ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
ಟ್ರಂಪ್ ಕೊನೆಗೂ ಇಂಡಿಯಾ ಮೇಲೆ ೫೦% ಸುಂಕ ಹಾಕಿದ್ದಾರೆ. ದಿನಕ್ಕೊಂದು ಕ್ರಮದಿಂದ ಟ್ರಂಪ್ ಸದಾ ಸುದ್ದಿಯಲ್ಲಿದ್ದಾನೆ. ಎಷ್ಟೇ ಬೇಡ ಅಂದರೂ ಅದು ಜಗತ್ತನ್ನು, ಜಗತ್ತಿನ ಆರ್ಥಿಕತೆಯನ್ನು ಒಂದಲ್ಲ ಒಂದು ರೀತಿ ಕಾಡುತ್ತಲೇ ಇದೆ. ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಎದುರಿಸುವುದು ಅನಿವಾರ್ಯವಾಗುತ್ತದೆ. ಭಾರತದ ಸಧ್ಯದ ಸರ್ಕಾರ ಆತ್ಮೀಯ ಸ್ನೇಹಿತ ಎಂದು ಪರಿಗಣಿಸಿದ್ದ ಟ್ರಂಪ್ ಇಂದು ನಮ್ಮ ವಿರುದ್ಧ ಸುಂಕದ ಯುದ್ಧ ಸಾರಿದ್ದಾನೆ. ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿರುವ ಟ್ರಂಪ್ ನೀತಿಯನ್ನು ಕುರಿತಂತೆ ಯೋಜನಾ ಆಯೋಗದ ಡೆಪ್ಯುಟಿ ಛೇರ್ಮನ್ ಆಗಿದ್ದ ಮಾಂಟಿಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಇತ್ತೀಚೆಗೆ ವೈರ್ ಪತ್ರಿಕೆಗಾಗಿ ಕರನ್ ಥಾಪರ್ ಸಂದರ್ಶಿಸಿದ್ದರು. ಸಂದರ್ಶನದಲ್ಲಿ ಅಮೇರಿಕೆಯ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ವಿಧಿಸಿರುವ ಸುಂಕವನ್ನು ಕುರಿತಂತೆ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಇದು ಟ್ರಂಪ್ ನೀತಿಯನ್ನು ಕುರಿತ ಚರ್ಚೆಗೆ ಇನ್ನೊಂದು ಆಯಾಮವನ್ನು ಕೊಡುತ್ತದೆ. ಹಾಗಾಗಿ ಇದನ್ನು ಇಲ್ಲಿ ಸಂಗ್ರಹಿಸಿ ಕನ್ನಡದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಹೆಚ್ಚು ವಿವರವಾದ ಲೇಖನಕ್ಕೆ ಕೆಳಗಿನ ಲಿಂಕನ್ನು ಬಳಸಿ.
ಸಂದರ್ಶನದ ಕೆಲವು ಭಾಗಗಳು
ಪ್ರೆಶ್ನೆ: ಟ್ರಂಪ್ ಏಕೆ ಹೀಗೆ ಮಾಡುತ್ತಿದ್ದಾರೆ?
ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಮೊದಲು ಸ್ವಲ್ಪ ಹಿನ್ನೆಲೆಯನ್ನು ಸ್ಪಷ್ಟ ಪಡಿಸಿಕೊಳ್ಳೋಣ. ದೀರ್ಘಕಾಲದಿಂದ ಸ್ವೀಕೃತವಾಗಿದ್ದ ಜಾಗತಿಕ ಗ್ರಹಿಕೆಯನ್ನು ಹಾಗೂ ಡಬ್ಲ್ಯುಟಿಒ ಅಡಿಯಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಬಾಧ್ಯತೆಗಳನ್ನು ಅಧ್ಯಕ್ಷ ಟ್ರಂಪ್ ಭಗ್ನಗೊಳಿಸುತ್ತಿದ್ದಾರೆ. ಆ ಒಪ್ಪಂದದ ಪ್ರಕಾರ ಯಾವುದೇ ದೇಶ ಇನ್ನೊಂದು ದೇಶದ ಮೇಲೆ ಒಂದು ಮಿತಿಗಿಂತ ಹೆಚ್ಚಿನ ಸುಂಕವನ್ನು ಹಾಕುವಂತಿರಲಿಲ್ಲ. ಟ್ರಂಪ್ ಇದನ್ನು ಉಲ್ಲಂಘಿಸಿದ್ದಾರೆ. ಎರಡನೆಯದಾಗಿ ಎಲ್ಲಾ ದೇಶಗಳು ಮೋಸ್ಟ್ ಫೇವರ್ಡ್ ನೇಷನ್ ನಿಯಮಕ್ಕೆ ಬದ್ಧರಾಗಿರಬೇಕು. ಅಂದರೆ ನೀವು ಹಾಗೆ ಒಂದು ದೇಶಕ್ಕೆ ವಿಧಿಸುವ ಸುಂಕದ ಮಿತಿ ಎಲ್ಲಾ ದೇಶಗಳಿಗೂ ಅನ್ವಯವಾಗಬೇಕು. ದೇಶಗಳ ನಡುವೆ ತಾರತಮ್ಯ ಮಾಡುವಂತಿಲ್ಲ. ಟ್ರಂಪ್ ಇದನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಅವರು ಸುಂಕವನ್ನು ಆಯುಧವನ್ನಾಗಿ ಬಳಸುತ್ತಿದ್ದಾರೆ. ಜನರ ಮೇಲೆ ಒತ್ತಡ ತರುತ್ತಿದ್ದಾರೆ. ಅವರು ಆಕ್ಷೇಪಿಸುತ್ತಿರುವ ವಿಷಯಗಳೆಲ್ಲಾ ವ್ಯಾಪಾರಕ್ಕೆ ಸಂಬಂಧಪಟ್ಟ ವಿಷಯಗಳೇನಲ್ಲ.
ಅವರು ಸುಂಕವನ್ನು ಪ್ರಾರಂಭಿಸಿದ್ದು ವ್ಯಾಪಾರದ ಸಮಸ್ಯೆಗೆ ಪರಿಹಾರವಾಗಿ. ನಮ್ಮೊಂದಿಗಿನ ದ್ವಿಪಕ್ಷೀಯ ವ್ಯಾಪಾರದಲ್ಲಿ ಅತಿ ಹೆಚ್ಚು ವ್ಯಾಪಾರದ ಕೊರತೆಯ ಇರುವ ದೇಶಗಳ ಮೇಲೆ ನಾನು ಸುಂಕ ವಿಧಿಸುತ್ತೇನೆ ಅಂತ ಪ್ರಾರಂಭಿಸಿದರು. ಅದು ನಿಜವಾಗಿ ಕೆಟ್ಟ ಅರ್ಥಶಾಸ್ತ್ರ. ಯಾಕೆಂದರೆ ವ್ಯಾಪಾರದ ಕೊರತೆ ತಾರತಮ್ಯದ ಸುಂಕಕ್ಕೆ ಎಂದೂ ಸಮರ್ಥನೆಯಾಗುವುದಿಲ್ಲ. ಆದರೆ ಅದು ಪ್ರಾರಂಭವಾಗಿದ್ದು ಹಾಗೆ. ಈಗ ಅದನ್ನು ದಾಟಿ ಹೋಗಿದ್ದಾರೆ. ಯಾರಾದರೂ ನಡೆದುಕೊಳ್ಳುತ್ತಿರುವ ಕ್ರಮ ನನಗೆ ಸರಿ ಅನಿಸದೆ ಹೋದರೆ ಅವರ ಮೇಲೆ ಸುಂಕ ಹಾಕುತ್ತೇನೆ ಅನ್ನುವುದು ಸಧ್ಯದ ನೀತಿಯಾಗಿದೆ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಅಂತ ಕೇಳಿದರೆ, ಅವರು ಅಮೇರಿಕೆಯು ಒಪ್ಪಿಕೊಂಡಿರುವ ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮೂಲೆಗುಂಪು ಮಾಡಿದ್ದಾರೆ. ಅದು ತುಂಬಾ ಕೆಟ್ಟದ್ದು. ಅಮೇರಿಕೆಯ ಮೇಲೆ ಜಗತ್ತಿಗಿದ್ದ ವಿಶ್ವಾಸವನ್ನು ಅದು ನಾಶಮಾಡಿದೆ. ಅವರ ಕ್ರಿಯೆಗಳಲ್ಲಿ ಒಂದು ತರ್ಕವಿಲ್ಲ. ಅದಕ್ಕೆ ತಾರ್ಕಿಕ ವಿವರಣೆ ಕೊಡವುದಕ್ಕೆ ಸಾಧ್ಯವಿಲ್ಲ.
ಪ್ರಶ್ನೆ: ಭಾರತ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗೂ ಪುಟಿನ್ ಯುದ್ದ ಯಂತ್ರಕ್ಕೆ ಹಣ ಒದಗಿಸುತ್ತಿದೆ ಅಂತ ಪೀಟರ್ ನವ್ರೋರೊ ಆರೋಪ ಮಾಡಿದ್ದಾರೆ. ಆದರೆ ಚೀನಾ ಕೂಡ ನಮಗಿಂತ ಹೆಚ್ಚು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಅದಕ್ಕೆ ಅವರಿಗೆ ಸಮಸ್ಯೆ ಇಲ್ಲ. ಚೀನಾ ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಇಂದನದ ಬೆಲೆ ಏರುವುದು ಕಡಿಮೆಯಾಗುತ್ತದೆ ಅಂತ ವಾದಿಸುತ್ತಿದ್ದಾರೆ. ಹಾಗಾಗಿ ಎರಡು ದೇಶಗಳಿಗೂ ಬೇರೆಯದೇ ತರ್ಕವನ್ನು ಬಳಸುತ್ತಿದ್ದಾರೆ.
