ಅರವಿಂದ್ ಸುಬ್ರಮಣಿಯನ್, ಜೋಶ್ ಫೆಲ್ಮನ್ ಮತ್ತು ಅಭಿಷೇಕ್ ಆನಂದ್
ಹೊಸ ಜಿಡಿಪಿ ಅಂಕಿ-ಅಂಶಗಳ ಬಿಡುಗಡೆ ಅಂದರೆ ಯಾವಾಗಲೂ ವಿವಾದ ಇದ್ದುದ್ದೆ. ಈಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ, ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗರ್ಗ್ ಅವರು ಸೌರಭ್ ಗರ್ಗ್ ನೇತೃತ್ವದ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು (MoSPI), ಹಿಂದಿನ ವರ್ಷದ ಉತ್ಪಾದನೆಯನ್ನು ಕಡಿಮೆ ತೋರಿಸುವ ಮೂಲಕ ಪ್ರಸ್ತುತ ಬೆಳವಣಿಗೆಯನ್ನು ಅತಿಯಾಗಿ ಹೆಚ್ಚಿಸಿ ತೋರಿಸಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಸುಭಾಷ್ ಗರ್ಗ್ ಅವರು ಹೋಲಿಸಲಾಗದ ಎರಡು ವಿಭಿನ್ನ ಸಂಗತಿಗಳನ್ನು (ಸೇಬು ಮತ್ತು ಕಿತ್ತಳೆ ಹಣ್ಣುಗಳನ್ನು ಪರಸ್ಪರ ಹೋಲಿಸಿದಂತೆ) ಹೋಲಿಸುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಹಾಗಾದರೆ ಯಾರು ಸರಿ? ನಮ್ಮ 5 ಅಂಶಗಳ ವಿಶ್ಲೇಷಣೆ ಇಲ್ಲಿದೆ:
1. ಕೆಲವು ತಾಂತ್ರಿಕ ಅಂಶಗಳಲ್ಲಿ ಸಚಿವಾಲಯದ ಉತ್ತರ ಸರಿಯಾಗಿದೆ
ಮೇಲ್ನೋಟಕ್ಕೆ ತಾಂತ್ರಿಕ ವಿಚಾರಗಳಲ್ಲಿ ಸಚಿವಾಲಯದ ವಾದ ಸರಿ ಎಂದೇ ತೋರುತ್ತದೆ. ಸುಭಾಷ್ ಗರ್ಗ್ ಅವರು ಹೊಸ ಆಧಾರ ವರ್ಷ (New Base) ಮತ್ತು ಹೊಸ ವಿಧಾನದಿಂದ ಲೆಕ್ಕ ಹಾಕಲಾದ 2026-27ರ ಅಂಕಿ-ಅಂಶಗಳನ್ನು, ಹಳೆಯ ವಿಧಾನದಿಂದ ಲೆಕ್ಕ ಹಾಕಲಾದ 2025-26ರ ಅಂಕಿ-ಅಂಶಗಳ ಜೊತೆ ಹೋಲಿಸುತ್ತಿದ್ದಾರೆ. ಇದು ನಿಜಕ್ಕೂ ತಪ್ಪಾದ ಹೋಲಿಕೆ. ಎರಡೂ ವರ್ಷಗಳಿಗೂ ಹೊಸ ವಿಧಾನವನ್ನೇ ಅನ್ವಯಿಸಿದರೆ, ನೈಜ ಬೆಳವಣಿಗೆ ದರವು 7.8% ನಷ್ಟೇ ಬರುತ್ತದೆ. ಇದಲ್ಲದೆ, ಬೆಲೆ ಸೂಚ್ಯಂಕದಲ್ಲಿನ ವ್ಯತ್ಯಾಸಗಳ (Deflators) ಕುರಿತಾದ ಸಚಿವಾಲಯದ ಸಮರ್ಥನೆಯೂ ಸರಿ ಇದೆ.
