ಮೂಲ ಲೇಖಕರು: ಅರುಣ್ ಕುಮಾರ್
ದಿ ವೈರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನ
ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI), ೨೦೨೬-೨೭ನೇ ಸಾಲಿನ ಮೊದಲ ತ್ರೈಮಾಸಿಕದ (ಏಪ್ರಿಲ್ನಿಂದ ಜೂನ್ ೨೦೨೬ರ ಅವಧಿ) ಜಿಡಿಪಿ ಅಂದಾಜನ್ನು ಬಿಡುಗಡೆ ಮಾಡಿದೆ. ಇದು ಹಿಂದಿನ ವರ್ಷದ (೨೦೨೫-೨೬) ಮೊದಲ ತ್ರೈಮಾಸಿಕದ ೬.೯% ಬೆಳವಣಿಗೆಗೆ ಹೋಲಿಸಿದರೆ, ಭರ್ತಿ ೭.೮% ನಷ್ಟು ಗರಿಷ್ಠ ಬೆಳವಣಿಗೆಯನ್ನು ದಾಖಲಿಸಿದೆ. ಇದು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಏಕೆಂದರೆ ಈ ಅವಧಿಯಲ್ಲೇ ಪಶ್ಚಿಮ ಏಷ್ಯಾದ ಬಿಕ್ಕಟ್ಟು ತಲೆದೋರಿ, ಆ ಭಾಗದಿಂದ ಬರುತ್ತಿದ್ದ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು. ಯುದ್ಧಕ್ಕೆ ಮುನ್ನ ಜಾಗತಿಕ ಸರಬರಾಜಿನ ಶೇಕಡಾ ೨೦ರಷ್ಟು ತೈಲ-ಅನಿಲ ಅಲ್ಲಿಂದ ಬರುತ್ತಿತ್ತು ಮತ್ತು ಭಾರತವೇ ಅದರ ಪ್ರಮುಖ ಗ್ರಾಹಕ ದೇಶವಾಗಿತ್ತು.
ಆದರೆ ಈ ಅಂಕಿ-ಅಂಶಗಳು ಹೊರಬರುತ್ತಿದ್ದಂತೆ ಸರ್ಕಾರವು ತನ್ನ ಆರ್ಥಿಕ ನಿರ್ವಹಣೆಗೆ ದೊಡ್ಡ ಗೆಲುವು ಸಿಕ್ಕಿದೆ ಎಂದು ಬೀಗಿದೆ. ಪ್ರಧಾನ ಮಂತ್ರಿಯವರು ತಕ್ಷಣವೇ, “ಕೆಟ್ಟದ್ದನ್ನೇ ಬಯಸುವವರ ಮಾತು ಹುಸಿಯಾಯಿತು, ಭಾರತ ಮತ್ತೊಮ್ಮೆ ಅರಳಿ ನಿಂತಿದೆ” ಎಂದು ಹೇಳಿಕೆ ನೀಡಿದರು. ಒಂದು ವೇಳೆ ಅಧಿಕೃತ ಅಂಕಿ-ಅಂಶಗಳೇ ನಿಜವಾಗಿದ್ದರೆ ಅವರ ಮಾತು ಸರಿ ಎನ್ನಬಹುದಿತ್ತು.
ನೆಲಮಟ್ಟದಲ್ಲಿ ನಿಜವಾಗಿ ಏನಾಗಿದೆ?
ಅ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಕೈಗಾರಿಕೆಗಳಿಗೆ ಅನಿಲ ಪೂರೈಕೆಯನ್ನು ಕಡಿತಗೊಳಿಸಿತ್ತು. ಅತ್ತ ಅಸಂಘಟಿತ ವಲಯದ ಗ್ರಾಹಕರು ಮನೆಬಳಕೆಯ ಅನಿಲಕ್ಕಾಗಿ ಕಪ್ಪು ಮಾರುಕಟ್ಟೆಯಲ್ಲಿ (black market) ದುಬಾರಿ ಹಣ ತೆರಬೇಕಾಯಿತು. ಶ್ರಮಿಕ ವರ್ಗದ ಜನರು ತೆತ್ತ ಈ ಕಪ್ಪು ಮಾರುಕಟ್ಟೆಯ ದುಬಾರಿ ದರವು ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (CPI) ಎಲ್ಲೂ ದಾಖಲಾಗಲೇ ಇಲ್ಲ. ಜನರ ಕೌಟುಂಬಿಕ ಬಜೆಟ್ ಸಂಪೂರ್ಣವಾಗಿ ಬುಡಮೇಲಾಯಿತು ಮತ್ತು ದೇಶದ ಹಲವೆಡೆ ಪ್ರತಿಭಟನೆಗಳೂ ನಡೆದವು.
