ಸಂಯುಕ್ತ ರಾಷ್ಟ್ರಗಳ ಹವಾಮಾನ ಬದಲಾವಣೆಯ ೨೮ನೇ ಸಮ್ಮೇಳನ ಅಥವಾ ಕಾನ್ಪರೆನ್ಸ್ ಆಫ್ ಪಾರ್ಟಿಸ್- ಸಿಒಪಿ೨೮ ದುಬೈನ ಎಕ್ಸಪೊ ಸಿಟಿಯಲ್ಲಿ ನಡೆಯುತ್ತಿದೆ. ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಹವಾಮಾನದ ಬದಲಾವಣೆಯ ಪರಿಣಾಮವನ್ನು ತಗ್ಗಿಸುವ ನಿಟ್ಟಿನಿಂದ ನೀತಿಗಳನ್ನು ರೂಪಿಸಲು ಎಲ್ಲಾ ದೇಶಗಳು ಸೇರಿವೆ. ಪರಿಸರಕ್ಕೆ ಕಾರ್ಬನ್ ಡೈಆಕ್ಸೈಡ್ ಸೇರ್ಪಡೆಯ ಪ್ರಮಾಣವನ್ನು ತಗ್ಗಿಸುವುದು, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹಾಗೂ ಇಂಧನದ ಕ್ಷಮತೆಯನ್ನು ಹೆಚ್ಚಿಸುವುದು, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸುವುದು, ಸಂಪನ್ಮೂಲವನ್ನು ಕ್ರೋಡೀಕರಿಸುವುದು ಈ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ.
ಸಿಒಪಿ ಸಮ್ಮೇಳನ ಪ್ರತಿವರ್ಷ ನಡೆಯುತ್ತಿದೆ. ೧೯೯೨ರಲ್ಲಿ ಮೊದಲ ಸಂಯುಕ್ತ ರಾಷ್ಟ್ರಗಳ ಹವಾಮಾನದ ಒಪ್ಪಂದವಾದಾಗ ಇದು ಪ್ರಾರಂಭವಾದಾಗಿನಿಂದ ಸಿಒಪಿ ಸಮ್ಮೇಳನ ನಡೆಯುತ್ತಿದೆ. ೨೮ನೇ ಸಮ್ಮೇಳನ ವಿವಾದದಿಂದಲೇ ಪ್ರಾರಂಭವಾಯಿತು. ಫಾಸಿಲ್ ಇಂಧನದ ಕೇಂದ್ರವಾದ ದುಬೈನಲ್ಲಿ ಇದನ್ನು ಸಂಘಟಿಸುವ ಬಗ್ಗೆ ಸಾಕಷ್ಟು ಟೀಕೆಗಳು ಬಂದವು. ಸಿಒಪಿ ೨೮ರ ಅಧ್ಯಕ್ಷತೆಯನ್ನು ವಹಿಸಿರುವ ಅಲ್ ಜಬೇರ್ ಅಬುದಾಬಿ ನಾಷನಲ್ ಆಯಿಲ್ ಕಂಪೆನಿಯ ಮುಖ್ಯಸ್ಥನೂ ಹೌದು. ಅದು ಕಳೆದ ವರ್ಷ ಫಾಸಿಲ್ ಇಂಧನ ಮಾರಾಟ ಮಾಡಿಯೇ ೮೦೨ ಬಿಲಿಯನ್ ಡಾಲರ್ ಲಾಭಮಾಡಿಕೊಂಡಿತ್ತು. ಅದರ ಲಾಭ ಪ್ರತಿವರ್ಷ ಹೆಚ್ಚುತ್ತಲೇ ಇದೆ. ಈ ವರ್ಷವೂ ಅದು ತೈಲ ಹಾಗೂ ಅನಿಲದ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ. ಬೇಡಿಕೆ ಇರುವವರೆಗೂ ಉತ್ಪಾದಿಸುತ್ತಲೇ ಇರುತ್ತೇವೆ ಎಂದು ಹೇಳಿಕೊಂಡಿದೆ. ಜೊತೆಗೆ ಈ ಸಮ್ಮೇಳನವನ್ನು ತನ್ನ ಕಂಪೆನಿಯ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಜಬೇರ್ ಬಳಸಿಕೊಳ್ಳುತ್ತಿದ್ದಾರೆ ಎಂಬ ಗುಮಾನಿಯನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ಅಲ್ ಜಬೇರ್ ಅಲ್ಲಗೆಳೆದಿದ್ದಾರೆ. ಹವಾಮಾನದ ತಾಪಮಾನವನ್ನು ೧.