ಈ ತಾಂತ್ರಿಕತೆಗಿಂತ ಮುಖ್ಯವಾಗಿ, ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಚೆನ್ನಾಗಿಯೇ ಇತ್ತು ಎಂದು ಭಾವಿಸಿಕೊಳ್ಳುವುದಕ್ಕೆ ಕೆಲವು ಕಾರಣಗಳಿವೆ. ಸರ್ಕಾರದ ವಕ್ತಾರರು ಹೇಳಿರುವಂತೆ ಆ ಅವಧಿಯಲ್ಲಿ ಪ್ರಮುಖ ಆರ್ಥಿಕ ಸೂಚಿಗಳಲ್ಲಿ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿಗಳ ನೈಜ ಮಾರಾಟ ಮತ್ತು ಆಹಾರೇತರ ಸಾಲದ ಬೆಳವಣಿಗೆ ಎರಡೂ 14.9% ರಷ್ಟು ಹೆಚ್ಚಿದ್ದರೆ, ನೈಜ ರಫ್ತು ಕೂಡ 12.1%ರಷ್ಟು ಬೆಳವಣಿಗೆ ಕಂಡಿದೆ.
ಹಾಗಿದ್ದರೂ ಈ ವಿವಾದವೇಕೆ?
2. ದತ್ತಾಂಶಗಳ ನಿರ್ವಹಣೆಯಲ್ಲಿ ಸರ್ಕಾರದ ಮೇಲಿನ ನಂಬಿಕೆಯ ಕೊರತೆ
ಜಿಡಿಪಿ ಅಂಕಿ-ಅಂಶಗಳ ಮೇಲಿನ ಅನುಮಾನ ಇಂದಿನದಲ್ಲ. ನೋಟು ರದ್ದತಿ ಸಮಯದಲ್ಲಿ 8.2% ಬೆಳವಣಿಗೆ ದಾಖಲಾದಾಗಿನಿಂದಲೇ ಇದು ಶುರುವಾಗಿದೆ. ಸಮಸ್ಯೆ ಜಿಡಿಪಿಗೆ ಮಾತ್ರ ಸೀಮಿತವಾಗಿಲ್ಲ: ಜನಗಣತಿ ವಿಳಂಬವಾಗಿದೆ, 2017ರ ಜನರ ಖರ್ಚು-ವೆಚ್ಚದ ಸಮೀಕ್ಷೆಯನ್ನು ಹಿಂಪಡೆಯಲಾಯಿತು, ಕೋವಿಡ್ ಸಾವುಗಳ ಸಂಖ್ಯೆಯನ್ನು ತೀರಾ ಕಡಿಮೆ ತೋರಿಸಲಾಯಿತು ಹಾಗೂ ಬಯಲು ಶೌಚ ಮುಕ್ತ ವಿಚಾರದಲ್ಲಿ ಅತಿಶಯೋಕ್ತಿಯ ಹೇಳಿಕೆಗಳನ್ನು ನೀಡಲಾಯಿತು. ಇಂತಹ ಇತಿಹಾಸವಿರುವ ಸರ್ಕಾರದ ಸರ್ಕಾರದ ಅಂಕಿ-ಅಂಶಗಳನ್ನು ಮೊದಲಿನಂತೆ ಸುಲಭವಾಗಿ ನಂಬಿಕೊಳ್ಳುವುದು ಜನರಿಗೆ ಸುಲಭವಲ್ಲ. ಹೀಗಾಗಿ ತನ್ನ ದತ್ತಾಂಶಗಳು ಪ್ರಾಮಾಣಿಕವಾಗಿವೆ ಎಂದು ಸಾಬೀತುಪಡಿಸುವ ಹೊಣೆ ಸರ್ಕಾರದ ಮೇಲೆಯೇ ಇದೆ.
