಟಿಎಕ್ಸ್‌ನಲ್ಲೂ ಸಮಸ್ಯೆಯಿದೆ ಅನ್ನುವ ಅನುಮಾನ ಪ್ರಾರಂಭವಾಯಿತು. ಎಫ್‌ಟಿಎಕ್ಸ್ ಸ್ಥಿತಿ ಜಗತ್ತು ಭಾವಿಸಿದ ಹಾಗಿಲ್ಲ ಅನ್ನುವ ಭಾವನೆ ಹುಟ್ಟಿತು. ಅಲಮಿಡ ರಿಸರ್ಚ್ ಅನ್ನುವುದು ಎಫ್‌ಟಿಎಕ್ಸ್‌ನ ಕ್ರಿಪ್ಟೊ ಹೂಡಿಕೆಯ ಕಂಪೆನಿ. ಅದೂ ಕೂಡ ಬ್ಯಾಂಕ್‌ಮನ್‌ಗೆ ಸೇರಿದ್ದೆ. ಆ ಸಂಸ್ಥೆಯ ಬ್ಯಾಲೆನ್ಸ್ ಶೀಟನ್ನು ಕಾಯನ್ ಡೆಸ್ಕ್ ಸಂಸ್ಥೆ ಪ್ರಕಟಿಸಿತು. ಅಲಮಿಡ ಬಳಿ ಎಫ್‌ಟಿಎಕ್ಸ್ ಸೃಷ್ಟಿಸುತ್ತಿದ್ದ ಡಿಜಿಟಲ್ ಕರೆನ್ಸಿ ಎಫ್‌ಟಿಟಿ ದೊಡ್ಡ ಪ್ರಮಾಣದಲ್ಲಿ ಇರುವುದು ಬಹಿರಂಗವಾಯಿತು. ಎಫ್‌ಟಿಟಿ ಬೆಲೆ ಕುಸಿದರೆ ಅದು ದಿವಾಳಿಯಾಗುವ ಅಪಾಯವಿದೆ ಎನ್ನುವ ವರದಿಗಳು ಪ್ರಕಟವಾಗತೊಡಗಿದವು. ಮಾರುಕಟ್ಟೆಯಲ್ಲಿ ಆತಂಕ ಕಾಣಿಸಿಕೊಂಡಿತು. ಬಿನಾನ್ಸ್ ಕ್ರಿಪ್ಟೊ ಕಂಪೆನಿಯ ಸಿಇಒ ಜಾವೊ ತನ್ನ ಎಲ್ಲಾ ಎಫ್‌ಟಿಟಿ ಟೋಕನ್ನುಗಳನ್ನು ಮಾರುವುದಾಗಿ ಘೋಷಿಸಿದ. ಎಫ್‌ಟಿಟಿ ಬೆಲೆ ಕುಸಿಯಿತು. ಎಫ್‌ಟಿಟಿ ಬೆಲೆ ಶೇಕಡ ೯೦ರಷ್ಟು ಕುಸಿಯಿತು. ಉಳಿದ ಡಿಜಿಟಲ್ ಟೋಕನ್ನುಗಳ ಬೆಲೆಯೂ ಕುಸಿಯತೊಡಗಿದವು. ಬಿಟ್ ಕಾಯಿನ್ ಈ ತಿಂಗಳು ಶೇಕಡ ೨೦ರಷ್ಟು ಬಡವಾಯಿತು. ಇಥರ್ ಬೆಲೆ ಶೇಕಡ ೨೪ರಷ್ಟು ಕುಸಿಯಿತು.