ಇದರಲ್ಲಿ ಯಾವ ತರ್ಕವೂ ಇಲ್ಲ. ಮಾರ್ಕೊ ರುಬಿಯೊ ಹೇಳುವುದು ಸರಿ. ರಷ್ಯಾದ ತೈಲದ ಮೇಲೆ ಅಮೇರಿಕೆಯ ಯಾವುದೇ ನಿರ್ಬಂಧವೂ ಇಲ್ಲ. ಕೇವಲ ಬೆಲೆಗೆ ಮಿತಿಯನ್ನು ಹಾಕಿದ್ದಾರೆ. ನಾವು ಆ ಬೆಲೆ ಮಿತಿಯಲ್ಲೇ ವ್ಯವಹಾರ ನಡೆಸುತ್ತಿದ್ದೇವೆ. ಅವರು ನಾವು ಚೀನಾ ಏನು ಮಾಡುತ್ತಿದ್ದೆಯೊ ಅದನ್ನು ಮಾಡುವುದಕ್ಕೆ ಅವಕಾಶ ಕೊಡುತ್ತೇವೆ. ಯುರೋಪಿಯನ್ನರಿಗೆ ಅಪಾರ ಇಂಧನವನ್ನು ಕೊಳ್ಳುವುದಕ್ಕೆ ಅವಕಾಶ ಕೊಡುತ್ತೇವೆ. ಆದರೆ ನಿಮ್ಮ ಮೇಲೆ ನಮ್ಮದೆ ಕಾರಣಕ್ಕೆ ಒತ್ತಡ ತರುತ್ತೇವೆ. ಅನ್ನುತ್ತಿದ್ದಾರೆ. ಭಾರತವನ್ನು ಹೆದರಿಸುವುದಕ್ಕೆ ಟ್ರಂಪ್ ಸುಂಕವನ್ನು ಬಳಸಿಕೊಳ್ಳುತ್ತಿದ್ದಾರೆ.
ಒಮ್ಮೆ ನೀವು ಶಿಸ್ತನ್ನು ಕೈಬಿಟ್ಟರೆ, ನಿಮಗೆ ಇಷ್ಟ ಬಂದಂತೆ ಮಾಡಬಹುದು. ಸುಂಕವನ್ನು ಇಷ್ಟಕ್ಕೆ ನಿಲ್ಲಿಸಬೇಕು ಅಂತ ಏನೂ ಇಲ್ಲ. ಇನ್ನೂ ಹೆಚ್ಚಿಸಬಹುದು. ಸಧ್ಯಕ್ಕೆ ನಮ್ಮ ಒಟ್ಟಾರೆ ರಫ್ತಿನ ಅರ್ಧಕ್ಕೆ ಹಾಕಿದ್ದಾರೆ. ಮುಂದೆ ಹೆಚ್ಚಿಸಬಹುದು. ಸುಂಕದ ಉದ್ದೇಶವೇ ನಿಮಗೆ ಆಗದವರನ್ನು ಶಿಕ್ಷಿಸುವುದು ಅಂತಾದರೆ ಅದಕ್ಕೆ ಮಿತಿಯೇ ಇಲ್ಲ. ಆದರೆ ಅದರಿಂದ ಅಮೇರಿಕೆಗೂ ತೊಂದರೆಯಾಗುತ್ತದೆ. ಅದು ಜಗತ್ತಿನ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ. ಆದರೆ ಅದು ಅಮೇರಿಕೆಯ ಆಡಳಿತ ನಡೆಸುತ್ತಿರುವವರನ್ನು ಬಾಧಿಸುತ್ತಿಲ್ಲ.
ಒಮ್ಮೆ ನೀವು ಮಾಡಿಕೊಂಡ ಒಪ್ಪಂದಕ್ಕೆ ನೀವು ಬದ್ಧರಾಗಬೇಕಾಗಿಲ್ಲ ಅಂತ ನಿರ್ಧರಿಸಿದ ಮೇಲೆ, ಮತ್ತು ಬೇರೆಯವನ್ನು ಶಿಕ್ಷಿಸುವುದಕ್ಕೆ ಸುಂಕವನ್ನು ಅಸ್ತ್ರವನ್ನಾಗಿ ಬಳಸಬಹುದು ಅಂದುಕೊಂಡರೆ, ಅವರು ಏನು ಮಾಡುತ್ತಾರೆ ಅಂತ ತೀರ್ಮಾನಿಸುವುದು ಕಷ್ಟವಾಗುತ್ತದೆ. ಭಾರತವನ್ನು ಬೆದರಿಸುತ್ತಿರುವಂತೆ ಅವರು ಯಾವ ದೇಶವನ್ನು ಬೇಕಾದರೂ ಬೆದರಿಸಬಹುದು. ಬ್ರೆಜಿಲ್ ವಿರುದ್ಧ ಬಳಸುತ್ತಿದ್ದಾರೆ. ಅಲ್ಲಿ ಯಾವುದೇ ಭೌಗೋಳಿಕ, ರಾಜಕೀಯ ಕಾರಣವಿಲ್ಲ. ಬ್ರೆಜಿಲ್ನವರು ಬಾಲ್ಸನಾರೋ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಟ್ರಂಪ್ ಹೇಳುವ ಪ್ರಕಾರ ಆತ ಟ್ರಂಪ್ ಸ್ನೇಹಿತ.
ಭಾರತದ ಮುಂದಿರುವ ಆಯ್ಕೆ ಏನು?
ಅಮೇರಿಕೆ ಬೇರೆ ದೇಶಗಳ ತರಹ ಯಾವುದೋ ಒಂದು ಸಾಮಾನ್ಯ ದೇಶವಲ್ಲ. ಅದು ಜಗತ್ತಿನಲ್ಲೇ ದೊಡ್ಡ್ಡ ಆರ್ಥಿಕತೆ. ವ್ಯಾಪಾರದ ಆರ್ಥಿಕತೆಯಲ್ಲಿ ದೊಡ್ಡದಲ್ಲದಿರಬಹುದು. ಚೈನಾ ಅದನ್ನು ಹಿಂದೆ ಹಾಕಿದೆ. ನಮ್ಮ ಅತಿ ದೊಡ್ಡ ಮಾರುಕಟ್ಟೆ. ಅಮೇರಿಕೆ ನಮ್ಮನ್ನು ಅಸಡ್ಡೆ ಮಾಡುತ್ತಿರುವಂತೆ ನಾವು ಅವರನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅವರ ಆರ್ಥಿಕತೆಗೆ ಹೋಲಿಸಿದರೆ ನಮ್ಮದು ತುಂಬಾ ಚಿಕ್ಕದು. ಹಾಗಾಗಿ ನಾವು ಹೇಗೆ ಪ್ರತಿಕ್ರಿಯಿಸಬೇಕು ಅನ್ನುವುದು ನಮ್ಮ ಮುಂದಿರುವ ಸವಾಲು. ತಿಕ್ಕಲುತನ, ಪ್ರತಿದಿನ ಬದಲಾಗುವ, ಒಂದು ದಿನ ಹೇಳಿದ್ದನ್ನು ಇನ್ನೊಂದು ದಿನ ಅಲ್ಲಗೆಳೆಯುವ, ಒಬ್ಬ ವ್ಯಕ್ತಿಯನ್ನು ಆಧರಿಸಿದ ಈ ವಿದ್ಯಮಾನ ತಾತ್ಕಾಲಿಕ ಅಂದುಕೊಳ್ಳೋಣ. ಅಮೇರಿಕೆಯೊಂದಿಗೆ ಸಂಘರ್ಷಕ್ಕೆ ಹೋಗುವುದು ಬೇಡ. ಆಂತರಿಕ ಮಾತುಕತೆಯಲ್ಲಿ ಅವರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮುಂದುವರಿಯಬೇಕು. ಅಮೇರಿಕೆಯ ಈ ಕ್ರಮಗಳಿಂದ ಅಮೇರಿಕೆಗೆ ತುಂಬಾ ನಷ್ಟವಾಗುತ್ತದೆ. ಅವರು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅಮೇರಿಕೆಯಲ್ಲಿ ಇದಕ್ಕೆ ವಿರುದ್ಧವಾದ ಕೆಲವು ಪ್ರಕ್ರಿಯೆಗಳು ಬಂದಿವೆ. ಉದಾಹರಣೆಗೆ ತುಲ್ಸಿ ಗಬಾರ್ಡ್ ಇದು ಸರಿಯಿಲ್ಲ ಎಂದಿದ್ದಾರೆ. ಆದರೆ ಅಂತಹ ಪ್ರತಿಕ್ರಿಯೆಗಳು ಹೆಚ್ಚಬೇಕು. ಆಗ ಅಲ್ಲಿ ಬದಲಾವಣೆಯಾಗಬಹುದು. ಸಂಘರ್ಷಕ್ಕೆ ಇಳಿಯದೆ ಆತ್ಮೀಯ ಚರ್ಚೆಯ ಮೂಲಕ ಅವರೊಂದಿಗೆ ಒಪ್ಪಂದಕ್ಕೆ ಬರುವುದಕ್ಕೆ ಸಾಧ್ಯವಾದರೆ ಒಳ್ಳೆಯದು.
