ಭಾರಿ ರಿಯಾಯಿತಿ ನೀಡಿ  ಡೇಟಾ ಸೆಂಟರ್‌ಗಳನ್ನು ಭಾರತ  ಬರಮಾಡಿಕೊಳ್ಳುತ್ತಿದೆ. ಜನರಿಗೆ ಇದರಿಂದೇನು ಲಾಭ?

ದಿ ವೈರ್‌ ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನ

ಸಿದ್ಧಾರ್ಥ್ ಭಾಟಿಯಾ: ನಮಸ್ಕಾರ, ‘ದಿ ವೈರ್ ಟಾಕ್ಸ್’ಗೆ ಸ್ವಾಗತ. ನಾನು ಸಿದ್ಧಾರ್ಥ್ ಭಾಟಿಯಾ. ವಿಶಾಖಪಟ್ಟಣದಲ್ಲಿ ಗೂಗಲ್ ಮತ್ತು ಅದಾನಿ ಗ್ರೂಪ್ ಜಂಟಿಯಾಗಿ ನಿರ್ಮಿಸುತ್ತಿರುವ ಬೃಹತ್ ಡೇಟಾ ಸೆಂಟರ್, ಅಲ್ಲಿನ ನೀರಿನ ಪೂರೈಕೆಯ ಮೇಲೆ ಬೀರುವ ಪರಿಣಾಮದ ಕಾರಣದಿಂದಾಗಿ ಪರಿಸರವಾದಿಗಳು ಮತ್ತು ಸ್ಥಳೀಯ ಸಮುದಾಯಗಳು ಇದರ ವಿರುದ್ಧ ಕಾನೂನು ಹೋರಟ ನಡೆಸಿದ್ದಾರೆ. ಸರ್ಕಾರದಿಂದ ಇದಕ್ಕೆ ಸಂಪೂರ್ಣ ಬೆಂಬಲ ಇದೆ. ಇದು $16 ಬಿಲಿಯನ್ ಮೊತ್ತದ ದೊಡ್ಡ ಯೋಜನೆ, ಈಗಾಗಲೇ ನೀರಿನ ಕೊರತೆ ಇರುವ ಪ್ರದೇಶದ ಸ್ಥಳೀಯ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಇದಕ್ಕಾಗಿ ಬಳಸಿಕೊಳ್ಳಲಿದೆ. ಆದರೆ, ಇದೇ ಸಂದರ್ಭದಲ್ಲಿ ಭಾರತದ ಹಲವು ರಾಜ್ಯಗಳು ಅಂತರರಾಷ್ಟ್ರೀಯ ಕಂಪನಿಗಳು ತಮ್ಮಲ್ಲೇ ಡೇಟಾ ಸೆಂಟರ್ ಸ್ಥಾಪಿಸಲಿ ಎಂದು ಸ್ಪರ್ಧೆಗೆ ಬಿದ್ದಂತೆ ರಿಯಾಯಿತಿಗಳನ್ನು ಘೋಷಿಸುತ್ತಿವೆ—ವಿದ್ಯುತ್ ಮತ್ತು ಜಮೀನು ಸಬ್ಸಿಡಿ, ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ ಮುಂತಾದ ಅನೇಕ ಸೌಲಭ್ಯಗಳನ್ನು ಆಫರ್ ಮಾಡುತ್ತಿವೆ.

ಈ ರೀತಿಯ ಸೆಂಟರ್‌ಗಳಿಂದ ಪರಿಸರಕ್ಕೆ ಹಾನಿಯಾಗಬಹುದು, ನೀರಿನ ಕೊರತೆ ತೀವ್ರಗೊಳ್ಳಬಹುದು, ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯರಿಗೆ ಉದ್ಯೋಗಗಳೇ ಸಿಗುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರರು ಹೇಳುತ್ತಿದ್ದಾರೆ.  ಹೀಗಾಗಿ ಒಂದು ಪ್ರಶ್ನೆ ಏಳುತ್ತದೆ. ಇಷ್ಟೆಲ್ಲ ಬಿಟ್ಟುಕೊಟ್ಟು ನಾವೇನು ಪಡೆಯುತ್ತಿದ್ದೇವೆ? ನಮ್ಮೆಲ್ಲ ಸಂಪನ್ಮೂಲಗಳನ್ನು ಹೀಗೆ ಧಾರೆಯೆರೆಯುವುದು ಸರಿಯೇ?

ಇವತ್ತಿನ ನಮ್ಮ ಅತಿಥಿ ಶರ್ಮಿಳಾ ಚಾವಲಿ ಅವರು ಈ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಅವರು ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ನಾಗರಿಕ ಸೇವೆಯಲ್ಲಿದ್ದು, ರೈಲ್ವೆ ಮತ್ತು ಹಣಕಾಸು ಸಚಿವಾಲಯಗಳಲ್ಲಿ ಹಾಗೂ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಮೂಲಸೌಕರ್ಯ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಮಾರ್ಟ್ ಗವರ್ನಮೆಂಟ್’ನಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ನಂತರ, ಪ್ರಸ್ತುತ ‘ಕ್ಲೈಮೇಟ್ ಪಾಲಿಸಿ ಇನಿಶಿಯೇಟಿವ್’ನ ಭಾರತೀಯ ವಿಭಾಗದಲ್ಲಿ ಸಲಹೆಗಾರರಾಗಿದ್ದಾರೆ.

ಶರ್ಮಿಳಾ ಚಾವಲಿ ಅವರೇ, ‘ದಿ ವೈರ್ ಟಾಕ್ಸ್’ಗೆ ಸ್ವಾಗತ.

ಶರ್ಮಿಳಾ ಚಾವಲಿ: ಧನ್ಯವಾದಗಳು ಸಿದ್ಧಾರ್ಥ್.

ಸಿದ್ಧಾರ್ಥ್ ಭಾಟಿಯಾ: ಮೊದಲಿಗೆ  ಅಸಲಿಗೆ ಡೇಟಾ ಸೆಂಟರ್ ಅಂದರೆ ಏನು? ಅದರಲ್ಲಿ ಏನಿರುತ್ತದೆ? ನಮಗೆ ಅರ್ಥವಾಗುವ ಹಾಗೆ ತಿಳಿಸಿಕೊಡಿ.

ಶರ್ಮಿಳಾ ಚಾವಲಿ: ತೀರಾ ಸರಳವಾಗಿ ಹೇಳಬೇಕೆಂದರೆ, ಡೇಟಾ ಸೆಂಟರ್ ಎಂಬುದು ಡಿಜಿಟಲ್ ಮಾಹಿತಿಯ ಒಂದು ಗೋದಾಮು (digital warehouse), ಅಷ್ಟೇ. ಡಿಜಿಟಲ್ ರೂಪದಲ್ಲಿ ವರ್ಗಾವಣೆಯಾಗುವ ಅಗಾಧ ಪ್ರಮಾಣದ ಡೇಟಾವನ್ನು ಸ್ವೀಕರಿಸಿ, ಅದನ್ನು ಸುರಕ್ಷಿತವಾಗಿ ಇಟ್ಟುಕೊಂಡು, ಅಗತ್ಯವಿದ್ದಾಗ ಬಳಕೆಗೆ ಒದಗಿಸುವ ಒಂದು ದೊಡ್ಡ ಗೋದಾಮು. ಇವತ್ತು ಇದನ್ನು ಮೂಲಸೌಕರ್ಯದ ಸ್ವತ್ತು (infrastructure asset) ಎಂದು ಪರಿಗಣಿಸಲಾಗುತ್ತಿದೆ.

ಮೊದಲು ಇದನ್ನು ರಿಯಲ್ ಎಸ್ಟೇಟ್ ವರ್ಗಕ್ಕೆ ಸೇರಿಸಬೇಕೇ ಎನ್ನುವ ಬಗ್ಗೆ ಚರ್ಚೆಯಿತ್ತು. ಆದರೆ ಈಗ ಸ್ಪಷ್ಟವಾಗಿ ಇದನ್ನು ಮೂಲಸೌಕರ್ಯ ಎಂದೇ ವರ್ಗೀಕರಿಸಲಾಗಿದೆ. ಪ್ರಪಂಚದಲ್ಲಿ ಡೇಟಾ ದಿನೇದಿನೆ ಹೆಚ್ಚುತ್ತಿರುವುದರಿಂದ ಇವುಗಳ ಸಂಖ್ಯೆಯೂ ಬೆಳೆಯುತ್ತಿದೆ. ದಿನವೂ ಎಷ್ಟು ಡೇಟಾ ಉತ್ಪತ್ತಿಯಾಗುತ್ತಿದೆ ಎಂದು ನೀವು ನೋಡುತ್ತಿದ್ದೀರಲ್ಲವೇ? ಹಾಗಾಗಿ, ಇದನ್ನು ಅತ್ಯಾಧುನಿಕ ತಂತ್ರಜ್ಞಾನದ ಬೃಹತ್ ಗೋದಾಮು ಎಂದುಕೊಳ್ಳಿ. ಇದಕ್ಕೆ ಅಗಾಧ ಪ್ರಮಾಣದ ವಿದ್ಯುತ್ ಬೇಕು. ಜತೆಗೆ, ಇಂದಿನ ತಂತ್ರಜ್ಞಾನದಲ್ಲಿ ಇದು ವಿಪರೀತ ಬಿಸಿಯಾಗುವುದರಿಂದ ಅದನ್ನು ತಂಪಾಗಿಸಲು ಅಪಾರ ಪ್ರಮಾಣದ ನೀರು ಬೇಕು. ಮೂಲತಃ ಡೇಟಾ ಸೆಂಟರ್ ಅಂದರೆ ಇದೇ.

ಸಿದ್ಧಾರ್ಥ್ ಭಾಟಿಯಾ: ಈ ಎಲ್ಲ ಅಂಶಗಳ ಬಗ್ಗೆ ಇನ್ನಷ್ಟು ಮಾತನಾಡೋಣ. ಆದರೆ ಭಾರತ ಸರ್ಕಾರವಾಗಲಿ ಅಥವಾ ನಮ್ಮ ರಾಜ್ಯಗಳಾಗಲಿ ಈ ಡೇಟಾ ಸೆಂಟರ್‌ಗಳನ್ನು ತರಲು ಏಕೆ ಇಷ್ಟೊಂದು ತವಕಪಡುತ್ತಿವೆ? ನೀವು ಹೇಳಿದಂತೆ ಇವು ವಿದ್ಯುತ್ ಮತ್ತು ನೀರನ್ನು ಅಪಾರವಾಗಿ ಬಳಸಿಕೊಳ್ಳುತ್ತವೆ. ಇವೆಲ್ಲಾ ಅಪರೂಪದ ನೈಸರ್ಗಿಕ ಸಂಪನ್ಮೂಲಗಳು.  ಹಾಗಿರುವಾಗ ನಾವು ಇಷ್ಟೊಂದು ಮುಗಿಬಿದ್ದು ಇವನ್ನು ಬರಮಾಡಿಕೊಳ್ಳುತ್ತಿದ್ದೇವೆ?

