[ಈ ಲೇಖನವನ್ನು ಸದ್ವಿದ್ಯಾ ಸಂಸ್ಥೆಯವರು ಹೊರತಂದಿರುವ ಸ್ಮರಣ ಸಂಚಿಕೆಗಾಗಿ ಶೈಲಜಾ ಬರೆದದ್ದು. ಇದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.]
ನನ್ನ ಕಥೆ ನನ್ನ ವ್ಯಥೆ
ಮೊದಲು ಈಗ ನಾನಿರೋ ಜಾಗ ಏನಾಗಿತ್ತೋ ತಿಳಿಯದು. ಮುಮ್ಮಡಿ ಕೃಷ್ಣರಾಜ ಒಡೆಯರ್ (೧೭೯೪-೧೮೬೮) ಅವರ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ನೀರಿನ ಅನುಕೂಲ ಇರಲಿ ಎಂದು ೧೮೬೫ರಲ್ಲಿ ಸುಬ್ಬರಾಯನ ಕಟ್ಟೆಯಾಗಿ ನಾನು ಹುಟ್ಟಿದೆ. ನನ್ನ ಪಕ್ಕದಲ್ಲಿಯೇ ಒಂದು ಕುಡಿಯುವ ನೀರಿನ ಬಾವಿಯೂ ಇತ್ತು. ೧೮೭೦-೭೫ರ ಹೊತ್ತಿಗೆ ನಾನು ಸುಬ್ಬರಾಯನ ಕೆರೆಯಾದೆ. ನನಗ್ಯಾಕೆ ಈ ಹೆಸರು ಬಂತು ಅನ್ನುವುದಕ್ಕೆ ಎರಡು ನಿರೂಪಣೆಗಳಿವೆ. ಸುಬ್ಬರಾಯರು ಮುಮ್ಮಡಿ ಕೃಷ್ಣರಾಜ ಒಡೆಯರ್ಗೆ ಭಾಗವತ ಕಲಿಸಿಕೊಡುತ್ತಿದ್ದ ಗುರುಗಳು. ತಮ್ಮ ಗುರುಗಳ ಹೆಸರನ್ನು ಚಿರಸ್ಥಾಯಿ ಆಗಿಸುವ ಆಸೆ ಶಿಷ್ಯ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ. ಹಾಗಾಗಿ ಇದಕ್ಕ ಸುಬ್ಬರಾಯನ ಕೆರೆ ಎಂದು ನಾಮಕರಣ ಮಾಡಿದರು ಎನ್ನುತ್ತಾರೆ. ಇನ್ನು ಇತಿಹಾಸಕಾರರ ದಾಖಲೆಗಳ ಪ್ರಕಾರ ಭಾಗವತ ಸುಬ್ಬರಾಯರು ದೂರೆಗಳ ಗೆಳೆಯರು ಮತ್ತು ಖಜಾನೆಯ ಅಧಿಕಾರಿಯಾಗಿದ್ದರು. ಜನಾನುರಾಗಿಗಳು. ಅವರು ಈ ಕೆರೆಯನ್ನು ಕಟ್ಟಿಸಿದ್ದರಿಂದ ನನಗೆ ಈ ಹೆಸರು ಬಂದಿತು. ೧೮೬೨ರಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು ಮುನಿಸಿಪಾಲಿಟಿ ೧೮೯೬ರಲ್ಲಿ ಭಾಗವತ ಸುಬ್ಬರಾಯರ ಮಗ ಭಾಗವತ ಸುಬ್ಬುಕೃಷ್ಣ ರಾವ್ ಅವರಿಂದ ೫೮೧೩ ಅಡಿ ಚದುರ ವಿಸ್ತೀರ್ಣದ ನನ್ನನ್ನು ೨೦೩೪ ರೂಗಳಿಗೆ ಖರೀದಿ ಮಾಡಿತು. ಆದರೆ ಅಷ್ಟು ಹೊತ್ತಿಗಾಗಲೇ ನಾನು ನೀರಿರದ ಕೆರೆಯಾಗಿದ್ದೆ. ನನ್ನ ಬಳಿ ಸಾರಲು ಸೊಗಸಾದ ಸೋಪಾನಗಳಿದ್ದವು. ೧೯೦೦ರ ಹೊತ್ತಿಗೇ ನಾನು ಖಾಲಿಯಾಗಿಬಿಟ್ಟಿದ್ದೆ. ಬಾವಿಯಲ್ಲಿನ ನೀರು ಕೂಡ ಬತ್ತಿಹೋಗಿತ್ತು. ಆದರೆ ನನ್ನ ಆತ್ಮ ಜೀವಂತವಾಗಿಯೇ ಇತ್ತು. ಭಾಗವತರು ಹೋದರು ಆದರೆ ಅವರ ಮರಿಮಗ ಖ್ಯಾತ್ ಕ್ರಿಕೆಟ್ ಪಟು ಬಿ ಎಸ್ ಚಂದ್ರಶೇಖರ್ ಅವರ ಹೆಸರನ್ನು ಅಜರಾಮರಗೊಳಿಸಿದರು.
ನನಗೇನು ಮಕ್ಕಳೇ, ಮರಿಯೇ? ಆದರೆ ಭಾರತದ ಸ್ವಾತಂತ್ರ್ಯ ಚಳುವಳಿ ನನಗೆ ಹೊಸ ಬದುಕು ನೀಡಿ ನನ್ನನ್ನು ಅಜರಾಮರಗೊಳಿಸಿತು.