ಅಮೇರಿಕೆ ಗೂಳಿಯ ತರಹ ಎಲ್ಲರನ್ನು ಹೆದರಿಸುವುದಕ್ಕೆ ಹೊರಟಾಗ ಉಳಿದವರೂ ಒಟ್ಟಾಗಿ ’ನಾವು ಇದಕ್ಕೆ ಸೊಪ್ಪು ಹಾಕುವುದಿಲ್ಲ ನಾವೂ ಪ್ರತಿ ಸುಂಕ ಹಾಕುತ್ತೇವೆ’ ಎಂದು ನಿಂತರೆ ನಾವೂ ಅವರೊಡನೆ ಸೇರೋಣ. ಯುರೋಪಿಯನ್ನರ ದಾರಿಯೂ ಮೊದಲು ಅದೇ ಆಗಿತ್ತು. ನಾವೂ ಪ್ರತಿಸುಂಕ ಹಾಕುತ್ತೇವೆ ಅಂತಲೇ ಹೇಳುತ್ತಿದ್ದರು. ಅದರೆ ಕ್ರಮೇಣ ಅವರ ನಿಲುವು ದುರ್ಬಲವಾಯಿತು. ಕೊನೆಗೆ ಒತ್ತಡಕ್ಕೆ ಮಣಿದರು. ಅಮೇರಿಕೆಯನ್ನು ಮರುಯೋಚನೆಗೆ ಹಚ್ಚಿದ್ದು, ಹಿಂದಕ್ಕೆ ಸರಿಯುವಂತೆ ಮಾಡಿದ್ದು ಚೀನಾ. ಅಮೇರಿಕೆಯ ಅಂತರರಾಷ್ಟ್ರೀಯ ಸ್ಥಾನಕ್ಕೆ ನಿಜವಾಗಿ ಆತಂಕ ಒಡ್ಡುತ್ತಿರುವುದು ಚೀನಾ. ಅದನ್ನು ಅವರು ಸ್ಪಷ್ಟವಾಗಿಯೇ ಮಾಡಿದ್ದಾರೆ. ತಂತ್ರಜ್ಞಾನದ ಮುಂದಾಳುವಾಗಿ, ಭೌಗೋಳಿಕ-ರಾಜಕೀಯ ಮುಖಂಡನಾಗಿ ಅಮೇರಿಕೆಯ ಸ್ಥಾನವನ್ನು ಕಸಿದುಕೊಳ್ಳುವುದು ನಮ್ಮ ಉದ್ದೇಶ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರಿಗೆ ಹೀಗೆ ಮಾಡುವುದಕ್ಕೆ ಸಾಧ್ಯವಾಯಿತು. ಯಾಕೆಂದರೆ ಅಮೇರಿಕೆಗೆ ತಕ್ಷಣಕ್ಕೆ ಹೊಡೆತ ಕೊಡುವ ವ್ಯಾಪಾರದ ಹಲವು ಸರಕುಗಳನ್ನು ಅವರು ನಿಯಂತ್ರಿಸುತ್ತಿದ್ದರು. ಇಡೀ ಎಲೆಕ್ಟ್ರಾನಿಕ್ಸ್ ಹಾಗೂ ಉನ್ನತ ತಂತ್ರಜ್ಞಾನದ ಕೈಗಾರಿಕೆಗೆ ಅವಶ್ಯಕವಾಗಿದ್ದ ವಸ್ತುಗಳನ್ನು ಅವರು ಪೂರೈಸುತ್ತಿದ್ದರು. ನೀವು ನಮ್ಮ ಮೇಲೆ ಸುಂಕ ಹಾಕಿದರೆ ನಾವು ನಿಮ್ಮ ಮೇಲೆ ಸುಂಕ ಹಾಕುತ್ತೇವೆ ಅಂತ ಬೆದರಿಸಿದರು. ಅಮೇರಿಕೆ ಹಿಂದೆ ಸರಿದುಕೊಂಡಿತು. ಹಾಗಾಗಿ ಅಮೇರಿಕೆಯನ್ನು ತಡೆಯಬೇಕಾದರೆ ನಿಮಗೆ ಆರ್ಥಿಕ ಸಾಮರ್ಥ್ಯ ಇರಬೇಕು. ನಮಗೆ ಆರ್ಥಿಕ ಪ್ರಾಬಲ್ಯ ಇಲ್ಲದೇ ಹೋದರೆ ಅವರಿಗೆ ಇಷ್ಟ ಬಂದದ್ದನ್ನು ಮಾಡುತ್ತಾರೆ. ನಮ್ಮ ಆರ್ಥಿಕತೆ ಅಮೇರಿಕೆಯ ಆರ್ಥಿಕತೆಯ ಮುಂದೆ ತುಂಬಾ ಪುಟ್ಟದು. ನಾವು ಅಮೇರಿಕೆಗೆ ತೀರಾ ಅನಿವಾರ್ಯವಾದ ಯಾವುದನ್ನೂ ತಯಾರಿಸುತ್ತಿಲ್ಲ. ನಮ್ಮ ಉತ್ಪನ್ನಗಳಿಂದ ಅಲ್ಲಿಯ ಬಳಕೆದಾರರಿಗೆ ಅನುಕೂಲವಾಗಬಹುದು. ಆದರೆ ಅಮೇರಿಕೆಗೆ ಅನಿವಾರ್ಯವಲ್ಲ. ಅಮೇರಿಕೆ ನಾವು ಅದನ್ನು ಲೆಕ್ಕಿಸುವುದಿಲ್ಲ ಅಂತ ನಿರ್ಧರಿಸಿದರೆ, ಅದರಿಂದ ಅಮೇರಿಕನ್ನರು ಹೆಚ್ಚಿನ ಬೆಲೆ ತೆರಬೇಕಾಗಬಹುದು. ಆದರೆ ಅದರಿಂದ ಅಮೇರಿಕೆಯ ಆರ್ಥಿಕತೆಯ ಯಾವುದೇ ಪ್ರಮುಖ ಕ್ಷೇತ್ರವೂ ಸ್ಥಗಿತಗೊಳ್ಳುವುದಿಲ್ಲ. ಅವರ ಉನ್ನತ ತಂತ್ರಜ್ಞಾನದ ಉದ್ದಿಮೆಗಳಿಗೆ ತೊಂದರೆಯಾಗುವುದಿಲ್ಲ.
ಎರಡು ದೇಶಗಳು ಒಟ್ಟಿಗೆ ಬರುವುದಕ್ಕೆ ಹಲವು ದಾರಿಗಳಿವೆ. ಜನಗಳ ನಡುವಿನ ಸಂಬಂಧ, ಉದ್ದಿಮೆಗಳ ನಡುವಿನ ಸಂಬಂಧ ಇವೆಲ್ಲಾ ಎರಡು ದೇಶಗಳನ್ನು ಬೆಸೆಯುತ್ತವೆ. ಅಮೇರಿಕಾ ಹಾಗೂ ಭಾರತದ ಸರ್ಕಾರಗಳ ಪ್ರಯತ್ನದಿಂದ ಇತ್ತೀಚಿನವರೆಗೆ ಟ್ರಂಪ್ ಜೊತೆ ಭಾರತಕ್ಕೆ ಒಳ್ಳೆಯ ಸಂಬಂಧ ಸಾಧ್ಯವಾಗಿತ್ತು. ಆದರೆ ಈಗ ಅದು ಸಂಪೂರ್ಣ ಹಾಳಾಗಿದೆ. ಅದಕ್ಕೆ ಕಾರಣ ಇಂದು ಅಮೇರಿಕೆಯ ಆಡಳಿತ ಒಬ್ಬ ವ್ಯಕ್ತಿಯ ಆಡಳಿತವಾಗಿದೆ. ಅದನ್ನು ಬದಲಿಸುವುದು ನಿಮ್ಮ ಕೈಯಲಿಲ್ಲ. ಇದನ್ನು ಒಪ್ಪಿಕೊಳ್ಳಬೇಕು. ಪ್ರತಿ ಸುಂಕವನ್ನು ಹಾಕುವುದಕ್ಕಿಂತ ಅವರನ್ನು ಸುಂಕವನ್ನು ಹಾಕದೆ ಇರುವಂತೆ ಮಾಡುವ ಪ್ರಯತ್ನ ಮುಖ್ಯ. ಅದಕ್ಕಾಗಿ ಚರ್ಚೆಯನ್ನು ಮುಂದುವರಿಸುವುದು ಒಳ್ಳೆಯದು. ಒಂದು ಪಕ್ಷ ಅವರು ಸುಂಕವನ್ನು ಹಾಕಿದರೆ (ಈಗ ಹಾಕಿಯಾಗಿದೆ), ಅಮೇರಿಕೆಯ ಕೆಲವು ಉತ್ಪನ್ನಗಳು ನಮಗೆ ಮುಖ್ಯ. ಉದಾಹರಣೆಗೆ ರಕ್ಷಣಾ ಸಾಮಗ್ರಿಗಳ ಪೂರೈಕೆ ನಮಗೆ ತುಂಬಾ ಮುಖ್ಯವಾಗಿ ಬೇಕು. ಅದನ್ನು ಕುರಿತಂತೆ ಪರಿಣತರು ಯೋಚಿಸಬೇಕು. ಅಮೇರಿಕೆಯನ್ನು ನೆಚ್ಚಿಕೊಳ್ಳಬಹುದಾದ ಪೂರೈಕೆದಾರನಾಗಿ ಪರಿಗಣಿಸುವುದಕ್ಕೆ ಸಾಧ್ಯವೇ ಎಂದು ಯೋಚಿಸಬೇಕು. ಆದರೆ ಟ್ರಂಪ್ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅಮೇರಿಕೆಯನ್ನು ನೆಚ್ಚಿಕೊಳ್ಳುವುದು ಕಷ್ಟವೆನಿಸುತ್ತದೆ. ಆದರೆ ಅಮೇರಿಕೆಗೆ ಹೋಲಿಸಿದರೆ ನಮ್ಮದು ಚಿಕ್ಕ ಆರ್ಥಿಕತೆಯಾದ್ದರಿಂದ ನಾವು ಚೌಕಾಸಿ ಮಾಡುವ ಸ್ಥಿತಿಯಲ್ಲಿಲ್ಲ.