೫ಡಿಗ್ರಿಯಲ್ಲಿ ಉಳಿಸುವುದಕ್ಕೆ ತಾವು ಬದ್ಧ ಎಂದು ಅವರು ಹೇಳಿದ್ದಾರೆ. ಸಿಒಪಿ ಸಮ್ಮೇಳನವನ್ನು ಉದ್ಘಾಟಿಸುತ್ತಾ ಜಬೇರ್, ಹವಾಮಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಯಶಸ್ಸಿಗೆ ತೀರಾ ಮುಖ್ಯವಾದ ಅಂಶ ಅಂದರೆ ಹಣ. ಈವರೆಗೆ ಹಣಕಾಸು ಲಭ್ಯವಿರಲಿಲ್ಲ, ಸಾಧ್ಯವಿರಲಿಲ್ಲ. ಆದರೆ ನಾನು ಹಣಕಾಸು ಲಭ್ಯತೆಗೆ ಶ್ರಮಿಸುವುದಕ್ಕೆ ಬದ್ಧ. ಜಾಗತ್ತಿನ ದಕ್ಷಿಣದ ದೇಶಗಳು ಇನ್ನು ಮುಂದೆ ಅಭಿವೃದ್ಧಿ ಹಾಗೂ ಹವಾಮಾನದ ನಡುವೆ ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. ಈ ಕಾಪ್ ಸಭೆಯಲ್ಲಿ ೧೦೦ ಬಿಲಿಯನ್ ಡಾಲರ್ ಭರವಸೆಯನ್ನು ಈಡೇರಿಸುವಂತಾಗಲಿ. ಬಾಂಗ್ಲಾದೇಶದ ವಿದ್ಯಾರ್ಥಿಗಳು, ನೈರೋಬಿಯಲ್ಲಿ ಕಂಡ ಯುವ ಉದ್ದಿಮೆದಾರರು, ಅಮೆಜಾನಿನ ಮೂಲನಿವಾಸಿಗಳು ಎಲ್ಲರಿಗೂ ಬೇಕಿರುವುದು ಒಂದೆ. ಶುದ್ಧವಾದ ಗಾಳಿ, ಶುದ್ಧ ನೀರು, ಆರೋಗ್ಯಕರ ಆಹಾರ, ಸುರಕ್ಷ, ಸುಭದ್ರ ಭವಿಷ್ಯ, ಎಂದಿದ್ದಾರೆ.
ನಿಜ, ಹವಾಮಾನದ ಬದಲಾವಣೆಯಿಂದ ಯುಎಇಗೂ ತೊಂದರೆಯಾಗುತ್ತದೆ. ಜೊತೆಗೆ ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ನೆರವಾಗುವುದು ಅವರ ನೈತಿಕ ಜವಾಬ್ದಾರಿಯೂ ಹೌದು. ಇಂಧನದ ಬೆಲೆ ಏರಿಕೆಯಿಂದ ಅತ್ಯಂತ ಲಾಭ ಮಾಡಿಕೊಂಡ ದೇಶಗಳು ಅಂದರೆ ಯುಎಇ ಹಾಗೂ ಇತರ ಕೊಲ್ಲಿರಾಷ್ಟ್ರಗಳು ಹಾಗೂ ನಾರ್ವೆಯಂತಹ ದೇಶಗಳು. ತೈಲಕೊಳ್ಳುವುದಕ್ಕಾಗಿ ಹಲವು ಬಡದೇಶಗಳು ಕೋಟ್ಯಂತರ ಡಾಲರನ್ನು ಈ ರಾಷ್ಟ್ರಗಳಿಗೆ ತೆತ್ತಿವೆ. ಇಂತಹ ಹಲವು ಕಾರಣಗಳಿಂದಾಗಿ ಇಂದು ಆ ದೇಶಗಳು ತೀವ್ರ ದಾರಿದ್ರ್ಯದಲ್ಲಿ ನರಳುತ್ತಿವೆ. ಹವಾಮಾನದ ಬದಲಾವಣೆಯಿಂದಾಗಿ ವಿಪರೀತ ನಷ್ಟ ಹಾಗೂ ಹಾನಿಯನ್ನು ಎದುರಿಸುತ್ತಿವೆ. ಹಾನಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹಾಗೂ ಅದನ್ನು ಎದುರಿಸಲು ಸೂಕ್ತ ಏರ್ಪಾಡು ಮಾಡಿಕೊಳ್ಳುವುದಕ್ಕೆ ಬಡದೇಶಗಳಿಗೆ ಪ್ರತಿವರ್ಷ ೧೦೦ ಬಿಲಿಯನ್ ಡಾಲರುಗಳ ಪರಿಹಾರ ನೀಡಲು ಶ್ರೀಮಂತ ರಾಷ್ಟ್ರಗಳು ೨೦೦೯ರಲ್ಲಿ ಭರವಸೆ ನೀಡಿತ್ತು. ಇಲ್ಲಿಯವರೆಗೂ ಅದು ಭರವಸೆಯಾಗಿಯೇ ಉಳಿದಿದೆ.
