ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

april, 2022
ಇತ್ತೀಚಿನ ದಿನಗಳಲ್ಲಿ ಬಡತನ ಹಾಗೂ ಅಸಮಾನತೆ ತುಂಬಾ ಸುದ್ದಿ ಮಾಡುತ್ತಿವೆ. ದಿನಪತ್ರಿಕೆಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳು ಸಂಪಾದಕೀಯ ಬರೆಯುತ್ತಿವೆ. ತರಾವರಿ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿವೆ. ‘ಬಡತನ ನಿರ್ಮೂಲನವಾಗಿದೆ’ ಅಂತ ಒಂದು ಸುದ್ದಿ ಹೇಳಿದರೆ. ‘ಬಡತನದ ಪ್ರಮಾಣದಲ್ಲಿ ಎಂದೂ ಇಲ್ಲದ ಹೆಚ್ಚಳ’ ಅಂತ ಮತ್ತೊಂದು ಸುದ್ದಿ ಹೇಳುತ್ತದೆ. ಒಂದೊಂದು ಅಧ್ಯಯನಗಳು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿವೆ. ಯಾಕೆ ಇಷ್ಟೊಂದು ವೈಪರಿತ್ಯ? ಕಾರಣ ತುಂಬಾ ಸರಳ. ಅಧ್ಯಯನಕ್ಕೆ ಅವು ಬಳಸಿರುವ ಕ್ರಮಗಳು ಬೇರೆ ಬೇರೆ. ಹಾಗೆಯೇ ಅಂಕಿ ಅಂಶಗಳೂ ಬೇರೆ ಬೇರೆ. ಹಾಗಾಗಿ ಸ್ವಾಭಾವಿಕವಾಗಿಯೇ ತೀರ್ಮಾನಗಳೂ ಒಂದೇ ಆಗಿರುವುದಕ್ಕೆ ಸಾಧ್ಯವಿಲ್ಲ. ಈ ಮೊದಲು ಸಾಮಾನ್ಯವಾಗಿ (ಎನ್‌ಎಸ್‌ಎಸ್‌ಒ) ನ್ಯಾಷನಲ್ ಸ್ಯಾಂಪ್ಲಿಂಗ್ ಸರ್ವೇ ಆರ್ಗನೈಸೇಷನ್ ನಡೆಸುತ್ತಿದ್ದ ಬಳಕೆದಾರರ ಖರ್ಚಿನ ಸಮೀಕ್ಷೆಯನ್ನು ಬಡತನದ ಪ್ರಮಾಣವನ್ನು ಲೆಕ್ಕಹಾಕುವುದಕ್ಕೆ ಬಳಸಲಾಗುತ್ತಿತ್ತು. ಆದರೆ ಸರ್ಕಾರ ೨೦೧೧-೧೨ರ ನಂತರ ಆ ಮಾಹಿತಿಯನ್ನು ಪ್ರಕಟಿಸುತ್ತಿಲ್ಲ. ನಡೆಸಿದ ಸಮೀಕ್ಷೆಯೊಂದರ ವರದಿಯನ್ನು ತಡೆಹಿಡಿದಿದೆ. ಇತ್ತೀಚೆಗೆ ಸಮೀಕ್ಷೆಯನ್ನೂ ನಡೆಸಿಲ್ಲ. ಹಾಗಾಗಿ ಸಂಶೋಧಕರು ತಮ್ಮದೇ ಆದ ಕ್ರಮಗಳನ್ನು ಬಳಸಿ ಬಡತನದ ದರ ಹಾಗೂ ಪ್ರಮಾಣವನ್ನು ಅಂದಾಜು ಮಾಡುತ್ತಿದ್ದಾರೆ. ಹಾಗಾಗಿ ವ್ಯತ್ಯಾಸಗಳು ಕಾಣಿಸುತ್ತಿವೆ. ಕೆಲವು ಅಧ್ಯಯನಗಳನ್ನು ಸ್ಥೂಲವಾಗಿ ಗಮನಿಸೋಣ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಜಾಗತಿಕ ಬ್ಯಾಂಕಿನ ಸಂಶೋಧಕರು ನಡೆಸಿರುವ ಅಧ್ಯಯನಗಳು ಭಾರತದ ಜನಸಂಖ್ಯೆಯಲ್ಲಿ ಬಡವರ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತವೆ. ಜಾಗತಿಕ ಬ್ಯಾಂಕಿನ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿದಿನ ೧.೯ ಡಾಲರಿಗಿಂತ ಕಡಿಮೆ ವರಮಾನ ಇರುವವರ ಸಂಖ್ಯೆ ೨೦೧೧ರಲ್ಲಿ ಶೇಕಡ ೨೨.೫ ಇತ್ತು. ೨೦೧೯ರಲ್ಲಿ ಅದು ಶೇಕಡ ೧೦.೨ಕ್ಕೆ ಇಳಿದಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಒಂದು ಸಂಶೋಧಕರ ತಂಡದ ಅಧ್ಯಯನ ಭಾರತದಲ್ಲಿ ಬಡತನ ನಿರ್ಮೂಲನವೇ ಆಗಿಬಿಟ್ಟಿದೆ, ಕೊರೋನ ಪಿಡುಗಿನ ಸಮಯದಲ್ಲೂ ಅದು ಅಂತಹ ಏರಿಕೆಯನ್ನು ಕಂಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಆದರೆ ಇನ್ನು ಕೆಲವು ಅಧ್ಯಯನಗಳು ಈ ಆವಧಿಯಲ್ಲಿ ಬಡತನ ತೀವ್ರವಾಗಿದೆ ಎಂದು ಅಂದಾಜು ಮಾಡಿವೆ. ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಸಂಶೋಧಕರು ಎರಡು ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ ಕೋವಿಡನ ಮೊದಲ ಅಲೆಯೊಂದೇ ೨೩೦ ಮಿಲಿಯನ್ ಜನರನ್ನು ನಿರ್ಗತಿಕರನ್ನಾಗಿ ಮಾಡಿದೆ. ಎಸ್ ಸುಬ್ರಮಣ್ಯ ಅವರ ಅಧ್ಯಯನದ ಪ್ರಕಾರ ೨೦೧೧-೧೨ರಲ್ಲಿ ಶೇಕಡ ೩೧ರಷ್ಟು ಇದ್ದ ಬಡತನ ೨೦೧೭-೧೮ವೇಳೆಗೆ ಶೇಕಡ ೩೫ರಷ್ಟು ಆಗಿದೆ. ಅವರು ಈ ಅವಧಿಯಲ್ಲಿ ಬಡವರ ಸಂಖ್ಯೆ ೫೨ ಮಿಲಿಯನ್‌ಗಳಷ್ಟು ಹೆಚ್ಚಾಗಿದೆ ಎಂದು ಅಂದಾಜು ಮಾಡಿದ್ದಾರೆ. ಸಂತೋಷ್ ಮೆಹರೋತ್ರ ಹಾಗೂ ಜಜತಿ ಪರಿದ ಅವರು ತಮ್ಮ ಅಧ್ಯಯನದಲ್ಲಿ ೨೦೧೧-೧೨ರಲ್ಲಿ ಶೇಕಡ ೨೨ ಇದ್ದ ಬಡವರ ಸಂಖ್ಯೆ ೨೦೧೯-೨೦ರಲ್ಲಿ ಶೇಕಡ ೨೬ರಷ್ಟಾಗಿದೆ ಎಂದು ಅಂದಾಜು ಮಾಡಿದ್ದಾರೆ.