ನಾವು, ೨೦ ವರ್ಷದ ಹಿಂದೆ ೨೦೦೪ರಲ್ಲಿ ಚೀನಾ ಇದ್ದ ಸ್ಥಿತಿಯಲ್ಲಿದ್ದೇವೆ. ನಮ್ಮ ವಿಕಸಿತ್ ಭಾರತ್ ಕನಸು ನನಸಾಗಬೇಕಾದರೆ ನಾವು ಚೀನಾ ಈಗಿರುವ ಮಟ್ಟವನ್ನು ಇನ್ನು ೨೦ ವರ್ಷದಲ್ಲಿ ಮುಟ್ಟಬೇಕು. ಅವರು ನಿಧಾನವಾಗಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಬಂದರು. ಅವರು ತಾಂತ್ರಿಕತೆ ಹಾಗು ಆರ್ಥಿಕತೆ ಎರಡರಲ್ಲೂ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರು. ಅವರೀಗ ಅಮೇರಿಕೆಯನ್ನು ಎದುರಿಸಿ ನಿಲ್ಲುವ ಸ್ಥಿತಿಯಲ್ಲಿದ್ದಾರೆ. ನಾವು ನಮ್ಮ ಆರ್ಥಿಕತೆಯ ಬಗ್ಗೆ ಅವಲೋಕಿಸಿಕೊಳ್ಳಬೇಕು. ನಮ್ಮ ರಫ್ತನ್ನು ಹೆಚ್ಚು ಸ್ಪರ್ಧಾತ್ಮಕವನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಬೇಕು. ಅಮೇರಿಕೆಯೊಂದಿಗಿನ ನಮ್ಮ ವ್ಯಾಪಾರವೇನಿದ್ದರೂ ಜಾಗತಿಕ ವ್ಯಾಪಾರದ ಕೇವಲ ೧೦% ಇಂದ ೧೧% ಮಾತ್ರ. ಉಳಿದ ೮೯% ವ್ಯಾಪಾರ ಅಮೇರಿಕಾದ ಆಚೆಗೆ ನಡೆಯುತ್ತಿದೆ. ಆದರೆ ಅಲ್ಲೂ ನಮಗೆ ಸ್ಪರ್ಧೆ ಇದೆ. ನಮ್ಮ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಅಲ್ಲಿ ಯಶಸ್ವಿಯಾಗಬೇಕಾದರೆ ನಾವು ನಮ್ಮ ಆರ್ಥಿಕತೆಯನ್ನು ಹೆಚ್ಚು ಸ್ಪರ್ಧಾತ್ಮಕ ಮಾಡಬೇಕು. ಅದಕ್ಕೆ ಮಾಡಬೇಕಾದದ್ದು ತುಂಬಾ ಇದೆ.
ಅಮೇರಿಕೆಯ ಸುಂಕವನ್ನು ಸಹಿಸಿಕೊಳ್ಳಬೇಕು ಅನ್ನುವುದಾದರೆ, ೫೦% ಸುಂಕದ ಪರಿಣಾಮ ನಮ್ಮ ರಫ್ತಿನ ಮೇಲೆ ಏನಾಗಬಹುದು?
ರಫ್ತಿಗೆ ಖಂಡಿತಾ ತೊಂದರೆಯಾಗುತ್ತದೆ. ಅಮೇರಿಕೆ ನಮ್ಮ ರಫ್ತಿಗೆ ದೊಡ್ಡ ಮಾರುಕಟ್ಟೆ. ಅವರು ನಮ್ಮ ಎಲ್ಲಾ ರಫ್ತಿನ ಮೇಲೆ ನಿರ್ಬಂಧ ಹಾಕಿಲ್ಲ. ನಾಳೆ ಹಾಕಬಹುದು. ಸಧ್ಯಕ್ಕೆ ಔಷಧಿ, ಎಲೆಕ್ಟ್ರಾನಿಕ್ಸ್ ಇಂತಹ ಕೆಲವು ಉತ್ಪನ್ನಗಳಿಗೆ ಸುಂಕ ಹಾಕಿಲ್ಲ. ಆದರೆ ಬಟ್ಟೆ, ಚರ್ಮ, ಜೆಮ್ಸ್, ಆಭರಣಗಳು ಇವುಗಳಿಗೆಲ್ಲಾ ಹೊಡೆತ ಬೀಳುತ್ತದೆ. ನಮ್ಮ ಜಿಡಿಪಿಯ ಶೇಕಡ ೨ರಷ್ಟನ್ನು ನಾವು ಅಮೇರಿಕೆಗೆ ರಫ್ತು ಮಾಡುತ್ತೇವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು ಶೇಕಡ ೧ರಷ್ಟು ಉತ್ಪನ್ನಗಳ ಮೇಲೆ ಸುಂಕ ಹಾಕಲಾಗಿದೆ. ಅವುಗಳ ರಫ್ತಿಗೆ ಹೊಡೆತ ಬೀಳುತ್ತದೆ. ರಫ್ತು ಕಮ್ಮಿಯಾಗುವುದಕ್ಕೆ ನಮ್ಮ ಮೇಲೆ ಹಾಕಿರುವ ಸುಂಕವಷ್ಟೆ ಕಾರಣವಾಗುವುದಿಲ್ಲ. ಬೇರೆ ದೇಶಗಳ ಮೇಲೆ ಸುಂಕ ಕಡಿಮೆ ಇರುವುದೂ ನಮಗೆ ತೊಂದರೆ ಮಾಡುತ್ತದೆ. ಅದರಿಂದ ನಮಗೆ ಸಾಪೇಕ್ಷವಾಗಿ ಅನಾನುಕೂಲ ಹೆಚ್ಚುತ್ತದೆ. ಉದಾಹರಣೆಗೆ ಅಮೇರಿಕೆ ಎಲ್ಲಾ ದೇಶಗಳ ಸೀಗಡಿಯ ರಫ್ತಿನ ಮೇಲೆ ೫೦% ಸುಂಕ ಹಾಕಿದ್ದರೆ, ಎಲ್ಲರಿಗೂ ಒಟ್ಟಾರೆಯಾಗಿ ತೊಂದರೆಯಾಗುತ್ತಿತ್ತು. ಬದಲಿಗೆ ಭಾರತದ ಮೇಲೆ ೫೦% ಹಾಕಿ ವಿಯೆಟ್ನಾಂ ಮೇಲೆ ೧೯% ಹಾಕಿದರೆ ಭಾರತಕ್ಕೆ ಹೆಚ್ಚು ಪೆಟ್ಟು ಬೀಳುತ್ತದೆ.