ಶರ್ಮಿಳಾ ಚಾವಲಿ: ಭಾರತಕ್ಕೆ ಡೇಟಾ ಸೆಂಟರ್‌ಗಳು ಮೂರು ಕಾರಣಕ್ಕೆ ಬೇಕು.

ಮೊದಲನೆಯದು ನಿಯಂತ್ರಣ ಸಂಸ್ಥೆಗಳ ಕಡ್ಡಾಯ ನಿಯಮಗಳು (regulatory requirements). ಆರ್‌ಬಿಐ, ಸೆಬಿ ಮುಂತಾದ ಸಂಸ್ಥೆಗಳು ಭಾರತದಲ್ಲಿ ಉತ್ಪತ್ತಿಯಾಗುವ ಹಣಕಾಸು ಮತ್ತು ವ್ಯವಸ್ಥೆಯ ಡೇಟಾವನ್ನು ಭಾರತದ ಗಡಿಯೊಳಗೇ ಸಂಗ್ರಹಿಸಿಡಬೇಕು ಎಂದು ಕಡ್ಡಾಯಗೊಳಿಸಿವೆ. ಉದಾಹರಣೆಗೆ, 2018ರಲ್ಲಿ ಆರ್‌ಬಿಐ ಎಲ್ಲಾ ಪಾವತಿ ವ್ಯವಸ್ಥೆಗಳ (payment systems) ಡೇಟಾವನ್ನು ಭಾರತದಲ್ಲೇ ಸಂಗ್ರಹಿಸಿಡಬೇಕೆಂದು ನಿಯಮ ಮಾಡಿತು. ವಿದೇಶಿ ವಹಿವಾಟುಗಳಿದ್ದರೆ, ವಹಿವಾಟಿನ ವಿದೇಶಿ ಭಾಗವನ್ನು ಹೊರಗೆ ಸಂಗ್ರಹಿಸಬಹುದು, ಆದರೆ ಒಂದು ದಿನದೊಳಗೆ ಅದನ್ನು ವಿದೇಶಿ ಸಿಸ್ಟಮ್‌ಗಳಿಂದ ಅಳಿಸಿ ಭಾರತಕ್ಕೆ ರವಾನಿಸಬೇಕು. ಸೆಬಿ ನಿಯಂತ್ರಿಸುವ ಸಂಸ್ಥೆಗಳೂ ತಮ್ಮ ಡೇಟಾವನ್ನು ಭಾರತದಲ್ಲೇ ಸಂಸ್ಕರಿಸಬೇಕು ಮತ್ತು ಸಂಗ್ರಹಿಸಬೇಕು. ವಿಮಾ ಪಾಲಿಸಿಗಳಿಗೂ ಐಆರ್‌ಡಿಎಐ ಇದೇ ನಿಯಮ ರೂಪಿಸಿದೆ. ಅಂದರೆ ನಿಯಂತ್ರಣದ ದೃಷ್ಟಿಯಿಂದ ಭಾರತಕ್ಕೆ ಡೇಟಾ ಸೆಂಟರ್‌ಗಳು ಅನಿವಾರ್ಯ. ನಮ್ಮ ಜನರ ಡೇಟಾ ದೇಶದ ಹೊರಗಿನ ಸೆಂಟರ್‌ಗಳಲ್ಲಿ ಇರಲು ಸಾಧ್ಯವಿಲ್ಲ.

ಎರಡನೆಯ ಕಾರಣ ಹೂಡಿಕೆ. ಡೇಟಾ ಸೆಂಟರ್ ಬಂದಾಗ ಅದರ ನಿರ್ಮಾಣಕ್ಕೆ ಭಾರಿ ಪ್ರಮಾಣದ ಹೂಡಿಕೆ ಮಾಡಬೇಕಾಗುತ್ತದೆ. ನಾನು ನನ್ನ ಲೇಖನದಲ್ಲೂ ಇದನ್ನೇ ಉಲ್ಲೇಖಿಸಿದ್ದೇನೆ—ನಿರ್ಮಾಣದ ಹಂತವನ್ನು ಬಿಟ್ಟರೆ ನಂತರದ ದಿನಗಳಲ್ಲಿ ಇದರಿಂದ ಇಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ. ಆದರೆ ಹೌದು, ವಿದೇಶಿ ಬಂಡವಾಳ ಹರಿದುಬರುತ್ತದೆ. ರಾಜ್ಯಗಳು ಪರಸ್ಪರ ಪೈಪೋಟಿ ನಡೆಸಲು ಕಾರಣವೆಂದರೆ, ಇದು ದೊಡ್ಡ ಮಟ್ಟದ ಪ್ರಚಾರ ತಂದುಕೊಡುತ್ತದೆ. ‘ವಿಶಾಖಪಟ್ಟಣದಲ್ಲಿ ಗೂಗಲ್ ಬೃಹತ್ ಹೈಪರ್-ಸ್ಕೇಲ್ ಡೇಟಾ ಸೆಂಟರ್ ಸ್ಥಾಪಿಸುತ್ತಿದೆ’ ಎಂದಾಗ ಅದು ಪತ್ರಿಕೆಗಳ ಮುಖಪುಟದ ಸುದ್ದಿಯಾಗುತ್ತದೆ. ಆದರೆ ಯಾರೂ ಪೂರ್ಣ ಚಿತ್ರಣವನ್ನು ನೋಡುವುದಿಲ್ಲ; ಕೇವಲ ಆರಂಭದ ಹೊಳಪನ್ನಷ್ಟೇ ನೋಡುತ್ತಾರೆ. ಈ ಹೂಡಿಕೆಯ ಓಟದಿಂದ ಕೊಂಚ ಭಿನ್ನ ಹಾದಿ ತುಳಿದಿರುವ ರಾಜ್ಯವೆಂದರೆ ತಮಿಳುನಾಡು. ಅದರ ಬಗ್ಗೆ ನಾವು ಮುಂದೆ ಮಾತನಾಡಬಹುದು.

ಸಿದ್ಧಾರ್ಥ್ ಭಾಟಿಯಾ: ಹೌದು, $16 ಬಿಲಿಯನ್ ಅಂದರೆ ಸಾಮಾನ್ಯ ಮೊತ್ತವಲ್ಲ. ಒಳಗಿನ ಕಥೆ ಏನೇ ಇರಲಿ, ‘$16 ಬಿಲಿಯನ್ ಹೂಡಿಕೆ ತಂದಿದ್ದೇವೆ’ ಎಂದು ಜಂಭ ಕೊಚ್ಚಿಕೊಳ್ಳಬಹುದು. ಆದರೆ ಆ $16 ಬಿಲಿಯನ್‌ನಲ್ಲಿ ನಿಜವಾಗಿ ರಾಜ್ಯಕ್ಕೆ ಮತ್ತು ಜನಸಾಮಾನ್ಯರಿಗೆ ತಲುಪುವುದು ಎಷ್ಟು?

ಶರ್ಮಿಳಾ ಚಾವಲಿ: ನನ್ನ ವಾದದ ತಿರುಳೇ ಇದು. ಯಾರೂ ಈ ಮಗ್ಗುಲನ್ನು ನೋಡುತ್ತಿಲ್ಲ. ಎಲ್ಲರೂ ‘ನಮ್ಮ ರಾಜ್ಯಕ್ಕೆ ಇವರನ್ನು ಬರುವಂತೆ ಮಾಡುವುದಕ್ಕೆ ಏನೆಲ್ಲ ರಿಯಾಯಿತಿ ಕೊಡಬಹುದು’ ಎಂದಷ್ಟೇ ಯೋಚಿಸುತ್ತಿದ್ದಾರೆ. ಆದರೆ ಪ್ರತಿಯಾಗಿ ಅವರ ಕಡೆಯಿಂದ ನಾವು ಯಾವ ಬದ್ಧತೆಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಯೋಚಿಸುತ್ತಿಲ್ಲ. ನಾವು ಅವರಿಗೆ 20-30 ವರ್ಷಗಳ ತೆರಿಗೆ ವಿನಾಯಿತಿ ನೀಡುತ್ತೇವೆ, ವಿದ್ಯುತ್ ಸಂಪರ್ಕದಲ್ಲಿ ಮೊದಲ ಆದ್ಯತೆ ಕೊಡುತ್ತೇವೆ ಎಂದ ಮೇಲೆ, ಅವರಿಂದಲೂ ನಮಗೆ ಕೆಲವು ಖಾತರಿಗಳು ಬೇಕಲ್ಲವೇ?

ನಾನು ಲೇಖನದಲ್ಲಿ ಬರೆದಂತೆ, ಕೆಲವು ದೇಶಗಳಲ್ಲಿ ಸರ್ಕಾರಗಳು ಬಿಟ್ಟುಕೊಟ್ಟ ತೆರಿಗೆಯ ಮೊತ್ತಕ್ಕೆ ಸಮನಾದ ಪಾವತಿಯನ್ನು ಕೇಳುತ್ತವೆ. ಇನ್ನು ಕೆಲವು ಕಡೆಗಳಲ್ಲಿ, ‘ಸಾಮಾಜಿಕ ಸೇವೆಗಳು, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಗೆ ಇಂತಿಷ್ಟು ಹಣ ನೀಡಬೇಕು’ ಎಂದು ಷರತ್ತು ವಿಧಿಸುತ್ತವೆ. ಭಾರತದಲ್ಲಿ ನಾವು ಅಂಥದ್ದೇನನ್ನೂ ಕೇಳುತ್ತಿಲ್ಲ. ಬಹುಶಃ ಇಂಥ ಮಾತುಕತೆಗಳಿಗೆ ನಮ್ಮಲ್ಲಿನ್ನೂ ಕಾಲ ಪಕ್ವವಾಗಿಲ್ಲವೇನೋ. ಆದರೆ ನಾವು ಕೇಳದಿದ್ದರೆ ಚೌಕಾಸಿ ಮಾಡುವುದಾದರೂ ಹೇಗೆ? ಭಾರತಕ್ಕೆ ಬರಲು ಬೃಹತ್ ಕಂಪನಿಗಳೇನೂ ಕಮ್ಮಿ ಇಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ಡೇಟಾ ಸೃಷ್ಟಿಸುವ ಮತ್ತು ಬಳಸುವ ದೇಶಗಳಲ್ಲಿ ನಾವೂ ಒಬ್ಬರು. ಅವರಿಗೆ ಇಲ್ಲಿಗೆ ಬರುವುದು ಅನಿವಾರ್ಯ.