ಸರ್ಕಾರ ಕನ್ಸ್ಸ್ಯೂಮರ್ ಎಕ್ಸ್‌ಪೆಂಡಿಚರ್ ಸರ್ವೆ ಅಂದರೆ ಜನರು ಮಾಡುವ ಖರ್ಚಿಗೆ ಸಂಬಂಧಿಸಿದಂತೆ ಕೊನೆಯ ಸಮೀಕ್ಷೆ ನಡೆದದ್ದು ೨೦೧೭-೧೮ರಲ್ಲಿ. ಆದರೆ ಸರ್ಕಾರ ಆ ಸಮೀಕ್ಷೆಯನ್ನು ಪ್ರಕಟಿಸಲಿಲ್ಲ. ಆದರೆ ವರದಿಯ ಕೆಲವು ಭಾಗ ಸೋರಿಕೆಯಾಗಿ ಅಲ್ಲಿ ಇಲ್ಲಿ ಪ್ರಕಟವಾಗಿದೆ. ಕೆಲವರು ತಮ್ಮ ಅಧ್ಯಯನಕ್ಕೆ ೨೦೧೧-೧೨ರಲ್ಲಿ ಸರ್ಕಾರ ಪ್ರಕಟಿಸಿದ್ದ ಅಂಕಿ ಅಂಶಗಳನ್ನು ಬಳಸಿಕೊಂಡಿದ್ದಾರೆ. ಇನ್ನು ಕೆಲವರು ಸೋರಿಕೆಯಾದ ೨೦೧೭-೧೮ರ ಅಂಕಿ ಅಂಶಗಳನ್ನು ಬಳಸಿಕೊಂಡಿದ್ದಾರೆ. ಅದಕ್ಕೆ ಇನ್ನಿತರ ಮೂಲಗಳಿಂದ ದೊರೆಯುವ ಇತ್ತೀಚಿನ ಅಂಕಿ ಅಂಶಗಳನ್ನು ಬಳಸಿಕೊಂಡು ಪರಿಷ್ಕರಿಸಿ ಇಂದಿನ ಪರಿಸ್ಥಿತಿಯನ್ನು ಅಂದಾಜು ಮಾಡುವ ಪ್ರಯತ್ನ ಮಾಡಿದ್ದಾರೆ.
ಉದಾಹರಣೆಗೆ ಎಸ್ ಸುಬ್ರಮಣ್ಯ ಅವರು ಈ ಸೋರಿಕೆಯ ಅಂಕಿ ಅಂಶವನ್ನು ಬಳಸಿಕೊಂಡು ಬಡತನದ ಪ್ರಮಾಣವನ್ನು ಅಂದಾಜು ಮಾಡಿದ್ದಾರೆ. ಅವರ ಅಂದಾಜಿನ ಪ್ರಕಾರ ಬಡತನದ ಪ್ರಮಾಣ ಅವರ ಅಧ್ಯಯನದ ಅವಧಿಯಲ್ಲಿ ಶೇಕಡ ೪ರಷ್ಟು ಹೆಚ್ಚಾಗಿದೆ. ಸಂತೋಷ್ ಮೆಹರೋತ್ರ ಹಾಗೂ ಜಜತಿ ಪರಿದ ಅವರ ಅಧ್ಯಯನ ಕೂಡ ಬಡವರ ಸಂಖ್ಯೆ ಹೆಚ್ಚಾಗಿದೆ ಅಂತಲೇ ಹೇಳುತ್ತದೆ. ಅವರು ಲೇಬರ್ ಫೋರ್ಸ್ ಸರ್ವೆಯಲ್ಲಿ ಜನರ ಬಳಕೆಗೆ ಸಂಬಂಧಿಸಿದಂತೆ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ಬಡತನದ ಪ್ರಮಾಣದ ಅಂದಾಜು ಮಾಡಿದ್ದಾರೆ. ಅವರ ಅಧ್ಯಯನದ ಪ್ರಕಾರ ೨೦೧೧-೨೦ರ ಅವಧಿಯಲ್ಲಿ ಬಡವರ ಸಂಖ್ಯೆ ೭೮ ಮಿಲಿಯನ್ ಅಷ್ಟು ಜಾಸ್ತಿ ಆಗಿದೆ.
ಆದರೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಧ್ಯಯನ ಎನ್‌ಎಸ್‌ಒ ಸಮೀಕ್ಷೆಯಲ್ಲಿ ಸಿಗುವ ಬಳಕೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಳಸಿಕೊಂಡಿದೆ. ಈ ಅಧ್ಯಯನ ಮಾಡಿರುವ ಸುರ್ಜಿತ್ ಭಲ್ಲ, ಅರವಿಂದ್ ವಿರಮನಿ ಹಾಗೂ ಕರನ್ ಭಾಸಿನ್ ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇದು ಭಲ್ಲ ಅವರ ಹಿಂದಿನ ಪ್ರಕಟನೆಯ ಮಾದರಿಯಲ್ಲೇ ಇದೆ. ಅದೇ ವಿಧಾನವನ್ನು ಬಳಸಿದ್ದಾರೆ, ತೀರ್ಮಾನವೂ ಸುಮಾರಾಗಿ ಅದೇ ಇದೆ. ಭಲ್ಲ ಅವರ ಪ್ರಕಾರ ಬಳಕೆದಾರರ ಖರ್ಚಿನ ಸಮೀಕ್ಷೆಗಳು (ಸಿಇಎಸ್) ಬಳಕೆಯ ಖರ್ಚಿನ ಅಂದಾಜನ್ನು ಸರಿಯಾಗಿ ತಿಳಿಸುವುದಿಲ್ಲ. ಹಾಗಾಗಿ ಬಡತನದ ಲೆಕ್ಕಾಚಾರಕ್ಕೆ ಅದು ಯೋಗ್ಯವಲ್ಲ. ಸಿಇಎಸ್ ಕುರಿತಂತೆ ಭಲ್ಲ ಅವರು ಈ ಅಧ್ಯಯನದಲ್ಲೂ ಅದೇ ನಿಲುವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ೨೦೧೭-೧೮ರ ಸಮೀಕ್ಷೆಯ ವರದಿಯನ್ನು ತಡೆಹಿಡಿದಿರುವುದನ್ನು ಅವರು ಸರಿ ಎಂದು ಸಮರ್ಥಿಸುತ್ತಾರೆ. ಅದರ ಬದಲು ಅವರು ರಾಷ್ಟ್ರೀಯ ಅಕೌಂಟ್ಸಿನ ಅಂತಿಮ ಖಾಸಗಿ ಖರ್ಚಿನಲ್ಲಿ (Pಈಅಇ) ದೊರೆಯುವ ಅಂಕಿಅಂಶವನ್ನು ಬಳಸುತ್ತಾರೆ. ಸಿಇಎಸ್ ಹಾಗೂ ಪಿಎಫ್‌ಸಿಇ ಅಂದಾಜಿನಲ್ಲಿ ವ್ಯತ್ಯಾಸ ಇರುವುದು ತಿಳಿದ ವಿಷಯ. ಇದು ಭಾರತಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಜಗತ್ತಿನ ಎಲ್ಲೆಡೆಯಲ್ಲೂ ಇದನ್ನು ಕಾಣಬಹುದು.