ಒಟ್ಟಾರೆ ನೋಡಿದರೆ ನಮ್ಮ ನಷ್ಟ ಜಿಡಿಪಿಯ ಶೇಕಡ ಒಂದರಷ್ಟು ಆಗಬಹುದು. ಅದು ಹೆಚ್ಚೇನಲ್ಲ. ಒಂದು ವರ್ಷ ಕೃಷಿ ಕೈಕೊಟ್ಟರೆ ಆಗುವ ನಷ್ಟದಷ್ಟಾಗುತ್ತದೆ. ಆದರೆ ಕೆಲವು ಕ್ಷೇತ್ರಗಳಿಗೆ ಆಗುವ ಒಟ್ಟಾರೆ ನಷ್ಟವನ್ನು ನೋಡಿದರೆ ಅದು ವಿಪರೀತವಾಗುತ್ತದೆ. ಉದಾಹರಣೆಗೆ ಸೂರತ್ನ ವಜ್ರವನ್ನು ಕತ್ತರಿಸುವ ಕೈಗಾರಿಕೆಗೆ, ಅಥವಾ ಆಭರಣಗಳ ಉತ್ಪಾದಕರಿಗೆ, ಅಥವಾ ತಿರುಪ್ಪೂರ್, ಲೂಧಿಯಾನದ ಬಟ್ಟೆ ವ್ಯಾಪಾರಿಗಳಿಗೆ, ಚೆನ್ನೈನ ಚರ್ಮದ ವ್ಯಾಪಾರಿಗಳಿಗೆ ಇದರಿಂದ ವಿಪರೀತ ನಷ್ಟವಾಗುತ್ತದೆ. ಇವೆಲ್ಲಾ ಹೆಚ್ಚು ಶ್ರಮ ಬೇಡುವ ಉತ್ಪನ್ನಗಳು. ಹಾಗಾಗಿ ಸಾವಿರಾರು ಜನ ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ಸುಂಕದಿಂದ ಭಾರತದ ಬೆಳವಣಿಗೆಗೂ ಹೊಡೆತ ಬೀಳುತ್ತದೆ. ಈಗ ಬೆಳವಣಿಗೆ ದರ ಎಷ್ಟಿರಬಹುದು ಎನ್ನುವುದು ಗೊತ್ತಿಲ್ಲ. ಕೇಂದ್ರ ಬ್ಯಾಂಕ್ ೬.೫% ಇರುತ್ತದೆ ಅಂತ ಅಂದಾಜು ಮಾಡಿತ್ತು. ಆದು ಸುಂಕದ ಮೊದಲಿನ ಅಂದಾಜು. ಈ ಇಳಿಕೆಗೆ ಅಮೇರಿಕೆಯ ವ್ಯಾಪಾರದಲ್ಲಿ ಕುಸಿತವಷ್ಟೆ ಕಾರಣವಲ್ಲ. ಅಮೇರಿಕೆಯ ಸುಂಕದಿಂದ ಜಾಗತಿಕ ವ್ಯಾಪಾರವೂ ಕುಸಿಯುತ್ತದೆ. ಅದರ ಪರಿಣಾಮ ಒಟ್ಟಾರೆ ಜಾಗತಿಕ ಆರ್ಥಿಕತೆಯ ಮೇಲೂ ಆಗುತ್ತದೆ. ನಮ್ಮೊಂದಿಗೆ ಸ್ಪರ್ಧಿಸುತ್ತಿರುವವರು ಅಮೇರಿಕೇತರ ಮಾರುಕಟ್ಟೆಯಲ್ಲೂ ತಮ್ಮ ಸ್ಪರ್ಧೆಯನ್ನು ತೀವ್ರಗೊಳಿಸುತ್ತಾರೆ. ಜೊತೆಗೆ ಇದು ವಿದೇಶಿ ಹೂಡಿಕೆದಾರರಲ್ಲಿ ಅನಿಶ್ಚಿತತೆಯನ್ನು ತೀವ್ರಗೊಳಿಸುತ್ತದೆ. ಹಾಗಾಗಿ ಹೂಡಿಕೆಯ ಬೆಳವಣಿಗೆಯಲ್ಲೂ ಅನಿಶ್ಚಿತತೆ ಕಾಣಿಸಿಕೊಳ್ಳುತ್ತದೆ. ಒಮ್ಮೆ ವಿದೇಶಿ ಹೂಡಿಕೆಯಲ್ಲಿ ಅನಿಶ್ಚಿತತೆಯುಂಟಾದರೆ ಅದರ ಪರಿಣಾಮ ಖಾಸಗಿ ಹೂಡಿಕೆಯ ಮೇಲೂ ಆಗುತ್ತದೆ. ಇವೆಲ್ಲಾ ಸೇರಿಕೊಂಡು ಜಿಡಿಪಿಯ ಬೆಳವಣಿಗೆಯ ದರ ಶೇಕಡ ೦.೫ ಅಷ್ಟು ಕಮ್ಮಿಯಾಗಬಹುದು. ಆದರೆ ಸುಂಕವಿಲ್ಲದೆ ಹೋಗಿದ್ದರೆ ಬೆಳವಣಿಗೆ ದರ ಎಷ್ಟಿರುತ್ತಿತ್ತು ಅನ್ನುವುದು ಗೊತ್ತಿಲ್ಲ.
ಟ್ರಂಪ್ ಸುಂಕದಿಂದ ರಫ್ತಿನ ತೊಂದರೆ ಅನುಭವಿಸುತ್ತಿರುವ ಕ್ಷೇತ್ರಗಳ ಉದ್ದಿಮೆಯವರಿಗೆ ಸರ್ಕಾರ ಹೇಗಾದರೂ ನೆರವು ನೀಡಬೇಕು. ಸಾಲ ಕೊಡುತ್ತಾರೆ ಅನ್ನುವುದು ಸರಿ. ಸಾಲ ತಾತ್ಕಾಲಿಕ ಪರಿಹಾರವಾಗಿ ಒಳ್ಳೆಯದು. ಸರ್ಕಾರದ ಪ್ರಯತ್ನ ಫಲಪ್ರದವಾಗುವುದಿದ್ದರೆ ಇದು ಒಳ್ಳೆಯದು. ಸಮಸ್ಯೆ ಪರಿಹಾರವಾಗದಿದ್ದರೆ ಇರುವ ಸಮಸ್ಯೆಯ ಜೊತೆಗೆ ಸಾಲದ ಹೊರೆಯೂ ಸೇರಿಕೊಳ್ಳುತ್ತದೆ.
ಅಮೇರಿಕೆಯಾಚೆಗೆ ಜಗತ್ತಿನ ಉಳಿದ ದೇಶಗಳಿಗೆ ರಫ್ತನ್ನು ಹೆಚ್ಚಿಸಿಕೊಳ್ಳಬಹುದು ಅನ್ನುವುದು ಸರಿ. ಜಗತ್ತಿನ ಎಲ್ಲಾ ದೇಶಗಳು ಅದೇ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿರುತ್ತಾರೆ. ಹಾಗಾಗಿ ನಾವು ಹೆಚ್ಚು ಸ್ಪರ್ಧಾತ್ಮಕವಾಗಬೇಕು. ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಒಂದೆರಡು ವರ್ಷಗಳಲ್ಲಿ ಸುಧಾರಣೆಯಾಗಬೇಕು. ಮೊದಲು ಎಲ್ಲಾ ದೇಶಗಳಿಗೂ ಪರಸ್ಪರ ಮಾರುಕಟ್ಟೆಯಲ್ಲಿ ಅವಕಾಶವಿತ್ತು. ಅಂತಹ ಜಾಗತಿಕ ವ್ಯವಸ್ಥೆಯನ್ನು ಅಮೇರಿಕೆ ಕೆಡವಿದೆ. ಈಗ ಈ ವ್ಯಾಪಾರದ ಸವಾಲು ನಮ್ಮ ಮುಂದಿದೆ. ಈಗ ಅಮೇರಿಕೆಯನ್ನು ಸಾಧ್ಯವಾದಷ್ಟೂ ಎದುರಿಸಬೇಕು. ಅದೊಂದು ಪ್ರಬಲವಾದ ಮತ್ತು ಅಷ್ಟೇ ಪ್ರಮುಖವಾದ ಶಕ್ತಿ. ಅದು ನಮ್ಮ ಮುಖ್ಯವಾದ ಮಾರುಕಟ್ಟೆ. ಇದನ್ನು ಒಪ್ಪಿಕೊಳ್ಳಬೇಕು. ಅವರ ವೈಯಕ್ತಿಕ ಐಲುತನವನ್ನು ಸಹಿಸಿಕೊಳ್ಳಬೇಕು. ಅವರನ್ನು ಮತ್ತೆ ಒಂದು ವಿವೇಕಯುತ ನಿಲುವಿಗೆ ತರುವುದಕ್ಕೆ ಪ್ರಯತ್ನಿಸಬೇಕು. ಆದರೆ ನಾವು ಬೇರೆ ದೇಶಗಳ ಜೊತೆ ನಮ್ಮ ಸಂಬಂಧವನ್ನು ಗಟ್ಟಿಮಾಡಿಕೊಳ್ಳಬೇಕು. ಟ್ರಂಪ್ ಹಾಗೂ ಅವರ ಸಹೋದ್ಯೋಗಿಗಳು ನಮ್ಮ ಬಗ್ಗೆ ಹೇಳುತ್ತಿರುವುದು ಅಪ್ಪಟ ಸುಳ್ಳು ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು. ಭಾರತ ಸುಂಕದ ಮಹಾರಾಜ, ಅದಕ್ಕೆ ವ್ಯಾಪಾರ ಬೇಕಿಲ್ಲ ಅನ್ನುವುದು ಸುಳ್ಳು ಎಂದು ಅವರಿಗೆ ಅರಿವಾಗಬೇಕು. ನಾವು ಇಂಗ್ಲೆಂಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಒಳ್ಳೆಯದು. ಯುರೋಪಿಯನ್ ಯೂನಿಯನ್ ಜೊತೆಗೂ ಮಾಡಿಕೊಳ್ಳಬೇಕು.