ಬತ್ತಿ ಹೋದ ನನ್ನ ಅಂಗಳವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ಉಪಾಧ್ಯಾಯರೂ, ಸಮಾಜ ಸುಧಾರಕರೂ ಆಗಿದ್ದ ಅಂಬಳೆ ಅಣ್ಣಯ್ಯ ಪಂಡಿತರ ಹೆಸರಿನಲ್ಲಿ ಅಂಬಳೆ ಅಣ್ಣಯ್ಯ ಪಂಡಿತರ ಪಾರ್ಕ್ ಎಂದು ಕರೆದರು. ಅವರು ಸ್ನಾನಕ್ಕೆ ಅನುಕೂಲವಾಗುವಂತೆ ಒಂದು ಕಲ್ಯಾಣಿಯನ್ನೂ ಮತ್ತು ಮಧ್ಯೆ ಮಂಟಪವನ್ನು ಪಂಡಿತರು ಕಟ್ಟಿಸಿದರು. ಆ ಮಂಟಪದಲ್ಲಿ ಸುಂದರವಾದ ಕೆತ್ತನೆ ಕೆಲಸ ಕಾಣುತ್ತದೆ. ಈ ಮಂಟಪದ ಒಂದು ಕೌತುಕದ ಸಂಗತಿಯನ್ನು ನಿಮಗೆ ಹೇಳ್ತೀನಿ. ಇದರ ವೇದಿಕೆಗೆ ಬಳಸಲಾಗಿದ್ದ ವಿಶಾಲವಾದ ಶೀಲೆ ವಾಸ್ತವವಾಗಿ ಚಾಮರಾಜೇಂದ್ರ ತಾಂತ್ರಿಕ ಶಾಲೆಗೆ ಅಸ್ತಿಭಾರ ಶಿಲೆಯಾಗಿ ಬ್ರಿಟನ್ ದೊರೆ ಜಾರ್ಜ್ ಇರಿಸಿದ್ದ ಶಿಲೆ. ಅದು ಕಾರಣಾಂತರಗಳಿಂದ ಅಲ್ಲಿಂದ ಇಲ್ಲಿಗೆ ಸ್ಥಳಾಂತರಗೊಂಡು ಬೇರೊಂದು ಮಂಟಪದ ಬುನಾದಿಯಾಯಿತು. ಈ ಮಂಟಪದಲ್ಲಿ ಅರಮನೆಯ ಬ್ಯಾಂಡ್ ವೃಂದದವರು ರಜಾದಿನ ಮತ್ತು ವಿಶೇಷ ಹಬ್ಬದ ದಿನಗಳಲ್ಲಿ ಸಾರ್ವಜನಿಕರೆದುರು ಬ್ಯಾಂಡ್ ಬಜಾಯಿಸುವುದರ ಮೂಲಕ ಜನರನ್ನು ರಂಜಿಸುತ್ತಿದ್ದರು. ನಂತರ ನನ್ನನ್ನು ಬೇರೊಂದು ರೀತಿಯಲ್ಲಿ ಬಳಸಲಾರಂಭಿಸಿದರು. ೧೯೨೫ರಲ್ಲಿ ೯೯ ವರ್ಷಗಳ ಗುತ್ತಿಗೆ ಆಧಾರದ ಮೇಲೆ ಬಾಹುಸಾರ್ ಈಜುಕೊಳವನ್ನು ನಿರ್ಮಿಸಿದರು. ಅಲ್ಲಿಯೇ ಒಂದು ಸ್ನಾನದ ಮನೆ, ಬಟ್ಟೆ ಬದಲಿಸಲು ಕೊಠಡಿ ಎಲ್ಲವೂ ಇತ್ತು. ಈಗ ಅದು ಕೂಡ ಇಲ್ಲ.
ನಾನು ಈಗ ನನ್ನ ಗುರುತನ್ನು ಹೇಗೆ ಹೇಳಬೇಕು ಎನ್ನುವ ಪ್ರಶ್ನೆ ನನ್ನನ್ನೇ ಹಲವು ಬಾರಿ ಕಾಡಿದೆ. ಈಗ ನಾನು ಸುಬ್ಬರಾಯನಕರೆ ಉರುಫ್ ಫ್ರೀಡಂ ಪಾರ್ಕ್ ಅಂತ. ಮೈಸೂರಿನ ಪ್ರಖ್ಯಾತ ನೂರಡಿ ರಸ್ತೆಯ ಬದಿಯಲ್ಲಿ ನಾನಿದ್ದೇನೆ. ನನ್ನೆದುರಿಗೆ ಅಂಬಳೆ ಅಣ್ಣಯ್ಯ ಪಂಡಿತರ ಛತ್ರ. ಇನ್ನೊಂದು ಕಡೆಗೆ ಹಲವು ಮಹನೀಯರಿಗೆ ಆಶ್ರಯ ನೀಡಿ ಬೆಳೆಸಿದ ಅನಾಥಾಲಯ. ಈ ಅನಾಥಾಲಯವನ್ನು ೧೮೯೪ರಲ್ಲಿ ಕಟ್ಟಿ ನೂರಾರು ಬಡಮಕ್ಕಳಿಗೆ ಸೂರು ಕಲ್ಪಿಸಿ, ಅವರನ್ನು ಸುಶಿಕ್ಷಿತರನ್ನಾಗಿಸಿ ಸಮಾಜಕ್ಕೆ ಕೊಡುಗೆ ನೀಡಿದವರು ಎಂ ವೆಂಕಟಕೃಷ್ಣಯ್ಯನವರು. ಎಲ್ಲರಿಗೂ, ಎಲ್ಲ ರೀತಿಯಲ್ಲೂ ಮಾರ್ಗದರ್ಶಕರಾಗಿದ್ದ ಅವರನ್ನು, ಜನ ಪ್ರೀತಿಯಿಂದ ತಾತಯ್ಯ ಎಂದೇ ಕರೆಯುತ್ತಿದ್ದರು. ಮೈಸೂರಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಕಿಡಿಯನ್ನು ಹೊತ್ತಿಸಿದವರೇ ತಾತಯ್ಯನವರು. ಅಂಬಳೆ ಅಣ್ಣಯ್ಯ ಪಂಡಿತರು ಮತ್ತು ವೆಂಕಟಕೃಷ್ಣಯ್ಯನವರು ಮೈಸೂರು ಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ೧೯೨೭ರಲ್ಲಿ ಗಾಂಧೀಜಿಯವರು ಮೈಸೂರಿಗೆ ಬಂದಾಗ ತಾತಯ್ಯನವರು ಅವರನ್ನು ಭೇಟಿಮಾಡಿ ಹಲವು ವಿಚಾರಗಳನ್ನು ಚರ್ಚಿಸಿದರು. ಬೆಂಗಳೂರಿನಲ್ಲಿ ನಡೆದ ಮೈಸೂರು ಕಾಂಗ್ರೆಸ್ನ ಎರಡನೆಯ ಶೃಂಗ ಸಭೆಯ ಅಧ್ಯಕ್ಷತೆ ತಾತಯ್ಯನವರದಾಗಿತ್ತು. ಅವರು ಅಂದು ಮೈಸೂರಿನಲ್ಲಿ ಹಚ್ಚಿದ ಸ್ವಾತಂತ್ರ್ಯದ ಹಣತೆ ನಿಧಾನವಾಗಿ ಉರಿಯುತ್ತಾ ಮೈಸೂರನ್ನು ಅರಸರ ಆಳ್ವಿಕೆಯಿಂದ ಪ್ರಜಾಪ್ರಭುತ್ವದ ತಕ್ಕೆಗೆ ಹಾಕಿ, ಭಾರತ ಗಣರಾಜ್ಯದ ಭಾಗವನ್ನಾಗಿಸಿತು.
ತಾತಯ್ಯನವರು ಹಚ್ಚಿದ ಈ ಹಣತೆ ಆರದಂತೆ ಎಣ್ಣೆಯೆರೆದು ಕಾಪಾಡಿದವರು ಅವರ ಮಾರ್ಗದರ್ಶನದಲ್ಲಿ ಬೆಳೆದ ತಗಡೂರು ರಾಮಚಂದ್ರರಾಯರು, ಎಂ ಎನ್ ಜೋಯಿಸ್ ಮತ್ತು ಅಗರಂ ರಂಗಯ್ಯ. ಲಾರ್ಡ್ ಸೈಮನ್ ಭಾರತಕ್ಕೆ ಬಂದಾಗ, ತಗಡೂರು ರಾಮಚಂದ್ರ ರಾಯರು ಸೈಮನ್ ಕಮಿಷನ್ಗೆ ಧಿಕ್ಕಾರ ಎಂಬ ಕಿರುಹೊತ್ತಿಗೆಯನ್ನು ಮುದ್ರಿಸಿ ಹಂಚಿ, ಭಾಷಣ ಮಾಡಿ, ಪೋಲಿಸರ ಅತಿಥಿಯಾಗಿ ಹೋಗಿ ಮೈಸೂರಿನ ಮೊದಲ ರಾಜಕೀಯ ಕೈದಿಯಾಗಿದ್ದು ನನ್ನ ಎದೆಯ ಗೂಡಿನಿಂದಲೇ (೧೯೨೮). ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ೧೯೩೦ರಲ್ಲಿ ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದಾಗ ಜನವರಿ ೨೬ ೧೯೩೦ರಲ್ಲಿ ಎಂ ಎನ್ ಜೋಯಿಸ್ ಮತ್ತು ಎಲ್ ವಿ ರಾಜಗೋಪಾಲ್ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅನತಿ ಕಾಲದಲ್ಲೇ ನಾನು ಮತ್ತು ನನ್ನ ಇನ್ನೊಂದು ಬದಿಗಿದ್ದ ಅನಾಥಾಲಯ ಮೈಸೂರಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾಯಿತು. ಹಾಗಾಗಿಯೇ ನನಗೆ ಲಾಠಿ ಮೈದಾನ, ಸ್ವರಾಜ್ಯ ಮೈದಾನ, ಸ್ವಾತಂತ್ರ್ಯ ಮೈದಾನ ಎನ್ನುವ ಅಡ್ಡ ಹೆಸರುಗಳೂ ಇವೆ. ಮೈಸೂರಿನ ಟೌನ್ಹಾಲಿನಲ್ಲಿ ನಡೆಯುತ್ತಿದ್ದ ಸಭೆ, ಸಮಾರಂಭ, ಪ್ರದರ್ಶನ ಮುಂತಾದುವೆಲ್ಲವುಗಳಿಗೂ ನಾನು ವೇದಿಕೆಯಾದೆ. ಹಲವು ಧೀಮಂತ ಧುರೀಣರು ಇಲ್ಲಿ ಭಾಷಣ ಮಾಡಿದ್ದಾರೆ ಈ ಭಾಷಣಗಳನ್ನು ಕೇಳಲು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯಲಾರಂಭಿಸಿದರು. ಅಗರಂ ರಂಗಯ್ಯ, ತಗಡೂರು ರಾಮಚಂದ್ರರಾಯರು, ಎಂ ಎನ್ ಜೋಯಿಸ್, ಭಾಷ್ಯಂ ಅಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಎಂತೆಂತಹ ಕೌತುಕದ, ರೋಮಾಂಚಕಾರಿ ಘಟನೆಗಳು ನನ್ನೊಡಲಲ್ಲಿ ನಡೆದಿವೆ ಗೊತ್ತಾ? ನಾನು ಕರ್ನಾಟಕದ ಹಲವು ಪ್ರಥಮಗಳಿಗೆ ಸಾಕ್ಷಿ. ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದ ಮೇಲೆ ದೇಶದಲ್ಲಿ ಎಲ್ಲೆಡೆ ಜನವರಿ ೨೬ರಂದು ರಾಷ್ಟ್ರೀಯ ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ಎಲ್ಲೆಡೆ ತಪ್ಪದೆ ಹಾರಿಸುತ್ತಿತ್ತು. ಪ್ರತಿ ಬಾರಿ ನನ್ನ ಮೇಲೆ ಧ್ವಜ ಹಾರಿದಾಗಲೂ ನನ್ನೊಳಗೆ ಎಂತಹ ಪುಳಕ ಗೊತ್ತಾ? ಆದರೆ ೧೯೩೮ರಲ್ಲಿ ಧ್ವಜ ಹಾರಿಸುತ್ತಾರೋ ಇಲ್ಲವೋ ಎಂದು ನನಗೆ ಆತಂಕವಾಗಿತ್ತು. ಏಕೆಂದರೆ ಸಾಮಾನ್ಯವಾಗಿ ಧ್ವಜ ಹಾರಿಸುತ್ತಿದ್ದ ಎಂ ಎನ್ ಜೋಯಿಸರು ಜೈಲಿನಲ್ಲಿದ್ದರು. ಅವರ ಹೆಂಡತಿ ಸುಬ್ಬಮ್ಮ ಜೋಯಿಸರು ಏನು ಮಾಡುವುದು ಎಂದು ಕಳವಳಗೊಂಡಿದ್ದರು. ಆಗ ತಗಡೂರಿನ ಸೇವಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ರಂಗಯ್ಯ ಒಂದು ಅಡಕೆ ಮರವನ್ನು ಧ್ವಜಸ್ತಂಭದಂತೆ ನಿಲ್ಲಿಸಿ ಧ್ವಜ ಕಟ್ಟಿಕೊಡಲು ಒಪ್ಪಿದಾಗ ಸುಬ್ಬಮ್ಮ ನಿರಾಳ. ಜನವರಿ ೨೬ರಂದು ನಿಷೇಧಾಜ್ಞೆ ಇತ್ತು. ಧ್ವಜಾರೋಹಣ ನೋಡಲು ಸಾವಿರಾರು ಜನ ಕಿಕ್ಕಿರಿದಿದ್ದರು. ಹಾಗೆಯೇ ಧ್ವಜಾರೋಹಣ ತಡೆಯಲು ಪೋಲಿಸ್ ಪಡೆಯೇ ಸಿದ್ಧವಾಗಿತ್ತು. ಕಂಕುಳಲ್ಲಿ ಮಗು ಜಯಸಿಂಹನನ್ನು ಎತ್ತಿಕೊಂಡಿದ್ದ ಸುಬ್ಬಮ್ಮ ಜೋಯಿಸ್ ನಿಗದಿತ ಸಮಯಕ್ಕೆ ಸರಿಯಾಗಿ ಮಗುವನ್ನು ಪಕ್ಕದಲ್ಲಿದ್ದವರ ಕೈಗೆ ಕೊಟ್ಟು ಮಿಂಚಿನಂತೆ ಧ್ವಜಾರೋಹಣ ಮಾಡಿಯೇ ಬಿಟ್ಟರು. ನಾನೊಂದು ಅದ್ಭುತ ರಮ್ಯ ದೃಶ್ಯಕ್ಕೆ ಸಾಕ್ಷಿಯಾಗಿದ್ದೆ. ಬಂಧಿಸಲ್ಪಟ್ಟ ಸುಬ್ಬಮ್ಮನವರು ಮಗು ಜಯಸಿಂಹನೊಡನೆ ಜೈಲಿಗೆ ಹೋದರು. ಬಹುಶಃ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜೈಲಿಗೆ ಹೋದ ಮೊದಲ ಹೆಣ್ಣುಜೀವ ಆಕೆಯೇ ಎನಿಸುತ್ತದೆ.