ಸಿದ್ಧಾರ್ಥ್ ಭಾಟಿಯಾ: ಡೇಟಾವನ್ನು ದೇಶದಲ್ಲೇ ಸಂಗ್ರಹಿಸಿಡಬೇಕು ಎಂಬ ನಿಯಮವಿದೆ ಎಂದಿಟ್ಟುಕೊಳ್ಳೋಣ. ಉದಾಹರಣೆಗೆ ನಾನು ಆನ್‌ಲೈನ್‌ನಲ್ಲಿ ಏನು ಶಾಪಿಂಗ್ ಮಾಡುತ್ತೇನೆ, ರಿಯಲ್ ಎಸ್ಟೇಟ್ ಬಗ್ಗೆ ಏನು ಹುಡುಕುತ್ತೇನೆ, ಸಾಮಾನ್ಯವಾಗಿ ಇಂಟರ್ನೆಟ್‌ನಲ್ಲಿ ಏನೆಲ್ಲ ಓದುತ್ತೇನೆ—ಇವೆಲ್ಲವೂ ವಿವಿಧ ಆ್ಯಪ್‌ಗಳ ಮೂಲಕ ಸಂಗ್ರಹವಾಗಿ ಭಾರತದ ಸರ್ವರ್‌ಗಳಲ್ಲೇ ಇರುತ್ತವೆ. ಈ ಡೇಟಾವನ್ನು ಯಾವುದಕ್ಕೆ ಬಳಸಲಾಗುತ್ತದೆ?

ಶರ್ಮಿಳಾ ಚಾವಲಿ: ಅದು ಸಂದರ್ಭಕ್ಕೆ ತಕ್ಕಂತೆ ಇರುತ್ತದೆ. ಖಾಸಗಿ ಡೇಟಾ ಸೆಂಟರ್ ಮಾಲೀಕರ ಬಳಿ ಇರುವ ಮಾಹಿತಿಯನ್ನು ಉದಾಹರಣೆಗೆ ಜಾಹೀರಾತುಗಳ ಆದಾಯ ಹೆಚ್ಚಿಸಿಕೊಳ್ಳಲು ಬಳಸಬಹುದು.

ಸಿದ್ಧಾರ್ಥ್ ಭಾಟಿಯಾ: ಒಂದು ನಿಮಿಷ, ಅದು ಅರ್ಥವಾಯಿತು. ಆದರೆ ಆ ಡೇಟಾ ಕಡ್ಡಾಯ ನಿಯಮದ ಕಾರಣದಿಂದ ಭಾರತದ ಒಳಗೇ ಇರುತ್ತದೆಯೇ ಅಥವಾ ದೇಶದ ಹೊರಗಿನವರಿಗೂ ಸಿಗುತ್ತದೆಯೇ?

ಶರ್ಮಿಳಾ ಚಾವಲಿ: ನಿಮ್ಮ ಪ್ರಶ್ನೆ ಅರ್ಥವಾಯಿತು. ಸರ್ಕಾರ ನಿಯಮ ರೂಪಿಸಿ ಇಲ್ಲಿ ಸಂಗ್ರಹಿಸುವಂತೆ ಹೇಳಿರುವ ಡೇಟಾ ದೇಶದೊಳಗಿನ ಬಳಕೆಗಾಗಿ ಮಾತ್ರ. ಉದಾಹರಣೆಗೆ ಆರ್‌ಬಿಐ ಹೇಳುವ ಪಾವತಿ ಡೇಟಾ ನಿಯಂತ್ರಕರಿಗೆ ಬೇಕು, ಅದನ್ನು ಹೊರಗಿನವರಿಗೆ ಮಾರುವುದಕ್ಕಲ್ಲ.

ಅದೇ ರೀತಿ ವಿಮಾ ಪಾಲಿಸಿಗಳು ಮತ್ತು ಕ್ಲೈಮ್‌ಗಳ ವಿವರಗಳು ಇಲ್ಲಿನ ಡೇಟಾ ಸೆಂಟರ್‌ಗಳಲ್ಲೇ ಇರಬೇಕು; ಅದು ವಿಮಾ ಸಂಸ್ಥೆಗಳ ಬಳಕೆಗೆ ಮಾತ್ರ. ಅಂದರೆ, ಭಾರತೀಯ ರೈಲ್ವೆಯಿಂದ ಪ್ರಯಾಣಿಕರ ಡೇಟಾವನ್ನು ಗೂಗಲ್ ಎತ್ತಿಕೊಂಡು, ಅವರ ಆಹಾರದ ಇಷ್ಟಕಷ್ಟಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಸರ್ಚ್ ಅಲ್ಗಾರಿದಂ ಸಿದ್ಧಪಡಿಸುತ್ತದೆ ಎನ್ನುವ ರೀತಿಯ ಉದಾಹರಣೆ ಇದಲ್ಲ. ನಿಯಮಗಳ ಮೂಲಕ ಇಲ್ಲಿ ಉಳಿಸಿಕೊಳ್ಳುವ ಸರ್ಕಾರದ ಡೇಟಾ ಕೇವಲ ನಿಯಂತ್ರಕ ಸಂಸ್ಥೆಗಳಿಗೆ ಮಾತ್ರ ಸೀಮಿತ.

ಸಿದ್ಧಾರ್ಥ್ ಭಾಟಿಯಾ: ಹಾಗಾದರೆ ಈ ಡೇಟಾ ಯಾವುದೇ ಕಾರಣಕ್ಕೂ ಹೊರಗೆ ಸೋರಿಕೆಯಾಗುವುದಿಲ್ಲ ಎಂದು ನಾವು ಸಂಪೂರ್ಣ ನಂಬಬಹುದೇ?

ಶರ್ಮಿಳಾ ಚಾವಲಿ: ನಾನೇನೂ ಸೈಬರ್ ಭದ್ರತಾ ತಜ್ಞೆಯಲ್ಲ. ಡೇಟಾ ಸೋರಿಕೆಯಾಗುವ ಬಗ್ಗೆ ಪತ್ರಿಕೆಗಳಲ್ಲಿ ನಾವು ಆಗಾಗ ನೋಡುತ್ತಲೇ ಇರುತ್ತೇವೆ. ನಿಮ್ಮ ಮತ್ತು ನನ್ನ ವೈಯಕ್ತಿಕ ಮಾಹಿತಿ ಇಂಟರ್ನೆಟ್‌ನಲ್ಲಿದೆ, ಅದು ಸುರಕ್ಷಿತವಾಗಿರಲಿ ಎಂದೇ ನಾವೆಲ್ಲ ಆಶಿಸುತ್ತೇವೆ. ಆದರೆ ಅಲ್ಲಿ ನಿಜವಾದ ಅಪಾಯಗಳಂತೂ ಇದ್ದೇ ಇವೆ.

ಸಿದ್ಧಾರ್ಥ್ ಭಾಟಿಯಾ: ಈಗ ನಾನು ಫೇಸ್‌ಬುಕ್ ಬಳಸುತ್ತಿದ್ದರೆ, ಆ ಮಾಹಿತಿಯನ್ನು ಭಾರತದಲ್ಲೇ ಇಡಬೇಕೆಂಬ ನಿಯಮ ಫೇಸ್‌ಬುಕ್‌ಗೂ ಅನ್ವಯಿಸುತ್ತದೆಯೇ, ಅಥವಾ ಅವರು ಅದನ್ನು ಅಮೆರಿಕದ ಪ್ರಧಾನ ಕಚೇರಿಗೆ ಕಳುಹಿಸಿ ತಮಗೆ ಬೇಕಾದಂತೆ ಬಳಸಿಕೊಳ್ಳಬಹುದೇ?

ಶರ್ಮಿಳಾ ಚಾವಲಿ: ಇಲ್ಲಿ ಸಣ್ಣದೊಂದು ಮುಖ್ಯವಾದ ವ್ಯತ್ಯಾಸವಿದೆ. ಇದನ್ನು ನಾನು ‘ಸಾರ್ವಭೌಮತೆಯ ಪ್ರಶ್ನೆ’ ಎನ್ನುತ್ತೇನೆ. ಸುಮಾರು ಆರು-ಏಳು ವರ್ಷಗಳ ಹಿಂದೆ ಅಮೆರಿಕ ‘ಕ್ಲೌಡ್ ಆಕ್ಟ್’  ಎಂಬ ಕಾಯ್ದೆ ತಂದಿತು. ಇದರ ಪ್ರಕಾರ, ಅಮೆರಿಕದ ಕಂಪನಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅಮೆರಿಕ ಸರ್ಕಾರ ಕೇಳಿದಾಗ ಕೋರ್ಟ್ ಸಮನ್ಸ್ ಇಲ್ಲದೆಯೂ ಡೇಟಾವನ್ನು ಒಪ್ಪಿಸಬೇಕಾಗುತ್ತದೆ. ಭಾರತದಲ್ಲಿ ಕುಳಿತಿರುವ ನಮ್ಮಂತಹ ಜನರಿಗೆ ಇದು ನಿಜಕ್ಕೂ ಆತಂಕಕಾರಿ ಸಂಗತಿ. ನಿಮ್ಮ ಡೇಟಾ ಫೇಸ್‌ಬುಕ್ ಅಥವಾ ಮೆಟಾದಲ್ಲಿದ್ದು, ಅಮೆರಿಕ ಸರ್ಕಾರ ಅದನ್ನು ಕೇಳಿದರೆ, ಆ ಕಂಪನಿಗಳು ಅದನ್ನು ಕೊಡಲೇಬೇಕಾಗುತ್ತದೆ.

ನಿಮಗೆ ನೆನಪಿರಬಹುದು, ಅಮೆರಿಕದ ಸೆನೆಟ್‌ನಲ್ಲಿ ಟಿಕ್‌ಟಾಕ್ ವಿಚಾರಣೆಯಾದಾಗ ಒಬ್ಬ ಸೆನೆಟರ್, ‘ನಾನು ಸಿಂಗಾಪುರದವನು’ ಎಂದು ಸಿಇಒಗೆ ಹೇಳಿದ ಘಟನೆ ನಡೆಯಿತಲ್ಲವೇ? ಅಲ್ಲಿ ಅವರು ಟಿಕ್‌ಟಾಕ್ ಸಿಇಒಗೆ ಕೇಳಿದ್ದೂ ಇದೇ ಪ್ರಶ್ನೆಯನ್ನು: ‘ಈ ಡೇಟಾ ಚೀನಾಕ್ಕೆ ಹೋಗುತ್ತದೆಯೇ?’ ಎಂದು. ಅಮೆರಿಕದ ಕ್ಲೌಡ್ ಆಕ್ಟ್ ನಮ್ಮ ಪಾಲಿಗೆ ಉಲ್ಟಾ ಆಗಿ ಅದೇ ತಲೆನೋವನ್ನು ತಂದಿಡುತ್ತದೆ.

ಸಿದ್ಧಾರ್ಥ್ ಭಾಟಿಯಾ: ಅಂದರೆ, ವಾಣಿಜ್ಯ ಲಾಭದ ಹೊರತಾಗಿಯೂ, ಉದಾಹರಣೆಗೆ ನಾನು ಫೇಸ್‌ಬುಕ್ ಖಾತೆಯೇ ಇಲ್ಲ ಎಂದು ಸುಳ್ಳು ಹೇಳಿದರೂ ಅವರು ತಕ್ಷಣ ಪತ್ತೆ ಹಚ್ಚಿಬಿಡಬಹುದು.