ನಾವು ಇತರ ಬಹುರಾಷ್ಟ್ರೀಯ ಸಂಘಟನೆಗಳ ಜೊತೆ ಸೇರಿಕೊಳ್ಳಬೇಕು. ಆರ್ಸೆಪ್ ಅಂತಹ ಬಹುರಾಷ್ಟ್ರೀಯ ಸಂಘಟನೆಗಳ ಸದಸ್ಯತ್ವ ಪಡೆದುಕೊಳ್ಳಬೇಕು. ನಾವು ಸಿಪಿಟಿಪಿಪಿ ಒಪ್ಪಂದಕ್ಕೆ ಸಹಿ ಮಾಡಬೇಕು. ಅದು ದೊಡ್ಡ ಒಪ್ಪಂದ. ಜಪಾನ್ ಆಸ್ಟ್ರೇಲಿಯ, ಮತ್ತು ಏಷ್ಯಾದ ದೇಶಗಳು ಅದರಲ್ಲಿವೆ. ಇಂಗ್ಲೆಂಡ್ ಅದನ್ನು ಸೇರುತ್ತಿದೆ. ಯುರೋಪಿಯನ್ ಯೂನಿಯನ್ ಸೇರುವುದಕ್ಕೆ ಅರ್ಜಿ ಹಾಕಿದೆ. ಚೀನಾ ಅದರಲ್ಲಿಲ್ಲ. ಚೀನಾ ಸೇರುವ ಮೊದಲು ನಾವು ಅದರಲ್ಲಿ ಸೇರಬೇಕು. ಒಮ್ಮೆ ಚೀನಾ ಅದರಲ್ಲಿ ಸೇರಿಬಿಟ್ಟರೆ, ಬೇರೆ ದೇಶಗಳಿಗೆ ಪ್ರವೇಶ ಕೊಡುವ ವಿಷಯದಲ್ಲಿ ಅದು ವಿಟೊ ಚಲಾಯಿಸುತ್ತದೆ. ಅಂತಹ ಸಂಘಟನೆಗಳ ಜೊತೆ ಇರುವುದು ನಮ್ಮ ಚೌಕಾಸಿ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಪ್ರಯತ್ನದಲ್ಲಿ ದೇಶದೊಳಗೂ ಹೆಚ್ಚು ವಿಶಾಲವಾದ ಆರ್ಥಿಕ ಒಮ್ಮತ ಸಾಧ್ಯವಾಗುತ್ತದೆ. ಅದು ನಮ್ಮ ದೇಶದ ಹಿತದೃಷ್ಟಿಯಿಂದಲೂ ಒಳ್ಳೆಯದು.
ಅಮೇರಿಕ ಸುಂಕ ಹಾಕುತ್ತಿದೆ. ವ್ಯಾಪಾರಕ್ಕೆ ತಡೆಗಳನ್ನು ಸೃಷ್ಟಿಸುತ್ತಿದೆ. ಕೆಲವರು ಹೇಳುತ್ತಾರೆ ಅದಕ್ಕೆ ಪ್ರತಿಯಾಗಿ ನಾವೂ ಸುಂಕ ಹಾಕಬೇಕು ಇತ್ಯಾದಿ, ಇತ್ಯಾದಿ. ಆದರೆ ಅದು ಸಂಪೂರ್ಣ ತಪ್ಪು. ಅದು ನಾವು ವಿಫಲವಾಗುವುದಕ್ಕೆ ಖಾತ್ರಿಯಾದ ಮಾರ್ಗ. ನನ್ನ ದೃಷ್ಟಿಯಲ್ಲಿ ಅಮೇರಿಕೆ ಸುಂಕವನ್ನು ಹೆಚ್ಚಿಸಿದಷ್ಟೂ, ನಾವು ಸುಂಕವನ್ನು ಕಮ್ಮಿ ಮಾಡುತ್ತಾ ಹೋಗಬೇಕು. ಅಮೇರಿಕೆಯನ್ನು ಸುಂಕದ ಮಹಾರಾಜ ಎಂಬುದನ್ನು ಸ್ಥಾಪಿಸುವುದು ನಮ್ಮ ಉದ್ದೇಶ.
ಕೃಷಿ ಸುಂಕಕ್ಕೆ ಸಂಬಂಧಿಸಿದಂತೆ:
ಎಲ್ಲಾ ದೇಶಗಳಲ್ಲೂ ಕೃಷಿ ಹೆಚ್ಚು ಸೂಕ್ಷ್ಮವಾದ ವಿಷಯ. ಸರ್ಕಾರ ಆ ಬಗ್ಗೆ ಒಂದು ನಿಲುವನ್ನು ತೆಗೆದುಕೊಳ್ಳುತ್ತದೆ ಮುಸುಕಿನಜೋಳ ಹಾಗೂ ಸೋಯಾ ವಿಷಯಕ್ಕೆ ಸಂಬಂಧಿಸಿದಂತೆ ನಾವು ಒಂದು ಆಂತರಿಕ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಭಾರತೀಯ ರೈತರಿಗೆ ಜಿಎಂ ಬೀಜಗಳಿಗೆ ಅವಕಾಶಕೊಡುತ್ತಿಲ್ಲ. ನಮ್ಮ ರೈತರಿಗೆ ಅವಕಾಶ ಕೊಡದೆ, ಅದನ್ನೇ ಬಳಸಿ, ಬೆಳೆದ ಉತ್ಪನ್ನಗಳನ್ನು ಅಮೇರಿಕೆಯಿಂದ ನಮ್ಮಲ್ಲಿಗೆ ಬರುವುದಕ್ಕೆ ಬಿಡುವುದು ಸರಿಹೋಗುವುದಿಲ್ಲ. ಅಮೇರಿಕೆಯವರಲ್ಲಿ ಬದಲಾವಣೆ ತರಬೇಕು ಅನಿಸಿದರೆ ಜಿಎಂ ಕುರಿತಂತೆ ನಮ್ಮ ನಿಲುವೇನು ಎಂಬುದನ್ನು ಅಮೇರಿಕದವರಿಗೆ ವಿವರಿಸಬೇಕು. ನಮಗೆ ಯಾವುದೇ ಜಿಎಂ ಉತ್ಪನ್ನಗಳು ಬೇಡ ಅನ್ನುವುದೇ ನಮ್ಮ ನಿಲುವಾದರೆ, ನಾವು ಅಮೇರಿಕೆಗೆ ಹೋಗಿ ಜಿಎಂ ಆಹಾರವನ್ನು ತಿನ್ನುವುದನ್ನು ನಾನು ಆಕ್ಷೇಪಿಸುತ್ತೇನೆ. ಡೈರಿ ಉತ್ಪನ್ನಗಳ ವಿಷಯ ಹೆಚ್ಚು ಸಂಕೀರ್ಣವಾದದ್ದು. ಅದಕ್ಕೆ ಧಾರ್ಮಿಕ ಸಮಸ್ಯೆಗಳು ಬರುತ್ತವೆ. ದನಗಳಿಗೆ ನೀಡುವ ಆಹಾರದಲ್ಲಿ ಬೇರೆ ದನಗಳ ಮಾಂಸ ಹಾಗೂ ಮೂಳೆಯನ್ನು ಬಳಸುವುದು ಧಾರ್ಮಿಕ ನಿಷೇಧವನ್ನು ಉಲ್ಲಂಘಿಸುತ್ತದೆ. ಅಮೇರಿಕೆಯವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ’ಅದಕ್ಕೆ ನಿಷೇಧ ಏಕೆ ಹಾಕುತ್ತೀರಿ? ಇಂತಹ ಉತ್ಪನ್ನಗಳ ಮೇಲೆ ಅದರಲ್ಲಿರುವ ವಸ್ತುಗಳ ಪಟ್ಟಿಯನ್ನು ನಮೂದಿಸಿ ಎಂದು ಒತ್ತಾಯಿಸಿ. ಬಳಸುವುದು ಅಥವಾ ಬಿಡುವುದು ವ್ಯವಸ್ಥೆಯ ನಿರ್ಧಾರವಾಗಬೇಕು,’ ಎಂದು ಅವರು ಹೇಳಬಹುದು. ಇದು ಸ್ವಲ್ಪ ಕಷ್ಟದ ವಿಷಯ. ಆದರೆ ಮಾತುಕತೆಗೆ ಇದೇ ಅಡ್ಡಿಯಾಗಬಾರದು. ನಾವೀಗಾಗಲೆ ಕೆಲವು ಕ್ಷೇತ್ರಗಳಲ್ಲಿ ಕೃಷಿ ಉತ್ಪನ್ನಗಳಿಗೆ ಅವಕಾಶಕೊಟ್ಟಿದ್ದೇವೆ. ಇನ್ನೂ ಹೆಚ್ಚಿನದಕ್ಕೆ ಅವಕಾಶಕೊಡಬಹುದು. ಅದು ಸಮಸ್ಯೆಯಾಗಬಾರದು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಮರುಚಿಂತನೆಯಾಗಬೇಕು.
ಜಿಎಂ ಬೀಜದ ಬಗ್ಗೆ ಬಲವಾದ ನಿಲುವುಗಳಿವೆ. ರೈತರಿಗೆ ಜಿಎಂ ಬೀಜವನ್ನು ಬಳಸುವುದಕ್ಕೆ ನಮ್ಮ ನೀತಿ ಬಿಡುವುದಿಲ್ಲ ಅಂತಾದರೆ, ಜಿಎಂ ಉತ್ಪನ್ನಗಳು ಬೇರೆ ದೇಶಗಳಿಂದ ಬರುವುದಕ್ಕೆ ಅವಕಾಶ ಮಾಡಿಕೊಡುವುದು ನಮಗೆ ಕಷ್ಟವಾಗುತ್ತದೆ. ಈ ಬಗ್ಗೆ ಪ್ರಬಲವಾದ ನಿಲುವುಗಳಿವೆ. ಎನ್ಜಿಒಗಳು, ಪರಿಸರವಾದಿಗಳು ಇದನ್ನು ಬಲವಾಗಿ ವಿರೋಧಿಸುತ್ತಾರೆ. ಆದರೆ ಪರಿಸರದ ಬದಲಾವಣೆಯಿಂದ ಕೃಷಿ ಉತ್ಪಾದಕತೆಯ ಮೇಲೆ ಆಗುವ ಪರಿಣಾಮದೊಂದಿಗೆ ಇದನ್ನು ಹೋಲಿಸಿ ನೋಡಬೇಕು. ಹವಾಮಾನದ ಬದಲಾವಣೆಯಿಂದ ಕೃಷಿ ಉತ್ಪಾದಕತೆ ಶೇಕಡ ೧೫ರಷ್ಟು ಕಡಿಮೆಯಾಗುತ್ತದೆ. ಅದನ್ನು ಎದುರಿಸುವುದಕ್ಕೆ ಇರುವ ವೈಜ್ಞಾನಿಕ ಕ್ರಮವೆಂದರೆ ಅದನ್ನು ತಾಳಿಕೊಳ್ಳುವ ಬೀಜಗಳನ್ನು ಅಭಿವೃದ್ಧಿಪಡಿಸುವುದು. ಆದರೆ ಅವು ಜಿಎಂ ಬೀಜಗಳಾಗಿರುತ್ತವೆ. ಈ ಬಗ್ಗೆ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ವೈಜ್ಞಾನಿಕವಾದ ಚರ್ಚೆಯಾಗಬೇಕು.