೧೯೫೮ವರೆಗೆ ಯುಎಇ ತೀರ ಬಡತನದಲ್ಲೇ ಇತ್ತು. ಅಲ್ಲೂ ಹಸಿವು, ಬಡತನ ಎಲ್ಲವೂ ಇತ್ತು. ಶೇಕಡ ೨೦ರಷ್ಟು ಮಕ್ಕಳು ಐದು ವರ್ಷ ತುಂಬುವುದೊರಳಗೆ ಸಾಯುತ್ತಿದ್ದವು. ಸೆಕೆ ತಾಳಲಾರದೆ ಜನ ಮನೆಯ ಟಾರಸಿಯ ಮೇಲೆ ಮಲಗುತ್ತಿದ್ದರು. ತೈಲದ ಅನ್ವೇಷಣೆ ಅದರ ರೂಪವನ್ನೇ ಬದಲಿಸಿಬಿಟ್ಟಿತು. ಕೈಗಾರಿಕೀಕರಣ ಹಾಗೂ ನಗರೀಕರಣ ತೀವ್ರವಾಯಿತು. ಎಲ್ಲೆಡೆ ಗಗನಚುಂಬಿ ಕಟ್ಟಡಗಳು ತಲೆ ಎತ್ತಿದವು. ವಿದೇಶಿಯರು ಬದುಕು ಹುಡುಕಿ ಅಲ್ಲಿಗೆ ಬರಲಾರಂಭಿಸಿದರು. ಇಂದು ಅದರ ಆಸ್ತಿಯೇ ಹಲವು ಟ್ರಿಲಿಯನ್ ಆಗಿದೆ. ಬಿಸಿಲಿನ ತಾಪಕ್ಕೆ ಇಂದು ಹವಾನಿಯಂತ್ರಣ ಇದೆ. ಸಮುದ್ರದ ನೀರಿನಿಂದ ಉಪ್ಪು ತೆಗೆದು ಕುಡಿಯುವ ನೀರನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ಜನರ ಜೀವನ ಮಟ್ಟ ಹಲವು ಪಟ್ಟು ಸುಧಾರಿಸಿದೆ.
ಪೆಟ್ರೋಲಿಯಂ ಉತ್ಪಾದಿಸುವ ದೇಶಗಳ ಲಾಭ ವರ್ಷದಿಂದ ವರ್ಷಕ್ಕೆ ವಿಪರೀತವಾಗುತ್ತಿದೆ. ೨೦೨೨ರಲ್ಲಿ ಅದು ಗರಿಷ್ಠವಾಗಿತ್ತು. ಅವುಗಳ ಸಂಪಾದನೆ ೪ ಟ್ರಿಲಿಯನ್ ಡಾಲರ್ ದಾಟಿತ್ತು. ಅಲ್ಲಿಯವರಗೆ ಅದು ಸಾಮಾನ್ಯವಾಗಿ ೧.೫ ಟ್ರಿಲಿಯನ್ ಡಾಲರ್ ಆಸುಪಾಸಿನಲ್ಲಿ ಇರುತ್ತಿತ್ತು. ಕಳೆದ ವರ್ಷ ಒಪೆಕ್ ದೇಶಗಳು ಹೈಡ್ರೋಕಾರ್ಬನ್ ರಫ್ತು ಮಾಡಿ ೮೮೮ ಬಿಲಿಯನ್ ಡಾಲರ್ ಸಂಪಾದಿಸಿವೆ. ೨೦೨೧ರಲ್ಲಿ ಅದು ೫೭೬ ಬಿಲಿಯನ್ ಡಾಲರ್ ಇತ್ತು.