ನನ್ನ ಜೀವಚೈತನ್ಯ ಪೂರ್ಣಪ್ರಮಾಣದಲ್ಲಿ ಪುಟಿಯಲಾರಂಭಿಸಿದ್ದು ೧೯೪೨ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದಾಗ. ಮೈಸೂರಿನಲ್ಲಿ ಆ ಇಡೀ ಚಳುವಳಿ ನನ್ನೊಡಲಿನಲ್ಲೇ ಅರಳಿ ನಳನಳಿಸಲಾರಂಭಿಸಿತು. ಮಹಾರಾಜ ಕಾಲೇಜಿನ ಯುವ ವಿದ್ಯಾರ್ಥಿಗಳ ಪಾದಸ್ಪರ್ಷದಿಂದ ನನಗೆ ರೋಮಾಂಚನವಾಗುತ್ತಿತ್ತು. ಆ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಭಾರತದ ಮಹಾನ್ ಪ್ರತಿಭೆಗಳಾಗಿ ಬೆಳೆದ ಎಚ್ ವೈ ಶಾರದಾಪ್ರಸಾದ್, ಟಿ ಎಸ್ ಸುಬ್ಬಣ್ಣ ಅವರಂತಹ ಹಲವು ತರುಣರಿದ್ದರು. ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ಸಭೆಗಳು ಇಲ್ಲಿ ನಡೆಯುತ್ತಿದ್ದವು. ಎಲ್ಲ ನಾಯಕರು ಇಲ್ಲಿ ಬಂದು ಭಾಷಣ ಮಾಡುತ್ತಿದ್ದರು. ನಾನು ಸ್ವಾತಂತ್ರ್ಯ ಚಳುವಳಿಯ ಕೇಂದ್ರಸ್ಥಾನವಾಗಲು ಮತ್ತೊಂದು ಕಾರಣವೆಂದರೆ, ನಾಯಕರಾದ ಅಗರಂ ರಂಗಯ್ಯ, ಸತ್ಯನಾರಾಯಣರಾವ್, ರಂಗರಾಮಯ್ಯನವರ ಮನೆಗಳು, ತಾತಯ್ಯನವರ ಅನಾಥಾಶ್ರಮ ಎಲ್ಲವೂ ನನ್ನ ನಾಲ್ಕು ದಿಕ್ಕಿನಲ್ಲಿ ಇದ್ದವು.
ನನ್ನೊಡಲಲ್ಲಿ ಒಂದು ಜಾರುಗುಪ್ಪೆ ಇತ್ತು. ಒಂದು ರೇಡಿಯೋ ಪ್ರಸರಣ ಕೇಂದ್ರವೂ ಇತ್ತು. ಆ ಜಾರುಗುಪ್ಪೆ ಅಂತಿಥಾ ಜಾರುಗುಪ್ಪೆಯಲ್ಲ. ಎಂತೆಂತಹ ದಿಟ್ಟ ನಾಯಕರು ಅದನ್ನೇ ವೇದಿಕೆ ಮಾಡಿಕೊಂಡು ಅದರ ಮೇಲೆ ನಿಂತು ಭಾಷಣ ಮಾಡಿದ್ದರು ಗೊತ್ತಾ? ಕೆ ಸಿ ರೆಡ್ಡಿ, ತಾಳೇಕೆರೆ ಸುಬ್ರಹ್ಮಣ್ಯ, ಟಿ ಸಿದ್ದಲಿಂಗಯ್ಯ, ಎಂ ಎನ್ ಜೋಯಿಸ್, ತಗಡೂರು ರಾಮಚಂದ್ರರಾಯರು, ಎಚ್ ವೈ ಶಾರದಾಪ್ರಸಾದ್, ಮುಂತಾದವರು. ಒಂದು ಸಲ ಏನಾಯಿತಂತೆ ಗೊತ್ತಾ, ಎಚ್ ಎಂ ಕುಮಾರಸ್ವಾಮಿಯವರ ನೇತೃತ್ವದಲ್ಲಿ ವೇದಾಂತ ಹೆಮ್ಮಿಗೆ, ಡಿ ಎಂ ಸಿದ್ದಯ್ಯ, ಎಸ್ ಲಿಂಗಣ್ಣ, ಕೆ ಪಿ ಶಾಂತಮೂರ್ತಿ, ಎಂ ವಿ ರಾಜಗೋಪಾಲ್, ಕಾಳಯ್ಯ ಮುಂತಾದ ವಿದ್ಯಾರ್ಥಿ ನಾಯಕರು ಭಾರಿ ಮೆರವಣಿಗೆಯನ್ನು ಚಾಮರಾಜೇಂದ್ರ ವೃತ್ತದ ತನಕ ಕೊಂಡೊಯ್ದಿದ್ದರು. ಅಲ್ಲಿ ಖಾದ್ರಿ ಶಾಮಣ್ಣ, ಕುಮಾರಸ್ವಾಮಿ ಮುಂತಾದವರನ್ನು ತಡೆದರು. ಆಗ ಅವರೆಲ್ಲಾ ನನ್ನಲ್ಲಿಗೇ ಬಂದು ಭಾರಿ ಬಹಿರಂಗ ಸಭೆ ನಡೆಸಿದರು. ಈ ಸಭೆಗೆ ಎಂ ವಿ ಕೃಷ್ಣನಪ್ಪನವರು ಬುರುಖಾ ಧರಿಸಿ ಬಂದ್ದಿದ್ದರು. ಏಕೆ ಗೊತ್ತಾ? ಪೋಲಿಸರು ಅವರನ್ನು ನೋಡಿದರೆ ಕೈದು ಮಾಡುತ್ತಾರೆ ಎಂದು. ಭಾಷಣ ಮಾಡಿ ಹಾಗೆ ತಪ್ಪಿಸಿಕೊಂಡು ಹೋದರು. ಲಾಠಿ ಛಾರ್ಜ್ ಆಯಿತು. ಹಲವರಿಗೆ ಏಟಾಯಿತು.
