ತಯಾರಿಕಾ ವಲಯದ ಜಿವಿಎ ಲೆಕ್ಕಾಚಾರದಲ್ಲಿನ ಭಾರಿ ಅಂತರ

 

ಮೂಲ ಲೇಖಕರು: ಜತೀಂದರ್ ಎಸ್. ಬೇಡಿ ಮತ್ತು ಆರ್. ನಾಗರಾಜ್

ರಾಷ್ಟ್ರೀಯ ಲೆಕ್ಕಪತ್ರ ಅಂಕಿ-ಅಂಶಗಳ (NAS) ಪ್ರಕಾರ, 2023-24ನೇ ಸಾಲಿನಲ್ಲಿ ಚಾಲ್ತಿ ಬೆಲೆಗಳ ಆಧಾರದ ಮೇಲೆ ಭಾರತದ ತಯಾರಿಕಾ ವಲಯದ ಒಟ್ಟು ಮೌಲ್ಯವರ್ಧನೆ (GVA) ₹38.6 ಲಕ್ಷ ಕೋಟಿ ರೂಪಾಯಿಗಳಾಗಿದೆ. ಆದರೆ, ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ASI) ಮತ್ತು ಅಸಂಘಟಿತ ಉದ್ಯಮಗಳ ವಾರ್ಷಿಕ ಸಮೀಕ್ಷೆಯ (ASUSE) ದತ್ತಾಂಶಗಳನ್ನು ಬಳಸಿ ಮಾಡಿದ ‘ಪರ್ಯಾಯ ಅಂದಾಜು’ (Alternative Estimate) ಇದಕ್ಕಿಂತ ತುಂಬಾ ಕಡಿಮೆಯಿದೆ. ಹೀಗಾಗಿ, ಸರ್ಕಾರದ ಅಧಿಕೃತ ಅಂದಾಜನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅನಿವಾರ್ಯವಾಗುತ್ತದೆ. ಈ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (NSO) ರಾಷ್ಟ್ರೀಯ ಲೆಕ್ಕಪತ್ರ ಅಂಕಿ-ಅಂಶಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿತು. ಅದರಂತೆ, 2023-24ರಲ್ಲಿ ಚಾಲ್ತಿ ಬೆಲೆಗಳ ಆಧಾರದಲ್ಲಿ ತಯಾರಿಕಾ ವಲಯದ ಒಟ್ಟು ಮೌಲ್ಯವರ್ಧನೆಯು (GVA) ₹38.6 ಲಕ್ಷ ಕೋಟಿಯಾಗಿದ್ದು, ಇದು ದೇಶದ ಒಟ್ಟು ಜಿಡಿಪಿಯ ಶೇಕಡಾ 14.7 ರಷ್ಟಿದೆ ಎಂದು ತೋರಿಸಲಾಗಿದೆ. ಆದರೆ ಸರ್ಕಾರದ ಈ ಅಧಿಕೃತ ಅಂದಾಜು ಎಷ್ಟು ವಿಶ್ವಾಸಾರ್ಹ? ಈ ಲೇಖನವು ಆ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ. ಭಾರತದ ತಯಾರಿಕಾ ವಲಯದಲ್ಲಿ ಎರಡು ಪ್ರಮುಖ ಭಾಗಗಳಿವೆ: 1. ಸಂಘಟಿತ ವಲಯ: ವಿದ್ಯುತ್ ಬಳಕೆಯೊಂದಿಗೆ 10ಕ್ಕೂ ಹೆಚ್ಚು ಅಥವಾ ವಿದ್ಯುತ್ ರಹಿತವಾಗಿ 20ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ನೋಂದಾಯಿತ ಕಾರ್ಖಾನೆಗಳು ಮತ್ತು ಕಂಪನಿಗಳು. 2. ಅಸಂಘಟಿತ ವಲಯ: ಕಾರ್ಪೊರೇಟ್ ಅಥವಾ ಕಾರ್ಖಾನೆ ವ್ಯಾಪ್ತಿಯಿಂದ ಹೊರಗುಳಿದ ಸಣ್ಣ ಸಣ್ಣ ಕಾರ್ಯಾಗಾರಗಳು (workshops), ಗೃಹ ಕೈಗಾರಿಕೆಗಳು ಮತ್ತು ಅನೌಪಚಾರಿಕ ಘಟಕಗಳು.ನೋಂದಾಯಿತ ಕಾರ್ಖಾನೆಗಳ ಉತ್ಪಾದನಾ ಲೆಕ್ಕವನ್ನು ‘ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ’ಯು (ASI) ನೀಡಿದರೆ, ಅಸಂಘಟಿತ ವಲಯದ ಲೆಕ್ಕವನ್ನು ‘ಅಸಂಘಟಿತ ಉದ್ಯಮಗಳ ವಾರ್ಷಿಕ ಸಮೀಕ್ಷೆ’ಯು (ASUSE) ದಾಖಲಿಸುತ್ತದೆ. ಈ ಎರಡೂ ಸಮೀಕ್ಷೆಗಳ ಒಟ್ಟು ಉತ್ಪಾದನೆಯನ್ನು (GVA) ಕೂಡಿಸಿದರೆ, ಅದು ದೇಶದ ಒಟ್ಟಾರೆ ತಯಾರಿಕಾ ಉತ್ಪಾದನೆಯಾಗುತ್ತದೆ.