ಮೊದಲು ಜಿಎಂ ಬೀಜಕ್ಕೆ ಇದ್ದ ವಿರೋಧ ಅಂದರೆ ಅವು ಪಾಶ್ಚಾತ್ಯ ಕಂಪೆನಿಗಳಿಂದ ಬರುತ್ತಿದೆ ಅನ್ನುವುದು. ಆದರೆ ನಾವು ದೆಹಲಿ ವಿಶ್ವವಿದ್ಯಾನಿಲಯದ ಜಿಎಂ ಪರಿವರ್ತಿತ ಬೀಜಗಳನ್ನೂ ತಿರಸ್ಕರಿಸುತ್ತಿದ್ದೇವೆ. ಹಾಗಾಗಿ ನಮ್ಮ ವಿರೋಧ ಅಮೇರಿಕೆಯ ಉತ್ಪನ್ನಗಳಿಗಲ್ಲ, ಜಿಎಂ ಉತ್ಪನ್ನಗಳಿಗೆ. ಈ ಬಗ್ಗೆ ವೈಜ್ಞಾನಿಕ ಚರ್ಚೆಯಾಗಬೇಕು. ನನಗೆ ವಿಜ್ಞಾನಿಗಳು ಹೇಗೆ ಯೋಚಿಸುತ್ತಾರೆ ಅನ್ನುವುದು ಗೊತ್ತಿಲ್ಲ. ನನಗೆ ಎನ್ಜಿಒಗಳು ಏನು ಶಿಫಾರಸ್ಸು ಮಾಡುತ್ತಾರೆ ಅನ್ನುವುದು ಗೊತ್ತು. ರಾಜಕೀಯವಾಗಿ ಪ್ರೇರಿತವಾದ ಗುಂಪುಗಳು ಏನು ಶಿಫಾರಸ್ಸು ಮಾಡುತ್ತವೆ ಅನ್ನುವುದು ಗೊತ್ತು. ಆದರೆ ಭಾರತದ ವೈಜ್ಞಾನಿಕ ಸಮುದಾಯ ಈ ಬಗ್ಗೆ ಇರುವ ಪುರಾವೆಗಳ ಬಗ್ಗೆ ಏನು ಹೇಳುತ್ತದೆ ಅನ್ನುವುದು ಗೊತ್ತಿಲ್ಲ.
ಪ್ರಶ್ನೆ: ಹಲವರು ಹೇಳುವ ಪ್ರಕಾರ ಟ್ರಂಪನ ಹೃದಯವನ್ನು ಮುಟ್ಟುವುದಕ್ಕೆ ಇರುವ ದಾರಿ ಅಂದರೆ ಹೊಗಳಿಕೆ. ಪಾಕಿಸ್ತಾನ ಇದನ್ನು ಪರಿಣಾಮಕಾರಿಯಾಗಿ ಮಾಡಿದೆ. ನಾವು ಪಾಕಿಸ್ತಾನದ ದಾರಿಯನ್ನು ಹಿಡಿಯಬೇಕಾ, ಅಥವಾ ಅದಕ್ಕೆ ತುಂಬಾ ತಡವಾಯಿತಾ?
ನನಗೆ ಪಾಕಿಸ್ತಾನ ಏನು ಮಾಡಿದೆ ಅನ್ನುವುದರ ಬಗ್ಗೆ ಸಾಕಷ್ಟು ಗೊತ್ತಿಲ್ಲ. ಅವರು ಟ್ರಂಪನ್ನು ನೋಬೆಲ್ ಶಾಂತಿ ಬಹುಮಾನಕ್ಕೆ ಶಿಫಾರಸ್ಸು ಮಾಡಿದ್ದಾರೆ. ಟ್ರಂಪ್ ಹಾಗೂ ಅವರ ಕುಟುಂಬದ ಉದ್ದಿಮೆಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ನನಗೆ ಆ ಕ್ಷೇತ್ರದಲ್ಲಿ ನಾವೇನು ಮಾಡಬಹುದು ಅನ್ನುವುದು ಖಂಡಿತಾ ಗೊತ್ತಿಲ್ಲ. ಇನ್ನು ಹೊಗಳಿಕೆಯ ವಿಷಯಕ್ಕೆ ಬಂದಾಗ, ಡಿಪ್ಲೊಮೆಸಿ ಅಂದರೆ ಅಂತಿಮವಾಗಿ ಬೇರೆ ಜನರನ್ನು ಸಂತುಷ್ಟಗೊಳಿಸುವುದು. ಟ್ರಂಪ್ ಮುಂದೆ ಇಡೀ ಯುರೋಪ್ ವಿಧೇಯ ಶಾಲೆಯ ಮಕ್ಕಳಂತೆ ಕುಳಿತಿರುವುದನ್ನು ಒಂದು ಬಗೆಯ ಹೊಗಳಿಕೆಯಾಗಿ ನೋಡಬಹುದು. ಹಲವರು ಅದನ್ನು ಹಾಗೆ ವಿವರಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ರಾಜತಾಂತ್ರಿಕತೆ ಅಂದರೆ ಪರಿಣಾಮಕಾರಿಯಾಗಿರುವುದು. ನೀವು ಮತ್ತೊಬ್ಬರ ಒಲವಿಗೆ ಸ್ಪಂದಿಸಿದಾಗ ಪರಿಣಾಮಕಾರಿಯಾಗಿರುತ್ತೀರಿ. ಆದರೆ ಅದೇ ಸಮಯದಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಬಲವಾಗಿ ರಕ್ಷಿಸಿಕೊಳ್ಳಬೇಕು. ಆ ಚೌಕಟ್ಟಿನೊಳಗೆ ಟ್ರಂಪನ್ನು ಸಂತುಷ್ಟಗೊಳಿಸುವುದಕ್ಕೆ ಒಳ್ಳೆಯ ದಾರಿಯಿದ್ದರೆ ಒಳ್ಳೆಯದು. ಅದರ ನಿರ್ಧಾರವನ್ನು ನಮ್ಮ ರಾಜತಾಂತ್ರಿಕರಿಗೆ ಬಿಡುತ್ತೇನೆ. ಅವರಿರುವುದೇ ಅದಕ್ಕೆ.
ಪ್ರಶ್ನೆ: ಪೀಟರ್ ನವರ್ರೊ ಭಾರತ ಅಮೇರಿಕೆಯ ಸ್ಟ್ರಾಟೆಜಿಕ್ ಪಾಲುದಾರನಾಗಲು ಬಯಸಿದರೆ. ಅದಕ್ಕೆ ಬೇಕಾದಂತೆ ನಡೆದುಕೊಳ್ಳಬೇಕು ಅಂತ ಹೇಳಿದ್ದಾರೆ. ನಾವು ಮಲ್ಟಿಪೋಲಾರ್ ಜಗತ್ತಿನ ಬಗ್ಗೆ ಮಾತನಾಡುವ ಮೂಲಕ ನಾವು ಆರ್ಥಿಕವಾಗಿ ಆತ್ಮೀಯವಾಗಿ ಇರಬೇಕಾದವರಿಗೆ ತಪ್ಪು ಸಂಕೇತಗಳನ್ನು ರವಾನಿಸುತ್ತಿದ್ದೇವಾ?