ಶರ್ಮಿಳಾ ಚಾವಲಿ: ಅಷ್ಟೇ ಅಲ್ಲ, ನಾವು ಡಿಲೀಟ್ ಮಾಡಿದ ವಾಟ್ಸಾಪ್ ಸಂದೇಶಗಳನ್ನೂ ಅವರು ಪಡೆದುಕೊಳ್ಳಬಹುದು ಎಂದು ಕೇಳಿದ್ದೇನೆ. ಅದರ ತಾಂತ್ರಿಕ ವಿವರ ನನಗೆ ಗೊತ್ತಿಲ್ಲ, ಆದರೆ ಹೌದು, ಸಾಧ್ಯತೆಯಂತೂ ಇದೆ.

ಸಿದ್ಧಾರ್ಥ್ ಭಾಟಿಯಾ: ಮತ್ತೆ ಡೇಟಾ ಸೆಂಟರ್‌ಗಳ ವಿಷಯಕ್ಕೆ ಬರೋಣ. ರಾಜ್ಯಗಳು ಇಷ್ಟೊಂದು ರಿಯಾಯಿತಿಗಳನ್ನು ಏಕೆ ನೀಡುತ್ತಿವೆ ಎಂದು ವಿವರಿಸಿದಿರಿ. ಆದರೆ ನಿಮ್ಮ ಲೇಖನದ ಪ್ರಮುಖ ವಾದವೆಂದರೆ, ಈ ಒಪ್ಪಂದದಿಂದ ರಾಜ್ಯಗಳಿಗೆ ತಕ್ಕ ಲಾಭ ಸಿಗುತ್ತಿಲ್ಲ ಎಂಬುದು. ನಾವೆಲ್ಲ ಸವಲತ್ತುಗಳನ್ನು ನೀಡುತ್ತೇವೆ, ಆದರೆ ಪ್ರತಿಯಾಗಿ ನಮಗೆ ಏನು ಸಿಗುತ್ತಿದೆ? ಇದು ಏಕೆ ಗಂಭೀರ ವಿಷಯ ಎಂದು ವಿವರಿಸಿ.

ಶರ್ಮಿಳಾ ಚಾವಲಿ: ನಾವು ಇಲ್ಲಿ ಮೂರು-ನಾಲ್ಕು ಮುಖ್ಯ ಅಂಶಗಳನ್ನು ಗಮನಿಸಬೇಕು.

ಮೊದಲನೆಯದು ನೈಸರ್ಗಿಕ ಸಂಪನ್ಮೂಲಗಳು. ಒಂದು ರಾಜ್ಯ ಇನ್ನೊಂದು ರಾಜ್ಯಕ್ಕಿಂತ ಹೆಚ್ಚು ಹೂಡಿಕೆ ಸೆಳೆಯಬೇಕೆಂದು ಪೈಪೋಟಿಗೆ ಬಿದ್ದು ಸಬ್ಸಿಡಿ, ರಿಯಾಯಿತಿಗಳನ್ನು ಘೋಷಿಸಿದಾಗ, ತಕ್ಷಣವೇ ಹೊಡೆತ ಬೀಳುವುದು ನೀರು ಮತ್ತು ಭೂಮಿಯಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ. ಇವುಗಳಿಗೆ ದೀರ್ಘಾವಧಿ ಗುತ್ತಿಗೆ ಅಥವಾ ನೇರ ಮಾರಾಟದ ಮೂಲಕ ಭಾರಿ ಪ್ರಮಾಣದ ಜಮೀನು ನೀಡಬೇಕಾಗುತ್ತದೆ. ಜತೆಗೆ ವಿದ್ಯುತ್ ಗ್ರಿಡ್ ಮೇಲೆ ವಿಪರೀತ ಒತ್ತಡ ಬೀಳುತ್ತದೆ; ಏಕೆಂದರೆ ಇವು ಅಗಾಧ ಪ್ರಮಾಣದ ವಿದ್ಯುತ್ ಬಳಸುತ್ತವೆ. ಇಂದು ಪತ್ರಿಕೆಯೊಂದರಲ್ಲಿ ಓದುತ್ತಿದ್ದೆ—ಡೇಟಾ ಸೆಂಟರ್‌ಗಳಿಗೆ ಬೇಕಾಗುವ ಅಗಾಧ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಚೀನಾ ಈಗ fusion technology ಸಂಶೋಧನೆಗೆ ದೊಡ್ಡ ಮಟ್ಟದಲ್ಲಿ ಇಳಿದಿದೆ. ಏಕೆಂದರೆ ಕೊನೆಗೆ ಅಣುಶಕ್ತಿಯೇ ಗತಿ ಎಂಬುದು ಅವರಿಗೆ ಗೊತ್ತಿದೆ.

ಎರಡನೆಯ ವಿಷಯವೆಂದರೆ ಉದ್ಯೋಗ. ಸಾಮಾನ್ಯ ಕೈಗಾರಿಕೆಗಳಿಗೆ ವಿದೇಶಿ ಬಂಡವಾಳ ಬಂದಾಗ ಕಾರ್ಖಾನೆಗಳು ಆರಂಭವಾಗುತ್ತವೆ, ಪೂರಕ ಸಣ್ಣ ಕೈಗಾರಿಕೆಗಳು ಬೆಳೆಯುತ್ತವೆ, ಸ್ಥಳೀಯರಿಗೆ ಸಾಕಷ್ಟು ಕೆಲಸ ಸಿಗುತ್ತದೆ. ಆದರೆ ಎಕರೆಗಟ್ಟಲೆ ಜಾಗದಲ್ಲಿ ಡೇಟಾ ಸೆಂಟರ್ ಸ್ಥಾಪಿಸಿದರೆ ರಾಜ್ಯಕ್ಕೆ ಸಿಗುವುದೇನು? ನಾವು ವಿದ್ಯುತ್ ಮತ್ತು ನೀರು ಕೊಡುತ್ತೇವೆ. ಪ್ರಸ್ತುತ ತಂತ್ರಜ್ಞಾನದಲ್ಲಿ ಸರ್ವರ್‌ಗಳನ್ನು ತಂಪಾಗಿಡಲು ನೀರೇ ಮುಖ್ಯ ಆಧಾರ. ಮುಂದೆ ಬೇರೆ ತಂತ್ರಜ್ಞಾನ ಬರಬಹುದೇನೋ, ಆದರೆ ಸದ್ಯಕ್ಕಂತೂ ನೀರು ಮತ್ತು ವಿದ್ಯುತ್ ಬೇಕೇ ಬೇಕು.

ಡೇಟಾ ಸೆಂಟರ್‌ಗಳು ನೀಡುವ ಉದ್ಯೋಗ ಸ್ಥಳೀಯರಿಗೆ ದಕ್ಕುವುದು ಕಷ್ಟ. ಕಟ್ಟಡ ಕಟ್ಟುವ ಹಂತದಲ್ಲೂ ನುರಿತ ಕಾರ್ಮಿಕರು ಹೊರಗಿನಿಂದಲೇ ಬರುತ್ತಾರೆ. ಒಂದು-ಎರಡು ಸಾವಿರ ಜನ ಕೆಲಸಕ್ಕೆ ಬಂದರೂ, ಕಟ್ಟಡ ಮುಗಿದ ತಕ್ಷಣ ಹೊರಟುಹೋಗುತ್ತಾರೆ. ಇವುಗಳನ್ನು ಸ್ಥಾಪಿಸಿದ ಊರಿನ ಸ್ಥಳೀಯ ಸಮುದಾಯಕ್ಕೆ ದೀರ್ಘಾವಧಿಯ ಯಾವುದೇ ನೇರ ಪ್ರಯೋಜನ ಸಿಗುವುದಿಲ್ಲ. ಎರಡು ದಿನಗಳ ಹಿಂದಷ್ಟೇ ಮುಂಬೈನ ಥಾಣೆಯಲ್ಲಿ ಇಂಥದ್ದೊಂದು ಕೇಂದ್ರ ಬರುತ್ತಿರುವುದಕ್ಕೆ ವಿರೋಧ ವ್ಯಕ್ತವಾಯಿತು. ಅದು ಈಗಾಗಲೇ ಜನನಿಬಿಡ ಪ್ರದೇಶ. ಅಲ್ಲಿ ಇಂತಹ ಸಂಪನ್ಮೂಲಗಳ ಒತ್ತಡ ಹೇಗಿರಬಹುದು ಊಹಿಸಿ.

ಡೇಟಾ ಸೆಂಟರ್‌ಗಳು ಭರ್ಜರಿ ಆದಾಯಗಳಿಸುವ ಉದ್ಯಮ ಮಾದರಿಯನ್ನು ಹೊಂದಿರುವಾಗ, ರಾಜ್ಯ ಸರ್ಕಾರಗಳು ಅವರ ಲಾಭದಲ್ಲಿ ಸಾರ್ವಜನಿಕರಿಗೆ ಸೂಕ್ತ ಅನುಕೂಲ ಮಾಡಿಕೊಡಬೇಕೆಂಬ ಷರತ್ತನ್ನು ಏಕೆ ವಿಧಿಸುತ್ತಿಲ್ಲ? ‘ನಾವು ಏನು ರಿಯಾಯಿತಿ ಕೊಡಬಹುದು’ ಎಂದಷ್ಟೇ ಸರ್ಕಾರಗಳು ನೋಡುತ್ತಿವೆಯೇ ಹೊರತು, ‘ನಮಗೆ ಪ್ರತಿಯಾಗಿ ಏನು ಲಾಭ ತಂದುಕೊಡುತ್ತೀರಿ’ ಎಂದು ಕೇಳುತ್ತಿಲ್ಲ. ಇದು ಕೇವಲ ನೀತಿಯ ಟೀಕೆಯಲ್ಲ, ಸಾಮಾನ್ಯವಾಗಿ ನಾವು ಹೂಡಿಕೆಯನ್ನು ಆಕರ್ಷಿಸುವಾಗ ಅನುಸರಿಸುವ ಹಳೆಯ ಪದ್ಧತಿ. ಆದರೆ ಡೇಟಾ ಸೆಂಟರ್‌ಗಳ ವಿಷಯದಲ್ಲಿ ನಾವು ಇದಕ್ಕಿಂತ ಭಿನ್ನವಾಗಿ ಯೋಚಿಸಬೇಕು.

ಸಿದ್ಧಾರ್ಥ್ ಭಾಟಿಯಾ: ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸ್ವರೂಪವೇನು? ಅಲ್ಲಿನ ಹೋರಾಟಗಾರರು ಪರಿಸರ ಖಾತರಿಗಳನ್ನು ಕೇಳುತ್ತಿದ್ದಾರೆ ಎಂದು ತಿಳಿದಿದೆ. ವಾಸ್ತವದಲ್ಲಿ ಅಲ್ಲಿ ಏನಾಗುತ್ತಿದೆ?