ಅಂದಾಜುಗಳಲ್ಲಿನ ಭಾರಿ ವ್ಯತ್ಯಾಸ (The Discrepancy)

2023-24ನೇ ಸಾಲಿಗೆ ASI ಮತ್ತು ASUSE ಸಮೀಕ್ಷೆಗಳೆರಡನ್ನೂ ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ತಯಾರಿಕಾ ವಲಯದ ಒಟ್ಟು ಜಿವಿಎ ₹27.4 ಲಕ್ಷ ಕೋಟಿ. ಇದನ್ನು ನಾವು ‘ಪರ್ಯಾಯ ಅಂದಾಜು’ (AE) ಎನ್ನೋಣ.ಆದರೆ ಸರ್ಕಾರದ ರಾಷ್ಟ್ರೀಯ ಲೆಕ್ಕಪತ್ರಗಳ (NAS) ಅಧಿಕೃತ ಅಂಕಿ-ಅಂಶ ಹೇಳುವುದು ₹38.6 ಲಕ್ಷ ಕೋಟಿ! ಅಂದರೆ, ಸರ್ಕಾರದ ಅಧಿಕೃತ ಅಂದಾಜು ವಾಸ್ತವ ಸಮೀಕ್ಷೆಗಳಿಗಿಂತ ಬರೋಬ್ಬರಿ ಶೇಕಡಾ 40.9 ರಷ್ಟು ಹೆಚ್ಚಾಗಿದೆ. ಈ ಭಾರಿ ಅಂತರವನ್ನು ನಾವು ‘ಅಂತರ’ (GAP) ಎಂದು ಕರೆಯೋಣ. ಇಷ್ಟೊಂದು ದೊಡ್ಡ ವ್ಯತ್ಯಾಸ ಬರಲು ಕಾರಣವೇನು?ಎರಡರ ಲೆಕ್ಕಾಚಾರದ ವಿಧಾನ ಅಥವಾ ವ್ಯಾಖ್ಯಾನಗಳಲ್ಲಿ ಬದಲಾವಣೆಯಿರುವುದರಿಂದ ಎರಡು ಅಂದಾಜುಗಳ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು ಬರುವುದು ಸಹಜ. ಆದರೆ ಅಧಿಕೃತ ಸರ್ಕಾರಿ ದತ್ತಾಂಶಗಳನ್ನೇ ಬಳಸಿದಾಗಲೂ ಇಷ್ಟು ದೊಡ್ಡ ಪ್ರಮಾಣದ ವ್ಯತ್ಯಾಸ (40.9%) ಕಂಡುಬರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಅಧಿಕೃತ ಜಿವಿಎ ಲೆಕ್ಕಾಚಾರಕ್ಕೆ ಬಳಸಿದ ಆಕರಗಳೇನು? ಅಸಂಘಟಿತ ವಲಯದ ಲೆಕ್ಕಕ್ಕೆ ಸರ್ಕಾರವೂ ASUSE ದತ್ತಾಂಶವನ್ನೇ ಬಳಸಿದೆ; ನಾವೂ ಅದೇ ದತ್ತಾಂಶವನ್ನು ಬಳಸಿದ್ದೇವೆ. ಜೊತೆಗೆ ಒಟ್ಟು ತಯಾರಿಕಾ ಜಿವಿಎಯಲ್ಲಿ ಅಸಂಘಟಿತ ವಲಯದ ಪಾಲು ಕೇವಲ ಶೇಕಡಾ 13.9 ರಷ್ಟು ಮಾತ್ರ. ಹೀಗಾಗಿ ಈ ಬೃಹತ್ ಅಂತರಕ್ಕೆ ಅಸಂಘಟಿತ ವಲಯ ಕಾರಣವಾಗಿರಲು ಸಾಧ್ಯವೇ ಇಲ್ಲ. ಹಾಗಿದ್ದರೆ ಈ ವ್ಯತ್ಯಾಸಕ್ಕೆ ಮೂಲ ಕಾರಣ ಸಂಘಟಿತ ತಯಾರಿಕಾ ವಲಯದ ಲೆಕ್ಕಾಚಾರದಲ್ಲೇ ಇರಬೇಕು. ಸರ್ಕಾರವು ಸಂಘಟಿತ ವಲಯದ ಲೆಕ್ಕಕ್ಕಾಗಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA-21) ಡೇಟಾಬೇಸ್‌ನಿಂದ ಕಂಪನಿಗಳ ಬ್ಯಾಲೆನ್ಸ್ ಶೀಟ್ ದತ್ತಾಂಶಗಳನ್ನು ಬಳಸುತ್ತದೆ. ಹಳೆಯ ASI ಸಮೀಕ್ಷೆಯ ಬದಲಿಗೆ MCA ಕಂಪನಿ ದತ್ತಾಂಶಗಳನ್ನು ಬಳಸುವ ಈ ಪದ್ಧತಿಯು 2011-12ರ ಆದಾರ ವರ್ಷದ ಪರಿಷ್ಕರಣೆಯಿಂದ ಆರಂಭವಾಯಿತು. ಇತ್ತೀಚಿನ ಹೊಸ ಸರಣಿಯಲ್ಲೂ ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಇದೇ ಪದ್ಧತಿಯನ್ನು ಮುಂದುವರಿಸಲಾಗಿದೆ.

ಉದ್ಯೋಗದ ದತ್ತಾಂಶಗಳ ಮೂಲಕ ಪರಿಶೀಲನೆ (Employment Validation)