ಹಲವಾರು ಹೋಟೆಲ್ಗಳು ಮತ್ತು ಉಪಹಾರಗೃಹಗಳು ಬಾಗಿಲು ಹಾಕಿದವು. ತೆರೆದಿದ್ದ ರೆಸ್ಟೋರೆಂಟ್ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಣನೀಯವಾಗಿ ಹೆಚ್ಚಾಯಿತು. ಈ ಹೊಡೆತವು ಬೆಲೆಗಳಲ್ಲೂ ಮತ್ತು ಒಟ್ಟಾರೆ ಉತ್ಪಾದನೆಯಲ್ಲೂ ಕಾಣಿಸಿಕೊಳ್ಳಬೇಕಿತ್ತು.
ಪಶ್ಚಿಮ ಏಷ್ಯಾದಿಂದ ಗೊಬ್ಬರ, ಅಲ್ಯೂಮಿನಿಯಂ, ಹೀಲಿಯಂ, ರಾಸಾಯನಿಕಗಳು ಮುಂತಾದ ಕಚ್ಚಾ ಸಾಮಗ್ರಿಗಳು ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತವೆ. ಯುದ್ಧದಿಂದಾಗಿ ಅವುಗಳ ಪೂರೈಕೆಯಲ್ಲಿ ತೀವ್ರ ಕೊರತೆಯುಂಟಾಗಿ, ಸಾಗಣೆ ಸರಪಳಿ (supply chain) ಅಸ್ತವ್ಯಸ್ತಗೊಂಡು ಬೆಲೆಗಳು ಗಗನಕ್ಕೇರಿದವು. ರಸಗೊಬ್ಬರ ಸಿಗುತ್ತಿಲ್ಲವೆಂದೂ, ಬ್ಲ್ಯಾಕ್ನಲ್ಲಿ ಹೆಚ್ಚಿನ ಬೆಲೆ ಕೊಟ್ಟು ಕೊಳ್ಳಬೇಕಾಯಿತೆಂದೂ ರೈತರು ದೂರಿಕೊಂಡರು. ರೈತರು ಡೀಸೆಲ್ ಅನ್ನೂ ಕಳ್ಳಮಾರುಕಟ್ಟೆಯಲ್ಲಿ ಪಡೆಯಬೇಕಾಯಿತು. ಹಾಗಾಗಿ ರೈತರ ಉತ್ಪಾದನಾ ವೆಚ್ಚ ಹೆಚ್ಚಾಯಿತು. ಸರಬರಾಜು ಸರಪಳಿಯ ಏರುಪೇರು ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರುವುದು ಸಹಜ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಅಧಿಕೃತ ದತ್ತಾಂಶಗಳು ತೋರಿಸಿದ್ದಕ್ಕಿಂತ ಬೆಲೆಗಳು ವಾಸ್ತವದಲ್ಲಿ ತೀರಾ ಹೆಚ್ಚಾಗಿದ್ದವು; ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳು ಆಘಾತಕ್ಕೆ ಒಳಗಾಗಿದ್ದವು. ಆದರೆ ಈಗ ಬಿಡುಗಡೆಯಾಗಿರುವ ಅಧಿಕೃತ Q1 ಜಿಡಿಪಿ ಅಂಕಿ-ಅಂಶಗಳಲ್ಲಿ ಈ ಯಾವ ನಕಾರಾತ್ಮಕ ಅಂಶಗಳೂ ಪ್ರತಿಫಲಿಸಿಲ್ಲ. ಸರ್ಕಾರದ ಬಗ್ಗೆ ಸದಾ ಸಕಾರಾತ್ಮಕ ಚಿತ್ರಣವನ್ನು ನೀಡಲು ಹೀಗೆ ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ? ಅಧಿಕೃತ ಅಂಕಿ-ಅಂಶಗಳಲ್ಲಿ ಇದು ಹೇಗೆ ಸಂಭವಿಸುತ್ತದೆ?
ಅಂಕಿ-ಅಂಶಗಳು ಏನು ಹೇಳುತ್ತಿವೆ?
ಅಧಿಕೃತ ದತ್ತಾಂಶಗಳ ಪ್ರಕಾರ, ತೃತೀಯ ವಲಯವು (ಸೇವಾ ರಂಗ) ೧೦% ರಷ್ಟು ಬೆಳೆದಿದೆ! ಅಂದರೆ ಹೋಟೆಲ್, ರೆಸ್ಟೋರೆಂಟ್ ಮತ್ತು ಪ್ರವಾಸೋದ್ಯಮದ ಕುಸಿತದ ಯಾವುದೇ ಪರಿಣಾಮ ಇದರ ಮೇಲೆ ಬಿದ್ದೇ ಇಲ್ಲ. ದ್ವಿತೀಯ ವಲಯವು (ಉತ್ಪಾದನಾ ರಂಗ) ೮.೬% ಬೆಳವಣಿಗೆ ದಾಖಲಿಸಿದೆ. ಇಲ್ಲಿ ಪೂರೈಕೆ ಅಡಚಣೆಗಳು, ಅನಿಲದ ಅಭಾವ, ಕೆಲಸಗಾರರು ಹಳ್ಳಿಗಳಿಗೆ ವಲಸೆ ಹೋದದ್ದು ಅಥವಾ ಕಾರ್ಮಿಕರ ಪ್ರತಿಭಟನೆಗಳು ಯಾವುದೂ ಲೆಕ್ಕಕ್ಕೇ ಬಂದಿಲ್ಲ. ಕೇವಲ ಪ್ರಾಥಮಿಕ ವಲಯವಷ್ಟೇ (ಕೃಷಿ ಮತ್ತು ಗಣಿಗಾರಿಕೆ) ೨.೯% ಬೆಳವಣಿಗೆ ಕಂಡು ಮಂದಗತಿಯಲ್ಲಿದೆ (ಅದರಲ್ಲೂ ಗಣಿಗಾರಿಕೆ -೨.೪% ಕುಸಿದಿದೆ).
ವೆಚ್ಚದ ಬದಿಯನ್ನು (Expenditure side) ನೋಡಿದರೆ, ಖಾಸಗಿ ಅಂತಿಮ ಬಳಕೆ ವೆಚ್ಚವು (PFCE) ೭.೧% ರಷ್ಟು ಬೆಳೆದಿದೆ ಎಂದು ತೋರಿಸಲಾಗಿದೆ. ಬೆಲೆ ಏರಿಕೆಯಿಂದಾಗಿ ಅಸಂಘಟಿತ ವಲಯದ ಜನರು ತಮ್ಮ ದಿನಬಳಕೆಯ ಖರ್ಚನ್ನು ಕಡಿತಗೊಳಿಸಿದ ಯಾವುದೇ ಕುರುಹು ಇದರಲ್ಲಿ ಕಾಣುತ್ತಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ, ಒಟ್ಟು ಸ್ಥಿರ ಬಂಡವಾಳ ಹೂಡಿಕೆಯು (GFCF) ಕಳೆದ ವರ್ಷದ ೫.೮% ಗೆ ಹೋಲಿಸಿದರೆ ಈ ಬಾರಿ ಎರಡಂಕಿ (೧೧.