ಶರ್ಮಿಳಾ ಚಾವಲಿ: ವಿಶಾಖಪಟ್ಟಣದ ಡೇಟಾ ಸೆಂಟರ್ ಬರುತ್ತಿರುವುದು ಒಂದು ವನ್ಯಜೀವಿ ಮತ್ತು ನೈಸರ್ಗಿಕ ಸಂರಕ್ಷಿತ ಪ್ರದೇಶಕ್ಕೆ ತಾಗಿಕೊಂಡೇ ಇರುವ ಜಾಗದಲ್ಲಿ. ಯೋಜನೆಗೆ ಅನುಮತಿ ನೀಡುವ ಮುನ್ನ ಅಗತ್ಯವಿದ್ದ ಪರಿಸರ ತಪಾಸಣೆಗಳನ್ನು ಸರಿಯಾಗಿ ನಡೆಸಿಲ್ಲ ಎಂಬುದು ಅಲ್ಲಿನ ಜನರ ಆತಂಕ. ಸರ್ಕಾರದ ವಾದ ಪೊಳ್ಳಾಗಿದೆ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರವೇನೋ ಪರಿಸರ ಮಾನದಂಡಗಳನ್ನು ಪಾಲಿಸಲಾಗಿದೆ ಎಂದಿತ್ತು. ಆದರೆ ಹೈಕೋರ್ಟ್ ಹೇಳಿದ್ದೆಂದರೆ -ಸರ್ಕಾರ ಹೇಳುತ್ತಿರುವ ಪರಿಸರ ಮಾನದಂಡಗಳು ಇರುವುದು ಸಾಮಾನ್ಯವಾಗಿ ಉತ್ಪಾದನಾ ಕಾರ್ಖಾನೆಗಳಿಗೆ  ಮಾತ್ರ. ಡೇಟಾ ಸೆಂಟರ್‌ಗಳಂತಹ ಬೃಹತ್ ಸೌಲಭ್ಯಗಳು ಈ ಮಾನದಂಡಗಳ ವ್ಯಾಪ್ತಿಗೆ ಬರುವುದೇ ಇಲ್ಲ.

ಹಾಗಾಗಿ ಸರ್ಕಾರ ಈ ಕೊರತೆಯನ್ನು ಸರಿಪಡಿಸಬೇಕು ಎಂದು ಕೋರ್ಟ್ ಹೇಳಿ, ಸದ್ಯಕ್ಕೆ ಕಾಮಗಾರಿಯನ್ನು ತಡೆಹಿಡಿದಿದೆ. ಆಂಧ್ರಪ್ರದೇಶ ಸರ್ಕಾರ ಮುಂದೆ ಏನು ಮಾಡುತ್ತದೆ ಎಂದು ನೋಡಬೇಕಿದೆ. ಆದರೆ ಹೈಕೋರ್ಟ್ ಎತ್ತಿರುವ ಅಂಶ ಅತ್ಯಂತ ಸಮಂಜಸವಾಗಿದೆ. ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಹೀರಿಕೊಂಡು, ವಿಪರೀತ ಶಾಖವನ್ನು ಹೊರಸೂಸುವ ಮತ್ತು ಸಂರಕ್ಷಿತ ಪ್ರದೇಶದ ಪಕ್ಕದಲ್ಲೇ ನಿರ್ಮಾಣವಾಗುವ  ಡೇಟಾ ಸೆಂಟರ್‌ಗೆ ಸೂಕ್ತವಾದ ಪರಿಸರ ನಿಯಮಾವಳಿಗಳೇ ನಮ್ಮಲ್ಲಿಲ್ಲ. ಇವುಗಳಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಯಾವ ಮಾನದಂಡಗಳು ಬೇಕು ಎಂಬುದೇ ಈಗಿನ ನಿಜವಾದ  ಚರ್ಚೆ.

ಸಿದ್ಧಾರ್ಥ್ ಭಾಟಿಯಾ: ಇದರಿಂದ ಸಂಭವಿಸಬಹುದಾದ ಹಾನಿ ಎಂಥದ್ದು?

ಶರ್ಮಿಳಾ ಚಾವಲಿ: ಮೊದಲನೆಯ ಆತಂಕ ನೀರು. ವೈಜಾಗ್ ಈಗಾಗಲೇ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಪ್ರದೇಶ. ನೀರಿನ ಬಳಕೆಯನ್ನು ಹೇಗೆ ಮಿತಿಗೊಳಿಸಲಾಗುತ್ತದೆ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಸ್ಪಷ್ಟ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕೇವಲ ಬಾಯಿಮಾತಿನ ಹೇಳಿಕೆಗಳನ್ನು ಕೇಳಿದ್ದೇವೆ, ಆದರೆ ವಾಸ್ತವಲ್ಲಿ ಅಂತಹ ಬಲವಾದ ಯೋಜನೆಯಗಳ್ಯಾವುವು ನಮಗೆ ಕಂಡಿಲ್ಲ. ಕೇವಲ ಭರವಸೆ ಕೊಟ್ಟರೆ ಸಾಲದು; ನೀರು ಬಳಕೆಯ ದತ್ತಾಂಶವನ್ನು ಪ್ರಕಟಿಸಬೇಕು, ನಿರಂತರವಾಗಿ ಪರಿಶೀಲಿಸಬೇಕು. ಇಲ್ಲದಿದ್ದರೆ ಮುಂದಿನ 20-30 ವರ್ಷಗಳಲ್ಲಿ ಅಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯುವುದಿಲ್ಲ. ಆರಂಭದಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಿ, ನಂತರ ಅದನ್ನು ನಿರ್ಲಕ್ಷಿಸುವುದು  ತುಂಬಾ ಸುಲಭ.

ಸಿದ್ಧಾರ್ಥ್ ಭಾಟಿಯಾ: ಭಾರತ ಅಳವಡಿಸಿಕೊಳ್ಳಬಹುದಾದ ಜಾಗತಿಕ ಮಾದರಿಗಳ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ. ಉದಾಹರಣೆಗೆ, ಮಲೇಷ್ಯಾದ ಜೊಹೋರ್  ಮಾದರಿ ಬಗ್ಗೆ ಹೇಳಿ.

ಶರ್ಮಿಳಾ ಚಾವಲಿ: ಮಲೇಷ್ಯಾ ನಮಗಿಂತ ಹೆಚ್ಚು ಪರಿಪಕ್ವವಾದ ಹೆಜ್ಜೆಯನ್ನಿಟ್ಟಿದೆ. ಅವರೂ ಡೇಟಾ ಸೆಂಟರ್‌ಗಳಿಗಾಗಿ ಸ್ಪರ್ಧಿಸುತ್ತಿದ್ದರು. ಆದರೆ ಅವರು ‘ಗ್ರೀನ್ ಪಾಥ್‌ವೇ’ ಎಂಬ ಚಾಣಾಕ್ಷ ವ್ಯವಸ್ಥೆ ರೂಪಿಸಿದರು. ಅಲ್ಲಿ ಅವರು ನೀಡಿದ ಮೊದಲ ಆಫರ್ ಎಂದರೆ ವೇಗ. ಸಾಮಾನ್ಯವಾಗಿ ಮಲೇಷ್ಯಾದಲ್ಲಿ ಗ್ರಿಡ್ ಸಂಪರ್ಕ ಪಡೆಯಲು 3 ವರ್ಷ ಬೇಕಾಗುತ್ತಿತ್ತು. ಆದರೆ ಗ್ರೀನ್ ಪಾಥ್‌ವೇ ಅಡಿಯಲ್ಲಿ ಕೇವಲ 12 ತಿಂಗಳೊಳಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದರು. ಈಗಾಗಲೇ 33 ಸೆಂಟರ್‌ಗಳಿಗೆ 12 ತಿಂಗಳೊಳಗೆ ಅನುಮತಿ ಕೊಟ್ಟಿದ್ದಾರೆ. ಇದು ಹೂಡಿಕೆದಾರರಿಗೆ ಅತ್ಯಂತ ಆಕರ್ಷಕ.

ಆದರೆ, ವೇಗ ನೀಡಿದ ಮಲೇಷ್ಯಾ ಸುಮ್ಮನೆ ಕೂರಲಿಲ್ಲ; ಜತೆಗೆ ಕಠಿಣ ಷರತ್ತುಗಳನ್ನೂ ವಿಧಿಸಿತು. ಡೇಟಾ ಸೆಂಟರ್‌ಗಳಲ್ಲಿ ಟೈಯರ್ 1, ಟೈಯರ್ 2, ಟೈಯರ್ 3, ಟೈಯರ್ 4 ಎಂಬ ನಾಲ್ಕು ಹಂತಗಳಿವೆ. ಕೆಳ ಹಂತದ ಟೈಯರ್ 1 ಮತ್ತು 2 ಸೆಂಟರ್‌ಗಳು ದಿನಕ್ಕೆ ಒಲಿಂಪಿಕ್ ಗಾತ್ರದ 20 ಈಜುಕೊಳಗಳನ್ನು ತುಂಬಿಸುವಷ್ಟು ಅಗಾಧ ನೀರನ್ನು ಬಳಸುತ್ತವೆ! ಮಲೇಷ್ಯಾ ಸರ್ಕಾರ, ‘ನಮಗೆ ಅಂತಹ ಹಳೆಯ ತಂತ್ರಜ್ಞಾನದ ಸೆಂಟರ್‌ಗಳು ಬೇಡ, ನಮಗೆ ಮೇಲ್ಮಟ್ಟದ ಸುಧಾರಿತ ಸೆಂಟರ್‌ಗಳೇ ಬೇಕು’ ಎಂದು ಖಡಾಖಂಡಿತವಾಗಿ ಹೇಳಿತು.

ಡೇಟಾ ಸೆಂಟರ್‌ಗಳಲ್ಲಿ ವಿದ್ಯುತ್ ಒಂದು ಕ್ಷಣವೂ ಕಡಿತವಾಗಬಾರದು ಎಂಬ ಕಾರಣಕ್ಕೆ ‘2N ರಿಡಂಡೆನ್ಸಿ’ ಎಂಬ ಎರಡು ಪರ್ಯಾಯ ವಿದ್ಯುತ್ ಲೈನ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಹಳೆಯ ಸೆಂಟರ್‌ಗಳಿಗೆ ಈ ಭಾರಿ ವ್ಯವಸ್ಥೆ ಬೇಕು. ಆದರೆ ಅತ್ಯಾಧುನಿಕ ಸೆಂಟರ್‌ಗಳಿಗೆ ಇದು ಅಷ್ಟಾಗಿ ಬೇಕಿಲ್ಲ; ಎಐ ತಂತ್ರಜ್ಞಾನವೂ ಈ ಹೊರೆಯನ್ನು ತಗ್ಗಿಸುತ್ತಿದೆ. ಮಲೇಷ್ಯಾ ಇಂತಹ ಸುಧಾರಿತ ಕೇಂದ್ರಗಳಿಗೆ ಮಾತ್ರ ಅವಕಾಶ ನೀಡುತ್ತಿದೆ.