ಜಿವಿಎ ಲೆಕ್ಕಾಚಾರದ ನಿಖರತೆಯನ್ನು ಪರೀಕ್ಷಿಸಲು ಇರುವ ಒಂದು ಪ್ರಮಾಣಿತ ವಿಧಾನವೆಂದರೆ—ಆ ವಲಯದಲ್ಲಿ ದುಡಿಯುತ್ತಿರುವ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು ತೆಗೆದುಕೊಂಡು, ASI ಮತ್ತು ASUSE ದತ್ತಾಂಶಗಳಲ್ಲಿರುವ ‘ತಾಂತ್ರಿಕ ಅನುಪಾತ’ಗಳ (ಕಾರ್ಮಿಕನೊಬ್ಬನ ಸರಾಸರಿ ಉತ್ಪಾದಕತೆ) ಮೂಲಕ ಸಂಭಾವ್ಯ ಉತ್ಪಾದನೆಯನ್ನು ಅಳೆಯುವುದು.2023-24ರ ಅಧಿಕೃತ ಕಾರ್ಮಿಕ ಸಮೀಕ್ಷೆಯ (PLFS) ಪ್ರಕಾರ, ತಯಾರಿಕಾ ವಲಯದಲ್ಲಿ ಒಟ್ಟು 697.5 ಲಕ್ಷ ಕಾರ್ಮಿಕರು ದುಡಿಯುತ್ತಿದ್ದರು. ಆದರೆ, ASI ಮತ್ತು ASUSE ದತ್ತಾಂಶಗಳ ಪ್ರಕಾರ ₹27.4 ಲಕ್ಷ ಕೋಟಿ ಜಿವಿಎ ಉತ್ಪಾದಿಸಲು ಬಳಕೆಯಾದ ಕಾರ್ಮಿಕರ ಸಂಖ್ಯೆ ಕೇವಲ 532.9 ಲಕ್ಷ ಮಾತ್ರ. ಹಾಗಿದ್ದರೆ ಉಳಿದ 164.6 ಲಕ್ಷ ‘ಹೆಚ್ಚುವರಿ ಕಾರ್ಮಿಕರ’ (Residual Workers – 697.5 ಮೈನಸ್ 532.9) ಉತ್ಪಾದನೆಯೇ ಸರ್ಕಾರದ ಜಿವಿಎಯಲ್ಲಿರುವ ಈ ವ್ಯತ್ಯಾಸಕ್ಕೆ ಕಾರಣವಾಗಿರಬಹುದೇ? ಈ ಹೆಚ್ಚುವರಿ ಕಾರ್ಮಿಕರ ಪೈಕಿ ಕೆಲವರು ASI ಸಮೀಕ್ಷೆಯಲ್ಲಿ ಬಿಟ್ಟುಹೋದ ಕಂಪನಿಗಳಲ್ಲಿರಬಹುದು ಮತ್ತು ಇನ್ನುಳಿದವರು ASUSE ಸಮೀಕ್ಷೆಯಲ್ಲಿ ದಾಖಲಾಗದ ಅತ್ಯಂತ ಸಣ್ಣ ಅಸಂಘಟಿತ ಘಟಕಗಳಲ್ಲಿರಬಹುದು.