ಏನಿದು ಡಿಜಿಟಲ್ ಟೋಕನ್? ಜನರಿಗೆ ತಮ್ಮ ಹಣವನ್ನು ಹೂಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಲವು ಕ್ರಿಪ್ಟೊ ಕಂಪನಿಗಳು ತಮ್ಮದೇ ಆದ ಟೋಕನ್ನುಗಳನ್ನು ಸೃಷ್ಟಿಸುತ್ತವೆ. ಬಿಟ್‌ಕಾಯಿನ್ ಮುಂತಾದವು ಅಂತಹ ಟೋಕನ್ನುಗಳು. ಎಫ್‌ಟಿಟಿ ಅನ್ನುವುದು ಎಫ್‌ಟಿಎಕ್ಸ್ ಕಂಪೆನಿ ಸೃಷ್ಟಿಸಿದ ಡಿಜಿಟಲ್ ಟೋಕನ್. ಇದೂ ಕೂಡ ಬಿಟ್‌ಕಾಯನ್ ಮಾದರಿಯ ಕ್ರಿಪ್ಟೊ ನಾಣ್ಯ. ಈ ಡಿಜಿಟಲ್ ಟೋಕನ್ನುಗಳನ್ನು ಸೃಷ್ಟಿಸಲು ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಹಲವು ಕಂಪ್ಯೂಟರುಗಳನ್ನು ಬಳಸಿಕೊಂಡು ಬಳಸಿಕೊಂಡು ಎಲೆಕ್ಟ್ರಾನಿಕ್ ಲೆಡ್ಜರುಗಳನ್ನು ತಯಾರಿಸಲಾಗಿರುತ್ತದೆ. ವ್ಯವಹಾರಗಳು ಪಾರದರ್ಶಕವಾಗಿರುತ್ತವೆ ಎನ್ನುವುದು ಇದರ ಹಿಂದಿನ ಉದ್ದೇಶ. ಒಂದು ಕಂಪ್ಯೂಟರ್ ಬಳಸಿ ಇದನ್ನು ನಿಯಂತ್ರಿಸಲು ಸಾಧ್ಯವಾಗದ ರೀತಿಯಲ್ಲಿ ರೂಪಿಸಲಾಗಿರುತ್ತದೆ. ಆದರೆ ಎಲ್ಲಾ ಕ್ರಿಪ್ಟೊ ಕರೆನ್ಸಿಗಳನ್ನು ಹೀಗೆ ಸೃಷ್ಟಿಸಲಾಗುತ್ತದೆ ಅಂತ ಅಲ್ಲ. ಎಫ್‌ಟಿಟಿ ಕೇವಲ ಒಂದೇ ಒಂದು ಮೂಲದಿಂದ ತಯಾರಾಗಿದೆ ಅನ್ನಲಾಗಿದೆ. ಅದು ಉಳಿದ ಟೋಕನ್ನಿಗೆ ಹೋಲಿಸಿದರೆ ಅಷ್ಟೇನೂ ಪಾರದರ್ಶಕವಾಗಿಲ್ಲ. ಹಾಗಾಗಿ ಎಷ್ಟು ಟೋಕನ್ನುಗಳು ಸೃಷ್ಟಿಯಾಗಿವೆ ಎಂದು ತಿಳಿಯುವುದು ಕಷ್ಟ.
ಎಫ್‌ಟಿಟಿ ಬಗ್ಗೆ ಅನುಮಾನ ಪ್ರಾರಂಭವಾದ ಕೂಡಲೆ ಎಲ್ಲರೂ ಅದನ್ನು ಮಾರಲು ಮುಂದಾದರು. ಎಲ್ಲರೂ ನುಗ್ಗತೊಡಗಿದಾಗ ನಿರ್ವಹಿಸುವುದಕ್ಕೆ ಎಫ್‌ಟಿಎಕ್ಸ್‌ಗೆ ಸಾಧ್ಯವಾಗಲಿಲ್ಲ. ಜನರಿಗೆ ಹಣ ಮರಳಿಸುವುದನ್ನು ನಿಲ್ಲಿಸಿದರು. ಒಂದು ಅಂದಾಜಿನ ಪ್ರಕಾರ ಎಫ್‌ಟಿಎಕ್ಸ್‌ಗೆ ಎಲ್ಲಾ ಪಾವತಿಗಳನ್ನು ಮಾಡುವುದಕ್ಕೆ ೮ ಬಿಲಿಯನ್ ಡಾಲರ್ ಬೇಕಾಗುತ್ತದೆ. ಅಲಮೆಡ್ ಹಾಗೂ ಎಫ್‌ಟಿಎಕ್ಸ್ ನಡುವಿನ ಸಂಬಂಧ ಎಂತಹುದು ಅನ್ನುವುದು ಸ್ಪಷ್ಟವಾಗಿಲ್ಲದಿದ್ದರೂ ೪೦೦ ಮಿಲಿಯನ್ ಡಾಲರ್ ಹಣ ಎಫ್‌ಟಿಎಕ್ಸ್ ಖಾತೆಯಿಂದ ಅಲಮೆಡ್‌ಗೆ ವರ್ಗಾವಣೆಯಾಗಿದೆ ಎನ್ನಲಾಗಿದೆ. ಆಶ್ಚರ್ಯವೆಂದರೆ ಬ್ಯಾಂಕ್‌ಮನ್ ಫ್ರೈಡ್ ಕಂಪೆನಿಯ ಬ್ಯಾಲೆನ್ಸ್ ಶೀಟ್ ಇವರೆಗೂ ಆಡಿಟ್ಟೇ ಆಗಿಲ್ಲವಂತೆ. ಅಂದರೆ ಆ ಕಂಪೆನಿಯ ಬಳಿ ಎಷ್ಟು ಹಣವಿತ್ತು ಅದು ಎಲ್ಲಿಗೆ ಹೋಗಿದೆ ಅನ್ನುವುದಕ್ಕೆ ವಿಶ್ವಾಸರ್ಹವಾದ ದಾಖಲೆಗಳೇ ಇಲ್ಲವೆನ್ನಲಾಗಿದೆ. ಬ್ಯಾಂಕ್‌ಮನ್ ಫ್ರೈಡ್ ತನ್ನ ಕಂಪೆನಿ ಸಮಸ್ಯೆಯಲ್ಲಿದೆ ಎಂದು ಒಪ್ಪಿಕೊಂಡಿದ್ದಾನೆ. ನನ್ನನ್ನು ಕ್ಷಮಿಸಿ, ದೊಡ್ಡ ಪ್ರಮಾದವಾಗಿದೆ ಎಂದು ಟ್ವೀಟ್ ಮಾಡಿದ್ದಾನೆ. ಈಗ ಕಂಪೆನಿ ದಿವಾಳಿಗೆ ಅರ್ಜಿ ಹಾಕಿದೆ.
ಕ್ರಿಪ್ಟೊ ಉತ್ತಂಗದಲ್ಲಿದ್ದಾಗ ಅದೃಷ್ಟ ಧೈರ್ಯಶಾಲಿಗಳನ್ನು ಒಲಿಯುತ್ತವೆ ಅನ್ನುವ ಹೇಳಿಕೆ ಚಾಲ್ತಿಯಲ್ಲಿತ್ತು. ಆಗ ೬೦,೦೦೦ ಡಾಲರ್ ಮುಟ್ಟಿದ್ದ ಬಿಟ್ ಕಾಯಿನ್ ಈಗ ೧೬,೦೦೦ಕ್ಕೆ ಇಳಿದಿದೆ. ಸಾವಿರಾರು ಜನ ಹಣ ಕಳೆದುಕೊಂಡಿದ್ದಾರೆ. ಅವರೆಲ್ಲಾ ಬೆಲೆ ಹೆಚ್ಚಿದ್ದಾಗ ಕೊಂಡವರು. ಒಂದು ಅಂದಾಜಿನ ಪ್ರಕಾರ ಶೇಕಡ ೭೫ರಷ್ಟು ನಷ್ಟ ಆಗಿದೆ.
ಅಂದರೆ ಕ್ರಿಪ್ಟೊ ಮುಗಿದ ಅಧ್ಯಾಯವೇ? ಹಿಂದೆ ಫೇಸ್‌ಬುಕ್ ಕೂಡ ಈ ಸ್ಥಿತಿಯಲ್ಲಿತ್ತು. ಅದು ಸುಮಾರಾಗಿ ಇಷ್ಟೇ ತೊಂದರೆಯಲ್ಲಿತ್ತು. ಹಾಗಾಗಿ ಹಣಕುಸಿದಿದ್ದು ದೊಡ್ಡ ವಿಷಯವಲ್ಲ. ಸಂಸ್ಥೆಗಳು ದಿವಾಳಿಯಾಗಿರುವುದು ಆತಂಕದ ವಿಷಯ. ಮೊದಲಿಗೆ ಕ್ರಿಪ್ಟೊ ನಾಣ್ಯ ಯಾಕೆ ಬೇಕು?