೯%) ಬೆಳವಣಿಗೆ ಕಂಡಿದೆ! ರಿಸರ್ವ್ ಬ್ಯಾಂಕ್ (RBI) ದತ್ತಾಂಶಗಳೇ ಕೈಗಾರಿಕೆಗಳಲ್ಲಿನ ಸಾಮರ್ಥ್ಯ ಬಳಕೆಯು (capacity utilisation) ಇನ್ನೂ ಕಡಿಮೆ ಮಟ್ಟದಲ್ಲಿದೆ ಎಂದು ಹೇಳುತ್ತಿರುವಾಗ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಹಣವನ್ನು ಹಿಂಪಡೆದು ಹೊರನಡೆಯುತ್ತಿರುವಾಗ ಮತ್ತು ದೇಶಕ್ಕೆ ಬರುತ್ತಿರುವ ನಿವ್ವಳ ವಿದೇಶಿ ನೇರ ಬಂಡವಾಳ (FDI) ತೀರಾ ನಗಣ್ಯವಾಗಿರುವಾಗ ಹೂಡಿಕೆಯಲ್ಲಿ ಇಂತಹ ಬೆಳವಣಿಗೆ ಹೇಗೆ ಸಾಧ್ಯವಾಯಿತು? ಜೊತೆಗೆ ಷೇರು ಮಾರುಕಟ್ಟೆಗಳು ತಲ್ಲಣಗೊಂಡಿದ್ದವು, ರೂಪಾಯಿ ಮೌಲ್ಯ ಕುಸಿಯುತ್ತಿತ್ತು ಮತ್ತು ಆರ್ಥಿಕತೆಯಲ್ಲಿ ತೀವ್ರ ಅನಿಶ್ಚಿತತೆ ಮನೆಮಾಡಿತ್ತು.
ಹೀಗಾಗಿ, ಆರ್ಥಿಕತೆಯ ನಕಾರಾತ್ಮಕ ವಾಸ್ತವವನ್ನು ಈ ಅಂಕಿ-ಅಂಶಗಳು ಮರೆಮಾಚಿವೆ ಎಂಬುದು ಸ್ಪಷ್ಟ. ಕಾರ್ಮಿಕರ ಆಕ್ರೋಶ, ಪ್ರತಿಭಟನೆಗಳು ಜಿಡಿಪಿಯಲ್ಲಿ ದಾಖಲಾಗುತ್ತಿಲ್ಲ. ಇತ್ತೀಚಿನ ಜೆನ್-ಜಿ (Gen Z) ಯುವಜನರ ಪ್ರತಿಭಟನೆ ಕೇವಲ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ; ಅದು ವಿದ್ಯಾವಂತ ನಿರುದ್ಯೋಗದ ವಿರುದ್ಧದ ಕೂಗೂ ಆಗಿತ್ತು. ಆರ್ಥಿಕ ಬೆಳವಣಿಗೆ ಇಷ್ಟೊಂದು ಭರ್ಜರಿಯಾಗಿದ್ದರೆ, ನಿರುದ್ಯೋಗದ ಸಮಸ್ಯೆ ಇಷ್ಟು ಭೀಕರವಾಗಿ ಉಳಿದುಕೊಂಡಿರುವುದು ಏಕೆ?