ಸುಭಾಷ್ ಗರ್ಗ್ ಅವರ ಟೀಕೆ ಇಷ್ಟೊಂದು ಚರ್ಚೆಗೆ ಕಾರಣವಾಗಲು ಈ ನಂಬಿಕೆಯ ಕೊರತೆಯೇ ಮುಖ್ಯ ಕಾರಣ. ಪ್ರಸ್ತುತ ಬೆಳವಣಿಗೆಯನ್ನು ಹೆಚ್ಚಾಗಿ ತೋರಿಸಲು ಹಿಂದಿನ ವರ್ಷದ ಬೆಳವಣಿಗೆಯನ್ನು ಕಡಿಮೆ ಮಾಡಲಾಗಿದೆ ಎಂಬ ಅವರ ಆರೋಪವನ್ನು ನಿವಾರಿಸಲು ಸರ್ಕಾರ ಯಾವುದೇ ಸ್ಪಷ್ಟ ವಿವರಣೆ ನೀಡಿಲ್ಲ. ವಿಧಾನ ಬದಲಾದಾಗ 2025-26ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು ಶೇಕಡಾ 7 ರಷ್ಟು ಏಕೆ ಕಡಿಮೆ ಮಾಡಲಾಯಿತು ಎಂಬುದನ್ನೂ ತಿಳಿಸಿಲ್ಲ. ಅಲ್ಲದೆ, ಹಿಂದಿನ ವರ್ಷಗಳ ಸರಣಿ ಅಂಕಿ-ಅಂಶಗಳನ್ನು (Back series) ಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ.
ಜೊತೆಗೆ, ಸಚಿವಾಲಯಕ್ಕೆ ಅಸಂಘಟಿತ ವಲಯ ಅಥವಾ ನೋಂದಾಯಿತವಲ್ಲದ ಸಣ್ಣ ಉದ್ಯಮಗಳ ಬಗ್ಗೆ ಸಕಾಲಿಕ, ನಿಖರ ಮಾಹಿತಿ ಸಿಗುತ್ತಿಲ್ಲ. ದೇಶದ ಆರ್ಥಿಕತೆಯಲ್ಲಿ ಇವುಗಳ ಪಾಲು ಸುಮಾರು 45% ರಷ್ಟಿದೆ. ದೊಡ್ಡ ಕಂಪನಿಗಳು ಹೇಗೆ ಲಾಭ ಗಳಿಸುತ್ತವೆಯೋ ಇವೂ ಹಾಗೆಯೇ ಇರುತ್ತವೆ ಎಂದು ಸರ್ಕಾರ ತಪ್ಪಾಗಿ ಊಹಿಸುತ್ತಿದೆ. ಮೊದಲ ತ್ರೈಮಾಸಿಕದಲ್ಲಿ ಉಂಟಾದ ಇಂಧನ ಬಿಕ್ಕಟ್ಟು ದೊಡ್ಡ ಕಂಪನಿಗಳಿಗಿಂತ ಸಣ್ಣ ಉದ್ಯಮಗಳಿಗೇ ಭಾರೀ ಹೊಡೆತ ನೀಡಿತ್ತು.
3. ಅಂಕಿ-ಅಂಶಗಳು ವಾಸ್ತವಕ್ಕೆ ಮತ್ತು ಆರ್ಥಿಕ ತರ್ಕಕ್ಕೆ ಹೊಂದಿಕೆಯಾಗುತ್ತಿಲ್ಲ
2026ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇಂಧನ ಕೊರತೆ ಇತ್ತು. ಇಂಧನವನ್ನು ಪಡಿತರ ರೂಪದಲ್ಲಿ ನೀಡಲಾಗುತ್ತಿದ್ದುದರಿಂದ ಪ್ರಯಾಣ ಕಷ್ಟವಾಗಿತ್ತು, ಹೊಟೇಲ್ಗಳು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಖರೀದಿಸಬೇಕಾಯಿತು ಅಥವಾ ಬಾಗಿಲು ಮುಚ್ಚಬೇಕಾಯಿತು. ಇತ್ತ ಜನರ ವೇತನ ಹೆಚ್ಚಳ ನಿಧಾನವಾಗಿತ್ತು, ಹೊಸ ಉದ್ಯೋಗಗಳಿರಲಿಲ್ಲ, ಷೇರು ಮಾರುಕಟ್ಟೆ ಕುಸಿಯುತ್ತಿತ್ತು ಮತ್ತು ರೂಪಾಯಿ ಮೌಲ್ಯ ಒತ್ತಡದಲ್ಲಿತ್ತು. ಇದರಿಂದ ಯುವಜನರಲ್ಲಿ ಆತಂಕ ಹೆಚ್ಚಿ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದವು.