ಆದರೆ ಮತ್ತೊಬ್ಬ ಅರ್ಥಶಾಸ್ತ್ರಜ್ಞರಾದ ಹಿಮಾಂಶು ಅವರು ಗುರುತಿಸುವಂತೆ ಪಿಎಫ್‌ಸಿಇ ಮಾಡಿರುವ ಅಂದಾಜಿನಲ್ಲಿ ವಿಭಿನ್ನ ಬಗೆಯ ಕುಟುಂಬಗಳಿಗೆ ಸಂಬಂಧಿಸಿದಂತೆ ಬಳಕೆಯ ವಿವರ ಸಿಗುವುದಿಲ್ಲ. ಬಡತನದ ಲೆಕ್ಕಾಚಾರ ಹಾಕುವಾಗ ಆ ವಿವರ ಅವಶ್ಯಕವಾಗಿ ಬೇಕು. ಆ ಸಮೀಕ್ಷೆಯಲ್ಲಿ ನಿಮಗೆ ಸಿಗುವುದು ಒಟ್ಟಾರೆಯಾಗಿ ರಾಷ್ಟ್ರಮಟ್ಟದ ಮೊತ್ತಗಳ ಅಂದಾಜು. ಅದರಲ್ಲಿ ಪಟ್ಟಣ ಗ್ರಾಮ, ರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಗಳು ಪ್ರತ್ಯೇಕವಾಗಿ ಸಿಗುವುದಿಲ್ಲ. ಹಾಗಾಗಿ ಭಲ್ಲ ಅವರಾಗಲಿ ಅಥವಾ ಇನ್ಯಾರೇ ಆಗಲಿ ಸಿಇಎಸ್ ಸಮೀಕ್ಷೆಯನ್ನೇ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಇವರು ಸಿಇಎಸ್ ಸಮೀಕ್ಷೆಯನ್ನು ದೋಷಪೂರ್ಣ ಎಂದು ತಿರಸ್ಕರಿಸಿದರೂ ಆ ಸಮೀಕ್ಷೆ ಮಾಡಿರುವ ಕುಟುಂಬದ ಶ್ರೇಣೀಕರಣವನ್ನೇ ಬಳಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ೨೦೧೧-೧೨ ಸಮೀಕ್ಷೆಯನ್ನು ಒಪ್ಪಿಕೊಳ್ಳುತ್ತಾರೆ. ತಮಾಷೆಯೆಂದರೆ ಅಲ್ಲಿ ಬಳಸಿರುವ ಸ್ಯಾಂಪ್ಲಿಂಗ್ ಕ್ರಮ, ಪರಿಕಲ್ಪನೆಗಳನ್ನೇ ೨೦೧೭-೧೮ರಲ್ಲಿ ನಡೆಸಿರುವ ಸಮೀಕ್ಷೆಯಲ್ಲೂ ಬಳಿಸುರುವುದು. ಅಷ್ಟೇ ಅಲ್ಲ ಎರಡೂ ಸಮೀಕ್ಷೆಯನ್ನು ನಡೆಸಿರುವುದು ಸಂಸ್ಥೆಯೂ ಒಂದೇ. ಆದರೂ ಅವರಿಗೆ ಅದು ದೋಷಪೂರ್ಣ ಅನಿಸುತ್ತದೆ.
ಪಿಎಫ್‌ಸಿಇ ಅಂದಾಜನ್ನು ಬಳಿಸಿಕೊಂಡು ಎನ್‌ಎಸ್‌ಎಸ್ ಸಮೀಕ್ಷೆಯ ಅಂದಾಜನ್ನು ಪರಿಷ್ಕರಿಸಿ, ಇಂದಿನ ಬಡತನದ ಪ್ರಮಾಣವನ್ನು ಅಂದಾಜು ಮಾಡುವ ಕ್ರಮ ಹೊಸದೇನಲ್ಲ. ಆದರೆ ಹಾಗೆ ಮಾಡುವುದು ಸರಿಯಾದ ಕ್ರಮವಲ್ಲ ಅನ್ನುವುದು ಪರಿಣತರ ಅಭಿಪ್ರಾಯ. ಹಿಮಾಂಶು ಹೇಳುವಂತೆ ಎರಡು ಅಂದಾಜುಗಳನ್ನು ಹೋಲಿಸುವುದಕ್ಕೇ ಸಾಧ್ಯವಿಲ್ಲ, ಯಾಕೆಂದರೆ ಎರಡೂ ಸಮೀಕ್ಷೆಗಳ ವಿನ್ಯಾಸ, ಬಳಸಿರುವ ಕ್ರಮ ಸಂಪೂರ್ಣ ಬೇರೆ. ಈ ಕ್ರಮವನ್ನು ಭಾರತದಲ್ಲಾಗಲಿ ಅಥವಾ ಇನ್ನೆಲ್ಲೇ ಆಗಲಿ ಬಳಸುತ್ತಿಲ್ಲ. ಹಾಗಾಗಿಯೇ ಭಲ್ಲ ಅವರ ತೀರ್ಮಾನವನ್ನು ಹಲವರು ತಿರಸ್ಕರಿಸುತ್ತಾರೆ.