ಲೆಕ್ಕಾಚಾರದ ವಿಧಾನದಲ್ಲಿರುವ ಹುಳುಕು :
ತ್ರೈಮಾಸಿಕ ಜಿಡಿಪಿ ಅಂದಾಜಿನ ವಿಧಾನವನ್ನು (Methodology) ನೋಡಿದಾಗ ಈ ರಹಸ್ಯ ತಾನಾಗಿಯೇ ಬಯಲಾಗುತ್ತದೆ. MoSPI ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ೬ನೇ ಪುಟದಲ್ಲಿ ಈ ವಿಧಾನದ ಬಗ್ಗೆ ಹೀಗೆ ಹೇಳಲಾಗಿದೆ:
“…ತ್ರೈಮಾಸಿಕ ಜಿಡಿಪಿ ಅಂದಾಜುಗಳು ‘ಬೆಂಚ್ಮಾರ್ಕ್-ಸೂಚಕ ವಿಧಾನ’ವನ್ನು (Benchmark-Indicator methodology) ಆಧರಿಸಿವೆ. ಇದರಲ್ಲಿ ಹಿಂದಿನ ಹಣಕಾಸು ವರ್ಷದ ಅಂದಾಜುಗಳನ್ನು ಸಂಬಂಧಿತ ಸೂಚಕಗಳನ್ನು ಬಳಸಿಕೊಂಡು ಮುಂದಕ್ಕೆ ಪ್ರಕ್ಷೇಪಿಸಲಾಗುತ್ತದೆ (extrapolated)… ಇದನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ೨೦೧೭ರ ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರ ಕೈಪಿಡಿಯ ಮಾರ್ಗಸೂಚಿಗಳನ್ನು ಅನುಸರಿಸಿ ಮಾಡಲಾಗಿದೆ”
ಇದರರ್ಥ: “ತ್ರೈಮಾಸಿಕ ಜಿಡಿಪಿಯ ಬಹುತೇಕ ದತ್ತಾಂಶಗಳು ಆಯಾ ತ್ರೈಮಾಸಿಕದ ಅವಧಿಯಲ್ಲಿ ನೇರವಾಗಿ ಸಂಗ್ರಹಿಸಿದ ದತ್ತಾಂಶಗಳಲ್ಲ; ಬದಲಾಗಿ ಹಿಂದಿನ ವರ್ಷದ ಅಂಕಿ-ಅಂಶಗಳನ್ನು ಆಧರಿಸಿ ಮಾಡುವ ಅಂದಾಜು ಅಥವಾ ಪ್ರಕ್ಷೇಪವಷ್ಟೇ (Projection).”
ಈ ಅಂದಾಜನ್ನು ಹೇಗೆ ಮಾಡಲಾಗುತ್ತದೆ? ಅನುಬಂಧದಲ್ಲಿ ಪಟ್ಟಿ ಮಾಡಲಾದ ೩೩ ‘ಸಂಬಂಧಿತ ಸೂಚಕ’ಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. ಈ ಸೂಚಕಗಳು ಯಾವುವು? ಇವುಗಳನ್ನು ‘ಉತ್ಪಾದನಾ ಸಂಬಂಧಿ ಸೂಚಕಗಳು ಮತ್ತು ಬೆಲೆ ಸೂಚ್ಯಂಕಗಳು’ ಹಾಗೂ ‘ವೆಚ್ಚಕ್ಕೆ ಸಂಬಂಧಿಸಿದ ಸೂಚಕಗಳು ಮತ್ತು ಬೆಲೆ ಸೂಚ್ಯಂಕಗಳು’ ಎಂದು ವರ್ಗೀಕರಿಸಲಾಗಿದೆ. ಆದರೆ ಇವುಗಳಲ್ಲಿ ಬಹುತೇಕ ಸೂಚಕಗಳು ಕೇವಲ ಸಂಘಟಿತ ವಲಯದಿಂದ (organised sector) ಬಂದವುಗಳಾಗಿದ್ದು, ಅವುಗಳೊಳಗೆ ಬೆಲೆಗಳೂ (ಬೆಲೆ ಏರಿಕೆಯ ಮೊತ್ತ) ಸೇರಿಕೊಂಡಿರುತ್ತವೆ.
ಇದರಿಂದ ಎರಡು ಗಂಭೀರ ಪರಿಣಾಮಗಳು ಉಂಟಾಗುತ್ತವೆ:
1. ಇಡೀ ಅಸಂಘಟಿತ ವಲಯದ (unorganised sector) ಕಾರ್ಯಕ್ಷಮತೆಯನ್ನು ಅಳೆಯಲು ಸಂಘಟಿತ ವಲಯದ ದತ್ತಾಂಶಗಳನ್ನೇ ಬದಲಿ ಮಾದರಿಯಾಗಿ (proxy) ಬಳಸಲಾಗುತ್ತದೆ.
2. ತೆರಿಗೆ ಸಂಗ್ರಹ, ರಫ್ತು ಮತ್ತು ಆಮದು ದತ್ತಾಂಶಗಳನ್ನು ಬಳಸುವಾಗ ಅವು ಬೆಲೆ ಏರಿಕೆಯೂ ಅದರಲ್ಲಿ ಸೇರಿರುವುದರಿಂದ, ಅದು ನೈಜ ಬೆಳವಣಿಗೆಯನ್ನು ಪ್ರತಿಬಿಂಬಿಸುವುದಿಲ್ಲ.