ಈಗ, ಆ 164.6 ಲಕ್ಷ ಹೆಚ್ಚುವರಿ ಕಾರ್ಮಿಕರ ಸಂಭಾವ್ಯ ಉತ್ಪಾದನೆಯನ್ನು ಸೂಕ್ತ ತಾಂತ್ರಿಕ ಅನುಪಾತಗಳ ಮೂಲಕ ಲೆಕ್ಕ ಹಾಕಿದರೆ, ಅವರ ಒಟ್ಟು ಸಂಭಾವ್ಯ ಜಿವಿಎ ₹3.6 ಲಕ್ಷ ಕೋಟಿ ಆಗುತ್ತದೆ.ಈಗ ಈ ₹3.6 ಲಕ್ಷ ಕೋಟಿಯನ್ನು ನಮ್ಮ ಮೊದಲಿನ ಪರ್ಯಾಯ ಅಂದಾಜಾದ ₹27.4 ಲಕ್ಷ ಕೋಟಿಗೆ ಸೇರಿಸಿದರೆ, ತಯಾರಿಕಾ ವಲಯದ ಒಟ್ಟು ಸಂಭಾವ್ಯ ಜಿವಿಎ ₹31.0 ಲಕ್ಷ ಕೋಟಿ ಆಗಬಹುದು.ಆದರೆ, ಈ ₹31.0 ಲಕ್ಷ ಕೋಟಿಯೂ ಸಹ ಸರ್ಕಾರದ ಅಧಿಕೃತ ಅಂದಾಜಾದ ₹38.6 ಲಕ್ಷ ಕೋಟಿಗಿಂತ ಶೇಕಡಾ 24.5 ರಷ್ಟು ಕಡಿಮೆಯಾಗುತ್ತದೆ! ಅಂದರೆ ಕಂಪನಿಗಳು ಮತ್ತು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರ ಗರಿಷ್ಠ ಉತ್ಪಾದನೆಯನ್ನು ಗಣನೆಗೆ ತೆಗೆದುಕೊಂಡರೂ, ಅದು ಸರ್ಕಾರದ ಅಧಿಕೃತ ಸಂಖ್ಯೆಯ ಕೇವಲ ಶೇಕಡಾ 80.3 ರಷ್ಟಾಗುತ್ತದೆ. ಅಂದರೆ, ಸರ್ಕಾರದ ಅಧಿಕೃತ ಲೆಕ್ಕದಲ್ಲಿರುವ ಬರೋಬ್ಬರಿ ₹7.6 ಲಕ್ಷ ಕೋಟಿ ರೂಪಾಯಿಗಳಷ್ಟು (ಅಥವಾ 19.7%) ತಯಾರಿಕಾ ಜಿವಿಎಗೆ ಯಾವುದೇ ತಾರ್ಕಿಕ ವಿವರಣೆಯೇ ಇಲ್ಲ (Unexplained GAP)! ಇದು ಹೊಸ ಜಿಡಿಪಿ ಅಂಕಿ-ಅಂಶಗಳ ಮುಂದಿರುವ ನಿಜವಾದ ಒಗಟು.