ಇಂತಹ ಇಂಧನ ಬಿಕ್ಕಟ್ಟಿನ ನಡುವೆಯೂ ದೇಶದ ಆರ್ಥಿಕತೆ ಇಷ್ಟು ವೇಗವಾಗಿ ಬೆಳೆಯಲು ಹೇಗೆ ಸಾಧ್ಯ ಎಂಬುದು ಅರ್ಥವಾಗದ ಸಂಗತಿ. ಹತ್ತು ವರ್ಷಗಳ ಹಿಂದೆ ಕಚ್ಚಾ ತೈಲ ಬೆಲೆ ಇಳಿದಾಗ ಭಾರತದ ಆರ್ಥಿಕತೆಗೆ ಲಾಭವಾಗಿ ಬೆಳವಣಿಗೆ ಹೆಚ್ಚಾಗಿತ್ತು. ಆದರೆ ಇಂಧನ ದರ ಏರಿಕೆಯಾದಾಗ ಅದು ಜಿಡಿಪಿಯ 1.5% ರಷ್ಟು ತೆರಿಗೆ ಹೊರೆ ಹೊರಿಸಿದಂತಾಯಿತು. ರಫ್ತು ಕೊಂಚ ಹೆಚ್ಚಿದ್ದರೂ, ಆಮದು ಬೆಲೆಯಲ್ಲಿನ 32% ಹೆಚ್ಚಳದಿಂದಾದ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಆರ್ಬಿಐ ಕೂಡ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆ ನಿಧಾನವಾಗಿದೆ ಎಂದೇ ಅಂದಾಜಿಸಿತ್ತು.
ಇಂತಹ ಪರಿಸ್ಥಿತಿಯಲ್ಲಿ ಬೆಳವಣಿಗೆಯನ್ನು ಹಿಂದಿನ ಮಟ್ಟದಲ್ಲಿ ಉಳಿಸಿಕೊಳ್ಳುವುದೇ ದೊಡ್ಡ ಸಾಧನೆ. ಅಂತದ್ದರಲ್ಲಿ ಸಚಿವಾಲಯವು ಬೆಳವಣಿಗೆ ಹಿಂದಿನ ವರ್ಷಕ್ಕಿಂತ 1% ಹೆಚ್ಚಾಗಿದೆ ಎನ್ನುತ್ತಿದೆ. ಇತರ ಏಷ್ಯನ್ ದೇಶಗಳ ಉದಾಹರಣೆ ನೀಡುವುದೂ ಸರಿಯಲ್ಲ; ಕೊರಿಯಾ ಮತ್ತು ಸಿಂಗಾಪುರಗಳು ‘ಕೃತಕ ಬುದ್ಧಿಮತ್ತೆ’ಯಿಂದ (AI Boom) ಲಾಭ ಪಡೆಯುತ್ತಿದ್ದರೆ, ಇತರ ದೇಶಗಳು ಕಚ್ಚಾ ವಸ್ತುಗಳನ್ನು ರಫ್ತು ಮಾಡಿ ಲಾಭ ಗಳಿಸುತ್ತಿವೆ. ಆದರೆ ಇದು ಭಾರತಕ್ಕೆ ಅನ್ವಯಿಸುವುದಿಲ್ಲ.
4. ವಿಶ್ವಾಸಾರ್ಹತೆಯನ್ನು ಮರಳಿ ಗಳಿಸುವುದು ಹೇಗೆ?
ಸರ್ಕಾರ ತಕ್ಷಣವೇ ಮಾಡಬೇಕಾದ ಕೆಲಸವೆಂದರೆ, ಇಂಧನ ಬಿಕ್ಕಟ್ಟಿನ ನಡುವೆಯೂ ಆರ್ಥಿಕತೆ ಹೇಗೆ ಬೆಳೆಯಿತು ಎಂಬುದನ್ನು ಬಲವಾದ ಆರ್ಥಿಕ ಪುರಾವೆಗಳೊಂದಿಗೆ ಜನರಿಗೆ ವಿವರಿಸುವುದು. ಆರ್ಥಿಕತೆ ನಿಜವಾಗಿಯೂ ವೇಗವಾಗಿ ಬೆಳೆಯುತ್ತಿದ್ದರೆ, ಜಿಎಸ್ಟಿ ಆದಾಯ ಕೇವಲ 5% ಏಕೆ ಬೆಳೆಯಿತು? ಆಮದು ಪ್ರಮಾಣ ಏಕೆ ಕುಸಿಯಿತು? ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿದೆ.