ನನ್ನ ಆವರಣದಲ್ಲಿಯೇ ಇದ್ದ ರೇಡಿಯೋ ಪ್ರಸರಣ ಕೇಂದ್ರದಿಂದ ಪ್ರತಿದಿನ ಸುದ್ದಿಯನ್ನು ಬಿತ್ತರಿಸಲಾಗುತ್ತಿತ್ತು. ಸರ್ಕಾರದ ಪರ ಪ್ರಕಟಣೆಗಳನ್ನು ಪ್ರಸಾರ ಮಾಡುತ್ತಿದ್ದರು. ಲೋವರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶವನ್ನೂ ಅದರಲ್ಲೇ ಪ್ರಸಾರ ಮಾಡುತ್ತಿದ್ದರು. ಒಳ್ಳೆಯ ಸಂಗೀತವೂ ಪ್ರಸಾರವಾಗುತ್ತಿತ್ತು. ಅದನ್ನು ಕೇಳುತ್ತಾ ನನ್ನ ಮನ ತಣಿಯುತ್ತಿತ್ತು. ಇದು ೧೯೫೫-೬೦ರ ತನಕವೂ ಹೀಗೇ ಮುಂದುವರಿದಿತ್ತು.
ಆಗಸ್ಟ್ ೧೫ ೧೯೪೭ರಲ್ಲಿ ಸ್ವತಂತ್ರ ಬಂದಾಗ ನನ್ನೊಡಲ ಮೇಲೆ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಿತು. ಆದರೆ ಇನ್ನೂ ಅರಸರ ಆಡಳಿತದಲ್ಲಿಯೇ ಇದ್ದ ಮೈಸೂರಿನಲ್ಲಿ ಉಳಿದೆಡೆ ಇದ್ದಂತಹ ಸಂಭ್ರಮ ಹಾಗೂ ಸಡಗರ ಇರಲಿಲ್ಲ. ನನಗದು ಅರ್ಥ ಆಗುತ್ತದೆ. ನಾನೂ ಮೈಸೂರು ಅರಸರ ಕೂಸಲ್ಲವೇ? ತಮ್ಮ ಅಸ್ಮಿತೆ, ನೆಲೆ ಮತ್ತು ಅಧಿಕಾರವನ್ನು ಕಳೆದುಕೊಳ್ಳುವ ಆತಂಕ ಅವರನ್ನು ಕಾಡುತ್ತಿತ್ತು. ಆದರೆ ಬದಲಾವಣೆ ಬದುಕಿನ ಅನಿವಾರ್ಯವಲ್ಲವೇ?
ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರಿಗೆ ಬಂದಿರಲಿಲ್ಲ. ಮೈಸೂರಿನಲ್ಲಿ ಅರಸೊತ್ತಿಗೆ ಮುಂದುವರಿದಿತ್ತು. ಮೈಸೂರಿನಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ನೆಲೆಗೊಳಿಸಲು ಸೆಪ್ಟೆಂಬರ್ ೧, ೧೯೪೭ರಿಂದ ಮೈಸೂರ್ ಚಲೋ ಚಳುವಳಿ ಆರಂಭವಾಯಿತು. ಸಪ್ಟೆಂಬರ್ ೧ರಂದು ಬೆಳಗ್ಗೆ ಒಂಬತ್ತು ಗಂಟೆಗೆ ನನ್ನ ಆಸುಪಾಸಿನಲ್ಲಿ ಇದ್ದ ಮರಿಮಲ್ಲಪ್ಪ, ಸದ್ವಿದ್ಯಾ, ಮಹಾರಾಜ, ಹಾರ್ಡ್ವಿಕ್ ಮುಂತಾದ ಕಾಲೇಜು, ಸ್ಕೂಲುಗಳ ವಿದ್ಯಾರ್ಥಿಗಳೆಲ್ಲರೂ ನನ್ನ ಅಂಗಳಕ್ಕೆ ಬಂದು ಸೇರಿದರು. ಏಕೆಂದರೆ ಇಲ್ಲಿ ಬಂದು ಸೇರಬೇಕೆಂದು ವಿದ್ಯಾರ್ಥಿ ಮುಖಂಡರು ಕರೆ ನೀಡಿದ್ದರಂತೆ. ಅವರೆಲ್ಲರೂ ತುಂಬಾ ಶಾಂತವಾಗಿ ಇದ್ದು, ಹರತಾಳ ನಡೆಸಿದರು. ಸೆಪ್ಟೆಂಬರ್ ೩ರಂದು ಸ್ವಾತಂತ್ರ ಸೇನಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ನನ್ನ ಮಡಿಲಿನಲ್ಲಿ ಹಾರಿಸಿದರು. ಆಗ ಪೋಲಿಸರು ಮಧ್ಯೆ ಪ್ರವೇಶಿಸಿ ಅದನ್ನು ತೆರವು ಮಾಡಿದರು. ಚಳುವಳಿ ಮತ್ತಷ್ಟು ತೀವ್ರವಾಯಿತು. ಈ ಚಳುವಳಿಯನ್ನು ಮಹಾರಾಜ ಕಾಲೇಜು ವಿದ್ಯಾರ್ಥಿ ವೆಂಕಟಾಚಲಂ ಮತ್ತು ಹಾರ್ಡ್ವಿಕ್ ಹೈಸ್ಕೂಲ್ ವಿದ್ಯಾರ್ಥಿ ರಾಮಸ್ವಾಮಿ ಮುನ್ನಡೆಸುತ್ತಿದ್ದರು. ಮೈಸೂರ್ ಚಲೋ ಚಳುವಳಿಯಲ್ಲಿ ಭಾಗವಹಿಸಿದ್ದ ರಾಮಸ್ವಾಮಿ ಎನ್ನುವ ಚಳುವಳಿಗಾರ ಗುಂಡಿಗೆ ಬಲಿಯಾಗಿ ಈ ಸಂದರ್ಭದಲ್ಲಿ ಹುತಾತ್ಮರಾದರು. ಅವರ ಹೆಸರಿನಲ್ಲೇ ಇಂದು ರಾಮಸ್ವಾಮಿ ಸರ್ಕಲ್ ಎಂದು ಖ್ಯಾತಿಯಾಗಿದೆ.