ಜಾಗತಿಕ ಬ್ಯಾಂಕಿನ ಸಂಶೋಧಕರು ಕೂಡ ಭಲ್ಲ ಅವರ ವಿಧಾನವನ್ನು ಒಪ್ಪುವುದಿಲ್ಲ. ಅವರ ಅಧ್ಯಯನವೂ ಬಡತನ ಇಳಿಮುಖವಾಗಿದೆ ಎನ್ನುತ್ತದೆ. ಅವರು ತಮ್ಮ ಅಧ್ಯಯನಕ್ಕೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ನಡೆಸುವ ಕುಟುಂಬಗಳ ಬಳಕೆಯ ಪಿರಮಿಡ್ಡಿನ ಸಮೀಕ್ಷೆಯಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಬಳಕೆಯಾಗಿರುವ ಕ್ರಮದ ಬಗ್ಗೆಯೂ ಸಾಕಷ್ಟು ಟೀಕೆಗಳಿವೆ.
ಬಡತನದ ಪ್ರಮಾಣದ ಬಗ್ಗೆ ತುಂಬಾ ಭಿನ್ನಾಭಿಪ್ರಾಯ ಇದ್ದರೂ ಕೆಲವು ಅಂಶಗಳನ್ನು ಎಲ್ಲಾ ಅಧ್ಯಯನಗಳೂ ಒಪ್ಪಿಕೊಳ್ಳುತ್ತವೆ. ಅವು ಕೂಡ ತುಂಬಾ ಮುಖ್ಯವಾದದ್ದು. ಕೆಲವು ಸಮಾನ ಅಂಶಗಳನ್ನು ಸ್ಥೂಲವಾಗಿ ಕೆಳಗೆ ಕೊಡಲಾಗಿದೆ.
೧. ೨೦೦೪-೨೦೧೪ರ ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ ಎನ್‌ಡಿಎ ಆಳ್ವಿಕೆಯ ಕಳೆದ ಏಳು ವರ್ಷಗಳಲ್ಲಿ ಬಡತನದ ಕಮ್ಮಿಯಾಗುತ್ತಿರುವ ವೇಗ ಕಮ್ಮಿಯಾಗುತ್ತಿದೆ ಎನ್ನುವುದನ್ನು ಎಲ್ಲಾ ಅಧ್ಯಯನಗಳು ಒಪ್ಪಿಕೊಳ್ಳುತ್ತವೆ. ಭಲ್ಲ ಪ್ರಕಾರ ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಪ್ರತಿವರ್ಷ ೨೬ ಮಿಲಿಯನ್ ಜನ ಬಡತನದ ರೇಖೆಯಿಂದ ಹೊರಕ್ಕೆ ಬರುತ್ತಿದ್ದರು. ಆದರೆ ಎನ್‌ಡಿಎ ಆಳ್ವಿಕೆಯಲ್ಲಿ ಪ್ರತಿವರ್ಷ ಅದರ ಮೂರನೇ ಒಂದು ಭಾಗ ಅಂದರೆ ೮.೬ ಮಿಲಿಯನ್ ಜನ ಬಡತನದ ರೇಖೆಯಿಂದ ಹೊರಬರುತ್ತಿದ್ದಾರೆ. ಜಾಗತಿಕ ಬ್ಯಾಂಕಿನ ಅಂದಾಜು ಸುಮಾರಾಗಿ ಇದರ ಆಸುಪಾಸಿನಲ್ಲೇ ಇದೆ. ಅಂದರೆ ಬಡತನ ಕಡಿಮೆಯಾಗುತ್ತಿರುವ ದರ ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈಗ ತುಂಬಾ ನಿಧಾನವಾಗಿದೆ ಎನ್ನುವುದು ಎಲ್ಲರೂ ಒಪ್ಪಿಕೊಂಡಿದ್ದಾರೆ.