ಅಲ್ಲದೆ, ಜಿಡಿಪಿಯನ್ನು ಹೇಗೆ ಲೆಕ್ಕ ಹಾಕಲಾಗಿದೆ ಮತ್ತು ಪರಿಷ್ಕರಿಸಲಾಗಿದೆ ಎಂದು ವಿವರಿಸುವ ಪೂರ್ಣ “ಆಕರಗಳು ಮತ್ತು ವಿಧಾನಗಳ” (Sources and Methods) ಅಧಿಕೃತ ದಾಖಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಇದರಿಂದ ಸ್ವತಂತ್ರ ಆರ್ಥಿಕ ತಜ್ಞರು ಈ ಲೆಕ್ಕಾಚಾರಗಳನ್ನು ಪರಿಶೀಲಿಸಿ ಜನರಿಗೆ ಸತ್ಯಾಂಶ ತಿಳಿಸಲು ಸಾಧ್ಯವಾಗುತ್ತದೆ.
5. ಹಿಂದಿನದನ್ನು ಒಪ್ಪಿಕೊಳ್ಳುವುದು
ಕೊನೆಯದಾಗಿ, ಸರ್ಕಾರದ ವಾದದಲ್ಲಿ ಸ್ಥಿರತೆ ಇರಬೇಕು. ಪ್ರಸ್ತುತ ಅಂಕಿ-ಅಂಶಗಳನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಕೆಲವು ಆರ್ಥಿಕ ಸೂಚಕಗಳನ್ನು (ಮಾರಾಟ, ಸಾಲ ಇತ್ಯಾದಿ) ಉಲ್ಲೇಖಿಸುತ್ತಿದೆ. ಅದೇ ತರ್ಕವನ್ನು ಬಳಸುವುದಾದರೆ, ಹಿಂದಿನ 14 ವರ್ಷಗಳಲ್ಲಿ ಹೇಳಲಾದ 7-8% ಬೆಳವಣಿಗೆಯ ಮೇಲಿನ ಅನುಮಾನಗಳನ್ನೂ ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ.
ಚಿತ್ರ 2ರಲ್ಲಿ ಪ್ರಸ್ತುತ ತ್ರೈಮಾಸಿಕ ಮತ್ತು ಹಿಂದಿನ ಮೂರು ವರ್ಷಗಳ ಸೂಚಕಗಳನ್ನು ಹೋಲಿಸಲಾಗಿದೆ. ಈಗಿನ 7.8% ಬೆಳವಣಿಗೆಯನ್ನು ಸಮರ್ಥಿಸಲು ಈ ಸೂಚಕಗಳು ಸಾಕ್ಷಿ ಎಂದಾದರೆ, ಹಿಂದಿನ ವರ್ಷಗಳಲ್ಲಿ ಮಾರಾಟ, ವ್ಯಾಪಾರ, ವಿದ್ಯುತ್ ಮತ್ತು ಹೂಡಿಕೆಗಳು ತೀರಾ ದುರ್ಬಲವಾಗಿದ್ದರೂ ಅಷ್ಟೇ ಮಟ್ಟದ ಜಿಡಿಪಿ ಬೆಳವಣಿಗೆ ದಾಖಲಾಗಿದ್ದು ಹೇಗೆ ಸಾಧ್ಯ?
ಈ ವರ್ಷಕ್ಕೆ ಅನ್ವಯವಾಗಬಹುದಾದ ನಿಯಮ ಹಿಂದಿನ ವರ್ಷಗಳಿಗೂ ಅನ್ವಯವಾಗಲೇಬೇಕು.