ಅಷ್ಟೇ ಅಲ್ಲ, ನೀರಿನ ಮರುಬಳಕೆಯ ‘ಕ್ಲೋಸ್ಡ್-ಲೂಪ್’ ವ್ಯವಸ್ಥೆಯನ್ನು ಅವರು ಕಡ್ಡಾಯಗೊಳಿಸಿದ್ದಾರೆ. ಅಲ್ಲಿನ ಎರಡು ರಾಜ್ಯಗಳಲ್ಲಿ ಒಳಚರಂಡಿ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಇದು ನಡೆಯುತ್ತಿರುವುದು ಜೊಹೋರ್ ರಾಜ್ಯದಲ್ಲಿ. ಮಲೇಷ್ಯಾದ ಸುಮಾರು 80% ಡೇಟಾ ಸೆಂಟರ್‌ಗಳು ಇರುವುದು ಅಲ್ಲೇ. ಜೊಹೋರ್ ಸಿಂಗಾಪುರಕ್ಕೂ ನೀರು ಸರಬರಾಜು ಮಾಡುವುದರಿಂದ ಅಲ್ಲಿ ಈಗಾಗಲೇ ನೀರಿನ ಅಭಾವವಿದೆ. ಹಾಗಾಗಿ ಈ ನಿಯಮಗಳು ಅತ್ಯಂತ ಜಾಣ್ಮೆಯ ನಿರ್ಧಾರವಾಗಿದ್ದು, ಹೂಡಿಕೆದಾರರೇ ಈ ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ.

ಇನ್ನು ಅಮೆರಿಕದ ಇಲಿನಾಯ್ ರಾಜ್ಯದ ಬಗ್ಗೆಯೂ ನಾನು ಬರೆದಿದ್ದೇನೆ. ಬ್ರಿಟನ್‌ನಲ್ಲಿ ಗ್ರಿಡ್ ಸಂಪರ್ಕಕ್ಕಾಗಿ ಬಿಡ್ಡಿಂಗ್ ನಡೆಸುತ್ತಾರೆ; ಅದರಿಂದ ಬರುವ ಹಣವನ್ನು ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ಬಳಸಲಾಗುತ್ತದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷರು ಒಕ್ಕೂಟ ಸರ್ಕಾರದ ಜಮೀನಿನಲ್ಲಿ ಡೇಟಾ ಸೆಂಟರ್ ಸ್ಥಾಪಿಸುವುದಾಗಿ ಹೇಳಿದರು. ಆದರೆ ಅದು ಅಷ್ಟು ಸುಲಭವಲ್ಲ, ಏಕೆಂದರೆ ನೀರು ಮತ್ತು ವಿದ್ಯುತ್ ವಿಚಾರವಾಗಿ ಅಲ್ಲಿನ ರಾಜ್ಯಗಳೇ ವಿರೋಧಿಸುತ್ತಿವೆ. ಭಾರತದಲ್ಲಿ ರಕ್ಷಣೆ, ರೈಲ್ವೆ, ಅಂಚೆ ಇಲಾಖೆಗಳ ಬಳಿ ಕೇಂದ್ರ ಸರ್ಕಾರದ ಜಾಗವಿದೆ. ಆದರೆ ಅದು ಈಗಾಗಲೇ ವಿವಾದಗಳಿಂದ ಕೂಡಿದೆ. ಹೀಗಾಗಿ ಅಮೆರಿಕದಂತಹ ಫೆಡರಲ್ ಜಮೀನಿನ ಮಾದರಿ ಭಾರತಕ್ಕೆ ಸರಿಹೊಂದುವುದಿಲ್ಲ.

ಸಿದ್ಧಾರ್ಥ್ ಭಾಟಿಯಾ: ಅಂದರೆ, ಸ್ಥಳೀಯ ಜನರಿಗೆ ತೊಂದರೆಯಾಗದಂತೆ, ರಾಜ್ಯಕ್ಕೆ ಆದಾಯ ಬರುವಂತೆ ಮತ್ತು ಉತ್ತಮ ತಂತ್ರಜ್ಞಾನದ ಡೇಟಾ ಸೆಂಟರ್‌ಗಳು ಬರುವಂತೆ ಮಾಡಲು ಜಗತ್ತಿನಲ್ಲಿ ಮಾದರಿಗಳು ಲಭ್ಯವಿವೆ. ಆದರೆ ನಾವು ಅದನ್ನು ಮಾಡುತ್ತಿದ್ದೇವೆಯೇ? ಭಾರತಕ್ಕೆ ಬರುತ್ತಿರುವ ಕಂಪನಿಗಳು ಈ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿವೆಯೇ?

ಶರ್ಮಿಳಾ ಚಾವಲಿ: ಒಂದು ರಾಜ್ಯವನ್ನು ಹೊರತುಪಡಿಸಿ, ನಾವು ಇಂಥ ಷರತ್ತುಗಳನ್ನು ಕೇಳಿದಂತೆಯೇ ಕಾಣುತ್ತಿಲ್ಲ. ಆ ರಾಜ್ಯವೇ ತಮಿಳುನಾಡು. ಐದಾರು ವರ್ಷಗಳ ಹಿಂದಿನ ತಮಿಳುನಾಡಿನ ಮೂಲ ಡೇಟಾ ಸೆಂಟರ್ ನೀತಿಯಲ್ಲೂ ಹಳೆಯ ರಿಯಾಯಿತಿಗಳೇ ಇದ್ದವು—5 ವರ್ಷ ವಿದ್ಯುತ್ ತೆರಿಗೆ ಮನ್ನಾ, ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ ಇತ್ಯಾದಿ. ಆದರೆ ಇತ್ತೀಚೆಗೆ ಅವರು ಮಾಡಿರುವ ಬದಲಾವಣೆ ಕುತೂಹಲಕಾರಿಯಾಗಿದೆ. ಅವರ ಸಚಿವರೊಬ್ಬರು, ‘ನಾವು ಯಾರು ಹೆಚ್ಚು ರಿಯಾಯಿತಿ ಕೊಡುತ್ತಾರೆ ಎಂಬ ಕೆಟ್ಟ ರೇಸ್‌ ಇಂದ  ಹೊರಬರುತ್ತಿದ್ದೇವೆ’ ಎಂದರು. ತಮಿಳುನಾಡು ಒಂದು ಕಾರ್ಯತಂತ್ರ ರೂಪಿಸಿದೆ: ಕೊಯಮತ್ತೂರು, ಮಧುರೈ, ತಿರುಚಿರಾಪಳ್ಳಿ ಮತ್ತು ತಿರುನೆಲ್ವೇಲಿ ನಡುವೆ ಕೈಗಾರಿಕಾ ಕಾರಿಡಾರ್ ಇದೆ. ಅಲ್ಲಿ ಜಮೀನಿದೆ, ಕಾರ್ಮಿಕರಿದ್ದಾರೆ, ವಿದ್ಯುತ್ ಇದೆ; ಜತೆಗೆ ಭಾರತದಲ್ಲೇ ಅತ್ಯುತ್ತಮವಾದ ಗಾಳಿಯಂತ್ರಗಳ ವಲಯವಿದೆ. ಇದು ಡೇಟಾ ಸೆಂಟರ್‌ಗಳ ಸರ್ವರ್‌ಗಳಿಗೆ ಬೇಕಾದ 80% ರಷ್ಟು ನವೀಕರಿಸಬಹುದಾದ ಹಸಿರು ವಿದ್ಯುತ್ತನ್ನು ಪೂರೈಸಬಲ್ಲದು.

ಭಾರತದ ಒಟ್ಟು ಡೇಟಾ ಸೆಂಟರ್ ಸಾಮರ್ಥ್ಯದಲ್ಲಿ ಈಗಾಗಲೇ 21% ಚೆನ್ನೈನಲ್ಲಿದೆ. ಹೀಗಾಗಿ ಮುಂಬೈನಂತೆ ಒಂದೇ ಕಡೆ ಎಲ್ಲವನ್ನೂ ರಾಶಿ ಹಾಕುವ ಬದಲು, ರಾಜ್ಯದ ದಕ್ಷಿಣ ಭಾಗದ ಉದ್ದಗಲಕ್ಕೂ ಹರಡಿದ ಸಣ್ಣ ಸಣ್ಣ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವುದು ತಮಿಳುನಾಡಿನ ಪಾಲಿಗೆ ನಿಜವಾದ ಅವಕಾಶ ಎಂದು ಅವರು ವಾದಿಸುತ್ತಿದ್ದಾರೆ. ಇದು ಎಲ್ಲದಕ್ಕೂ ತಕ್ಷಣದ ಪರಿಹಾರವಲ್ಲದಿರಬಹುದು. ಏಕೆಂದರೆ ಷೇರು ಮಾರುಕಟ್ಟೆಯಂತಹ ಕೆಲವು ವಹಿವಾಟುಗಳಿಗೆ ಒಂದೇ ಕಡೆ ಇರುವ ಬೃಹತ್ ಹೈಪರ್-ಸ್ಕೇಲ್ ಸೆಂಟರ್‌ಗಳೇ ಬೇಕು; ಅಲ್ಲಿ ಮಿಲಿಸೆಕೆಂಡ್‌ಗಳ ವ್ಯತ್ಯಾಸವೂ ಕೋಟ್ಯಂತರ ರೂಪಾಯಿಗಳ ಲಾಭ-ನಷ್ಟವನ್ನು ನಿರ್ಧರಿಸುತ್ತದೆ.

ಆದರೆ ತಮಿಳುನಾಡು ಡೇಟಾ ಸೆಂಟರ್‌ಗಳನ್ನು ತಿರಸ್ಕರಿಸುತ್ತಿಲ್ಲ. ಅವರ ವಾದವಿಷ್ಟೇ: ‘ನಿಮಗೆ ವಿಶ್ವಾಸಾರ್ಹ, ಸ್ವಚ್ಛ ಹಸಿರು ಇಂಧನ ಬೇಕಿದ್ದರೆ ನಮ್ಮಲ್ಲಿಗೆ ಬನ್ನಿ. ನಾವು ವೇಗದ ಅನುಮತಿ ಮತ್ತು ನವೀಕರಿಸಬಹುದಾದ ಇಂಧನ ನೀಡುವಲ್ಲಿ ಸ್ಪರ್ಧಿಸುತ್ತೇವೆಯೇ ಹೊರತು, ಸಂಪನ್ಮೂಲಗಳನ್ನು ಯಾರು ಹೆಚ್ಚು ಉಚಿತವಾಗಿ ಬಿಟ್ಟುಕೊಡುತ್ತಾರೆ ಎಂಬ ಪೈಪೋಟಿಯಲ್ಲಲ್ಲ.’ ಇದು ಆಸಕ್ತಿದಾಯಕ ಮಾದರಿ. ಅಂತಿಮವಾಗಿ ನಮಗೆ ಬೃಹತ್ ಹೈಪರ್-ಸ್ಕೇಲ್ ಮತ್ತು ತಮಿಳುನಾಡಿನ ವಿಕೇಂದ್ರೀಕೃತ ಮಾದರಿ ಎರಡರ ಸಮನ್ವಯ ಬೇಕಾಗಬಹುದು.