ಅನತಿ ಕಾಲದಲ್ಲೇ ಜಯಚಾಮರಾಜೇಂದ್ರ ಒಡೆಯರು ಜವಾಬ್ದಾರಿಯುತ ಸರ್ಕಾರ ರಚಿಸುವುದಕ್ಕೆ ಒಪ್ಪಿದರು. ಸೆಪ್ಟೆಂಬರ್ ೪ ೧೯೪೭ರಲ್ಲಿ ಮೈಸೂರಿನಲ್ಲಿ ಸ್ವಾತಂತ್ರ್ಯದ ಜ್ವಾಲೆ ಹೊತ್ತಿ ಉರಿಯಿತು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯ ಕೊನೆಯ ಅಂಕಕ್ಕೆ ತೆರೆ ಬಿದ್ದು ಕರ್ನಾಟಕ ಸಂಪೂರ್ಣವಾಗಿ ಸ್ವತಂತ್ರವಾಯಿತೆಂದು ಕರ್ನಾಟಕ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಕೆ ಸಿ ರೆಡ್ಡಿಯವರು ಭಾಷಣ ಮಾಡಿ ಅದನ್ನು ಘೋಷಿಸಿದ್ದು ಇದೇ ಜಾಗದಲ್ಲಿ. ಅಂದು ೩೦,೦೦೦ಕ್ಕಿಂತ ಹೆಚ್ಚು ಜನರ ಭಾರವನ್ನು ನಾನು ಹೊತ್ತಿದ್ದೆ. ಹಾಗಿದ್ದೂ ನನಗೆ ಕಷ್ಟವೆನಿಸಲಿಲ್ಲ. ಜನರ ಸಂಭ್ರಮ ನನಗೆ ಅಗಾಧ ಶಕ್ತಿ ನೀಡಿತ್ತು. ಸಿ ಆರ್ ರೆಡ್ಡಿ ಕರ್ನಾಟಕದ ಮೊದಲ ಮುಖ್ಯಮಂತ್ರಿಗಳಾದರು.
ಮೈಸೂರಿನ ಸುವಿಖ್ಯಾತ ಛಾಯಾಗ್ರಾಹಕ ಟಿ ಎಸ್ ಸತ್ಯನ್ ಮೊತ್ತ ಮೊದಲ ನ್ಯೂಸ್ ಫೋಟೋ ಕವರೇಜ್ ಮಾಡಿದ್ದು ಕೂಡ ನನ್ನ ಮಡಿಲಿನಲ್ಲಿಯೇ. ಸಿ ಆರ್ ರೆಡ್ಡಿ ೧೯೪೭ರಲ್ಲಿ ಕರ್ನಾಟಕದಲ್ಲಿ ಅರಸೊತ್ತಿಗೆ ಕೊನೆಯಾಗಿ, ಜವಾಬ್ದಾರಿಯುತ ಸರ್ಕಾರ ನೆಲೆಗೊಳ್ಳುತ್ತದೆ ಎಂದು ಸೆಪ್ಟೆಂಬರ್ನಲ್ಲಿ ಮಾಡಿದ ಭಾಷಣದ ದೃಶ್ಯವನ್ನು ಟಿ ಎಸ್ ಸತ್ಯನ್ ಸೆರೆಹಿಡಿದರು. ಆ ಛಾಯಾಚಿತ್ರವನ್ನು ಬಾಂಬೆಯ ಇಂಡಿಯಾ ಮ್ಯಾಗಜೀನ್ ಪ್ರಕಟಿಸಿತು. ನಂತರದಲ್ಲಿ ಸತ್ಯನ್ ವಿಶ್ವವಿಖ್ಯಾತ ಛಾಯಾಗ್ರಾಹಕರಾಗಿ, ಪದ್ಮ ಭೂಷಣ ಪ್ರಶಸ್ತಿಯೂ ಅವರಿಗೆ ಸಂದಿತು. ನನ್ನೊಡಲಲ್ಲಿ ಭಾಷಣ ಮಾಡುತ್ತಾ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ನವಯುವಕ ಎಚ್ ವೈ ಶಾರದಾಪ್ರಸಾದ್ ನಂತರದಲ್ಲಿ ಭಾರತದ ಮೂರು ಪ್ರಧಾನಮಂತ್ರಿಗಳಿಗೆ – ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಮೊರಾರ್ಜಿ ದೇಸಾಯಿ, ಶ್ರೀ ರಾಜೀವ್ ಗಾಂಧಿ – ಸುದ್ದಿ ಸಲಹೆಗಾರರಾಗಿದ್ದರು.