ಅದು ನಿಜವಾದ ಸವಾಲು. ನಮ್ಮ ದೃಷ್ಟಿಯಲ್ಲಿ ಜಗತ್ತು ಮಲ್ಟಿಪೋಲಾರ್ ಆಗಿದೆ. ನಾವು ಯಾವುದೇ ಒಂದು ಧ್ರುವಕ್ಕೆ ಮಿತ್ರನಾಗುವುದಿಲ್ಲ. ಮತ್ತು ನಾವು ಎಲ್ಲರೊಂದಿಗೂ ಸಂಬಂಧ ಇಟ್ಟುಕೊಳ್ಳಲು ಬಯಸುತ್ತೇವೆ ಅನ್ನುವುದು ಮೂಲಭೂತವಾಗಿ ಸರಿ ಇದೆ. ಇದು ಅಷ್ಟು ಸಮಸ್ಯೆಯಾಗದಂತೆ ಮಾಡಬೇಕಾದರೆ ಈ ಹಲವು ಧ್ರುವಗಳ ಗುಂಪುಗಳನ್ನು ಕನಿಷ್ಟ ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಂದು ವೇದಿಕೆಗೆ ತರುವುದಕ್ಕೆ ಸಾಧ್ಯವಾಗಬೇಕು. ನವರ್ರೋ ಸ್ಟ್ರಾಟೆಜಿಕ್ ಪಾಲುದಾರರಾಗುವ ವಿಷಯ ಮಾತನಾಡಿದ್ದಾರೆ. ನಮ್ಮ ಕಾರ್ಯತಂತ್ರವನ್ನು ಕುರಿತ ಗ್ರಹಿಕೆ ಏನೇ ಆಗಿರಲಿ, ನಾವೆಲ್ಲಾ ಒಂದನ್ನು ಒಪ್ಪಿಕೊಳ್ಳಬೇಕು. ವ್ಯಾಪಾರ ಅನ್ನುವುದು ನಮ್ಮ ಸ್ಟ್ರಾಟೆಜಿಕ್ ಆಯ್ಕೆಯನ್ನು ಬೇರೆಯವರ ಮೇಲೆ ಹೇರುವುದಕ್ಕೆ ಒಂದು ಆಯುಧವಾಗಬಾರದು. ಮೈತ್ರಿ, ಸಹಕಾರ, ಅಸಹಕಾರ ಇತ್ಯಾದಿಗಳನ್ನು ಬೇರೆ ಆಯುಧಗಳನ್ನು ಬಳಸಬಹುದು. ಆದರೆ ವ್ಯಾಪಾರ ಆಯುಧವಾಗಬಾರದು. ನನ್ನ ದೃಷ್ಟಿಯಲ್ಲಿ ದೊಡ್ಡ ರಾಷ್ಟ್ರಗಳು ತಮ್ಮ ಭೌಗೋಳಿಕ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕೆ ವ್ಯಾಪಾರ ಹಾಗೂ ಆರ್ಥಿಕ ನಿರ್ಬಂಧಗಳನ್ನು ಬಳಸಿಕೊಂಡರೆ ಜಾಗತಿಕ ಸಹಕಾರ ವ್ಯವಸ್ಥೆ ಸಾಧ್ಯವೇ ಆಗುವುದಿಲ್ಲ. ಅಮೇರಿಕೆ ಇದನ್ನು ಮುಂದುವರಿಸಿದರೆ ಜಗತ್ತು ಅಮೇರಿಕೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತದೆ. ಅಮೇರಿಕೆಗೆ ಉಳಿದ ದೇಶಗಳ ನಡುವಿನ ಸಂಬಂಧವನ್ನು ಕುರಿತಂತೆ ಅದರದ್ದೇ ಅದ ಹಿತಾಸಕ್ತಿಗಳಿರಬಹುದು. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕಂತೆ ನಮಗೆ ಬೇಕಾದವರನ್ನು ಬೆಂಬಲಿಸುವ ಸ್ವಾತಂತ್ರ್ಯ ಇರಬೇಕು. ಮತ್ತು ಅಂತಹ ಸಂದರ್ಭದಲ್ಲಿ ಅಮೇರಿಕೆಯ ಆಯ್ಕೆಗೆ ಭಿನ್ನವಾಗಿರುವವರನ್ನು ಬೆಂಬಲಿಸಬೇಕಾಗಿ ಬಂದಾಗ ನಮ್ಮ ಕಾಲೆಳೆದು ಇಡೀ ವ್ಯಾಪಾರದ ವ್ಯವಸ್ಥೆಯನ್ನು ನಾಶಮಾಡಬಾರದು. ಈ ಬಗ್ಗೆ ನಮಗೆ ಭರವಸೆ ಇರಬೇಕು. ವ್ಯಾಪಾರದ ವ್ಯವಸ್ಥೆಯ ನಂತರ ಹಣಕಾಸಿನ ವ್ಯವಸ್ಥೆ ಬರುತ್ತದೆ. ನೀವು ಸುಂಕ ಹಾಕುತ್ತೀರಿ ಅನ್ನುವ ಕಾರಣಕ್ಕೆ ನಿಮ್ಮನ್ನು ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆಯಾದ ಸ್ವಿಫ್ಟ್ನಿಂದ ಹೊರಗೆ ಹಾಕಬಹುದೇ? ಅವರು ಡಾಲರಿನಲ್ಲಿ ಮೀಸಲನ್ನು ಇಟ್ಟುಕೊಂಡಿದ್ದರೆ ನೀವು ಅದನ್ನು ಸ್ಥಗಿತಗೊಳಿಸಬಹುದೆ? ನವರ್ರೊ ಹೇಳುವುದರ ಅರ್ಥ ನಿಮಗೆ ಸ್ಟ್ರಾಟಜಿಕ್ ಕ್ಷೇತ್ರದಲ್ಲಿ ಅನುಕೂಲ ಸಿಗಬೇಕಾದರೆ ನೀವು ಸ್ಟ್ರಾಟೆಜಿಕ್ ಪಾಲುದಾರರಂತೆ ನಡೆದುಕೊಳ್ಳಬೇಕು ಅನ್ನುವುದು ಸರಿ. ಆದರೆ ಒಬ್ಬ ಸ್ಟ್ರಾಟೆಜಿಕ್ ಪಾಲುದಾರ ನಡೆದುಕೊಳ್ಳಬೇಕಾದ ರೀತಿ ಅಂತ ನಾನು ಅಂದುಕೊಂಡ ರೀತಿ ನೀವು ನಡೆದುಕೊಳ್ಳುತ್ತಿಲ್ಲ, ಹಾಗಾಗಿ ನಾನು ಜಾಗತಿಕ ಆರ್ಥಿಕತೆಯಲ್ಲಿ ನೀವು ಅವಲಂಬಿತವಾಗಿರುವ ಸಮಸ್ತ ಆರ್ಥಿಕ ಸಂಬಂಧಗಳನ್ನು ಕಡಿದುಹಾಕುತ್ತೇನೆ ಅನ್ನುವುದು ಸರಿಯಿಲ್ಲ. ಅದರ ಪರಿಣಾಮ ತೀರಾ ವಿನಾಶಕಾರಿಯಾಗಿರುತ್ತದೆ. ಅದರ ಬಗ್ಗೆ ಅವರು ಯೋಚನೆ ಮಾಡಿದ್ದಾರಾ, ಇಲ್ಲವಾ ನನಗೆ ಗೊತ್ತಿಲ್ಲ. ದುರಂತ ಅಂದರೆ ಅಮೇರಿಕೆಯಲ್ಲಿ ಹೆಚ್ಚಿನ ಜನ ಈ ನೀತಿಯ ಸಮಂಜಸತೆಯ ಬಗ್ಗೆ ಯೋಚಿಸುತ್ತಿಲ್ಲ.
೧೯೩೦ರಲ್ಲಿ ಸ್ಮೂಟ್ ಹಾಲಿ ಸುಂಕ ಹಾಕಿದಾಗ ೧೦೦೦ ಜನ ಅರ್ಥಶಾಸ್ತ್ರಜ್ಞರು ಅಧ್ಯಕ್ಷರಿಗೆ ಈ ಶಾಸನವನ್ನು ಒಪ್ಪಿಕೊಳ್ಳಬೇಡಿ. ಇದು ತುಂಬಾ ಕೆಟ್ಟದು, ಅಂತ ಪತ್ರ ಬರೆದಿದ್ದರು. ಆದರೆ ಇದು ಅದಕ್ಕಿಂತ ದೊಡ್ಡದು. ಆದರೆ ಇದಕ್ಕೆ ಆ ಪ್ರಮಾಣದ ಪ್ರತಿಕ್ರಿಯೆ ಬರುತ್ತಿಲ್ಲ. ಬಹುಶಃ ವಿಶ್ವವಿದ್ಯಾನಿಲಯಗಳು, ಉದಾರವಾದೀ ಸಂಸ್ಥೆಗಳ ಮೇಲೂ ಟ್ರಂಪ್ ದಾಳಿ ನಡೆಸಿರುವುದು ಅವರನ್ನು ಆತಂಕಕ್ಕೆ ತಳ್ಳಿದೆ. ಆದರೆ ಈ ವಿಷಯಗಳು ಮುಂದೆ ಚರ್ಚೆಯಾದಾಗ ಅಧ್ಯಕ್ಷ ಟ್ರಂಪ್ ಹಾಗೂ ನವ್ರೋರೊ ಅವರಿಗೆ ತಮ್ಮದೇ ಬುದ್ದಿಜೀವಿ ವೃತ್ತಿಪರ ಸಮುದಾಯದಲ್ಲಿ ತಮಗೆ ಬೆಂಬಲ ಇಲ್ಲ ಎಂಬುದು ಖಂಡಿತಾ ಅರಿವಾಗುತ್ತದೆ. ಅದು ಖಂಡಿತಾ ಅಮೇರಿಕೆಯ ಚಿಂತನೆಯನ್ನು, ನೀತಿಗಳನ್ನು ಪ್ರಭಾವಿಸುತ್ತದೆ ಅಂದುಕೊಂಡಿದ್ದೇನೆ.
ಅದಕ್ಕಾಗಿಯೇ ನಾನು ಹೇಳುತ್ತಿರುವುದು ಆತುರದಲ್ಲಿ ಏನೂ ಮಾಡಬೇಡಿ. ಎಲ್ಲವೂ ಸರಿಹೋಗುವುದಕ್ಕೆ ಸ್ವಲ್ಪ ಸಮಯ ಕೊಡಿ.