ಸಿದ್ಧಾರ್ಥ್ ಭಾಟಿಯಾ: ತಮಿಳುನಾಡಿಗೆ ಇಂಥ ಎಷ್ಟು ಯೋಜನೆಗಳು ಬಂದಿವೆ?

ಶರ್ಮಿಳಾ ಚಾವಲಿ: ನನ್ನ ಬಳಿ ನಿಖರ ಅಂಕಿಅಂಶಗಳಿಲ್ಲ. ಇದು ತೀರಾ ಇತ್ತೀಚಿನ ಬೆಳವಣಿಗೆ, ಒಂದು-ಎರಡು ತಿಂಗಳ ಹಿಂದಷ್ಟೇ ಸಿಐಐ ಈ ಬಗ್ಗೆ ಬರೆದಿತ್ತು. ಇದರ ಫಲಿತಾಂಶವೇನು ಎಂದು ನಾವು ಕಾದುನೋಡಬೇಕು. ಆದರೆ, ‘ನಾವು ಕುರುಡು ರಿಯಾಯಿತಿಯ ಓಟದಲ್ಲಿ ಭಾಗವಹಿಸುವುದಿಲ್ಲ’ ಎಂದು ಒಂದು ರಾಜ್ಯ ಪ್ರಜ್ಞಾಪೂರ್ವಕವಾಗಿ ಹೇಳಿ, ಮಲೇಷ್ಯಾದಂತೆ ಕಾರ್ಯತಂತ್ರ ರೂಪಿಸುತ್ತಿರುವುದು ಸ್ವಾಗತಾರ್ಹ.

ಸಿದ್ಧಾರ್ಥ್ ಭಾಟಿಯಾ: ವರದಿಗಳ ಪ್ರಕಾರ, ಅಂತಿಮವಾಗಿ ಭಾರತಕ್ಕೆ ಎಷ್ಟು ಡೇಟಾ ಸೆಂಟರ್‌ಗಳು ಬರಬಹುದು?

ಶರ್ಮಿಳಾ ಚಾವಲಿ: ಈಗಲೇ ನಿಖರವಾಗಿ ಹೇಳಲಾಗದು, ನಾವಿನ್ನೂ ಆರಂಭಿಕ ಸ್ಪರ್ಧೆಯಲ್ಲಿದ್ದೇವೆ. ಆದರೆ ಪತ್ರಿಕೆಗಳಲ್ಲಿ ಬರುವ ಪ್ರಕಾರ, ಜಾಗತಿಕ ಮಟ್ಟದ ಪ್ರಮುಖ ಕಂಪನಿಗಳೆಲ್ಲ ಭಾರತಕ್ಕೆ ಬರಲು ಬಯಸುತ್ತಿವೆ. ಬೇರೆ ದೇಶಗಳಲ್ಲಿ ಸೆಂಟರ್ ಇದ್ದರೂ, ಭಾರತದ ಮಾರುಕಟ್ಟೆಯ ಗಾತ್ರ, ಜನಸಂಖ್ಯೆ ಮತ್ತು ನಾವು ಸೃಷ್ಟಿಸುವ ಅಗಾಧ ಡೇಟಾದ ಕಾರಣದಿಂದ ಅವರು ಇಲ್ಲಿಗೂ ಬಂದೇ ಬರುತ್ತಾರೆ. ಕೋವಿಡ್ ನಂತರ ಭಾರತೀಯರು ಫುಡ್ ಡೆಲಿವರಿ ಆ್ಯಪ್‌ಗಳಂತಹ ಸೇವೆಗಳಿಗೂ ಸಂಪೂರ್ಣ ಒಗ್ಗಿಕೊಂಡಿದ್ದಾರೆ. ಇದು ಭಾರಿ ಪ್ರಮಾಣದ ಡೇಟಾ ಮತ್ತು ಹಣ. ದೇಶದ ಹೊರಗೆ ಕುಳಿತಿರುವ ಈ ಡೇಟಾವನ್ನು ಮರಳಿ ತರಬೇಕಿದೆ.

ಸಿದ್ಧಾರ್ಥ್ ಭಾಟಿಯಾ: ಹಾಗಾದರೆ ಮತ್ತೆ ಮೊದಲ ಪ್ರಶ್ನೆಗೇ ಬರೋಣ—ನಮಗೆ ನಿಜವಾಗಿಯೂ ಡೇಟಾ ಸೆಂಟರ್‌ಗಳ ಅಗತ್ಯವಿದೆಯೇ?

ಶರ್ಮಿಳಾ ಚಾವಲಿ: ಸರ್ಕಾರದ ನಿಯಮಗಳು ಕಡ್ಡಾಯಗೊಳಿಸಿರುವ ಡೇಟಾ ಸಂಗ್ರಹಕ್ಕೆ ನಮಗೆ ಖಂಡಿತವಾಗಿಯೂ ಡೇಟಾ ಸೆಂಟರ್‌ಗಳು ಬೇಕು. ಅದರಾಚೆಗೆ ವೇಗದ ದೃಷ್ಟಿಯಿಂದಲೂ ಬೇಕು. ಅಮೆರಿಕದ ಕಂಪನಿಯೊಂದು ಭಾರತದಲ್ಲಿ ವೇಗವಾಗಿ ಸೇವೆ ನೀಡಬೇಕೆಂದರೆ ಅದಕ್ಕೆ ಕಡಿಮೆ ವಿಳಂಬ ಮುಖ್ಯ. ಡೇಟಾ ವರ್ಗಾವಣೆಯ ವೇಗ ಆಪ್ಟಿಕಲ್ ಫೈಬರ್ ಮೇಲೆ ಅವಲಂಬಿತವಾಗಿರುತ್ತದೆ; ದೂರ ಹೆಚ್ಚಾದಷ್ಟೂ ವಿಳಂಬವಾಗುತ್ತದೆ. ಹೀಗಾಗಿ ಪೈಪೋಟಿ ನೀಡುವುದಕ್ಕೆ ಸಾಧ್ಯವಾಗಬೇಕಾದರೆ  ಕಂಪನಿಗಳು ಭಾರತದಲ್ಲೇ ಇರಬೇಕಾಗುತ್ತದೆ. ಆದ್ದರಿಂದ, ನಾವು ಅವರಿಂದ ಸಮುದಾಯಕ್ಕೆ ಕೊಡುಗೆಯನ್ನು ಅಥವಾ ಷರತ್ತುಗಳನ್ನು ಕೇಳಿದ ತಕ್ಷಣ ಭಾರತಕ್ಕೆ ನಷ್ಟವೇನೂ ಆಗುವುದಿಲ್ಲ; ಏಕೆಂದರೆ ಅವರಿಗೆ ಇಲ್ಲಿಗೆ ಬರಲೇಬೇಕಾದ ಅಗತ್ಯವಿದೆ. ‘ನಾವು ಕಠಿಣ ಷರತ್ತು ವಿಧಿಸಿದರೆ ಅವರು ಮಲೇಷ್ಯಾಕ್ಕೋ ವಿಯೆಟ್ನಾಂಗೋ ಹೊರಟುಹೋಗುತ್ತಾರೆ’ ಎಂಬ ಆತಂಕಕ್ಕೆ ಯಾವುದೇ ಆಧಾರವಿಲ್ಲ.

ಸಿದ್ಧಾರ್ಥ್ ಭಾಟಿಯಾ: ಅಂದರೆ ಶರ್ಮಿಳಾ ಅವರೇ, ನೀವು ಹೇಳುತ್ತಿರುವುದು—ನಾವು ಇದರ ಹಿಂದೆ ತೀರಾ ಕಂಗಾಲಾಗಿ ಓಡಬೇಕಿಲ್ಲ, ನಮ್ಮ ಸಮಯ ತೆಗೆದುಕೊಂಡು ನಮಗೆ ಬೇಕಾದ ಷರತ್ತುಗಳನ್ನು ವಿಧಿಸಬಹುದು, ಏಕೆಂದರೆ ಅವರು ಎಲ್ಲಿದ್ದರೂ ಇಲ್ಲಿಗೆ ಬಂದೇ ಬರುತ್ತಾರೆ, ಹೌದಲ್ಲವೇ?

ಶರ್ಮಿಳಾ ಚಾವಲಿ: ಹೌದು, ನನ್ನ ಅಭಿಪ್ರಾಯ ಅದೇ. ಹೂಡಿಕೆ ಬರಲಿ, ತಪ್ಪಿಲ್ಲ. ಆದರೆ ಇದರಿಂದ ಸಿಗುವ ಕೈಗಾರಿಕಾ ಲಾಭ ತೀರಾ ಕಡಿಮೆ ಎಂಬುದನ್ನು ನಾವು ಮರೆಯಬಾರದು. ಜಿಪಿಯು, ಅತ್ಯಾಧುನಿಕ ಸರ್ವರ್‌ಗಳಂತಹ ದುಬಾರಿ ಸಲಕರಣೆಗಳು ಭಾರತದಲ್ಲಿ ಸದ್ಯಕ್ಕೆ ತಯಾರಾಗುವುದಿಲ್ಲ, ಅವನ್ನೆಲ್ಲ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸಾಂಪ್ರದಾಯಿಕ ಕಾರ್ಖಾನೆಗಳಂತೆ ಇಲ್ಲಿ ಪೂರಕ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ. ಇಲ್ಲಿಗೆ ಎಷ್ಟು ಬಂಡವಾಳ ಬರುತ್ತದೆಯೋ, ಅಷ್ಟೇ ಹಣ ಸಲಕರಣೆಗಳ ಖರೀದಿಯ ರೂಪದಲ್ಲಿ ಮತ್ತೆ ಹೊರಗೂ ಹರಿದುಹೋಗುತ್ತದೆ. ಹಾಗಾಗಿ, ‘ಅಯ್ಯೋ, ನಾವೇನೋ ಕಳೆದುಕೊಂಡು ಬಿಡುತ್ತೇವೆ’ ಎಂದು ಕಂಗಾಲಾಗುವ ಅಗತ್ಯವಿಲ್ಲ. ಅವರು ಬಂದೇ ಬರುತ್ತಾರೆ, ಆದರೆ ಅದನ್ನು ನಮ್ಮ ಷರತ್ತುಗಳ ಮೇಲೆ ಬರಮಾಡಿಕೊಳ್ಳೋಣ ಎಂಬುದು ನನ್ನ ವಾದ.

ಸಿದ್ಧಾರ್ಥ್ ಭಾಟಿಯಾ: ಕೊನೆಯದಾಗಿ, ನಿರ್ಮಾಣದ ಹಂತದಲ್ಲಾದರೂ ಭಾರತೀಯ ಸಂಸ್ಥೆಗಳಿಗೆ ಮತ್ತು ಜನರಿಗೆ ಆದಾಯ ಸಿಗುವುದಿಲ್ಲವೇ?