ಯುಎಇ ಇಂಧನ ರಫ್ತು ಮಾಡಿ ೨೦೨೧ರಲ್ಲಿ ೭೬ ಬಿಲಿಯನ್ ಡಾಲರ್ ಸಂಪಾದಿಸಿತ್ತು. ೨೦೨೨ರಲ್ಲಿ ಅದು ೧೧೯ ಬಿಲಿಯನ್ ಡಾಲರ್ ದಾಟಿತ್ತು. ಕತಾರ್ ಆದಾಯ ೮೭ ಬಿಲಿಯನ್ ಇಂದ ೧೩೨ ಬಿಲಿಯನ್ ಡಾಲರಿಗೆ ಜಿಗಿದಿತ್ತು. ಕುವೈತ್ ಆದಾಯ ೬೩ ಬಿಲಿಯನ್ ಇದ್ದದು ೯೮ ಬಿಲಿಯನ್ ಡಾಲರ್ ಆಯಿತು. ನಾರ್ವೆ ಹಾಗೂ ಸೌದಿ ಅರೇಬಿಯದ ಆದಾಯ ಎಲ್ಲ ದೇಶಗಳನ್ನು ಮೀರಿಸಿತ್ತು. ಅದು ಕ್ರಮವಾಗಿ ೮೭ ಬಿಲಿಯನ್, ಹಾಗೂ ೧೯೧ ಬಿಲಿಯನ್ ಇದ್ದುದು ೧೭೪ ಹಾಗು ೩೧೧ ಬಿಲಿಂಯನ್ ಡಾಲರ್ ಆಯಿತು. ಇವು ತಮ್ಮ ಲಾಭದ ಕೇವಲ ಶೇಕಡ ೧ರಷ್ಟನ್ನು ಹಂಚಿಕೊಂಡರೂ ಜಾಗತಿಕ ದಕ್ಷಿಣದಲ್ಲಿ ಹವಾಮಾನದ ಬದಲಾವಣೆಯ ಕಾರ್ಯಕ್ರಮಕ್ಕೆ ೨೫ ಬಿಲಿಯನ್ ಡಾಲರ್ ಸಿಗುತ್ತದೆ. ಸೌದಿ ಅರೆಬಿಯಾ ಫುಟ್ಬಾಲ್ ಹಾಗೂ ಗೋಲ್ಫ್ ಆಟಕ್ಕೆ ವರ್ಷಕ್ಕೆ ೯ ಬಿಲಿಯನ್ ಖರ್ಚು ಮಾಡುತ್ತಂತೆ. ಹಾಗೆಯೇ ಸಿಒಪಿ ಅಧ್ಯಕ್ಷ ಆಲ್ ಜಬೇರ್ ಲಾಭದ ಒಂದು ಗಣನೀಯ ಪಾಲನ್ನು ಕೊಡುವುದಕ್ಕೆ ತನ್ನ ಕಂಪೆನಿಯ ಮನವೊಲಿಸಬಹುದೆ?
ಅದು ಅದರ ಜವಾಬ್ದಾರಿ ಕೂಡ ಹೌದು. ಆ ದೇಶಗಳು ವಿಪರೀತ ಲಾಭ ಮಾಡಿಕೊಂಡಿವೆ. ಹವಾಮಾನ ಕೆಡಿಸೋದಕ್ಕೆ ಅತಿಹೆಚ್ಚು ಕಾರಣವಾಗಿವೆ. ಆ ಮೂಲಕ ತಮ್ಮ ದೇಶದ ತಲಾ ವರಮಾನವನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿವೆ. ಹಾಗಾಗಿ ಈ ದೇಶಗಳು ಅದರ ಖರ್ಚಿನ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕು ಅಂತ ಬಯಸುವುದರಲ್ಲಿ ತಪ್ಪೇನೂ ಇಲ್ಲ. ಪೆಟ್ರೋಲಿಯಂ ಉತ್ಪಾದಿಸುವ ಈ ದೇಶಗಳು ಮಾತ್ರವಲ್ಲ, ಕಾರ್ಬನ್ ಡೈಆಕ್ಷೈಡ್ ಅತಿ ಹೆಚ್ಚು ವಾತಾವರಣಕ್ಕೆ ಸೇರಿಸಿದ ಇತರ ದೇಶಗಳು ಮತ್ತು ಜನರು ಕೂಡ ತೊಂದರೆಗೊಳಗಾದ ದೇಶಗಳಿಗೆ ಪರಿಹಾರವನ್ನು ಕಟ್ಟಿಕೊಡಬೇಕು. ಇದು ಅತ್ಯಂತ ನ್ಯಾಯಯುತವಾದ ಬೇಡಿಕೆ.