ಎಲೆಕ್ಟ್ರಾನಿಕ್ ಟೋಕನ್ ಉದ್ದೇಶ ಜನ ಹಣಕಾಸು ಮಧ್ಯವರ್ತಿಗಳ ನೆರವಿಲ್ಲದೆ ಬೇರೆಯವರಿಗೆ ಹಣ ವರ್ಗಾಯಿಸಬಹುದು ಅನ್ನುವುದು. ಆದರೆ ಹೀಗೆ ಗೋಪ್ಯವಾಗಿ ಹಣ ವರ್ಗಾಯಿಸುವ ಅವಶ್ಯಕತೆಯಾದರೂ ಏನು, ಅನ್ನುವುದು ತಿಳಿಯುವುದಿಲ್ಲ. ಬಹುಷಃ ಕ್ರಿಮಿನಲ್ ಜನಕ್ಕೆ ಬಿಟ್ಟರೆ ಇಂತಹ ವ್ಯವಹಾರ ಬೇಕಾಗಿಲ್ಲ. ಸಾಮಾನ್ಯವಾಗಿ ಕ್ರಿಪ್ಟೊ ಕರೆನ್ಸಿಗೆ ಸಮರ್ಥನೆಯಾಗಿ ೨೦೦೮ರ ಬಿಕ್ಕಟ್ಟನ್ನು ಉಲ್ಲೇಖಿಸಲಾಗುತ್ತದೆ. ಆದರೆ ಆಗ ಹಣದ ವರ್ಗಾವಣೆ ಸಮಸ್ಯೆಯಾಗಿರಲಿಲ್ಲ. ವ್ಯವಸ್ಥೆಯಲ್ಲೇ ರಕ್ಷಣೆ ಇರಬೇಕು. ಕೇವಲ ನಂಬಿಕೆಯ ಮೇಲೆ ವ್ಯವಹಾರ ನಡೆಯಬಾರದು ಅನ್ನುವುದು ಸರಿ ಇರಬಹುದು. ಬ್ಲಾಕಚೈನ್ ತಂತ್ರಜ್ಞಾನದಿಂದ ರಕ್ಷಣೆಯೂ ಸಿಗಬಹುದು. ಆದರೆ ಈಗ ಕ್ರಿಪ್ಟೊ ವ್ಯವಹಾರ ನಡೆಯುತ್ತಿರುವುದೂ ನಂಬಿಕೆಯನ್ನು ಆಧರಿಸಿಯೇ ಅಲ್ಲವೇ. ಈಗಲೂ ವ್ಯವಹಾರ ನಡೆಯುತ್ತಿರುವುದು ಹಣಕಾಸಿನ ಮಧ್ಯವರ್ತಿಗಳ ಮೂಲಕವೇ ಅಲ್ಲವೇ. ಅಂದ ಮೇಲೆ ಇದು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಗಿಂತ ಹೇಗೆ ಭಿನ್ನ ಅನ್ನುವ ಪ್ರಶ್ನೆಗಳು ಏಳುತ್ತವೆ.
ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ನಿಯಂತ್ರಣ ಬೇಕು ಅನ್ನಿಸುತ್ತದೆ. ಆಗ ಮೂಲ ಉದ್ದೇಶವೇ ಸೋಲುತ್ತದೆ. ಇದನ್ನು ನಿಷೇಧಿಸಬೇಕು ಅನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಇಲ್ಲಿ ನಿಷೇಧಿಸಬೇಕಾಗಿರುವುದು ಎಫ್‌ಟಿಎಕ್ಸ್ ಅಂತಹ ಮಧ್ಯವರ್ತಿಗಳನ್ನೋ ಅಥವಾ ಇಡೀ ಕ್ರಿಪ್ಟೊ ವ್ಯವಹಾರವನ್ನೋ ಅನ್ನುವ ಪ್ರಶ್ನೆಯೂ ಬರುತ್ತದೆ. ಚೀನಾ ಅಂತಹ ಕೆಲವು ದೇಶಗಳು ಇದನ್ನು ನಿಷೇಧಿಸಿವೆ. ಸಧ್ಯಕ್ಕಂತೂ ಕ್ರಿಪ್ಟೊ ವ್ಯವಹಾರ ಸಟ್ಟಾ ವ್ಯಾಪಾರಿಗಳಿಗೆ ಜೂಜಿನ ಚಟವನ್ನು ತೀರಿಸಿಕೊಳ್ಳುವುದಕ್ಕೆ ತಮ್ಮ ಬಳಿಯಿರುವ ಯಥೇಚ್ಛ ಹಣ ಮತ್ತು ಸಮಯವನ್ನು ಪೋಲು ಮಾಡುವ ಸಾಧನವಾಗಿದೆ ಅಷ್ಟೆ. ಒಂದಾದ ಮೇಲೆ ಒಂದು ಹಗರಣಗಳನ್ನು ನೋಡಿದರೆ ಕ್ರಿಪ್ಟೋ ಜಗತ್ತು ಬಿಕ್ಕಟ್ಟಿಗೆ ಸದಾ ತೆರೆದುಕೊಂಡಿದೆ ಅನ್ನುವುದು ಸ್ಪಷ್ಟ. ಅದು ಬೆಳೆದಷ್ಟೂ ಇಂತಹ ಬಿಕ್ಕಟ್ಟಿನ ಸಾಧ್ಯತೆ ಹೆಚ್ಚು. ಜೊತೆಗೆ ಇದು ಮಾಮೂಲಿ ಹಣಕಾಸು ಜಗತ್ತಿಗಿಂತ ಸಂಪೂರ್ಣ ಪ್ರತ್ಯೇಕವಾಗಿದೆ ಅನ್ನುವುದು ಒಂದು ಮಿಥ್ಯೆ. ಜನ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹಣ ತೆಗೆದು ಇಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಅನ್ನುವ ಕಾರಣಕ್ಕೆ ಹೂಡುತ್ತಿದ್ದಾರೆ ಅನ್ನುವುದು ಸ್ಪಷ್ಟ. ಹಾಗೆ ಎಷ್ಟು ಹಣ ಇಲ್ಲಿ ಹೂಡಿಕೆಯಾಗಿದೆ ಅನ್ನುವುದು ತಿಳಿಯುವುದು ಕಷ್ಟ. ಆದರೆ ಕ್ರಿಪ್ಟೊ ಜಗತ್ತಿನಲ್ಲಿ ಆಗುವ ಬಿಕ್ಕಟ್ಟಿನ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಅಂತಿಮವಾಗಿ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕ್ರಿಪ್ಟೊ ವ್ಯವಹಾರದ ಅವಶ್ಯಕತೆಯೂ ಇಲ್ಲ ಹಾಗೂ ಅದು ಆರ್ಥಿಕವಾಗಿ ವಿಛಿಧ್ರಕಾರಿ ಅನ್ನುವುದನ್ನು ಸುಳ್ಳು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.
ಇದು ಅಂತಿಮವಾಗಿ ನಮ್ಮೆಲ್ಲರ ಜೀವನದ ಮೇಲೂ ಪರಿಣಾಮ ಬೀರುವುದರಿಂದ ಇದನ್ನು ಕುರಿತಂತೆ ಗಂಭೀರವಾದ ಚರ್ಚೆ ನಡೆಯಬೇಕು. ಕ್ರಿಪ್ಟೊ ಜಗತ್ತಿನ ಪ್ರಭಾವಶಾಲಿ ಜನ ಇಡೀ ರಾಜಕೀಯ ವ್ಯವಸ್ಥೆಯನ್ನು ಪ್ರಭಾವಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಅಸಾಧ್ಯವೇನಲ್ಲ ಅನ್ನೋದು ಅವರು ಖರ್ಚು ಮಾಡುತ್ತಿರುವ ಹಣದಿಂದ ತಿಳಿಯುತ್ತದೆ.