ಹೀಗಾಗಿ, ಆರ್ಥಿಕತೆಯು ಹಠಾತ್ ಬಿಕ್ಕಟ್ಟಿಗೆ ಅಥವಾ ಆಘಾತಕ್ಕೆ ಸಿಲುಕಿದ ತ್ರೈಮಾಸಿಕದಲ್ಲಿ ಸಂಭವಿಸುವ ಕುಸಿತವನ್ನು ದಾಖಲಿಸಲು ಈ ವಿಧಾನಕ್ಕೆ ಸಾಧ್ಯವೇ ಇಲ್ಲ. ಹಿಂದಿನ ವರ್ಷದ ಉತ್ತಮ ಸಾಧನೆಯನ್ನೇ ಮುಂದಕ್ಕೆ ಪ್ರಕ್ಷೇಪಿಸಲಾಗುತ್ತದೆ ಮತ್ತು ಬೆಲೆ ಏರಿಕೆಯು ಸೂಚ್ಯಂಕಗಳನ್ನು ಕೃತಕವಾಗಿ ಹೆಚ್ಚಿಸುತ್ತದೆ.
ಅಂತಿಮವಾಗಿ-
ನೋಟು ರದ್ದತಿಯ (Demonetisation) ಸಂದರ್ಭದಲ್ಲೂ ಈ ಲೇಖಕರು ಇದೇ ಅಂಶವನ್ನು ತೋರಿಸಿದ್ದರು. ಅಂದು ಕನಿಷ್ಠ ೫ ತಿಂಗಳುಗಳ ಕಾಲ ಆರ್ಥಿಕತೆ ನೆಲಕಚ್ಚಿದ್ದು ಡಾಳಾಗಿ ಕಾಣುತ್ತಿದ್ದರೂ, ಅಧಿಕೃತ ದಾಖಲೆಗಳ ಪ್ರಕಾರ ಜಿಡಿಪಿ ಆ ದಶಕದಲ್ಲೇ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿತ್ತು!
ಇದರ ಜೊತೆಗೆ, ಜಿಡಿಪಿ ಲೆಕ್ಕ ಹಾಕುವ ಎರಡು ವಿಧಾನಗಳ ನಡುವಿನ ಅಂತರವು (Discrepancy) ೨೦೧೬-೧೭ರಿಂದೀಚೆಗೆ ಭಾರಿ ಹೆಚ್ಚಾಗಿದೆ. ಕಳೆದ ವರ್ಷ +೦.೮% ಇದ್ದ ಈ ವ್ಯತ್ಯಾಸವು, ಈಗ -೦.೮% ಗೆ ಬದಲಾಗಿದೆ (ಅಂದರೆ ಜಿಡಿಪಿಯ ಒಟ್ಟು ೧.೬% ರಷ್ಟು ಅಚೀಚೆ ತೂಗಾಡುತ್ತಿದೆ).
ಹೀಗಾಗಿ, ವಾಸ್ತವದಲ್ಲಿ ಆರ್ಥಿಕತೆಗೆ ಎಷ್ಟೇ ಆಘಾತವಾದರೂ ಮತ್ತು ಅಸಂಘಟಿತ ವಲಯದ ಶ್ರಮಿಕರ ಬದುಕು ಬಿಕ್ಕಟ್ಟಿನಲ್ಲಿ ಬೇಯುತ್ತಿದ್ದರೂ, ಜಿಡಿಪಿ ಅಂಕಿ-ಅಂಶಗಳು ಮಾತ್ರ ದೇಶದ ಆರ್ಥಿಕತೆ ಅತ್ಯಂತ ಸದೃಢವಾಗಿದೆ ಎಂಬ ಭ್ರಮೆಯನ್ನೇ ಸೃಷ್ಟಿಸುತ್ತಿರುತ್ತವೆ.