ಅಂತರಕ್ಕೆ ಸರ್ಕಾರದ ಸಮರ್ಥನೆ ಮತ್ತು ವಾಸ್ತವ

ಸರ್ಕಾರದ ಪ್ರಕಾರ, ಕಾರ್ಖಾನೆಗಳ ಸಮೀಕ್ಷೆಯು (ASI) ಕೇವಲ ಕಾರ್ಖಾನೆಯ ಆವರಣದೊಳಗಿನ ಉತ್ಪಾದನೆಯನ್ನು ಮಾತ್ರ ಅಳೆಯುತ್ತದೆ; ಆದರೆ ಕಾರ್ಖಾನೆಯ ಹೊರಗೆ ನಡೆಯುವ ಮೌಲ್ಯವರ್ಧನೆಯನ್ನು—ಅಂದರೆ ಕಂಪನಿಯ ಪ್ರಧಾನ ಕಚೇರಿ, ಮಾರುಕಟ್ಟೆ, ವಿತರಣೆ ಮತ್ತು ಸಂಶೋಧನಾ (R&D) ಚಟುವಟಿಕೆಗಳನ್ನು—ಅದು ದಾಖಲಿಸುವುದಿಲ್ಲ. ಹಾಗಾಗಿ MCA ಕಂಪನಿ ದತ್ತಾಂಶಗಳು ಜಿವಿಎಯನ್ನು ಹೆಚ್ಚಾಗಿ ತೋರಿಸುತ್ತವೆ ಎಂದು NSO ಹೇಳುತ್ತದೆ. ಆದರೆ ಇದು ನಿಜವೇ? ಲಭ್ಯವಿರುವ ಆರ್ಥಿಕ ಪುರಾವೆಗಳು ಸರ್ಕಾರದ ಈ ವಾದವನ್ನು ಬೆಂಬಲಿಸುವುದಿಲ್ಲ.ಒಂದು ವೇಳೆ ASI ಸಮೀಕ್ಷೆಯು ಉತ್ಪಾದನೆಯನ್ನು ಕಡಿಮೆ ಅಂದಾಜು ಮಾಡಿಲ್ಲ ಎಂದಾದರೆ, ಇಷ್ಟೊಂದು ದೊಡ್ಡ ಕಂದಕ ಸೃಷ್ಟಿಯಾಗಲು ಹೇಗೆ ಸಾಧ್ಯ? NSO ಬಳಸುತ್ತಿರುವ ವಿಧಾನದಲ್ಲಿ, ಸ್ಯಾಂಪಲ್ ಆಗಿ ತೆಗೆದುಕೊಂಡ ಕಂಪನಿಗಳ ಆಧಾರದ ಮೇಲೆ, ಅಸ್ತಿತ್ವ ಮತ್ತು ಗಾತ್ರವೇ ಅಸ್ಪಷ್ಟವಾಗಿರುವ ಇಡೀ ಕಾರ್ಪೊರೇಟ್ ವಲಯಕ್ಕೆ ಅಂಕಿ-ಅಂಶಗಳನ್ನು ಕೃತಕವಾಗಿ ಹಿಗ್ಗಿಸಿ (scaling up) ಅನ್ವಯಿಸುತ್ತಿರುವುದೇ ಈ ಏರುಪೇರಿಗೆ ಕಾರಣವೇ?