ಹವಾಮಾನದ ಬದಲಾವಣೆಯಿಂದ ಹಲವು ದೇಶಗಳು ನಷ್ಟಕ್ಕೆ ಒಳಗಾಗಿವೆ, ಹಾನಿಯನ್ನು ಅನುಭವಿಸುತ್ತಿವೆ. ಸಮುದ್ರದ ನೀರಿನ ಮಟ್ಟ ಏರಿದೆ. ಬಿಸಿಗಾಳಿಯ ಹೊಡೆತ ತೀವ್ರವಾಗಿದೆ. ಫಲವತ್ತಾದ ಭೂಮಿಗಳು ಮರಳುಗಾಡಾಗುತ್ತಿವೆ. ಅರಣ್ಯ ಪ್ರದೇಶಗಳು ಬೆಂಕಿಗೆ ಬಲಿಯಾಗುತ್ತಿವೆ. ಪ್ರಾಣಿವೈವಿಧ್ಯ ಕಡಿಮೆಯಾಗುತ್ತಿದೆ. ಜನ ಊರು ಬಿಡುತ್ತಿದ್ದಾರೆ. ೨೦೫೦ರ ವೇಳೆಗೆ ಒಂದು ಬಿಲಿಯನ್ ಜನ ನೀರಿಲ್ಲದೆ ನರಳಬೇಕಾಗಬಹುದು. ವಲಸೆ ಹೋಗುವ ಜನರ ಸಂಖ್ಯೆ ೨೦೦ ಮಿಲಿಯನ್ ದಾಟಬಹುದು. ತೊಂದರೆಗೆ ಸಿಕ್ಕ ದೇಶಗಳಲ್ಲಿ ಹಿಂಸೆ ಹೆಚ್ಚುತ್ತದೆ. ಅದರ ಅನುಕೂಲ ಪಡೆದು ಶ್ರೀಮಂತ ರಾಷ್ಟ್ರಗಳು ಅಲ್ಲಿಯ ಸಂಪನ್ಮೂಲವನ್ನು ಇನ್ನಷ್ಟು ಲೂಟಿ ಮಾಡಬಹುದು.
ಇದರಿಂದ ಆಗುವ ನಷ್ಟ ಹಾಗೂ ಹಾನಿಯ ಪರಿಹಾರಕ್ಕೆ ಬಡರಾಷ್ಟ್ರಗಳಿಗೆ ಹಣ ಬೇಕಾಗುತ್ತದೆ. ಇದಕ್ಕಾಗಿ ಒಂದು ಸ್ವತಂತ್ರ ನಿಧಿಯನ್ನು ಸ್ಥಾಪಿಸಬೇಕೆಂದು ಬಡರಾಷ್ಟ್ರಗಳು ತುಂಬಾ ವರ್ಷಗಳಿಂದ ಒತ್ತಾಯಿಸುತ್ತಿವೆ. ಈ ಸಲಹೆಯನ್ನು ಕಳೆದ ವರ್ಷ ಈಜಿಪ್ಟಿನಲ್ಲಿ ನಡೆದ ಕಾಪ್೨೭ರ ಸಭೆಯಲ್ಲಿ ಒಪ್ಪಿಕೊಳ್ಳಲಾಗಿತ್ತು. ಆದರೆ ಅದು ಹೇಗೆ ಕೆಲಸ ಮಾಡಬೇಕು. ಅದಕ್ಕೆ ಹಣ ಎಲ್ಲಿಂದ ಕ್ರೋಡೀಕರಿಸಬೇಕು ಇತ್ಯಾದಿಗಳನ್ನು ಕುರಿತು ಸ್ಪಷ್ಟತೆ ಇರಲಿಲ್ಲ. ಅದನ್ನು ರೂಪಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ನೆಮ್ಮದಿಯ ವಿಷಯವೆಂದರೆ ಸಮ್ಮೇಳನದ ಮೊದಲ ದಿನವೇ ಸಿಒಪಿ೨೮ ಅದನ್ನು ಒಪ್ಪಿಕೊಂಡಿತು.