ಮೈಸೂರು ವಿಶಾಲ ಕರ್ನಾಟಕದ ಭಾಗವಾಗಿ ಸೇರ್ಪಡೆಯಾದ ನಂತರವೂ ಸ್ವಾತಂತ್ರ್ಯದ ಮೌಲ್ಯಗಳು ಮತ್ತು ಜವಾಬ್ದಾರಿಯುತ ಸರ್ಕಾರದ ರಚನೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿಗೆ ನಾನೇ ನೆಲೆ ನೀಡಿದ್ದೆ. ೧೯೪೭ ಅಕ್ಟೋಬರ್ ೧೦ರಂದು ಮೈಸೂರು ಪ್ರಾಂತ್ಯ ಕಾಂಗ್ರೆಸ್ ಸಮಿತಿ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಸಮಿತಿಗಳಿಂದ ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜವಾಬ್ದಾರಿಯುತ ಸರ್ಕಾರಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸ್ಥಾನವು ನೀಡುತ್ತಿದ್ದ ಹೇಳಿಕೆಗಳ ಬಗ್ಗೆ ತೀವ್ರ ಅಸಂತೃಪ್ತಿ ಇತ್ತು. ಇದಕ್ಕೆ ಮೈಸೂರು ಸಂಸ್ಥಾನದಲ್ಲಿನ ಅರಮನೆಯ ಮುಂದೆ ಸತ್ಯಾಗ್ರಹ ನಡೆಸುತ್ತಿದ್ದವರನ್ನು ಕೈದು ಮಾಡಿ ಪೋಲಿಸರು ನಡೆಸುತ್ತಿದ್ದ ದೌರ್ಜನ್ಯವನ್ನು ೧೯೪೭ರ ಅಕ್ಟೋಬರ್ ೧೧ರಂದು ನನ್ನ ಆವರಣದಲ್ಲಿ ನಡೆದ ಸಭೆಯಲ್ಲಿ ಖಂಡಿಸಿದರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭೆಯ ಸದಸ್ಯರೂ ಆಗಿದ್ದ ಚೌಡಯ್ಯನವರು ಗಾಂಧಿ ಜಯಂತಿಯ ಅಂಗವಾಗಿ ಧ್ವಜಾರೋಹಣ ಮಾಡಿದರು. ಮತ್ತೆ ಅಕ್ಟೋಬರ್ ೧೩ರಂದು ವಿದ್ಯಾರ್ಥಿ ಕಾಂಗ್ರೆಸ್ ಸಮಿತಿಯ ಸಭೆ ಕರೆದರು. ಮಹಾರಾಜ ಕಾಲೇಜಿನ ಅಧ್ಯಾಪಕರಾದ ಎಂ ವಿ ರಾಜಗೋಪಾಲ್ ಕಾಂಗ್ರೆಸ್ ರಚಿಸುವ ಜವಾಬ್ದಾರಿಯುತ ಸರ್ಕಾರದಲ್ಲಿನ ಸಚಿವರ ಕರ್ತವ್ಯಗಳನ್ನು ವಿವರಿಸಿದರು. ಅಕ್ಟೋಬರ್ ೧೭ರಂದು ಸೇರಿದ ಸಭೆಯ ಅಧ್ಯಕ್ಷತೆಯನ್ನು ಜಿ ಎನ್ ನಾರಾಯಣ್ ವಹಿಸಿದ್ದರು. ಎಂ ಎನ್ ಜೋಯಿಸ್, ಅಗರಂ ರಂಗಯ್ಯ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನೂ ರದ್ದು ಪಡಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಮತ್ತು ಪೋಲಿಸರ ದೌರ್ಜನ್ಯವನ್ನು ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು. ಹಲವು ದಿನಗಳಿಂದ ಸೆರೆಮನೆಯಲ್ಲಿರುವ ಕಮ್ಯುನಿಸ್ಟ್ ನಾಯಕರಾಗಿರುವ ರಾಮನಾಥನ್ ಮತ್ತು ಕರ್ಪೂರ್ ವೆಂಟರಾಯರುಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಡ ತಂದರು. ಕೊನೆಗೆ ಅಕ್ಟೋಬರ್ ೨೪ರಂದು ಮೈಸೂರು ಸಂಸ್ಥಾನ ಸಂಪೂರ್ಣ ಜವಾಬ್ದಾರಿಯುತ ಸರ್ಕಾರದ ರಚನೆಗೆ ಬೇಕಾದ ಎಲ್ಲ ನಿಯಮಗಳಿಗೂ ಮಣಿಯಿತು. ಮತ್ತೆ ಕೆ ಸಿ ರೆಡ್ಡಿಯವರು ನನ್ನ ಅಂಗಳದಲ್ಲೇ ನಿಂತು ಅಕ್ಟೋಬರ್ ೨೪ರಂದು ಇನ್ನು ಮುಂದೆ ಮೈಸೂರು ಕಾಂಗ್ರೆಸ್ ಯಾವ ವಿಧವಾದ ರಾಜಕೀಯ ಚಳುವಳಿಯನ್ನು ನಡೆಸಬೇಕಾಗಿಲ್ಲ ಎಂದು ಘೋಷಿಸಿದರು.
ನಂತರದ ೫೦ ವರ್ಷಗಳು ಮಕ್ಕಳು ಮತ್ತು ಯುವಕರು ನನ್ನ ಮಡಿಲಿನಲ್ಲಿ ಕೊಕ್ಕೋ ಮತ್ತು ಬಾಸ್ಕೆಟ್ಬಾಲ್ ಆಡುತ್ತಿದ್ದರು. ಅವರ ಸಂತೋಷ, ಜಗಳ, ಕೂಗಾಟ ಇವೆಲ್ಲವೂ ನನ್ನನ್ನು ಸದಾ ಸಂತೋಷವಾಗಿ ಇಟ್ಟಿದ್ದವು. ಆದರೆ ಕ್ರಮೇಣ ಸ್ವಾತಂತ್ರ್ಯ, ಜವಾಬ್ದಾರಿಯುತ ಸರ್ಕಾರ, ಹೋರಾಟ, ನ್ಯಾಯ ಮುಂತಾದ ಉದಾತ್ತ ಮೌಲ್ಯಗಳನ್ನು ಮಾರ್ದನಿಸುತ್ತಿದ್ದ ನನ್ನ ಅಂಗಳ ಅನೈತಿಕ ಚಟುವಟಿಕೆಗಳ ಬೀಡಾಗಲು ಪ್ರಾರಂಭವಾಯಿತು. ಮಹಾನ್ ವ್ಯಕ್ತಿಗಳ, ಹೋರಾಟಗಾರರ, ಮೇಧಾವಿಗಳ ಪಾದಸ್ಪರ್ಷದಿಂದ ಪುಳಕಿತನಾಗಿ ಸೊಗಸಾಗಿ ಅರಳಿದ್ದ ನಾನು ಕ್ರಮೇಣ ವ್ಯಥೆಯಿಂದ ಮುದುಡಿ, ಕುಗ್ಗಿ ಹೋದೆ. ನನ್ನ ಮೂಕ ರೋದನ ಯಾರ ಕಿವಿಗೂ ತಾಗಲೇ ಇಲ್ಲ. ನಾನು ನನ್ನ ಗತವೈಭದ ಹಳಹಳಿಕೆಯಲ್ಲೇ ಕಳೆದುಹೋಗಿದ್ದೆ.