ಸಾಂಖ್ಯಿಕ ಸಮಸ್ಯೆಯ ಸಾರಾಂಶ

ಹೊಸ ರಾಷ್ಟ್ರೀಯ ಲೆಕ್ಕಪತ್ರಗಳ ಪ್ರಕಾರ, 2023-24ರಲ್ಲಿ ತಯಾರಿಕಾ ವಲಯದ ಚಾಲ್ತಿ ಬೆಲೆಯ ಜಿವಿಎ ₹38.6 ಲಕ್ಷ ಕೋಟಿ. ಆದರೆ, ದಶಕಗಳಿಂದ ಪರೀಕ್ಷಿಸಲ್ಪಟ್ಟ ಅಧಿಕೃತ ASI ಮತ್ತು ASUSE ಸಮೀಕ್ಷೆಗಳ ಆಧಾರದ ಪರ್ಯಾಯ ಅಂದಾಜಿಗಿಂತ ಸರ್ಕಾರದ ಈ ಅಧಿಕೃತ ಸಂಖ್ಯೆಯು ಶೇಕಡಾ 40.9 ರಷ್ಟು ಹೆಚ್ಚಾಗಿದೆ.ಬಿಟ್ಟುಹೋಗಿರಬಹುದಾದ ಎಲ್ಲಾ ಕಂಪನಿಗಳು ಮತ್ತು ಹೆಚ್ಚುವರಿ ಕಾರ್ಮಿಕರ ಗರಿಷ್ಠ ಕೊಡುಗೆಯನ್ನು ಲೆಕ್ಕಕ್ಕೆ ಸೇರಿಸಿದ ನಂತರವೂ, ವಿವರಿಸಲಾಗದ ಕಂದಕವು ಶೇಕಡಾ 24.5 ರಷ್ಟು (₹7.6 ಲಕ್ಷ ಕೋಟಿ) ಹಾಗೆಯೇ ಉಳಿಯುತ್ತದೆ.ಸರ್ಕಾರದ ಈ ಅಂದಾಜು ಕಾರ್ಪೊರೇಟ್ ದತ್ತಾಂಶಗಳ ಮೂಲಕ “ನೆಲದ ವಾಸ್ತವದ ಪೂರ್ಣ ಚಿತ್ರಣ” ನೀಡುತ್ತಿದೆಯೇ ಅಥವಾ ಇದು ಉತ್ಪಾದನೆಯನ್ನು ವಾಸ್ತವಕ್ಕಿಂತ ಅತಿಯಾಗಿ ಹಿಗ್ಗಿಸಿ ತೋರಿಸುವ ಕಸರತ್ತೇ (overestimation) ಎಂಬುದು ತೀವ್ರ ವಿವಾದದ ವಿಷಯವಾಗಿ ಉಳಿದಿದೆ. ಸರ್ಕಾರವು ತಾನು ಬಳಸಿದ MCA ಕಾರ್ಪೊರೇಟ್ ದತ್ತಾಂಶಗಳನ್ನು ಮತ್ತು NSO ಅಳವಡಿಸಿಕೊಂಡ ಲೆಕ್ಕಾಚಾರದ ವಿಧಾನಗಳನ್ನು ಸ್ವತಂತ್ರ ತಜ್ಞರ ಪರಿಶೀಲನೆಗೆ ಮುಕ್ತವಾಗಿ ಬಹಿರಂಗಪಡಿಸಿದಾಗ ಮಾತ್ರವೇ ಈ ಗಂಭೀರ ಸಾಂಖ್ಯಿಕ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ.

Scroll to Top