ಶರ್ಮಿಳಾ ಚಾವಲಿ: ಖಂಡಿತ ಸಿಗುತ್ತದೆ. ಯಾವುದೇ ಕಟ್ಟಡ ನಿರ್ಮಾಣದ ಹಂತದಲ್ಲಿ ಹಲವರಿಗೆ ಉದ್ಯೋಗ ಸಿಗುತ್ತದೆ. ಗೂಗಲ್ ಸೆಂಟರ್ ನಿರ್ಮಾಣದಲ್ಲೇ ಸುಮಾರು 1,000 ದಿಂದ 2,000 ಜನರಿಗೆ ಕೆಲಸ ಸಿಗಬಹುದು. ಆದರೆ ಅವುಗಳಲ್ಲಿ ಬಹುಪಾಲು ತಾಂತ್ರಿಕ ನೈಪುಣ್ಯತೆಯ ಕೆಲಸಗಳು; ಇವು ಕೇವಲ ಶೆಡ್ ಹಾಕುವ ಹಳೆಯ ಗೋದಾಮುಗಳಲ್ಲ. ಜತೆಗೆ ಸ್ಥಳೀಯವಾಗಿ ತಯಾರಾಗುವ ಕೇಬಲ್‌ಗಳು, ರ‍್ಯಾಕ್‌ಗಳು, ವಿದ್ಯುತ್ ಉಪಕರಣಗಳು, ಕೂಲಿಂಗ್ ವ್ಯವಸ್ಥೆಗಳಂತಹ ಕೆಲವು ವಸ್ತುಗಳನ್ನು ಭಾರತದಲ್ಲೇ ಖರೀದಿಸುತ್ತಾರೆ. ಎಲ್ಲವನ್ನೂ ಆಮದು ಮಾಡಿಕೊಳ್ಳುವುದಿಲ್ಲ. ನಿರ್ಮಾಣದ ಹಂತದಲ್ಲಿ ಸ್ವಲ್ಪ ಆದಾಯ, ಕೆಲವರಿಗೆ ಉದ್ಯೋಗ, ಕೆಲವು ತಂತ್ರಜ್ಞರಿಗೆ ಕೆಲಸ ಸಿಗುವುದು ನಿಜ. ಆದರೆ ಆ ಯೋಜನೆಯ ಆವರಣದಿಂದ ಹೊರಗೆ ಬಂದರೆ, ಇಡೀ ಸಮಾಜಕ್ಕೆ ಇದರಿಂದ ದೀರ್ಘಾವಧಿಯಲ್ಲಿ ಸಿಗುವ ಲಾಭವೇನು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಸಿದ್ಧಾರ್ಥ್ ಭಾಟಿಯಾ: ಹಾಗಾದರೆ ನಿಮ್ಮ ಲೇಖನದ ಆಧಾರದಲ್ಲಿ ಇದನ್ನು ಹೇಗೆ ಸಂಕ್ಷಿಪ್ತವಾಗಿ ಹೇಳುತ್ತೀರಿ? ಇವು ನಮಗೆ ಬೇಕು, ಆದರೆ ಇವುಗಳ ಹಿಂದೆ ನಾವು ಇಷ್ಟೊಂದು ಅಂಧರಾಗಿ ಒಡಬೇಕಾಗಿಲ್ಲ, ಅಲ್ಲವಾ?

ಶರ್ಮಿಳಾ ಚಾವಲಿ: ಹೂಡಿಕೆಯನ್ನು ಆಕರ್ಷಿಸುವುದರಲ್ಲಿ ತಪ್ಪಿಲ್ಲ. ಆದರೆ ನಾವು ತಪ್ಪಾದ ಮಾನದಂಡಗಳ ಮೇಲೆ ಪೈಪೋಟಿ ನಡೆಸುತ್ತಿದ್ದೇವೆ. ವಿದ್ಯುತ್ ದರ ಮನ್ನಾ, ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ, ಅಗ್ಗದ ಜಮೀನು, ಆಂಧ್ರಪ್ರದೇಶದಲ್ಲಿ ಆದಂತೆ ಗ್ರಿಡ್ ಅನ್ನೇ ಬೈಪಾಸ್ ಮಾಡುವ ಹಕ್ಕು—ಹೀಗೆ ಪ್ರತಿಯಾಗಿ ಏನನ್ನೂ ಕೇಳದೆ ಎಲ್ಲವನ್ನೂ ಧಾರೆ ಎರೆಯುತ್ತಿದ್ದೇವೆ. ಕಂಪನಿಗಳಿಗೆ ಎಲ್ಲ ಸೌಲಭ್ಯ ಸಿಗುತ್ತದೆ; ಆದರೆ ಸ್ಥಳೀಯ ಜನರಿಗೆ ಸಿಗುವುದು ತಾತ್ಕಾಲಿಕ ನಿರ್ಮಾಣದ ಕೆಲಸಗಳು ಮತ್ತು ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳ ಬಿಲ್ ಮಾತ್ರ! ನಾವು ಕೇಳುತ್ತಿರುವುದು ಇಷ್ಟೇ: ನಮಗೆ ಇದಕ್ಕಿಂತ ಹೆಚ್ಚಿನ ಲಾಭ ಸಿಗಬೇಕು, ಅದನ್ನು ಧೈರ್ಯವಾಗಿ ಕೇಳೋಣ.

ಸಿದ್ಧಾರ್ಥ್ ಭಾಟಿಯಾ: ಬಹುಶಃ ಈ ಸತ್ಯ ಜನರಿಗೆ ಮತ್ತು ಸರ್ಕಾರಕ್ಕೆ ಅರ್ಥವಾದಾಗ ಅವರು ಕೇಳಲು ಆರಂಭಿಸಬಹುದು. ಏಕೆಂದರೆ ಸಾಮಾನ್ಯ ಕಾರ್ಖಾನೆ ಅಥವಾ ಕಚೇರಿಗಳು ಬರುವಾಗ ನಾವು ನೂರಾರು ಪ್ರಶ್ನೆಗಳನ್ನು ಕೇಳುತ್ತೇವೆ; ಆದರೆ ಇಲ್ಲಿ ಯಾವುದೇ ಷರತ್ತುಗಳಿಲ್ಲದೆ ಕೆಂಪು ಹಾಸು ಹಾಸಿ ಸ್ವಾಗತಿಸುತ್ತಿದ್ದೇವೆ.

ಶರ್ಮಿಳಾ ಚಾವಲಿ: ಇಲ್ಲೊಂದು ಅಂಶ ಗಮನಿಸಬೇಕು. ಸರ್ಕಾರ ಹೇಳುವ ಪ್ರಕಾರ, ‘ವಿಶ್ವದ ಶೇ. 20ರಷ್ಟು ಡೇಟಾವನ್ನು ಭಾರತ ಸೃಷ್ಟಿಸುತ್ತಿದೆ, ಆದರೆ ಜಾಗತಿಕ ಡೇಟಾ ಸೆಂಟರ್‌ಗಳಲ್ಲಿ ಭಾರತದಲ್ಲಿರುವುದು ಕೇವಲ ಶೇ. 4 ಮಾತ್ರ.’ ಈ ಅಂಕಿಅಂಶದ ಮೂಲ ನನಗೆ ಗೊತ್ತಿಲ್ಲ, ಹಾಗಾಗಿ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ನನ್ನ ವಾದವಿಷ್ಟೇ: ನಾವು 20% ಡೇಟಾ ಸೃಷ್ಟಿಸುತ್ತೇವೆ ಎಂದ ಮಾತ್ರಕ್ಕೆ 20% ಡೇಟಾ ಸೆಂಟರ್‌ಗಳು ನಮ್ಮಲ್ಲೇ ಇರಬೇಕು ಎಂದೇನಿಲ್ಲ. ಹೌದು, ಅದೊಂದು ಅವಕಾಶ ನಿಜ. ಆದರೆ ಪ್ರಶ್ನೆ ಇರುವುದು ಡೇಟಾ ಸೆಂಟರ್ ನಿರ್ಮಿಸಬೇಕೇ ಬೇಡವೇ ಎಂದಲ್ಲ; ಯಾವ ಷರತ್ತುಗಳ ಮೇಲೆ ನಿರ್ಮಿಸಬೇಕು ಎಂಬುದು. ಹೂಡಿಕೆಗಾಗಿ ನಾವು ಅವರ ಎಲ್ಲಾ ಷರತ್ತುಗಳಿಗೂ ತಲೆಬಾಗಬೇಕಿಲ್ಲ, ನಾವು ಹೊಣೆಗಾರಿಕೆಯನ್ನು ಕೇಳಬಹುದು ಮತ್ತು ಕೇಳಲೇಬೇಕು. ಇತರ ದೇಶಗಳು ಇದನ್ನು ಮಾಡಿ ತೋರಿಸಿವೆ. ತಮಿಳುನಾಡು ಕೂಡ ಇಂಥ ಕುರುಡು ಓಟದಿಂದ ಹೊರಬಂದು, ಪರಿಸರಕ್ಕೆ ಪೂರಕವಾದ ಹೂಡಿಕೆಯನ್ನು ಹೇಗೆ ತರಬಹುದು ಎಂದು ತೋರಿಸಿಕೊಟ್ಟಿದೆ. ಈ ದಿಕ್ಕಿನಲ್ಲಿ ನಾವು ಯೋಚಿಸಬೇಕು.

ಸಿದ್ಧಾರ್ಥ್ ಭಾಟಿಯಾ: ಧನ್ಯವಾದಗಳು ಶರ್ಮಿಳಾ ಅವರೇ. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಈ ತಾಂತ್ರಿಕ ವಿಷಯವನ್ನು ಸರಳವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಇನ್ನಷ್ಟು ಚರ್ಚೆ ನಡೆಯಲಿದೆ ಎಂದೇ ಭಾವಿಸುತ್ತೇನೆ. ಈ ಸಂಭಾಷಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.

ಶರ್ಮಿಳಾ ಚಾವಲಿ: ತಮಗೂ ಧನ್ಯವಾದಗಳು.

ಸಿದ್ಧಾರ್ಥ್ ಭಾಟಿಯಾ: ಇವರು ಮಾಜಿ ಅಧಿಕಾರಶಾಹಿ ಮತ್ತು ಮೂಲಸೌಕರ್ಯ ತಜ್ಞೆ ಶರ್ಮಿಳಾ ಚಾವಲಿ. ಮುಂದಿನ ವಾರ ಮತ್ತೊಬ್ಬ ಅತಿಥಿಯೊಂದಿಗೆ ‘ದಿ ವೈರ್ ಟಾಕ್ಸ್’ನ ಇನ್ನೊಂದು ಸಂಚಿಕೆಯಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೆ ಸಿದ್ಧಾರ್ಥ್ ಭಾಟಿಯಾ ಮತ್ತು ತಂಡದ ಪರವಾಗಿ ನಮಸ್ಕಾರ.

 

https://thewire.in/environment/full-transcript-india-is-welcoming-huge-data-centres-with-incentives-but-what-do-the-people-get-out-of-it

 

Scroll to Top