ನನ್ನ ಅದೃಷ್ಟವೋ ಏನೋ ಮತ್ತೆ ನನಗೊಂದು ಮರುಹುಟ್ಟು ದೊರಕಿತು. ಮೈಸೂರು ನಗರ ಕಾರ್ಪೊರೇಷನ್ ಸುಪರ್ದಿಗೆ ಒಳಪಟ್ಟಿದ್ದ ನನಗೆ ೧೯೯೨ರಲ್ಲಿ ಹೊಸದಾಗಿ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ಎಂದು ನಾಮಕರಣ ಮಾಡಿದರು. ಸ್ವಾತಂತ್ರ್ಯ ಹೋರಾಟದ ಶಿಲ್ಪಗಳನ್ನು ನಿರ್ಮಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಸೌಧವನ್ನು ನಿರ್ಮಿಸಿದರು. ಮೈಸೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಪದಾಧಿಕಾರಿಗಳು ಪ್ರತಿ ಶುಕ್ರವಾರ ಭೇಟಿ ಮಾಡುತ್ತಾರೆ. ಅಲ್ಲಿ ಸ್ವಾತಂತ್ರ್ಯ ದಿನಾಚರಣೆ, ಮೈಸೂರು ಚಲೋ ಚಳುವಳಿಯ ಸ್ಮರಣೆ, ಗಣರಾಜ್ಯೋತ್ಸವ ಮುಂತಾದವುಗಳನ್ನು ಆಚರಿಸುತ್ತಾರೆ.
ಆದರೆ ನನ್ನನ್ನು ಅಂದಿನಿಂದ ಇಂದಿನವರಗೆ ಒಂದು ವಿಷಾದ, ಕೊರಗು ಕಾಡುತ್ತಲೇ ಇದೆ. ನನ್ನ ಬದುಕಿನ ಗತದ ವೈಭವವನ್ನು ನೆನಪಿಸುವ, ಅದನ್ನು ಇತಿಹಾಸದ ಪುಟದಲ್ಲಿ ಅಜರಾಮರವಾಗಿಸುವ ಯಾವ ಗುರುತುಗಳೂ ಇಂದು ನನ್ನ ದೇಹದ ಮೇಲೆ ಇಲ್ಲ. ಮೈಸೂರಿನ ನೂರಾರು ಪಾರ್ಕುಗಳಲ್ಲಿ ಇಂದು ನಾನೂ ಒಬ್ಬ. ಮಹಾನ್ ವ್ಯಕ್ತಿಗಳು ನಿಂತು ಭಾಷಣ ಮಾಡಿದ ಆ ಜಾರುಬಂಡೆ, ಕೆತ್ತನೆ ಕೆಲಸವಿದ್ದ ಮಂಟಪ, ಧ್ವಜಾರೋಹಣ ಮಾಡಿದ ಸ್ಥಳ ಇಂದು ಇಲ್ಲವೇ ಇಲ್ಲ. ಅವೆಲ್ಲವೂ ಕಾಶಿ ರಾಮೇಶ್ವರದಷ್ಟೇ ಪವಿತ್ರ ಸ್ಥಾನಗಳಲ್ಲವೇ? ಆ ಸ್ಥಳಗಳ ಮಹತ್ವವನ್ನು ಸಾರುವ ಸಣ್ಣ ಸಣ್ಣ ಬರಹಗಳಾದರೂ ಬೇಡವೇ? ಅವುಗಳನ್ನೆಲ್ಲಾ ಉಳಿಸಿಕೊಂಡು ಸ್ಮಾರಕ ಮಾಡಲಾಗುತ್ತಿರಲಿಲ್ಲವೇ? ಎಂತೆಂತಹ ಐತಿಹಾಸಿಕ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಅವುಗಳನ್ನೆಲ್ಲಾ ದಾಖಲಿಸಿ, ಈ ಪಾರ್ಕಿಗೆ ಭೇಟಿ ನೀಡುವವರೆಲ್ಲರೂ ಅದನ್ನು ಓದುವಂತೆ ಅಥವಾ ನೋಡಲು ಅನುವಾಗುಂತಹ ವ್ಯವಸ್ಥೆಯೊಂದನ್ನು ಮಾಡಲಾಗುತ್ತಿರಲಿಲ್ಲವೇ? ನಾವೇಕೆ ಇಷ್ಟು ಕಲ್ಪನಾಶೂನ್ಯರೂ, ಇತಿಹಾಸಪ್ರಜ್ಞೆ ಇಲ್ಲದವರೂ ಆಗಿಬಿಟ್ಟಿದ್ದೇವೆ? ಕೊನೇ ಪಕ್ಷ ಮುಂದಿನ ದಿನಗಳಲ್ಲಾದರೂ ಯಾರಾದರೂ ಈ ನಿಟ್ಟಿನಲ್ಲಿ ಯೋಚಿಸಲು ಎಂದು ಆಶಿಸುತ್ತೇನೆ.
ಕೃತಜ್ಞತೆಗಳು
ಈ ಲೇಖನವನ್ನು ಬರೆಯುವ ಹೊಣೆ ನನಗೆ ಒಪ್ಪಿಸಿ, ಈ ಕುರಿತು ನಾನು ಓದುವಂತೆ ಮಾಡಿದ ಡಾ ನಳಿನಿ ಚಂದರ್ ಅವರಿಗೆ ಹಾಗೂ ಈ ಲೇಖನಕ್ಕೆ ಅತ್ಯಂತ ಉದಾರವಾಗಿ ಮಾಹಿತಿಯನ್ನು ಒದಗಿಸಿಕೊಟ್ಟು ನನ್ನಿಂದ ಈ ಲೇಖನವನ್ನು ಬರೆಯಿಸಿದ ವಿಶಾಲಹೃದಯಿ ಶ್ರೀ ಸೀತಾರಾಂ ಅವರಿಗೆ ಅನಂತಾನಂತ ಧನ್ಯವಾದಗಳು.
ಶೈಲಜಾ