೨. ಎರಡನೆಯದಾಗಿ ಬಡತನದ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆಯೂ ಒಮ್ಮತವನ್ನು ಕಾಣಬಹುದು. ಯುಪಿಎ ಆಳ್ವಿಕೆಯ ಕಾಲದಲ್ಲಿ ಜಾರಿಯಲ್ಲಿದ್ದ ನರೇಗ, ಆಹಾರ ಸುರಕ್ಷಾ ಕಾಯ್ದೆ, ಸಾರ್ವಜನಿಕ ಪಡಿತರ ಪದ್ಧತಿ ಇವೆಲ್ಲಾ ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಂದರೆ ಸಾಮಾಜಿಕ ಸುರಕ್ಷಣಾ ಕ್ರಮಗಳನ್ನು ಬಲಗೊಳಿಸಬೇಕು ಅನ್ನುವುದರ ಬಗ್ಗೆ ಸಹಮತ ಇದೆ. ಹಾಗಾಗಿ ಆಹಾರ ಹಾಗೂ ಸುರಕ್ಷಾ ಯೋಜನೆಗಳಿಗೆ ಸರ್ಕಾರ ಹೆಚ್ಚೆಚ್ಚು ಹಣ ಹೂಡಬೇಕು ಅನ್ನುವುದರಲ್ಲಿ ಗೊಂದಲವಿದ್ದಂತಿಲ್ಲ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಇದು ತುರ್ತಾಗಿ ಆಗಬೇಕಾಗಿದೆ.
೩. ಮೂರನೆಯದಾಗಿ ಈ ಎಲ್ಲಾ ಅಧ್ಯಯನಗಳು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ ಅಂದರೆ ಸೂಕ್ತ ಅಂಕಿ ಅಂಶಗಳ ಕೊರತೆ. ಅಂದರೆ ಸರಿಯಾದ ಅಂಕಿಅಂಶಗಳನ್ನು ನೀಡಬಲ್ಲ ಸಾಂಖ್ಯಿಕ ವ್ಯವಸ್ಥೆಯನ್ನು ಬಲಗೊಳಿಸಬೇಕು ಅನ್ನುವುದ ಕೂಡ ಸ್ಪಷ್ಟ. ಜೊತೆಗೆ ಸರ್ಕಾರ ಅದರಲ್ಲಿ ಹಸ್ತಕ್ಷೇಪ ಮಾಡಬಾರದು. ಹಿಮಾಂಶು ಅವರು ಹೇಳುವಂತೆ ಬಡತನ, ಅಸಮಾನತೆ ಹಾಗೂ ಬಡತನ ನಿವಾರಣೆಗೆ ಯಾವ ನೀತಿಗಳನ್ನು ರೂಪಿಸಬೇಕು, ಯಾವುದು ಪರಿಣಾಮಕಾರಿಯಾಗಬಲ್ಲದು ಇವೆಲ್ಲಾ ಕೇವಲ ಶೈಕ್ಷಣಿಕ ವಿಚಾರಗಳಲ್ಲ. ಬಡತನ ನಿವಾರಣೆಯ ಉದ್ದೇಶಕ್ಕೆ ನಿಖರವಾದ ನೀತಿಗಳನ್ನು ರೂಪಿಸುವುದು ಹಾಗೂ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಸಿಇಎಸ್ ಸಮೀಕ್ಷೆಯನ್ನು ಆದಷ್ಟು ಬೇಗ ನಡೆಸಬೇಕು. ಬಡತನದ ಪ್ರಮಾಣವನ್ನು ಲೆಕ್ಕ ಮಾಡಲು ಅಂದರೆ ಬಡತನ ರೇಖೆಯನ್ನು ನಿರ್ಧರಿಸಲು ಅಳತೆಗೋಲನ್ನು ನಿರ್ಧರಿಸಬೇಕು. ಆಗಷ್ಟೇ ಈ ವಿವಾದಗಳು ಬಗೆಹರಿಯುತ್ತವೆ. ಆಗಷ್ಟೇ ದೇಶದ ದೃಢ ಆರ್ಥಿಕತೆಗೆ ಬೇಕಾದ ನೀತಿಗಳನ್ನು ರೂಪಿಸುವುದಕ್ಕೆ ಸಾಧ್ಯ.