ಸಧ್ಯದ ನಿರ್ಣಯದ ಪ್ರಕಾರ ಜಾಗತಿಕ ಬ್ಯಾಂಕು ಈ ನಿಧಿಯನ್ನು ನಿರ್ವಹಿಸುತ್ತದೆ. ಈ ಸಲಹೆ ಹಿಂದುಳಿದ ದೇಶಗಳಿಗೆ ಅಷ್ಟೊಂದು ಸಂತಸವಿಲ್ಲ. ಅವು ಜಾಗತಿಕ ಬ್ಯಾಂಕನ್ನು ನೆರವು ನೀಡುವ ಸಂಸ್ಥೆಗಿಂತ ಹೆಚ್ಚಾಗಿ ಸಾಲಕೊಡುವ ಸಂಸ್ಥೆಯಾಗಿ ನೋಡುತ್ತವೆ. ಅದು ಹೆಚ್ಚಾಗಿ ಅಮೇರಿಕೆಯ ಸೇರಿದಂತೆ ಶ್ರೀಮಂತ ರಾಷ್ಟ್ರಗಳ ಪ್ರಭಾವದಲ್ಲಿದೆ ಎಂಬುದು ಸಾಮಾನ್ಯ ಗ್ರಹಿಕೆ. ಜೊತೆಗೆ ಈ ನಿಧಿಯ ಕಾರ್ಯಾಚರಣೆಯ ಬಗ್ಗೆಯೂ ಇನ್ನೂ ಸ್ಪಷ್ಟತೆಯಿಲ್ಲ. ಈಗ ಯುರೋಪಿಯನ್ ಯೂನಿಯನ್ ೨೪೫ ಮಿಲಿಯನ್ ಡಾಲರ್, ಜರ್ಮನಿ ೧೦೦ ಮಿಲಿಯನ್ ಡಾಲರ್, ಯುಎಇ ೧೦೦ ಮಿಲಿಯನ್ ಡಾಲರ್ ಅಮೇರಿಕೆ ೧೭.೫ ಮಿಲಿಯನ್ ಡಾಲರ್ ನೀಡಲು ಒಪ್ಪಿವೆ. ಇನ್ನು ಕೆಲ ದಿನಗಳಲ್ಲಿ ಇನ್ನೊಂದಿಷ್ಟು ದೇಶಗಳು ಮುಂದೆ ಬರಬಹುದು. ಇದು ಒಮ್ಮೆ ಸಂಗ್ರಹಿಸುವ ಮೊತ್ತವೊ, ಅಥವಾ ಒಂದು ನಿರ್ದಿಷ್ಟ ಆವಧಿಗೊಮ್ಮೆ ಸಂಗ್ರಹಿಸಲಾಗುತ್ತದೊ, ತಿಳಿಯದು.
ಜೊತೆಗೆ ಈಗ ಸಂಗ್ರಹವಾಗಿರುವ ಹಣ ತುಂಬಾ ಕಡಿಮೆ. ಈವರೆಗಿನ ಚರಿತ್ರೆ ಗಮನಿಸಿದರೆ ಇದಕ್ಕಾಗಿ ದೇಶಗಳು ಅಂತಹ ಬದ್ಧತೆಯನ್ನು ತೋರಿಸಿಲ್ಲ ಅನ್ನುವುದು ಸ್ಪಷ್ಟ. ಹವಾಮಾನದ ವೈಪರಿತ್ಯದಿಂದ ಆಗಿರುವ ನಷ್ಟದ ಪ್ರಮಾಣ ೨೦೩೦ರ ವೇಳೆಗೆ ೪೦೦ ಬಿಲಿಯನ್ ಡಾಲರ್ ದಾಟಬಹುದು ಅನ್ನುವ ಅಂದಾಜಿದೆ. ಜೊತೆಗೆ ಹವಾಮಾನದ ಸಮಸ್ಯೆಗೆ ಇಂಗಾಲದ ಪ್ರಮಾಣದ ಕಡಿತ ಮತ್ತು ಗಾಳಿ, ಸೌರ, ಜಲವಿದ್ಯುತ್ ಮತ್ತು ಇತರೆ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡುವುದು, ತೈಲ, ಅನಿಲ, ಕಲ್ಲಿದ್ದಲು ಬೇಡಿಕೆ ಕುಗ್ಗಿಸುವುದು ಇತ್ಯಾದಿ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಜಗತ್ತು ವಿಫಲವಾದರೆ, ಹಾನಿಯ ಪ್ರಮಾಣ ಇನ್ನೂ ಹೆಚ್ಚುತ್ತದೆ. ಬಡರಾಷ್ಟ್ರಗಳ, ಬಡವರ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ತಾಳಿಕೆಯ ಬೆಳವಣಿಗೆಯ ಗುರಿ ಹುಸಿಯಾಗುತ್ತದೆ.